varthabharthi


ಈ ಹೊತ್ತಿನ ಹೊತ್ತಿಗೆ

ತ್ರಾಸು ಕೊಡದ ತ್ರಾಸಿ ಪ್ರಯಣ...

ವಾರ್ತಾ ಭಾರತಿ : 13 Jan, 2022

ಈಗಾಗಲೇ ಕವನ ಸಂಕಲನ, ಕಥಾ ಸಂಕಲನ ಹಾಗೂ ಅಂಕಣ ಬರಹ ಪ್ರಕಟಿಸಿರುವ ಗೋಪಾಲ ತ್ರಾಸಿ ಅವರ ಪ್ರವಾಸ ಕಥನ, ಲಂಡನ್ ಟು ವ್ಯಾಟಿಕನ್ ಸಿಟಿ( ಎಂಟು ದೇಶ-ನೂರೆಂಟು ವಿಶೇಷ) ಕೃತಿಯ ಉದ್ದಕ್ಕೂ ಕೊಡುವ ವಿವರಗಳು, ಸಂಗ್ರಹಿಸಿರುವ ಮಾಹಿತಿ ಗಮನಾರ್ಹ. ಹೀಥ್ರೋ ವಿಮಾನ ನಿಲ್ದಾಣದಿಂದ ಪ್ರತಿದಿನ ಸುಮಾರು 1,300 ವಿಮಾನಗಳು ಸಂಚರಿಸುತ್ತವೆ ಎನ್ನುವುದರ ಜೊತೆಗೆ ಪ್ರತಿ 45 ಸೆಂಕೆಂಡಿಗೆ ಒಂದು ವಿಮಾನ ಹೋಗಿ ಬರುತ್ತದೆ ಎನ್ನುವ ಕುತೂಹಲಕರ ಅಂಶವಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಎಂಬ ಪುಟ್ಟಹಳ್ಳಿಯಿಂದ ಬಂದ ಅವರು, ಮುಂಬೈನಲ್ಲಿ ನೆಲೆ ನಿಂತು ಬದುಕು ಕಟ್ಟಿಕೊಂಡವರು. ಇದರೊಂದಿಗೆ ತಮ್ಮ ತಂದೆ ಶಾಲೆ ಕಲಿತ ಬಗೆಯನ್ನು ಅವರು ಹೇಳುವುದು ಹೀಗೆ-‘ನನ್ನ ಅಪ್ಪ ಐಗಳ ಶಾಲೆ ಅಂದರೆ ಅಂಗಳದಲ್ಲಿ ಕುಳಿತು ಹೊಯಿಗೆ ಮೇಲೆ ಬೆರಳಾಡಿಸುತ್ತಾ ತಮ್ಮ ಹೆಸರು ಬರೆಯುವಷ್ಟು ವಿದ್ಯೆ ಪಡೆದವರು. ನನ್ನಮ್ಮ ನಾಲ್ಕೋ ಐದೋ ತರಗತಿ ತನಕ ಓದಿದವಳು. ನಾನು ನಮ್ಮ ಇಡೀ ಕೂಡು ಕುಟುಂಬದ ಹತ್ತಾರು ಪರಿವಾರಗಳಲ್ಲಿ ಮೊದಲ ಪದವೀಧರ! ಅಂದು ನಮ್ಮವರನ್ನು ಗುಲಾಮರಂತೆ ಕಂಡ ಅದೇ ಬ್ರಿಟಿಷ್ ಸರಕಾರ ಇಂದು ಸಾಮಾನ್ಯನಾದ ನನ್ನನ್ನು ಪ್ರವಾಸಿಗನೆಂಬ ಗೌರವದೊಂದಿಗೆ ಸ್ವಾಗತಿಸುತ್ತಿದೆ! ಅಕ್ಷರಶಃ ಕಣ್ಣಾಲಿಗಳು ತೇವಗೊಂಡಿದ್ದವು ‘ಈ ಮೂಲಕ ಸ್ಥಿತ್ಯಂತರಗಳನ್ನು ಅವರು ಕಂಡಿರಿಸಿದ್ಧಾರೆ.

ಇನ್ನು ‘ಶಿಸ್ತಿನ ಸಾಮ್ರಾಜ್ಯ ಲಂಡನ್’ ಕುರಿತ ಅಧ್ಯಾಯದಲ್ಲಿ ಷೇಕ್ಸ್‌ಪಿಯರ್‌ನ ಕುರಿತು ಪ್ರಸ್ತಾಪಿಸುತ್ತಾರೆ. ಷೇಕ್ಸ್‌ಪಿಯರ್ ನಾಟಕ ಕಂಪೆನಿಯ ಗ್ಲೋಬ್ ಥಿಯೇಟರ್ ಕುರಿತು ಹೇಳುತ್ತಲೇ ‘ಷೇಕ್ಸ್‌ಪಿಯರ್ ಅನಂತ ಧ್ಯಾನವನ್ನು, ಅವನು ಸೃಷ್ಟಿಸಿದ ಅಮರ ಪಾತ್ರಗಳ ಪಿಸು ಧ್ವನಿಯನ್ನು; ರೋಮಿಯೊ-ಜೂಲಿಯೆಟ್ ಅಲೌಕಿಕ ಪ್ರೇಮಯಾನವನ್ನು, ಯಕ್ಷಿಣಿಯರ ಕಿಂಕಿಣಿಯನ್ನು ಈ ಗಾಳಿ ಈ ಬೆಳಕು ಹೊತ್ತು ನಿರಂತರ ಜೋಕಾಲಿ ಜೀಕುತ್ತಿರ ಬಹುದೇ? ಓತೆಲ್ಲೋ, ಕಿಂಗ್ ಲಿಯರ್, ಮ್ಯಾಕಬೆತ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್ ಈ ತರಹದ ದಿಗ್ಭ್ರಮೆ ಹುಟ್ಟಿಸುವಂತಹ ಪಾತ್ರಗಳ ಮೂಲಕ ವಿಶ್ವ ರಂಗಭೂಮಿಗೆ ಹೊಸ ಭಾಷ್ಯ ಬರೆದ, ದಿಕ್ಕು ದಿಶೆ ತೋರಿಸಿದ ಷೇಕ್ಸ್‌ಪಿಯರ್‌ನ ಸೃಜನಶೀಲ ಶ್ರಮ, ಬೆವರು, ಕನಸುಗಳನ್ನು ಇಂದಿಗೂ ಜಗತ್ತಿಗೆ ಸಾರಿ ಸಾರಿ ಹೇಳುವಂತಿದೆ, ಈ ರಂಗಾಧ್ಯತ್ಮ ಸ್ಥಳ’ಎನ್ನುವ ಮೂಲಕ ಷೇಕ್ಸ್‌ಪಿಯರ್‌ಗೆ ನಮನ ಸಲ್ಲಿಸುತ್ತಾರೆ. ಈ ಮೂಲಕ ಗೋಪಾಲ ಅವರೊಳಗಿನ ಲೇಖಕ, ಷೇಕ್ಸ್ ಪಿಯರ್‌ನನ್ನು ಹುಡಿಕಿಕೊಂಡು ಹೋಗಿ ಅಲ್ಲಿದ್ದಷ್ಟು ಹೊತ್ತು ಆತನ ಕೊಡುಗೆಯನ್ನು ಸ್ಮರಿಸಿದ್ದು ಶ್ಲಾಘನೀಯ. ಹೀಗೆಯೇ ಹಾಲೆಂಡ್ ಕುರಿತು ವಿವರಿಸುತ್ತಾ ವುಡನ್ ಷೂ ಫ್ಯಾಕ್ಟರಿ ಬಗ್ಗೆ ಉಲ್ಲೇಖಿಸುತ್ತಾರೆ. ಮರದ ತುಂಡೊಂದು ವಿವಿಧ ಹಂತ ಹಾದು ಅಂತಿಮ ಚಪ್ಪಲಿಯಾಗಿ ಪಾಲಿಷ್ ಪಡೆದು, ಬಣ್ಣ ಬಳಿದುಕೊಂಡು ಮಾರಾಟಕ್ಕೆ ಸಿದ್ಧವಾಗುವವರೆಗಿನ ಪ್ರತಿ ಹಂತವನ್ನು ಕುತೂಹಲದಿಂದ ವೀಕ್ಷಿಸಿರುವುದನ್ನು ಗೋಪಾಲ ಹೇಳುತ್ತಾರೆ. ಇದರೊಂದಿಗೆ ಕ್ಯಕೊನ್ಹಾಫ್‌ನ ಟುಲಿಪ್ ಪುಷ್ಪಧಾಮಕ್ಕೆ ಭೇಟಿ ನೀಡಿದಾಗ ಅವರ ಪತ್ನಿ ಸವಿತಾ ಅವರು ಅಮಿತಾಬ್ ಹಾಗೂ ರೇಖಾ ಅಭಿನಯದ ‘ಸಿಲ್‌ಸಿಲಾ’ ಸಿನೆಮಾ ಹಾಡಿನ ಚಿತ್ರೀಕರಣಗೊಂಡಿದ್ದನ್ನು ಮೆಲುಕು ಹಾಕುತ್ತಾರೆ. ಹೀಗೆ ವಿವಿಧ ಪ್ರವಾಸಿ ತಾಣಗಳನ್ನು ಕಂಡಾಗ ಹಿಂದಿ ಸಿನೆಮಾಗಳು ಚಿತ್ರೀಕರಣಗೊಂಡಿದ್ದನ್ನು ಮೆಲುಕು ಹಾಕುತ್ತಾರೆ. ಜೊತೆಗೆ ಸ್ವಿಟ್ಸರ್‌ಲ್ಯಾಂಡಿನಲ್ಲಿ 1964ರಲ್ಲಿ ಬಿಡುಗಡೆಗೊಂಡ ರಾಜ್‌ಕಪೂರ್ ಬ್ಯಾನರಿನ ‘ಸಂಗಮ್’ ಮೊದಲ ಹಿಂದಿಯ ಇಲ್ಲವೆ ಮೊದಲ ಭಾರತೀಯ ಸಿನೆಮಾ ಎಂಬುದನ್ನೂ ಉಲ್ಲೇಖಿಸುತ್ತಾರೆ. ಹಾಗೆಯೇ ಸ್ವಿಟ್ಸರ್‌ಲ್ಯಾಂಡಿನ ಬೆಳಗೆಂದರೆ ಶುದ್ಧ ಕೊಳದ ತಿಳಿ ನೀರು ಎಂದು ಬಣ್ಣಿಸಿ ಬೇಂದ್ರೆಯವರ ‘ಬೆಳಗು’ ಕವಿತೆಯನ್ನು ಗುಣಿಗುಣಿಸುತ್ತಾರೆ.

ಮುಂದೆ ಐಫಿಲ್ ಟವರ್ ನೋಡಿಕೊಂಡ ನಂತರ ಅಲ್ಲಿ ಸ್ಮರಣಿಕೆ ಮಾರುವ ಕಪ್ಪು ಜನರೊಂದಿಗೆ ಒಡನಾಡಿದ್ದನ್ನು, ವೆನಸ್ಸಿನ ಮುರಾನೊ ಎಂಬ ಗಾಜಿನ ಕಾರ್ಖಾನೆಯಲ್ಲಿ ಗಾಜರಳಿ ಹೂವಾಗುವ ಸೋಜಿಗವನ್ನು ಲೇಖಕರು ಸೊಗಸಾಗಿ ನಿರೂಪಿಸುತ್ತಾರೆ. ಹೀಗೆ ಪ್ರವಾಸದುದ್ದಕ್ಕೂ ಮಲಗುವ ಮುನ್ನ ತಿರುಗಾಟದ ಸನ್ನಿವೇಶ, ಘಟನೆಗಳ ಟಿಪ್ಪಣಿ ಮಾಡಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದರಿಂದ ಗೋಪಾಲ ಅವರು ಯಾವುದೇ ಗೊಂದಲಗಳಿಲ್ಲದೆ ಸಂಯಮದಿಂದ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡುತ್ತಾರೆ. ಒಟ್ಟು ಹನ್ನೆರಡು ರಾತ್ರಿ, ಹದಿಮೂರು ದಿನಗಳಲ್ಲಿ ಕಂಡ ಬೆರಗನ್ನು, ಬೆಡಗನ್ನು ಬಣ್ಣಿಸುತ್ತಾ ಪ್ಯಾಕೇಜ್ ಟೂರ್ ಕುರಿತ ಮಿತಿಯನ್ನು ತಿಳಿಸುತ್ತಾರೆ. -‘ನಮಗೆ ಇಷ್ಟವಾದ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ. ಬೇಡವಾದ ಸ್ಥಳ ವೀಕ್ಷಣೆಗೆ ಹೋಗದೆ ಇರುವಂತೆಯೂ ಇಲ್ಲ. ಹಾಗಾಗಿ ಎಷ್ಟೋ ಪ್ರದೇಶಗಳನ್ನು ನೋಡಬೇಕೆಂಬ ಕುತೂಹಲ ಉಳಿದೇ ಬಿಟ್ಟಿತು’. ಇದರೊಂದಿಗೆ ‘ಪ್ರವಾಸಕ್ಕೆ ಸ್ಥಳ ಮುಖ್ಯವೇ ಅಲ್ಲ. ಹೊಸ ಗಾಳಿ, ಹೊಸ ಪರಿಸರ, ಹೊಸ ಜನರು, ಭಿನ್ನ ಆಚಾರ-ವಿಚಾರಗಳನ್ನು ನೋಡಿ ತಿಳಿದುಕೊಳ್ಳಬೇಕೆಂಬ ಮನಸ್ಸು ಮುಖ್ಯ’ ಎನ್ನುವ ಸಲಹೆ ಅವರದು. ಲಂಡನ್, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಜರ್ಮನಿ, ಸ್ವಿಟ್ಸರ್‌ಲ್ಯಾಂಡ್, ಇಟಲಿ, ವ್ಯಾಟಿಕನ್ -ಹೀಗೆಒಟ್ಟುಎಂಟು ದೇಶಗಳ ಕುರಿತು ಮಾಹಿತಿ ಒಳಗೊಂಡ ತ್ರಾಸಿ ಅವರ ಈ ಕೃತಿ ಹೆಚ್ಚು ತ್ರಾಸು ಕೊಡದೆ ಓದಿಸಿಕೊಂಡು ಹೋಗುತ್ತದೆ. ಓದುವ ಖುಷಿ ನಿಮ್ಮದಾಗಲಿ.

ಕೃತಿಯ ಹೆಸರು: ಲಂಡನ್ ಟು ವ್ಯಾಟಿಕನ್ ಸಿಟಿ

( ಎಂಟು ದೇಶ- ನೂರೆಂಟು ವಿಶೇಷ), ಲೇಖಕರು: ಗೋಪಾಲ ತ್ರಾಸಿ, ಮುಖಬೆಲೆ 175 ರೂ., ಪುಟಗಳು: 133, ಮುಖಪುಟ ವಿನ್ಯಾಸ: ಗಣೇಶ್ ಕುಮಾರ್, ಪ್ರಕಾಶಕರು : ಮುಂಬೈ ಚುಕ್ಕಿ ಸಂಕುಲ, ಮುದ್ರಣ: ಪ್ರಿಂಟ್ ಆರ್ಟ್ ಕಾರ್ಪೊರೇಶನ್, ಮುಂಬೈ

 ಗಣೇಶ ಅಮೀನಗಡ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)