varthabharthi


ಕ್ರೀಡೆ

ಇಂಡಿಯಾ ಓಪನ್ ಟೂರ್ನಿಗೆ ಕಾಡಿದ ಕೊರೋನ: ಶ್ರೀಕಾಂತ್ ಸಹಿತ 7 ಆಟಗಾರರು ಸ್ಪರ್ಧೆಯಿಂದ ಹಿಂದಕ್ಕೆ

ವಾರ್ತಾ ಭಾರತಿ : 13 Jan, 2022

ಹೊಸದಿಲ್ಲಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗುರುವಾರ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದು, ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಭಾರತೀಯ ಶಟ್ಲರ್‌ಗಳು ಕೊರೋನ ಪಾಸಿಟಿವ್ ಆದ ನಂತರ ಈವೆಂಟ್‌ನಿಂದ ಹಿಂದೆ ಸರಿದಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಷನ್ ​​(ಬಿಎಐ) ಹೆಸರುಗಳನ್ನು ದೃಢೀಕರಿಸುವ ಮೊದಲೇ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯು ಎಫ್) ನಸುಕಿನ ವೇಳೆ ಇದನ್ನು ಘೋಷಿಸಿತು.

ಶ್ರೀಕಾಂತ್ ರಲ್ಲದೆ, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಕರ್, ಟ್ರೀಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಹಾಗೂ  ಖುಷಿ ಗುಪ್ತಾ ಸ್ಪರ್ಧೆಯಿಂದ ಹಿಂದೆ ಸರಿದ ಇತರ ಆಟಗಾರರಾಗಿದ್ದಾರೆ.

"ಆಟಗಾರರು ಮಂಗಳವಾರ ನಡೆಸಿದ ಕಡ್ಡಾಯ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶವನ್ನು ಪಡೆದಿದ್ದಾರೆ. ಏಳು ಆಟಗಾರರ ನಿಕಟ ಸಂಪರ್ಕವನ್ನು ಹೊಂದಿರುವ ಡಬಲ್ಸ್ ಪಂದ್ಯದ ಜೊತೆಗಾರರು  ಕೂಡ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ" ಎಂದು ವಿಶ್ವ ಬ್ಯಾಡ್ಮಿಂಟನ್ ಆಡಳಿತ ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮುಖ್ಯ ಡ್ರಾದಲ್ಲಿ ಆಟಗಾರರನ್ನು ಬದಲಾಯಿಸಲಾಗುವುದಿಲ್ಲ ಹಾಗೂ  ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್‌ಓವರ್ ನೀಡಲಾಗುವುದು.

ಕೊರೋನ ಸೋಂಕಿತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂದು ಪರಿಗಣಿಸಿದ ನಂತರ ಎನ್.  ಸಿಕ್ಕಿ ರೆಡ್ಡಿ, ಧ್ರುವ ಕಪಿಲಾ, ಗಾಯತ್ರಿ ಗೋಪಿಚಂದ್, ಆಕ್ಷನ್ ಶೆಟ್ಟಿ ಹಾಗೂ  ಕಾವ್ಯ ಗುಪ್ತಾ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇವರಲ್ಲಿ ಕೊರೋನ ಸೋಂಕು ಕಂಡುಬಂದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)