varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಬೊಳುವಾರು ಮಹಮದ್ ಕುಂಞಿಯವರ ಅಪ್ರಕಟಿತ ಆತ್ಮಕತೆ ‘ಮೋನು ಸ್ಮತಿ’ ಯಿಂದ ಎತ್ತಿಕೊಂಡದ್ದು..

‘ಜೋ ವಾದಾ ಕಿಯಾ...!’

ವಾರ್ತಾ ಭಾರತಿ : 13 Jan, 2022
ಬೊಳುವಾರು ಮಹಮದ್ ಕುಂಞಿ

‘ಕೇಂದ್ರ ಸಾಹಿತ್ಯ ಅಕಾಡಮಿ’ಯ ಇತಿಹಾಸದಲ್ಲಿ, ಯಾವುದೇ ಭಾಷೆಯ ಸೃಜನಶೀಲ ಗದ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿಯೆಂಬ ದಾಖಲೆ ಬರೆದಿರುವ ಬೊಳುವಾರು ಮಹಮದ್ ಕುಂಞಿಯವರು, ಮೈಸೂರು ವಿಶ್ವವಿದ್ಯಾನಿಲಯದಿಂದ ಕುವೆಂಪು ಬಂಗಾರದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತಕರ ಪದವೀಧರರು. ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಗೌರವ ಪ್ರಶಸ್ತಿಯೊಂದಿಗೆ ಮೂರು ಪ್ರಶಸ್ತಿಗಳನ್ನು ಗಳಿಸಿದ ಇವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದಲೂ ಸನ್ಮಾನಿತರು. ಕೊಲ್ಕತ್ತಾದ ಭಾರತೀಯ ಭಾಷಾ ಸನ್ಮಾನ್, ದೆಹಲಿಯ ಕಥಾ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕಾರಂತ ಬಾಲವನ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರಶಸ್ತಿ..., ಹೀಗೆ ಹತ್ತಾರು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟವರು. ಆರು ಕಥಾ ಸಂಕಲನಗಳು, ಐದು ಕಾದಂಬರಿಗಳು, ಎರಡು ನಾಟಕಗಳು, ಎರಡು ಅನುವಾದಿತ ಕೃತಿಗಳು, ಒಂದು ಚಾರಿತ್ರಿಕ ದಾಖಲೆಯ ಕೃತಿ, ಮೂರು ಮಕ್ಕಳ ಪದ್ಯ ಸಂಪುಟಗಳ ಸಹಿತ ಎಂಟು ಕೃತಿಗಳನ್ನು ಸಂಪಾದಿಸಿದವರು. ಇವರ ಕತೆ, ಚಿತ್ರಕತೆಗಳಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ.

ಬೊಳುವಾರು ಮಹಮದ್ ಕುಂಞಿ

ಸಂಜೆಯಾಗುವಷ್ಟರಲ್ಲಿ ಈ ಆವೇಶಗಳು ದೆಹಲಿಯ ಕೆಲವು ಶಾಖೆಗಳಿಗೂ ತಲುಪಿತ್ತು. ಮಾತ್ರವಲ್ಲ, ಮುಂದಿನ ದಿನಗಳಲ್ಲಿ, ನಮ್ಮ ದೇಶದ ಮೊತ್ತ ಮೊದಲ ಗ್ರಾಮೀಣ ಬ್ಯಾಂಕ್ ಆಗಿ ದಾಖಲೆ ಬರೆದ ‘ಪ್ರಥಮಾ ಬ್ಯಾಂಕ್’ ಅಧ್ಯಕ್ಷರಾದ ಡಾ. ದಿನಕರ ರಾಯರ ಕಿವಿಗೂ ಬಿದ್ದಿತ್ತು. ಆ ದಿನಗಳಲ್ಲಿ ಅವರು ನಮ್ಮ ಬ್ಯಾಂಕಿನ ‘ಆಗ್ರಾ’ದ ವಿಭಾಗೀಯ ಕಚೇರಿ ಮುಖ್ಯಸ್ಥರು. ಪ್ರಧಾನ ಕಚೇರಿಯಲ್ಲಿದ್ದ ದಿನಗಳಲ್ಲಿ ಪರಿಚಯವಾಗಿದ್ದ ಹೃದಯವಂತ ಗೆಳೆಯ ಆ ದಿನಕರ ರಾವ್. 

ಸಾರ್ವಜನಿಕ ಹಣದ ಉಸ್ತುವಾರಿ ನೋಡಿಕೊಳ್ಳುವ ಬ್ಯಾಂಕ್ ಅಧಿಕಾರಿಗಳಿಗೆ ಒಂದೇ ಊರಲ್ಲಿ ಹೆಚ್ಚು ದಿನ ಬದುಕುವ ಅಧಿಕಾರವಿರುವುದಿಲ್ಲ. ಮೂರು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಅವರೆಲ್ಲ ಸಂಸಾರ ಸಹಿತ ದೂರದೂರುಗಳಿಗೆ ಪೆಟ್ಟಿಗೆ ಕಟ್ಟಲೇಬೇಕು. ಆದರೆ, ಪ್ರಧಾನ ಕಚೇರಿಯ ‘ಪ್ರಚಾರ ವಿಭಾಗ’ದಲ್ಲಿದ್ದ ನಾನು, ಈ ವರ್ಗಾವಣೆಯ ಉರುಳಿನಿಂದ ಪ್ರತಿ ವರ್ಷವೂ ಹೇಗೋ ನುಸುಳಿಕೊಳ್ಳುತ್ತಿದ್ದೆ. ಆದರೆ, 1992ರಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿದ್ದ ಹೊಸ ಬ್ಯಾಂಕಿಂಗ್ ನಿಯಮವೊಂದು, ನನ್ನ ನುಸುಳುವ ಶಕ್ತಿಯನ್ನೇ ನುಂಗಿಬಿಟ್ಟಿತ್ತು. ಕನಿಷ್ಠ ಮೂರು ವರ್ಷಗಳ ಸೇವಾವಧಿಯನ್ನು ಉತ್ತರ ಭಾರತದ ಯಾವುದಾದರೊಂದು ರಾಜ್ಯದಲ್ಲಿ ಪೂರೈಸಲೇಬೇಕು ಎಂಬ ಹೊಸ ರೂಲ್ಸ್ ಅದು. ಉಡುಪಿಯ ಸಾಂಸ್ಕೃತಿಕ ಜಗತ್ತನ್ನು ಬಿಟ್ಟು ಹೋಗಲು ನನಗೆ ಇಷ್ಟವಿಲ್ಲ. ಪ್ರೌಢ ಶಾಲೆಯ ಮೆಟ್ಟಲುಗಳ ಮೇಲೆ ಓಡಾಡುತ್ತಿದ್ದ ಮಕ್ಕಳಿಬ್ಬರಿಗೆ, ಅಪರಿಚಿತ ಊರಲ್ಲಿ ಓದು ಮುಂದುವರಿಸುವುದೂ ಕಷ್ಟ ಕಷ್ಟ. ಒಟ್ಟಾರೆ ಮಂಡೆಬಿಸಿ. ಅದೇ ದಿನಗಳಲ್ಲಿ ನನ್ನ ಬರಹಗಳ ಓದುಗರೂ, ಸುಪ್ರಸಿದ್ಧ ಆರ್ಥಿಕ ತಜ್ಞರೂ ಆಗಿದ್ದ ಡಾ. ಎನ್.ಕೆ. ತಿಂಗಳಾಯರು ಬ್ಯಾಂಕಿನ ನಿರ್ವಾಹಕ ನಿರ್ದೇಶಕ ಪಟ್ಟದಲ್ಲಿ ಕುಳಿತಿದ್ದರು. ‘ಸಾರ್, ಏನು ಮಾಡಲಿ?’ ಎಂದು ಪ್ರಶ್ನಿಸಿದಾಗ ಅವರು ನಗುತ್ತಾ ಹೇಳಿದ್ದು, ‘ನಾನಿರುವವರೆಗೆ ನಿಮ್ಮನ್ನು ಇಲ್ಲೇ ಉಳಿಸಿಕೊಳ್ಳಬಲ್ಲೆ. ಆದರೆ, ಆನಂತರ ಏನು ಮಾಡುತ್ತೀರಿ? ನಿಮಗೆ ಇನ್ನೂ ತುಂಬಾ ಸರ್ವಿಸ್ ಉಂಟು. ಒಂದಲ್ಲ ಒಂದು ದಿನ ನೀವು ಹೋಗಲೇಬೇಕು. ಆದ್ದರಿಂದ, ಈ ವರ್ಷವೇ ದೆಹಲಿಯ ರೆನಲ್ ಆಫೀಸಿನ ಪರ್ಸನಲ್ ಡಿಪಾರ್ಟ್‌ಮೆಂಟಿಗೆ ಹೋಗಿಬಿಡಿ. ಮೂರು ವರ್ಷಗಳ ಬಳಿಕ, ಮತ್ತೆ ಇಲ್ಲಿಗೇ ಕರೆಸಿಕೊಳ್ತೇನೆ. ನೀವು ಹೂಂ ಅಂದ್ರೆ, ನಿಮಗೊಂದು ಅಫೀಸರ್ ಕ್ವಾರ್ಟರ್ಸ್ ಕಾದಿರಿಸಲು ದೆಹಲಿಗೆ ಈವತ್ತೇ ಹೇಳಿಡ್ತೇನೆ.’ ನಾನು ‘ಹೂಂ’ ಎಂದಿದ್ದೆ. ‘ಗೀತಾ ಟ್ರಾನ್ಸ್ ಪೋರ್ಟ್’ನಲ್ಲಿ ಪುಸ್ತಕಗಳ ನಡುವೆ ಮನೆ ಸಾಮಾನುಗಳನ್ನು ತುಂಬಿಸಿ, ಹೆಂಡತಿ ಮಕ್ಕಳೊಂದಿಗೆ ದೆಹಲಿಗೆ ಹಾರಿದ್ದೆ. ಈ ‘ಗೀತಾ’ದವರ ಕರಾಮತ್ತಿನ ಬಗ್ಗೆ ಒಂದು ಮಾತು ಹೇಳಲೇಬೇಕು. ಬ್ಯಾಂಕಿನ ‘ಪರ್ಸನಲ್ ಡಿಪಾರ್ಟ್‌ಮೆಂಟ್’ ನಲ್ಲಿ, ಯಾವ ವರ್ಷದಲ್ಲಿ ಯಾರಿಗೆ, ಯಾವೂರಿಗೆ ವರ್ಗಾವಣೆ ಆದೇಶ ಟೈಪಾಗುತ್ತಿದೆ ಎಂಬ ಮಾಹಿತಿಯು ಅಧ್ಯಕ್ಷರಿಗೆ ತಲುಪುವ ಮೊದಲೇ, ‘ಗೀತಾ’ದ ಮಾಲಕರಿಗೆ ತಿಳಿದು ಬಿಡುತ್ತಿತ್ತು. ಹಾಗಾಗಿ, ಸಂತ್ರಸ್ತ ಅಧಿಕಾರಿಯೊಬ್ಬನಿಗೆ ‘ಟ್ರಾನ್ಸ್‌ಫರ್ ಆರ್ಡರ್’ ತಲುಪಿದ ಸ್ವಲ್ಪವೇ ಹೊತ್ತಿನಲ್ಲಿ ‘ಗೀತಾ’ದ ಪ್ರತಿನಿಧಿಯೂ ನಗುತ್ತಾ ಹಾಜರಾಗಿಬಿಡುತ್ತಿದ್ದ!

ದೆಹಲಿ ತಲುಪಿದವನಿಗೆ ಹಳೆಯ ಪರಿಚಯದ ನನ್ನೂರ ಗೆಳೆಯ ಹಾಗೂ ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಶ್ರೀ ಸರವು ಕೃಷ್ಣ ಭಟ್ಟರ ಕೃಪೆಯಿಂದ, ‘ಸಂಘ’ದ ಗೆಸ್ಟ್ ಹೌಸ್‌ನಲ್ಲಿ ತಾತ್ಕಾಲಿಕ ನಿವಾಸಿಯಾಗಲು ಕಷ್ಟವೇನೂ ಆಗಿದ್ದಿರಲಿಲ್ಲ. ಮರುದಿನವೇ, ದೆಹಲಿಯ ನಿಗಮ ಕಚೇರಿಯಲ್ಲಿ ಹಾಜರು ಹಾಕಿ ಬ್ಯಾಂಕ್ ಅಧ್ಯಕ್ಷರ ಆದೇಶವನ್ನು ಪರಿಪಾಲಿಸುವ, ಐಆರ್‌ಡಿ ಅಧಿಕಾರಿ ಶ್ರೀ ಪ್ರೇಮಾನಂದ ಶೆಟ್ಟರ ಕಾರಲ್ಲಿ ಕುಟುಂಬ ಸಹಿತ ಹೊರಟು, ದೆಹಲಿಯ ರಾಜೇಂದ್ರ ನಗರದ ಬ್ಯಾಂಕ್ ಕ್ವಾರ್ಟರ್ಸ್‌ನ ಬಳಿ ತಲುಪುವಾಗ ಮಧ್ಯಾಹ್ನದ ಬಿಸಿ ಬಿಸಿಲು ಸುಡುತ್ತಿತ್ತು. ಮನೆಯ ಮುಂಭಾಗವನ್ನು ಹಾದು ಹಿತ್ತಲಿಗೆ ನುಸುಳಿ ಮಹಡಿಯೇರುತ್ತಿದ್ದ ಶೆಟ್ಟರು, ‘‘ಇಲ್ಲಿ ಸಿಗುವ ಬಾಡಿಗೆ ಮನೆಗಳೇ ಹೀಗೇ ಸ್ವಾಮಿ. ಎದುರಿಗೆ ಓನರ್ ಮನೆ. ಹಿತ್ತಲ ಬಾಗಿಲು ಪಕ್ಕದ ಮೆಟ್ಟಲೇರಿದರೆ ಬಾಡಿಗೆ ಮನೆಯ ಹೊಸ್ತಿಲು. ಇದು ಬ್ಯಾಂಕ್ ಕ್ವಾರ್ಟರ್ಸ್ ಆಗಿ ಹತ್ತು ವರ್ಷ ದಾಟಿದೆ. ನಾವಿಲ್ಲಿ ಎರಡು ವರ್ಷ ಇದ್ದೆವು. ಓನರ್ ಪಂಜಾಬಿ. ತುಂಬಾ ಒಳ್ಳೆಯವರು. ಯಾವ ರಗಳೆಗೂ ಬರುವುದಿಲ್ಲ. ನನ್ನ ಮಗನ ಹೊಸ ಸ್ಕೂಲಿಗೆ ದೂರ ಆಗ್ತದೆ ಅಂತ, ಕಳೆದ ವಾರ ಮನೆ ಖಾಲಿ ಮಾಡಿದೆ. ಅಷ್ಟರಲ್ಲಿ ನಮ್ಮ ತಿಂಗಳಾಯರ ಫೋನ್ ಬಂತು. ಬೇರೆಯವರಿಗೆ ಅಲಾಟ್ ಮಾಡದೆ ಹಾಗೆಯೇ ಉಳಿಸಿಕೊಂಡೆವು. ನೀವಿಲ್ಲಿ ಆರಾಮವಾಗಿರಬಹುದು’’ ಎಂದರು ಶೆಟ್ಟರು. ಡಬಲ್ ಬೆಡ್ ರೂಮ್ ಮನೆ ಚಿಕ್ಕದಾಗಿದ್ದರೂ ಚೊಕ್ಕದಾಗಿತ್ತು.

ಮಹಡಿಯಿಳಿದು ಮನೆಯೆದುರಿನ ಅಂಗಳಕ್ಕೆ ಬಂದೆವು. ಬಾಗಿಲು ಮುಚ್ಚಿತ್ತು. ಬೆಲ್ ಮಾಡಿದಾಗ ಸುಮಾರು ನಲುವತ್ತರ ಮಹಿಳೆಯೊಬ್ಬರು ಹೊರ ಬಂದರು. ಶೆಟ್ಟರನ್ನು ಕಂಡು ಮುಖವರಳಿಸಿದರು, ‘ಇವರಾ ಇಲ್ಲಿಗೆ ಬರುವವರು?’ ಎನ್ನುತ್ತಾ ನನ್ನ ಕುಟುಂಬ ಸದಸ್ಯರನ್ನು ನೋಡುತ್ತಾ ಮುಖ ತುಂಬಾ ನಕ್ಕರು. ‘ಬನ್ನಿ ಒಳಗೆ’ ಎಂದರು. ಹೊಸಿಲು ದಾಟುತ್ತಿದ್ದ ನನ್ನ ಕಿರಿ ಮಗಳ ಕೆನ್ನೆ ಹಿಂಡುತ್ತಾ, ‘ಟೂ ಕ್ಯೂಟ್’ ಎಂದರು. ನಮ್ಮನ್ನು ಚಾವಡಿಯ ಸೋಫಾದ ಮೇಲೆ ಕುಳ್ಳಿರಿಸಿ ಒಳಗೆ ಹೋದರು. ಸ್ವಲ್ಪವೇ ಹೊತ್ತಲ್ಲಿ ಸುಮಾರು ಎಂಭತ್ತು ದಾಟಿದ್ದಿರಬಹುದಾದ ಬಹಳ ಚಂದದ ಎತ್ತರದ ಮುದುಕಿಯೊಬ್ಬರು ಹೊರಬಂದರು. ಶೆಟ್ಟರು ಎದ್ದು ನಿಂತರು. ನಾವೂ ನಿಂತೆವು. ಹಾಗೆ ಬಂದಿದ್ದ ಅವರು ಒಮ್ಮೆಲೆ ಬೆಚ್ಚಿಬಿದ್ದವರಂತೆ ಮಮತಾಜಳನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡತೊಡಗಿದ್ದರು. ಸ್ವಲ್ಪಹೊತ್ತು ಹಾಗೆಯೇ ನಿಂತಿದ್ದವರು, ಒಮ್ಮೆಲೆ ಮುಂದಕ್ಕೆ ನುಗ್ಗಿ ಬಂದು ಮಮತಾಜಳನ್ನು ಬಾಚಿ ತೊಡೆಗಂಟಿಸಿಕೊಂಡು ಕಲ್ಲಿನಂತೆ ನಿಂತುಬಿಟ್ಟರು! ನಾನು ಮುಜುಗರ ಪಡುತ್ತಿದ್ದಂತೆಯೇ, ಅಪ್ಪಿಕೊಂಡಿದ್ದ ಹುಡುಗಿಯನ್ನು ಒಮ್ಮೆಲೆ ದೂರ ತಳ್ಳಿದ ಅವರು, ಬಿರಬಿರನೆ ಹೆಜ್ಜೆ ಹಾಕುತ್ತಾ ಒಳಗೆ ಹೋಗಿಬಿಟ್ಟರು! ಆ ಹಿರಿಜೀವದ ಅನಿರೀಕ್ಷಿತ, ಅಸಹಜ ಮತ್ತು ಅಚ್ಚರಿಯ ವರ್ತನೆಯನ್ನು ಅರಗಿಸಿಕೊಳ್ಳಲಾಗದೆ ನಾವು ಗಲಿಬಿಲಿ ಗೊಳ್ಳುತ್ತಿರುವಂತೆಯೇ, ಒಳಕೋಣೆಯಿಂದ ಹೆಂಗಸರಿಬ್ಬರ ಸಣ್ಣದೊಂದು ಜಗಳವೂ ಅಸ್ಪಷ್ಟವಾಗಿ ಕೇಳಿಸಿತ್ತು. ನಾವು ಪರಸ್ಪರ ಮುಖ ನೋಡಿಕೊಂಡೆವು. ನಾವು ಮಾಡಬಹುದಾಗಿದ್ದದ್ದು ಅಷ್ಟು ಮಾತ್ರ. ಟ್ರೇಯೊಂದರಲ್ಲಿ ನಾಲ್ಕು ಗ್ಲಾಸ್ ಕೆಂಬಣ್ಣದ ‘ರೂ ಅಬ್ಝಾ’ ಪಾನೀಯವನ್ನು ಎತ್ತಿಕೊಂಡು ಹೊರಗೆ ಬಂದ ನಲುವತ್ತರ ಮಹಿಳೆ, ಅದನ್ನು ಟೀಪಾಯಿ ಮೇಲಿಟ್ಟು, ‘ಕುಡಿಯಿರಿ’ ಎಂದರು. ಕುಡಿದೆವು. ಮಕ್ಕಳ ‘ಹೆಸರು’ ಕೇಳಿದರು. ‘ವಯಸ್ಸು ಎಷ್ಟು’ ಎಂದು ವಿಚಾರಿಸಿದರು. ‘ಯಾವ ಕ್ಲಾಸ್’ ಎಂದು ಪ್ರಶ್ನಿಸಿದರು. ಎಲ್ಲದಕ್ಕೂ ಉತ್ತರಿಸಿದ ನಾವು ಅವರಿಗೆ ಮತ್ತೊಮ್ಮೆ ನಮಸ್ಕರಿಸಿ ಮರಳಿದೆವು.

‘ಗೀತಾ ಟ್ರಾನ್ಸ್ ಪೋರ್ಟ್ ಯಾವಾಗ ಬರಬಹುದು?’ ಕಾರು ಚಲಾಯಿಸುತ್ತಾ ಪ್ರಶ್ನಿಸಿದ್ದರು ಶೆಟ್ಟರು.

‘ಇನ್ನೂ ನಾಲ್ಕು ದಿನ ಹೋದೀತು. ಶುಕ್ರವಾರ ಗ್ಯಾರಂಟಿ ಅಂದಿದ್ದಾರೆ’ ಎಂದೆ. ‘ಲೋಡ್ ಫುಲ್ ಉಂಟಾ?’ ಮತ್ತೊಂದು ಪ್ರಶ್ನೆ.

‘ಮುಕ್ಕಾಲು ಲೋಡು ಪುಸ್ತಕಗಳೇ’ ಜುಬೇದಾ ನಕ್ಕಿದ್ದಳು.

‘ನೀವು ನಾಲ್ಕು ದಿನ ಕರ್ನಾಟಕ ಸಂಘದಲ್ಲೇ ಇದ್ದುಬಿಡಿ. ಗೂಡ್ಸ್ ಬಂದ ಮೇಲೆ ಇಲ್ಲಿಗೆ ಬರಬಹುದು’ ಎಂದರು ಶೆಟ್ಟರು. ನಾನು ತಲೆಯಾಡಿಸಿದೆ. ಆರ್.ಕೆ. ಪುರಂನಲ್ಲಿರುವ ಕರ್ನಾಟಕ ಸಂಘದ ಬಾಗಿಲ ಬಳಿ ನಮ್ಮನ್ನು ಇಳಿಸಿದ ಶೆಟ್ಟರು ತನ್ನ ಮನೆಗೆ ಹೋದರು. ಮರುದಿನ ಮಂಗಳವಾರ. ನಾನು ಕಚೇರಿಯಲ್ಲಿದ್ದೆ. ಹನ್ನೊಂದು ದಾಟಿದ್ದಿರಬಹುದು. ಐಆರ್‌ಡಿ ವಿಭಾಗದ ಅಟೆಂಡರ್ ಬಂದವನು, ‘ಸರ್ ಹೇಳಿದ್ರು. ನೀವೊಮ್ಮೆ ಕ್ಯಾಬಿನ್‌ಗೆ ಬರಬೇಕಂತೆ’ ಎಂಬ ಸಂದೇಶ ನೀಡಿದ್ದ. ಅವನ ಬೆನ್ನು ಹಿಡಿದು ಶೆಟ್ಟರ ಕ್ಯಾಬಿನ್ ಹೊಕ್ಕೆ. ಶೆಟ್ಟರ ಮುಖದಲ್ಲಿ ಗೆಲುವು ಕಾಣಿಸುತ್ತಿರಲಿಲ್ಲ. ಮೌನವಾಗಿ ಕುಳಿತಿದ್ದರು. ಅವರೆದುರು ಪಂಜಾಬಿ ಪೇಟ ಧರಿಸಿದ್ದ ನಡು ವಯಸ್ಸು ದಾಟಿದ್ದ ಧಡೂತಿಯಾದ ವ್ಯಕ್ತಿಯೊಬ್ಬರು ತಲೆ ತಗ್ಗಿಸಿ ಕುಳಿತಿದ್ದರು. ನನಗೆ ಕುಳಿತುಕೊಳ್ಳಲು ಹೇಳಿದ ಶೆಟ್ಟರು, ಕ್ಯಾಂಟೀನ್‌ಗೆ ಫೋನ್ ಮಾಡಿ ‘ಮೂರು ಟೀ’ ಎಂದರು. ನಾನು ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತೆ.

‘ಇವರು ಆ ಮನೆ ಓನರು. ನಿಮ್ಮಂದಿಗೆ ಇವರಿಗೇನೋ ಮಾತನಾಡಬೇಕಂತೆ.’ ‘ನಮಸ್ತೆ ಸರ್’ ನಾನು ಕೈ ಮುಗಿದೆ.

ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ, ನನ್ನ ಕೈಗಳನ್ನು ತನ್ನೆರಡೂ ಕೈಗಳಿಂದ ಜೋಡಿಸಿಕೊಂಡು ಹಿಡಿದ ಅವರು, ‘ಮಾಫ್ ಕರ್ನಾ...’ ಎಂದರು. ನಾನು ಗಲಿಬಿಲಿಗೊಂಡೆ. ‘ಅರ್ಥವಾಗಲಿಲ್ಲ ಸರ್’ ಎಂದೇನೋ ಹೇಳಿದ್ದೆ. ‘ನನ್ನನ್ನು ಸರ್ ಎಂದು ದಯವಿಟ್ಟು ಹೇಳಬೇಡಿ’ ಎನ್ನುತ್ತಿದ್ದಂತೆಯೇ ಅವರು ಬಿಕ್ಕಳಿಸಲಾರಂಭಿಸಿದ್ದರು. ತಿದ್ದಿ ತೀಡಿದ್ದ ಅವರ ಹುಬ್ಬುಗಳ ತಳದ ಕಣ್ಣುಗಳ ಸಂದಿಯಿಂದ ಜಾರುತ್ತಿದ್ದ ನೀರ ತುಣುಕುಗಳು, ಒಪ್ಪವಾಗಿ ಬಾಚಿಕೊಂಡಿದ್ದ ಅವರ ಗಡ್ಡದ ಕೂದಲುಗಳಲ್ಲಿ ಮುತ್ತಿನಂತೆ ಕಾಣಿಸಿದ್ದವು. ನನ್ನ ಗೊಂದಲವನ್ನು ಗ್ರಹಿಸಿದ ಶೆಟ್ಟರು, ‘ಕತೆ’ ಹೇಳಲಾರಂಭಿಸಿದರು.

ಆ ಕತೆಯ ಒಟ್ಟು ಸಾರಾಂಶ ಇಷ್ಟು: ಒಟ್ಟಿನಲ್ಲಿ ನನಗೆ ಆ ಮನೆ ಸಿಗುವುದಿಲ್ಲ. ಅದಕ್ಕೆ ಕಾರಣ ನಾನು ಮುಸ್ಲಿಮನಾಗಿರುವುದು ಅಲ್ಲ. ಅವರು ಹಿಂದೂ ಆಗಿರುವುದೂ ಅಲ್ಲ. ಪಕ್ಕದ ಕುರ್ಚಿಯಲ್ಲಿ ಕುಳಿತು ನನ್ನ ಕೈಗಳನ್ನು ಭದ್ರವಾಗಿ ಹಿಡಿದುಕೊಂಡವರು, ನಮ್ಮ ದೇಶವಿಭಜನೆಯ ಕರಾಳ ದಿನಗಳಲ್ಲಿ, ಪಾಕಿಸ್ತಾನದ ಲಾಹೋರಿನಿಂದ ಜೀವ ಉಳಿಸಿಕೊಂಡು ಬಂದಿದ್ದ ನೂರಾರು ಪುಟ್ಟ ಕಂದಮ್ಮಗಳಲ್ಲಿ ಒಬ್ಬರು. ಅಗವರಿಗೆ ಆಗ ಎರಡೋ ಮೂರೋ ಇದ್ದೀತು. ಹಿಂದಿನ ದಿನ ನಾವು ಮನೆ ನೋಡಲು ಹೋಗಿದ್ದಾಗ, ನನ್ನ ಮಗಳೊಂದಿಗೆ ಅಸಹಜವಾಗಿ ವರ್ತಿಸಿದ್ದವರು ಅವರ ತಾಯಿ. ಹಾಗೆ ವರ್ತಿಸಲು ಕಾರಣ; ಮಮತಾಜಳ ವಯಸ್ಸು, ಸೈಜು ಮತ್ತು ರೂಪ.

ನಲುವತ್ತು ವರ್ಷಗಳ ಹಿಂದೆ ಹೆಚ್ಚುಕಮ್ಮಿ ನನ್ನ ಮಗಳಂತೆಯೇ ಕಾಣಿಸುತ್ತಿದ್ದ, ಅವರ ಮಗಳ ಮೇಲೆ ನಡೆದ್ದಿದ್ದ ಭಯಾನಕ ಅತ್ಯಾಚಾರವನ್ನು ಕಣ್ಣಾರೆ ಕಂಡ ದುರ್ದೆವಿ ತಾಯಿ ಆಕೆ. ನಾವು ಅವರ ಮನೆಗೆ ಬಾಡಿಗೆದಾರರಾಗಿ ಹೋದರೆ, ನನ್ನ ಮಗಳನ್ನು ಅವರು ನಿತ್ಯವೂ ಕಾಣಬೇಕಾಗುತ್ತದೆ ಮತ್ತು ಆ ಪ್ರತಿಯೊಂದು ನಿತ್ಯವೂ, ತನ್ನ ಮಗಳ ಮೇಲೆ ನಡೆದ ಅತ್ಯಾಚಾರವನ್ನು ನೆನಪು ಮಾಡಿಸುತ್ತಿರುತ್ತವೆ. ಆದ್ದರಿಂದ, ನನ್ನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಆ ಮನೆಯನ್ನು ಕೊಡಲು ಬ್ಯಾಂಕು ಸಮ್ಮತಿಸದಿದ್ದರೆ, ಬ್ಯಾಂಕಿನೊಂದಿಗೆ ಅವರು ಮಾಡಿಕೊಂಡಿರುವ ಬಾಡಿಗೆ ಕರಾರನ್ನೇ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ.. ಇತ್ಯಾದಿ. ನಾನು ಎದ್ದು ನಿಂತೆ. ಅವರೂ ಎದ್ದು ನಿಂತರು. ಅವರನ್ನು ಬಲವಾಗಿ ಆಲಿಂಗಿಸಿಕೊಂಡು ಹೇಳಿದೆ, ‘ಐ ಯಾಮ್ ಸಾರಿ ಸರ್. ಕರಾರು ಮುರಿದುಕೊಳ್ಳಬೇಡಿ. ನಾನು ಬೇರೆ ಮನೆ ಹುಡುಕುತ್ತೇನೆ.’ ಅವರು ಹೊರಟು ಎರಡು ತಾಸೂ ಆಗಿರಲಿಕ್ಕಿಲ್ಲ. ಬ್ಯಾಂಕ್ ಅಧ್ಯಕ್ಷರ ಖಾಸಾ ಆದ್ಮಿಯಲ್ಲವೆ ನಾನು? ಇಡೀ ನಿಗಮ ಕಚೇರಿಯಲ್ಲಿ ನನ್ನ ಜಾತಕ ಗುಟ್ಕಾ ಆಗತೊಡಗಿತ್ತು. ‘ಏಕ ಪಕ್ಷೀಯವಾಗಿ ಕರಾರು ಮುರಿದುಕೊಳ್ಳಲು ಮನೆ ಓನರಿಗೆ ಯಾವ ರೈಟೂ ಇಲ್ಲ. ಇನ್ ರೈಟಿಂಗ್‌ನಲ್ಲಿ ಏನು ಅಂತ ಕಾರಣ ಕೊಡ್ತಾರೆ? ಕರಾರು ಪತ್ರದಲ್ಲಿ ಮುಸ್ಲಿಮರಿಗೆ ಮನೆ ಕೊಡುವುದಿಲ್ಲ ಅಂತ ಬರೆದಿದೆಯಾ?’ ಇತ್ಯಾದಿ ವಾದಗಳು. ಸಂಜೆಯಾಗುವಷ್ಟರಲ್ಲಿ ಈ ಆವೇಶಗಳು ದೆಹಲಿಯ ಕೆಲವು ಶಾಖೆಗಳಿಗೂ ತಲುಪಿತ್ತು. ಮಾತ್ರವಲ್ಲ, ಮುಂದಿನ ದಿನಗಳಲ್ಲಿ, ನಮ್ಮ ದೇಶದ ಮೊತ್ತ ಮೊದಲ ಗ್ರಾಮೀಣ ಬ್ಯಾಂಕ್ ಆಗಿ ದಾಖಲೆ ಬರೆದ ‘ಪ್ರಥಮಾ ಬ್ಯಾಂಕ್’ ಅಧ್ಯಕ್ಷರಾದ ಡಾ. ದಿನಕರ ರಾಯರ ಕಿವಿಗೂ ಬಿದ್ದಿತ್ತು. ಆ ದಿನಗಳಲ್ಲಿ ಅವರು ನಮ್ಮ ಬ್ಯಾಂಕಿನ ‘ಆಗ್ರಾ’ದ ವಿಭಾಗೀಯ ಕಚೇರಿ ಮುಖ್ಯಸ್ಥರು. ಪ್ರಧಾನ ಕಚೇರಿಯಲ್ಲಿದ್ದ ದಿನಗಳಲ್ಲಿ ಪರಿಚಯವಾಗಿದ್ದ ಹೃದಯವಂತ ಗೆಳೆಯ ಆ ದಿನಕರ ರಾವ್. ಮರುದಿನ ಮುಂಜಾನೆ ನಾನು ಕಚೇರಿಯ ಮೆಟ್ಟಲೇರುತ್ತಿದ್ದಂತೆಯೇ ಬ್ಯಾಂಕಿನ ‘ಎಸ್ಸಿ,ಎಸ್ಟಿ’ ಯೂನಿಯನ್ ಅಧ್ಯಕ್ಷರಾಗಿದ್ದ ಶ್ರೀ ಕನ್ವರ್ ಸಿಂಗ್ ಬದಲಿಯಾರೊಂದಿಗೆ ಬಂದಿದ್ದ ದಿನಕರ ಸಾಹೇಬರು ನನ್ನನ್ನು ಹೆಬ್ಬಾಗಿಲ ಬಳಿಯೇ ಸ್ವಾಗತಿಸಿದ್ದರು. ಆಗೆಲ್ಲ ಮತ ಸಂಖ್ಯಾ ದಾಖಲೆಯಲ್ಲಿ ಮಿಂಚುತ್ತಿದ್ದ ಶ್ರೀ ರಾಮ್ ವಿಲಾಸ್ ಪಾಸ್ವಾನರ ಖಾಸಾ ದೋಸ್ತ್ ಕನ್ವರ್ ಎಸ್. ಬದಲಿಯಾ. ‘ನೀವು ಹೂಂ.. ಅಂದರೆ ಸಾಕು. ನಾಳೆಯೇ ದೊಡ್ಡ ಇಶ್ಯು ಮಾಡಿಬಿಡ್ತೇನೆ.’ ಯುದ್ಧೋತ್ಸಾಹದಲ್ಲೇ ಇದ್ದರು, ಆ ಯೂನಿಯನ್ ಅಧ್ಯಕ್ಷರು.

ಬಾಡಿಗೆ ಓನರ ನಿರಾಕರಣೆ ಮತ್ತು ಅದಕ್ಕೆ ಅವರು ಮುಂದಿಟ್ಟಿರುವ ಕಾರಣಗಳನ್ನು ಹಿಂದಿನ ರಾತ್ರಿ ಜುಬೇದಾಳಿಗೆ ವಿವರಿಸುತ್ತಿದ್ದಾಗ ಹೆಣ್ಣು ಮಕ್ಕಳಿಬ್ಬರ ತಾಯಿಯಾದ ಅವಳು ಬೆಚ್ಚಿ ಬಿದ್ದಿದ್ದಳು. ಆದರೆ, ಅದಕ್ಕೆ ಕಾರಣ ‘ದೇಶವಿಭಜನೆ’ಯಲ್ಲ. ಹತ್ತು ವರ್ಷಗಳ ಹಿಂದೆ ‘ಜಿಹಾದ್’ ಕಾದಂಬರಿಯು ‘ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗ, ‘ನೀನು, ನಿನ್ನ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ, ನಿನ್ನ ಮಕ್ಕಳಿಬ್ಬರನ್ನು ಅಪಹರಿಸಿ ರೇಪು ಮಾಡುತ್ತೇವೆ’ ಎಂದು ಬೆದರಿಸಿದ್ದ ಎರಡು ಅನಾಮಧೇಯ ಪತ್ರಗಳು. ‘ಆ ಓನರು ಒಪ್ಪಿದರೂ, ಆ ಮನೆಗೆ ನಾನು ಬರುವುದಿಲ್ಲ.’ ಜುಬೇದಾ ಕಡಕ್ ವಾರ್ನಿಂಗ್ ಕೊಟ್ಟಿದ್ದಳು. ಅದನ್ನೇ ದಿನಕರ್ ಸರ್ ಬಳಿ ಹೇಳಿದೆ.

ಅವರು ಎಲ್ಲವನ್ನೂ ಸಿದ್ಧಪಡಿಸಿಕೊಂಡೇ ಬಂದಂತಿದ್ದರು. ‘ನೋ ಪ್ರಾಬ್ಲೆಮ್. ನಿಮಗೆ ಬೇರೆ ಮನೆ ಫಿಕ್ಸ್ ಆಗಿದೆ. ವಿಕಾಸ್‌ಪುರಿಯ ‘ಜ್ಯುಪಿಟರ್ ಅಪಾರ್ಟ್‌ಮೆಂಟ್‌ನಲ್ಲಿ ಈ ಬದಲಿಯಾರದ್ದೇ ಒಂದು ಮನೆ ಖಾಲಿ ಇದೆ. ಇದುವರೆಗೂ ಯಾರಿಗೂ ಬಾಡಿಗೆಗೆ ಅಂತ ಕೊಟ್ಟಿಲ್ಲ. ನಿಮಗೆ ಕೊಡಲು ಒಪ್ಪಿದ್ದಾರೆ. ನೀವು ಬೇಕಾದರೆ ಈವತ್ತು ಸಂಜೆಯೇ ಶಿಫ್ಟ್ ಮಾಡಬಹುದು’ ಎಂದರು ದಿನಕರ ರಾಯರು.

ಜೈ ಶ್ರೀರಾಂ

ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ನಿಂತು ಜೋರಾಗಿ ಒಂದು ಕಲ್ಲೆಸದರೆ, ಅದು ‘ಆಗಾಖಾನ್’ ಕಟ್ಟಡದ ಮೇಲೆ ಬಿದ್ದೀತು. ಆಗಾಖಾನ್ ಹೆಗಲೇರಿ ಇನ್ನೊಂದು ಕಲ್ಲೆಸೆದರೆ ಅದು, ‘ಎನ್‌ಎಸ್‌ಡಿ’ ರಂಗ ಮಂದಿರದ ಮೇಲೆ ಬಿದ್ದೀತು. ನಮ್ಮ ಬ್ಯಾಂಕಿನ ನಿಗಮ ಕಚೇರಿ ಇದ್ದದ್ದು ಅದೇ ಆಗಾಖಾನ್ ಕಟ್ಟಡದ ಒಂದು ಭಾಗವಾದ ‘ಸರೋಜಿನಿ ಹೌಸ್’ನಲ್ಲಿ. ದಿಲ್ಲಿಯ ಬ್ಯಾಂಕಿಂಗ್ ಕಲ್ಚರೇ ಬೇರೆ ಬಗೆಯದ್ದು. ಪ್ರತಿ ದಿನ ಬೆಳಗ್ಗೆ ಬರುವ ಉದ್ಯೋಗಿಗಳು ಮೊದಲು ಮಾಡುತ್ತಿದ್ದ ಕೆಲಸವೆಂದರೆ, ತಮ್ಮ ತಮ್ಮ ಕುರ್ಚಿಗಳತ್ತ ತೆರಳುವ ಮುನ್ನ, ಕಚೇರಿಯ ಎರಡೂ ಮಹಡಿಗಳನ್ನು ಏರಿಳಿದು ಎದುರಿಗೆ ಕಂಡ ಕಂಡವರೆಲ್ಲರ ಕೈ ಕುಲುಕುತ್ತಾ, ‘ಗುಡ್ ಮಾರ್ನಿಂಗ್’ ಎಂದು ಶುಭ ಕೋರುವುದು. ಪರ್ಸನಲ್ ಡಿಪಾರ್ಟ್‌ಮೆಂಟ್‌ನ ವಿಶಾಲವಾದ ಕೋಣೆಯಲ್ಲಿ, ಅರ್ಧ ತಾಸಿಗೆ ಮುಂಚಿತವಾಗಿಯೇ ಕುಳಿತಿರುತ್ತಿದ್ದ ನಾನು, ಒಬ್ಬಾತನ ಪ್ರವೇಶದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಕೆಲಸ ನಿಲ್ಲಿಸಿಬಿಡುತ್ತಿದ್ದೆ. ಕೋಣೆಯೊಳಗಿರುವ ಇಪ್ಪತ್ತಕ್ಕೂ ಹೆಚ್ಚು ಸಹೋದ್ಯೋಗಿಗಳಿಗೆ ಕೈ ಕೊಟ್ಟು ಶುಭಾಶಯ ಕೋರುತ್ತಾ, ಬಲ ಮೂಲೆಯಲ್ಲಿ ಕುಳಿತಿರುವ ನನ್ನ ಬಳಿಗೆ ಬಂದು ಕೈ ಕೊಡುವವರೆಗೂ ಚಡಪಡಿಸುತ್ತಿದ್ದೆ. ಕೆಲವೊಮ್ಮೆ ಎಳೆಂಟು ಮಂದಿ ಜೊತೆಯಲ್ಲೇ ಬರುವುದೂ ಉಂಟು. ಯಾವುದೋ ಕಾರಣಕ್ಕೆ ಮೇಜಿನ ವಯರ್ ಒಳಗೆ ಕೈ ಇರಿಸಿದ್ದರೆ, ಅದನ್ನೂ ಹೊರಗೆಳೆದು ಕೈ ಕುಲುಕಿ ಹೋಗುವವರೂ ಇದ್ದರು. ಈ ಕೈ ಕುಲುಕುವ ಕೆಲವರಲ್ಲಿ, ‘ಗುಡ್ ಮಾರ್ನಿಂಗ್’ ಬದಲಿಗೆ ‘ಜೈ ಶ್ರೀರಾಂ’ ಎನ್ನುವರೂ ಇದ್ದರು. ನನ್ನನ್ನು ನಿತ್ಯವೂ ಮುಜುಗರಕ್ಕೆ ತಳ್ಳುತ್ತಿದ್ದ ಸಂಗತಿಯೆಂದರೆ, ನನ್ನ ಪಕ್ಕದಲ್ಲಿ ಕುಳಿತಿದ್ದವನಿಗೆ, ‘ಜೈ ಶ್ರೀರಾಂ’ ಎಂದೇ ಶುಭ ಕೋರುವವರು, ನನ್ನ ಕೈ ಹಿಡಿದಾಗ ಮಾತ್ರ, ‘ಗುಡ್ ಮಾರ್ನಿಂಗ್’ಗೆ ಧರ್ಮಾಂತರವಾಗುತ್ತಿದ್ದದ್ದು!

ಧರೆಗುರುಳಿದ ಸೌಹಾರ್ದ

ದೆಹಲಿ ಕರ್ನಾಟಕ ಸಂಘದವರು ಡಿಸೆಂಬರ್ 6, 1992ರಂದು ಚಾಣಕ್ಯಪುರಿಯ ‘ಕರ್ನಾಟಕ ಭವನ’ದ ಸಭಾಂಗಣದಲ್ಲಿ ಸಂಜೆ 6ಕ್ಕೆ ಸರೋದ್ ಮಾಂತ್ರಿಕ ಪಂಡಿತ ಡಾ. ರಾಜೀವ ತಾರಾನಾಥರ ಕಾರ್ಯಕ್ರಮವೊಂದನ್ನು ಇಟ್ಟುಕೊಂಡಿದ್ದರು. ಮಕ್ಕಳನ್ನು ‘ವಿಕಾಸ್ ಪುರಿ’ಯಲ್ಲಿರುವ ಜ್ಯುಪಿಟರ್ ಅಪಾರ್ಟ್‌ಮೆಂಟಿನಲ್ಲೇ ಉಳಿಸಿ, ಸ್ಕೂಟರ್‌ನಲ್ಲಿ ಜುಬೇದಾಳನ್ನು ಕರೆದುಕೊಂಡು ಮಧ್ಯಾಹ್ನ ಮೂರಕ್ಕೇ ಮನೆ ಬಿಟ್ಟಿದ್ದೆ. ಸಂಗೀತ ಕಚೇರಿಗೆ ಮುನ್ನವೇ ಪಂಡಿತರನ್ನು ಕಂಡು ಮಾತನಾಡಿಸುವ ಆಸೆ ನನ್ನದು. ಹಾಗೆಂದು ಶ್ರೀ ರಾಜೀವ ತಾರಾನಾಥರು ನನಗೆ ಅಪರಿಚಿತರೇನೂ ಅಲ್ಲ. ಹಿಂದೊಮ್ಮೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಮ್ಮ ಸಮುದಾಯದ ‘ಕುರಿ’ ನಾಟಕಕ್ಕಾಗಿ ಸಂಗೀತ ಕೊಟ್ಟಿದ್ದವರು ಅವರು. ದೆಹಲಿಯ ಕಾರ್ಯಕ್ರಮದಂದು ಕಂಡಾಬಟ್ಟೆ ಜನ. ನಮ್ಮ ಕನ್ನಡಿಗರಿಗಿಂತಲೂ ದೆಹಲಿ ಕನ್ನಡೇತರರೇ ಸಭಾಂಗಣವನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಡಾ. ರಾಜೀವ ತಾರಾನಾಥರ ಸರೋದ್ ಕಚೇರಿಯ ಖ್ಯಾತಿ ಅಂಥದ್ದು. ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಎ.ಪಿ. ಕುಮ್ಟಾಕರ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಸಂಗೀತ ಮಾಂತ್ರಿಕನ ಪರಿಚಯವನ್ನು ಬಹಳ ರೋಚಕವಾಗಿಯೇ ಸಭೆಗೆ ವಿವರಿಸಿದ್ದರು. ಸಹ ಕಲಾವಿದರ ಪರಿಚಯ ಕಾರ್ಯಕ್ರಮ ಮುಗಿದ ನಂತರ, ‘ಗೊಂಯ್...’ ಎಂದು ತಂತಿ ಮೀಟಿದ ಇಂಪಾದ ಸ್ವರ ಕೇಳಿಸಿದ್ದೇ ತಡ, ಸಭಾಂಗಣದಲ್ಲಿ ಮಿಂಚಿನ ಸಂಚಾರವಾಗಿತ್ತು. ಗುಸು ಗುಸು ಮಾತನಾಡುತ್ತಿದ್ದವರೆಲ್ಲ ಉಸಿರು ಬಿಗಿದುಕೊಂಡು ಸೆಟೆದು ಕುಳಿತುಬಿಟ್ಟಿದ್ದರು. ತಮ್ಮ ಉಸಿರಾಟದ ಸದ್ದಿನಿಂದ ಸಂಗೀತಕ್ಕೆ ಎಲ್ಲಿ ಅಪಚಾರವಾದೀತೋ ಎಂಬ ಅಳುಕು ಎಲ್ಲರಿಗೂ. ಕುರ್ಚಿಯಲ್ಲಿ ಹಿಂದೆ ಮುಂದೆ ಜರುಗಿದರೆ ಅದರ ಸದ್ದಿನಿಂದ ರಸಭಂಗವಾದೀತೇನೋ ಎಂಬ ಆತಂಕ. ಯಾವಾಗ ಸಂಗೀತ ಶುರುವಾಯಿತು, ಅವರು ಯಾವ ರಾಗ ನುಡಿಸುತ್ತಿದ್ದಾರೆ, ಯಾವಾಗ ರಾಗ ಬದಲಾಯಿಸುತ್ತಿರುತ್ತಾರೆ ಎಂಬಿತ್ಯಾದಿಗಳ ಪರಿವೆಯೇ ಇಲ್ಲದೆ ಸುಮಾರು ಎರಡು ತಾಸಿನಷ್ಟು ಸಂಮೋಹನ ಗೊಂಡವರಂತೆ ಕುಳಿತಿದ್ದ ಶ್ರೋತೃಗಳೆಲ್ಲ ಬೆಚ್ಚಿ ಬಿದ್ದು, ಎದ್ದು ನಿಂತದ್ದು, ‘ಟಣ್, ಟಣ್ಣಣ್, ಟಿಣ್’ ಎಂಬ ಅಪರೂಪದ ಅಪಸ್ವರಕ್ಕೆ! ಪಂಡಿತ ಡಾಕ್ಟರ್ ರಾಜೀವ ತಾರಾನಾಥರ ಕಚೇರಿಯಲ್ಲೂ ಅಪಸ್ವರ! ಅವರ ಬೆರಳುಗಳ ಸ್ಪರ್ಶಕ್ಕೆ ಹೂವಿನಂತೆ ಅರಳುತ್ತಿದ್ದ ಸರೋದ್ ವಾದ್ಯದ ತಂತಿಗಳೆಲ್ಲ ತುಂಡು ತುಂಡಾಗಿ, ವೇದಿಕೆಯ ಮೇಲೆ ಬೀಳುತ್ತಿದ್ದ ಸ್ಪಾಟ್‌ಲೈಟುಗಳ ಬೆಳಕಿನಲ್ಲಿ ಕನ್ನಡಿ ಹಾವುಗಳಂತೆ ಹೊಳೆಯುತ್ತಿದ್ದವು. ಅಷ್ಟಾಗುವಾಗ, ಸಭಾಂಗಣದ ಹಿಂದೆ ಇದ್ದ ಯಾವನೋ ಒಬ್ಬ ಪಿಸುಗುಟಿದ್ದ, ‘ಬಾಬರಿ ಮಸೀದಿ ಬಿತ್ತಂತೆ!’ ‘ಎಲ್ಲರ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅದುವರೆಗೂ ಸಭಾಂಗಣದಲ್ಲಿರುವ ಶ್ರೋತೃಗಳನ್ನೆಲ್ಲ ತಮ್ಮ ಪ್ರೀತಿಯ ತಂತಿಯಲ್ಲಿ ಬಂಧಿಸಿದ್ದ ಸರೋದ್ ಮಾಂತ್ರಿಕ ಡಾ. ರಾಜೀವ ತಾರಾನಾಥರು, ತಲೆ ತಗ್ಗಿಸಿ, ಕಣ್ಣೀರಿಳಿಸುತ್ತಾ ಕುಳಿತುಬಿಟ್ಟಿದ್ದರು; ಎಲ್ಲ ತಪ್ಪುಗಳಿಗೂ ತಾವೊಬ್ಬರೇ ಕಾರಣ ಎಂಬಂತೆ! ಕೃಷ್ಣ ಭಟ್ಟರೊಂದಿಗೆ ಸೈಡ್ ವಿಂಗ್‌ನಲ್ಲಿ ಕುಳಿತಿದ್ದ ನನ್ನತ್ತ ನೋಡಿದ ತಾರಾನಾಥರು, ಬಾ ಎನ್ನುವಂತೆ ಕೈ ಸನ್ನೆ ಮಾಡಿದ್ದರು. ನಾನು ಹೋಗಿ ಅವರ ಪಕ್ಕದಲ್ಲೇ ಮಂಡಿಯೂರಿ ಕುಳಿತೆ. ‘ನಿಮ್ಮ ಮನೆಗೆ ಎಷ್ಟು ದೂರವಿದೆ?’

‘ಹದಿನೈದು ಮೈಲು ಸಾರ್’

‘ಜೊತೆಗೆ ಯಾರಿದ್ದಾರೆ?’

‘ಜುಬೇದಾ ಸಾರ್.’

‘ಈಗ ಹೇಗೆ ಹೋಗುತ್ತೀರಿ?’

‘ಸ್ಕೂಟರ್ ಇದೆ ಸಾರ್.’

ಅಷ್ಟು ಹೊತ್ತಿಗೆ ಬಂದು ನನ್ನ ಪಕ್ಕದಲ್ಲಿ ನಿಂತಿದ್ದ ಕೃಷ್ಣ ಭಟ್ಟರತ್ತ ನೋಡಿ, ‘ಇವರನ್ನು ಕಾರು ಮಾಡಿ ಕಳಿಸಿ. ಇವರ ಸ್ಕೂಟರನ್ನು ನೀವು ಯಾರಾದರೂ ತೆಗೆದು ಕೊಂಡು ಹೋಗಿ. ಇವರೊಬ್ಬರೇ ಈ ರಾತ್ರಿ ಅಷ್ಟು ದೂರಕ್ಕೆ ಹೋಗುವುದು ಬೇಡ.’

ಕೃಷ್ಣ ಭಟ್ಟರು ನನ್ನ ಹುಟ್ಟೂರಿನ ಪ್ರೋಡಕ್ಟ್. ಅವರಿಗೆ ನನ್ನ ಜಾತಕದ ಪ್ರತಿಯೊಂದು ಚೌಕವೂ ಪರಿಚಿತ. ‘ಆಯಿತು ಸರ್. ಕಾರು ಮಾಡಿಯೇ ಕಳಿಸ್ತೇನೆ’ ಎನ್ನುತ್ತಾ ನನ್ನ ಭುಜ ತಟ್ಟಿ ಎಬ್ಬಿಸಿದರು. ಸೈಡ್ ವಿಂಗ್‌ನಿಂದ ಹೊರಗೆ ಪ್ಯಾಸೇಜ್‌ಗೆ ಹೆಜ್ಜೆಯಿರಿಸುತ್ತಿದ್ದಂತೆಯೇ ಬೆನ್ನಿಗೆ ಬಲವಾಗಿ ಗುದ್ದಿದ ಕೃಷ್ಣ ಭಟ್ಟರು, ‘ಈರೆನ್ ವಾ ಕುಲೆಲಾ ಮೂಸಾಂದ್. ಬುಡೆದಿನ್ ತುಂಬೋಂದ್ ಈರ್ ಸ್ಕೂಟರ್‌ಡೇ ಪೋಲೆ’ (ನಿಮ್ಮನ್ನು ಯಾವ ಪ್ರೇತವೂ ಮೂಸುವುದಿಲ್ಲ. ಹೆಂಡತಿಯನ್ನು ಹೊತ್ತುಕೊಂಡು ನೀವು ಸ್ಕೂಟರಲ್ಲೇ ಹೋಗಿ) ಎನ್ನುತ್ತಾ ಜೋರಾಗಿ ನಕ್ಕಿದ್ದರು. ನಾನು ಹಾಗೆಯೇ ಮಾಡಿದ್ದೆ.

ಜೋ ವಾದಾ ಕಿಯಾ...

ಬಾಬರಿ ಮಸೀದಿ ಧರೆಗುರುಳಿದ ಮರುದಿನ, ದಶಂಬರ 7, 1992 ರಂದು ಆಗಿನ ಪ್ರಧಾನಮಂತ್ರಿ ಶ್ರೀ ಪಿ.ವಿ. ನರಸಿಂಹ ರಾವ್ ಅವರು, ನಮ್ಮ ದೇಶದ ಪಾರ್ಲಿಮೆಂಟಿ ನಲ್ಲಿ ಪ್ರಕಟಿಸಿದ್ದ ‘ವಾದಾ’ ಕೆಳಗಿನದ್ದು.

‘ಬಾಬರಿ ಮಸೀದಿ ಕೆಡವಿದ್ದು ಒಂದು ಬೀಭತ್ಸ ಕೃತ್ಯ. ಈ ದುರ್ಘಟನೆಗೆ ಕಾರಣರಾದವರ ಪತ್ತೆಗೆ ಹತ್ತು ದಿನಗಳೊಳಗೆ ತನಿಖಾ ಆಯೋಗವೊಂದನ್ನು ರಚಿಸಿ, ಪ್ರತಿಯೊಬ್ಬ ತಪ್ಪಿತಸ್ಥನನ್ನೂ ಕಾನೂನಿನಂತೆ ಶಿಕ್ಷಿಸಲಾಗುವುದು. ಮೈ ವಾದಾ ಕರ್ತಾ ಹೂಂ.., ಕೆಡವಲಾಗಿರುವ ಬಾಬರಿ ಮಸೀದಿಯನ್ನು ಸರಕಾರದ ವತಿಯಿಂದ ಕೂಡಲೇ ಮರು ನಿರ್ಮಾಣ ಮಾಡಿ ಕೊಡಲಾಗುವುದು.’ ಪ್ರಧಾನ ಮಂತ್ರಿಗಳು ತಮ್ಮ ‘ವಾದಾ’ದ ಪೂರ್ವಾರ್ಧವನ್ನೇನೋ ಹತ್ತು ದಿನಗಳ ಒಳಗೆಯೇ ನಿಭಾಯಿಸಿದ್ದರು. ದಶಂಬರ 16, 1992ರಂದು ನಿವೃತ್ತ ಉಚ್ಚ ನ್ಯಾಯಾಧೀಶ ಶ್ರೀ ಎಂ.ಎಸ್. ಲಿಬರ್‌ಹಾನ್ ನೇತೃತ್ವದಲ್ಲಿ ತನಿಖಾ ಆಯೋಗವನ್ನೂ ನೇಮಿಸಿದ್ದರು. ಮುಂದಿನ 16 ವರ್ಷಗಳ ಕಾಲ, ಒಂದೇ ಒಂದು ಕಮ್ಮಿ 400ರಷ್ಟು ಸಿಟ್ಟಿಂಗ್‌ಗಳನ್ನು ನಡೆಸಿದ್ದ ಸದರಿ ಆಯೋಗವು, ಒಂದು ಕಮ್ಮಿ 1,030 ಪುಟಗಳ ವರದಿಯನ್ನು, ಆಗಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಜೂನ್ 30, 2009 ರಂದು ಸಲ್ಲಿಸಿತ್ತು. ಆ ವರದಿಯಲ್ಲಿ, ಬಾಬರಿ ಮಸೀದಿ ಕೆಡವಲಾದ ಪ್ರಕರಣವು, ‘ನೀದರ್ ಸ್ಪಂಟೇನಿಯಸ್, ನಾರ್ ಅನ್ ಪ್ಲಾನ್ಡ್’ ಎಂದು ಸ್ಪಷ್ಟವಾಗಿ ದಾಖಲಿಸಲಾಗಿತ್ತು. ಅದರಂತೆ, 2017ರ ಎಪ್ರಿಲ್ ತಿಂಗಳಲ್ಲಿ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ‘ಕ್ರಿಮಿನಲ್ ಸಂಚು ನಡೆಸಿದ ಆರೋಪ ಪಟ್ಟಿಯಲ್ಲಿ, ಸರ್ವಶ್ರೀ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ವಿನಯ ಕಟಿಯಾರ್, ಶ್ರೀಮತಿ ಉಮಾ ಭಾರತಿ ಸೇರಿದಂತೆ ಒಟ್ಟು 32 ದೇಶಭಕ್ತರ ಹೆಸರುಗಳಿದ್ದವು. ಉಳಿದ ದೇಶಭಕ್ತರ ಪರಿಚಯ ನನಗೆ ಹೆಚ್ಚೇನೂ ಇರಲಿಲ್ಲ. ಆದರೆ, ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರು ಹಾಗಲ್ಲ. ಅವರ ಬಾಲ್ಯದ ದೋಸ್ತ್ ಒಬ್ಬನ ಮೂಲಕ ಅವರ ಪರಿಚಯ ಮೊದಲೇ ಆಗಿತ್ತು. ನನ್ನ ಗುಲಬರ್ಗಾ ವಾಸದ ಅವಧಿಯಲ್ಲಿ ಒಂದೂವರೆ ವರ್ಷದ ಕಾಲ, ಅಲ್ಲಿಯ ಮುಸ್ಲಿಮ್ ಹಾಸ್ಟೆಲ್‌ನಲ್ಲಿದ್ದೆ. ನನ್ನನ್ನು ಹೊರತುಪಡಿಸಿ ಅಲ್ಲಿದ್ದವರೆಲ್ಲರೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು. ನಮ್ಮ ಬ್ಯಾಂಕಿನ ಗ್ರಾಹಕನೂ ಆಗಿದ್ದ ಮಂಗಳೂರಿನ ವಿದ್ಯಾರ್ಥಿಯೊಬ್ಬ, ‘ಲಾ ಸ್ಟೂಡೆಂಟ್’ ಅಂತ ನನ್ನಿಂದ ಸುಳ್ಳು ಹೇಳಿಸಿ, ಅವರ ಹಾಸ್ಟೆಲಿಗೆ ಸೇರಿಕೊಳ್ಳಲು ಸಹಕರಿಸಿದ್ದ. ಹಾಸ್ಟೆಲ್‌ನ ಅಡುಗೆ ಸಹಾಯಕನಾಗಿದ್ದ, ಸುಮಾರು ನಲುವತ್ತರ ಮುಷ್ತಾಖ್ ಅಲಿ ಎಂಬಾತ, ‘ರೇಡಿಯೊ ಸಿಲೋನ್’ನಲ್ಲಿ ಪ್ರಸಾರವಾಗುತ್ತಿದ್ದ ‘ಬಿನಾಕಾ ಗೀತ್ ಮಾಲಾ’ದ ನಿರೂಪಕರಾದ ಶ್ರೀ ಅಮೀನ್ ಸಹಾನಿಯವರ ವಿಪರೀತ ಭಕ್ತ. ಮಿಕ್ಕೆಲ್ಲ ರಾತ್ರಿಗಳಲ್ಲಿ ಎಂಟೂವರೆಯಿಂದಲೇ ಊಟ ಬಡಿಸುತ್ತಿದ್ದ ಆತ, ಬುಧವಾರದ ರಾತ್ರಿಗಳಲ್ಲಿ ಮಾತ್ರ ಒಂಭತ್ತಾಗದೆ ಮೆಸ್ ಬಾಗಿಲು ತೆರೆಯುತ್ತಿರಲಿಲ್ಲ. ಅವನು ಮಾತ್ರವಲ್ಲ, ಅವನಿಂದಾಗಿ ಅಮೀನ್ ಸಹಾನಿಯವರ ಅಭಿಮಾನಿಗಳಾಗಿದ್ದ ವೈದ್ಯಕೀಯ ವಿದ್ಯಾರ್ಥಿಗಳೆಲ್ಲರೂ, ರಾತ್ರಿ ಎಂಟಾಗುತ್ತಲೇ ಹಾಸ್ಟೆಲ್ ಎದುರಿನ ಮುಖ ಮಂಟದಲ್ಲಿ ಜಮೆಯಾಗಿ, ಯಾವ ಹಾಡಿಗೆ ಈ ದಿನ ಯಾವ ರೇಟು ಬಿದ್ದೀತು ಎಂಬ ಚರ್ಚೆಯಲ್ಲಿ ತೊಡಗಿರುತ್ತಿದ್ದರು. ಆರೆಸ್ಸೆಸ್ ಪ್ರಮುಖ ಶ್ರೀ ಬಲರಾಜ್ ಮಧೋಕ್ ಮತ್ತು ಜನಸಂಘದ ಇತರ ನಾಯಕರ ನಡುವಿನ ಜಟಾಪಟಿಗಳಿಂದಾಗಿ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರ ಹೆಸರು ಪತ್ರಿಕೆಗಳಲ್ಲಿ ಕಾಣಿಸುತ್ತಿದ್ದ ದಿನಗಳು ಅವು. ಒಂದು ಸಂಜೆಯ ಹೊತ್ತಲ್ಲಿ ಬೇರೇನೋ ಮಾತುಗಳ ನಡುವೆ ಮುಷ್ತಾಖ್ ಅಲಿ, ತಾನು ಹುಟ್ಟಿದ್ದು ಪಾಕಿಸ್ತಾನದಲ್ಲಿ ಮತ್ತು ಈ ಅಡ್ವಾಣಿಯವರ ಪರಿಚಯ ತನಗಿದೆ ಎಂದಾಗ ನನಗೆ ನಂಬಿಕೆಯೇ ಆಗಿದ್ದಿರಲಿಲ್ಲ. ಆದರೆ, ಅವನು ನೀಡಿದ್ದ ಪೂರಕ ಸಾಕ್ಷಿಗಳನ್ನೆಲ್ಲ ಆಲಿಸಿದ ಮೇಲೆ ಇದ್ದರೂ ಇರಬಹುದು ಅನ್ನಿಸಿತ್ತು. ನಾಲ್ಕನೇ ಈಯತ್ತೆಯಲ್ಲಿ ನಾಪಾಸು ಆದ ನಂತರದ ದಿನಗಳಲ್ಲಿ ಮುಷ್ತಾಖ್ ಅಲಿ ಕರಾಚಿಯ ಗುರು ಮಂದಿರದ ಉತ್ತರಕ್ಕಿದ್ದ ಪಾರಸೀ ಕಾಲನಿಯ ಕೈತೋಟಗಳ ಉಸ್ತುವಾರಿ ವಹಿಸಿಕೊಂಡಿದ್ದವನೊಬ್ಬನ ಸಹಾಯಕನಾಗಿ ಕೆಲಸ ಮಾಡುತ್ತಿದ್ದನಂತೆ. ಪಕ್ಕದಲ್ಲೇ ಇದ್ದ ಜೆಮ್‌ಶೆಡ್ ವಸತಿ ಗೃಹದ ಮಕ್ಕಳು, ನಿತ್ಯವೂ ‘ಸೈಂಟ್ ಪ್ಯಾಟ್ರಿಕ್’ ಶಾಲೆಗೆ ಹೋಗಿ ಬರುತ್ತಿರುವಾಗ, ಇವನ ಹೂತೋಟದ ಎದುರಿನಿಂದಲೇ ಹೋಗ ಬೇಕಾಗುತ್ತಿತ್ತಂತೆ. ಹಾಗೆ ಹೋಗುತ್ತಿದ್ದ ಮಕ್ಕಳಲ್ಲಿ, ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಅದೇ ಬಣ್ಣದ ಚಡ್ಡಿ ಧರಿಸಿ, ಕಾಲಿಗೆ ಸಾಕ್ಸ್ ಧರಿಸಿ ಕರಿಬೂಟುಗಳನ್ನು ಧರಿಸುತ್ತಿದ್ದ, ಲಾಲ್ ಚಂದ್ ಎಂಬ ಹುಡುಗ ಎದ್ದು ಕಾಣಿಸುತ್ತಿದ್ದನಂತೆ. ಮುಷ್ತಾಖ್ ಅಲಿಗಿಂತ ಐದಾರು ವರ್ಷಗಳಷ್ಟು ಹಿರಿಯನಾಗಿರಬಹುದಾದ ಆ ಹುಡುಗನ ದೊಡ್ಡ ಹಣೆ, ಎಡಬದಿಗೆ ಬೈತಲೆ ಬಾಚಿರುವ ಕಪ್ಪುಕೂದಲು, ತುಟಿಗಳ ಜೊತೆಗೆ ನಗುವಿನ ಸ್ಪರ್ಧೆಗಿಳಿದಂತಿದ್ದ ಚೂಪು ಕಣ್ಣುಗಳು ಎಲ್ಲವೂ ಈ ನಾಪಾಸು ಹುಡುಗನನ್ನು ಮೋಡಿ ಮಾಡಿದ್ದವಂತೆ. ಕ್ರಮೇಣ ದೋಸ್ತಿಯಾಗಿದ್ದ ಆತ, ಶಾಲೆಯ ಬಯಲಲ್ಲಿ ನಡೆಯುತ್ತಿದ್ದ ‘ಸಮವಸ್ತ್ರದ ಬೈಟಕ್’ಗಳಿಗೆ ಇವನನ್ನೂ ಕರೆದುಕೊಂಡು ಹೋಗುತ್ತಿದ್ದನಂತೆ. ದೇಶ ವಿಭಜನೆಯಾಗುವ ಎರಡು ವರ್ಷಗಳಿಗೆ ಮೊದಲೇ ಮುಷ್ತಾಕ್ ಅಲಿ, ತನ್ನ ಚಿಕ್ಕಮ್ಮನ ಸಂಸಾರದೊಂದಿಗೆ ಹೈದರಾಬಾದಿಗೆ ಬಂದಿದ್ದ. ಆಗವನು ಸುಮಾರು ಹದಿನೈದರ ಹುಡುಗ. ದಿನದ ಇಪ್ಪತ್ತನಾಲ್ಕು ತಾಸುಗಳಲ್ಲೂ ಟ್ರಾನ್ಸಿಸ್ಟರ್ ರೇಡಿಯೊವೊಂದನ್ನು ಕಿವಿಗೇ ಅಂಟಿಸಿಕೊಂಡಿರುತ್ತಿದ್ದ ಆವನಿಗೆ ಜಗತ್ತಿನ ಆಗು ಹೋಗುಗಳೆಲ್ಲವೂ ಗೊತ್ತಿರುತ್ತಿದ್ದವು. ತನ್ನ ಬಾಲ್ಯದ ಗೆಳೆಯ ಲಾಲ್ ಚಂದ್, ದೆಹಲಿಯ ರಾಜಕೀಯ ವಲಯದಲ್ಲಿ ಲಾಲ್ ಕೃಷ್ಣ ಅಡ್ವಾಣಿಯಾಗಿ ಹೆಸರು ಮಾಡುತ್ತಿರುವುದು ಅವನಿಗೊಂದು ಹೆಮ್ಮೆಯ ಸಂಗತಿಯೇ ಆಗಿತ್ತು. ‘ನನ್ನ ಬಾಲ್ಯದ ದಿನಗಳ ಬೆಸ್ಟ್ ದೋಸ್ತ್ ಲಾಲ್ ಚಂದ್’ ಎಂದು ಮತ್ತೆ ಮತ್ತೆ ಹೇಳುತ್ತಿದ್ದ ಮುಷ್ತಾಖ್ ಅಲಿಯ ಮಾತುಗಳಲ್ಲಿ ಒಂದಿಷ್ಟೂ ಕಪಟ ಕಾಣಿಸುತ್ತಿರಲಿಲ್ಲ. ಅಂತಹ ‘ಬೆಸ್ಟ್’ ಹುಡುಗನೊಬ್ಬ, ದೊಡ್ಡವನಾದ ಬಳಿಕ ಬಾಬರಿ ಮಸೀದಿಯನ್ನು ಉರುಳಿಸುವಷ್ಟು ತೀರಾ ಕೆಟ್ಟವನಾಗಲು ಸಾಧ್ಯವೇ ಇಲ್ಲ ಎಂಬುದು ನನ್ನ ದೃಢ ನಂಬಿಕೆಯಾಗಿತ್ತು. ನನ್ನ ನಂಬಿಕೆಯು ಸುಳ್ಳೂ ಆಗಲಿಲ್ಲ. ಸೆಪ್ಟಂಬರ್ 20, 2020ರಂದು ಸಿಬಿಐ ವಿಶೇಷ ನ್ಯಾಯಾಲಯವು ಪ್ರಕಟಿಸಿದ್ದ 2,300 ಪುಟಗಳ ತೀರ್ಪಿನಲ್ಲಿ ದಾಖಲಿಸಿರುವ ಈ ಕೆಳಗಿನ ‘ಟೆನ್ ಕಮಾಂಡ್ ಮೆಂಟ್ಸು’ ಕೂಡಾ, ನನ್ನ ನಂಬಿಕೆಯನ್ನು ಬಲವಾಗಿ ಸಮರ್ಥಿಸಿದ್ದವು.

1.ಸನ್ಮಾನ್ಯ ಲಾಲ್ ಕೃಷ್ಣ ಅಡ್ವಾಣಿಯರು ಬಾಬರಿ ಮಸೀದಿ ನಾಶದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರಿಂದ, ಮಸೀದಿ ಕೆಡವಿದ ಸಂಚಿನಲ್ಲಿ ಅವರು ಭಾಗಿಯಾಗಿದ್ದಿರಲು ಸಾಧ್ಯವಿಲ್ಲ.

2.ಸನ್ಮಾನ್ಯ ಅಡ್ವಾಣಿಯವರ ದುಃಖಕ್ಕೆ, ಇತರ ಆರೋಪಿಗಳಾರೂ ಆಕ್ಷೇಪಣೆ ಸಲ್ಲಿಸದ್ದರಿಂದ, ಆ ಇತರರೂ ಈ ಸಂಚಿನಲ್ಲಿ ಭಾಗಿಯಾಗಿದ್ದಿರಲು ಸಾಧ್ಯವಿಲ್ಲ. 3.ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶವೇ ಇದ್ದಾಗ, ಅಲ್ಲಿ ಅನ್ಯ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಅಥವಾ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಬರುವ ಯಾವುದೇ ಕೃತ್ಯಗಳು ನಡೆಯಲು ಸಾಧ್ಯವಿಲ್ಲ.

4.ಘಟನೆಯ ಸ್ಥಳದಲ್ಲಿದ್ದ ಅಸಂಖ್ಯಾತ ಜನರನ್ನು ಚದುರಿಸಲು ಯತ್ನಿಸಿದ್ದರೆ ಅಪಾರ ಸಾವು ನೋವುಗಳಾಗುವ ಸಾಧ್ಯತೆಗಳಿದ್ದುದರಿಂದ ಯಾರನ್ನೂ ದೂರಲು ಸಾಧ್ಯವಿಲ್ಲ. 5.ಒಬ್ಬಳು ಹಿಂದೂ ಮಹಿಳೆಯು ಒಬ್ಬಳು ಮುಸ್ಲಿಮ್ ಪುರುಷನನ್ನು ರಕ್ಷಿಸಿದ ಘಟನೆಯು ದಾಖಲಾಗಿರುವುದರಿಂದ, ಅಯೋಧ್ಯೆಯಲ್ಲಿ ಕೋಮು ಸೌಹಾರ್ದವಿತ್ತು ಎಂಬ ವಾದವನ್ನು ನಿರಾಕರಿಸಲು ಸಾಧ್ಯವಿಲ್ಲ.

6.ಭದ್ರತಾ ವ್ಯವಸ್ಥೆಗಳು ಸೂಕ್ತವಾಗಿತ್ತೋ ಇಲ್ಲವೋ ಎಂಬುದನ್ನು ನಮಗೆ ಪತ್ರಕರ್ತರು ಹೇಳುವ ಅಗತ್ಯವಿಲ್ಲ.

7.ಆ ಕಟ್ಟಡದ ಭದ್ರತೆಯನ್ನು ನೋಡಿಕೊಳ್ಳುವುದಕ್ಕಿಂತ ಪೊಲೀಸ್ ಅಧಿಕಾರಿಗಳು ಬೇರೆ ಕೆಲಸಗಳು ಹೆಚ್ಚು ಇದ್ದವು ಎಂಬ ವಾದವನ್ನು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ.

8.ಬಿಜೆಪಿ ನಾಯಕರು ವಿರೋಧಿಸುವುದು ಔರಂಗಜೇಬನಂತೆ ಇರುವವರನ್ನೇ ಹೊರತು, ಇಡೀ ಮುಸ್ಲಿಮ್ ಸಮುದಾಯದ ವಿರುದ್ಧ ಆಗಿರುವುದು ಸಾಧ್ಯವಿಲ್ಲ. 9.ಆ ಕಟ್ಟಡಕ್ಕೆ ಹಾನಿಯುಂಟಾಗಬಹುದು ಎಂದಾಗಲೀ, ಅದನ್ನು ನೆಲಸಮ ಮಾಡಲಾಗುತ್ತದೆ ಎಂದಾಗಲೀ ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಬಾಬರಿ ಮಸೀದಿಯನ್ನು ಕೆಡವಿದ್ದನ್ನು ಒಂದು ಸಂಚು ಎನ್ನಲು ಸಾಧ್ಯವಿಲ್ಲ.

10.ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಾಗುವುದು ಎಂಬುದಾಗಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸನ್ಮಾನ್ಯ ಸಿಂಗರು ಮುಚ್ಚಳಿಕೆ ಬರೆದು ಕೊಟ್ಟಿದ್ದರಿಂದ, ಅವರೂ ಆ ಸಂಚಿನಲ್ಲಿ ಭಾಗಿಯಾಗಿದ್ದಿರಲು ಸಾಧ್ಯವಿಲ್ಲ. ಸುಳ್ಳಾಗದ ಈ ನನ್ನ ‘ದೃಢ ನಂಬಿಕೆ’ಯು ನನ್ನೊಬ್ಬನದ್ದೇನೂ ಅಗಿರಲಿಲ್ಲ. ನನ್ನ ಗೆಳೆಯರಲ್ಲಿ ಬಹುಸಂಖ್ಯಾತರ ನಂಬಿಕೆಯೂ ಅದುವೆ. ನಂಬಿಕೆಗಳ ಆಧಾರದಲ್ಲಿ ನ್ಯಾಯಾಲಯಗಳು ಪ್ರಕಟಿಸುತ್ತಿದ್ದ ತೀರ್ಪುಗಳನ್ನು, ತುಟಿಪಿಟಕ್ಕೆನ್ನದೆ ಒಪ್ಪಿಕೊಳ್ಳುವುದು ನನಗೆ ಅಭ್ಯಾಸವೇ ಅಗಿಬಿಟ್ಟಿತ್ತು. ಹನ್ನೊಂದು ತಿಂಗಳ ಹಿಂದೆಯಷ್ಟೇ, ನವೆಂಬರ 9, 2019ರಂದು ನಮ್ಮ ಸರ್ವೋಚ್ಚ ನ್ಯಾಯಮೂರ್ತಿಯವರು, ‘ಲಭ್ಯವಾಗಿರುವ ಇತರ ಸಾಕ್ಷಿಗಳ ಜೊತೆಯಲ್ಲಿ, ರಾಮ ಲಲ್ಲಾನೇ ವಿವಾದಿತ ಭೂಮಿ ವ್ಯಾಜ್ಯದಲ್ಲಿ ಪ್ರಮುಖ ಅರ್ಜಿದಾರನೂ ಆಗಿರುವುದರಿಂದ, ಅವನಲ್ಲೇ ಹುಟ್ಟಿದ್ದನೆಂಬ ಹಿಂದೂ ನಂಬಿಕೆಯು ವಿವಾದರಹಿತವಾಗಿದೆ. ಆದ್ದರಿಂದ, ಅಲ್ಲಿಯೇ ರಾಮಮಂದಿರ ಕಟ್ಟಬೇಕು’ ಎಂಬ (ತಮ್ಮ ಆತ್ಮಕತೆ, ‘ಜಸ್ಟೀಸ್ ಫಾರ್ ದಿ ಜಡ್ಜ್’ನಲ್ಲಿ ದಾಖಲಿಸಿರುವಂತೆ, ಯಾವುದೋ ಒಂದು ಅತಿಮಾನುಷ ಶಕ್ತಿಯ ಪ್ರೇರಣೆಯಿಂದ!) ತೀರ್ಪು ಕೊಟ್ಟಾಗಲೂ, ‘ಅಬ್ಬಾ...! ಒಮ್ಮೆ ಮುಗಿದು ಹೋಯಿತಲ್ಲ ಈ ರಾಮಾಯಣ’ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆ. ತ್ರೇತಾಯುಗದಿಂದಲೂ ದೇಶದ ನೆಮ್ಮದಿಯನ್ನು ಕೆಡಿಸುತ್ತಿದ್ದ ಆ ಎರಡೂ ದಾವೆಗಳನ್ನೂ, ಬಹುಸಂಖ್ಯಾತ ಪ್ರಜೆಗಳೆಲ್ಲರೂ ಮೆಚ್ಚುವಂತೆ ಸೌಹಾರ್ದಯುತವಾಗಿ ಬಗೆಹರಿಸಿದ್ದ ಆ ಇಬ್ಬರು ನ್ಯಾಯಾಧೀಶರುಗಳಿಗೂ, ಮುಂದಿನ ದಿನಗಳಲ್ಲಿ ಸೂಕ್ತ ಪದವಿಗಳನ್ನು ನೀಡುವ ಮೂಲಕ ನಮ್ಮ ಸರಕಾರವು ಕೃತಜ್ಞತೆ ಸಲ್ಲಿಸಿತ್ತು! ಮುಲ್ಲಾ ಮುಲಾಯಂ ಸಿಂಗ್

‘ಬಡೇ ಹೋನೇಕೇ ಬಾದ್, ಸಾರೇ ಮುಲ್ಲಾ ಸಾಲೋಂಕೋ ಏಕೇಕ್ ಕರ್ಕೇ ಮಾರ್ ಡಾಲೂಂಗಾ.’ ಹಾಗೆಂದು ಅಬ್ಬರಿಸಿದವನು ಸೋ ಕಾಲ್ಡ್ ಭಯೋತ್ಪಾದಕರ ಜಾತಿಯವನಾಗಿರುತ್ತಿದ್ದರೆ ಬೆದರುತ್ತಿದ್ದೆನೇನೋ. ಆದರೆ, ಅವನು ಮತ್ತು ಅವನಂತೆ ಅಂತಿಮ ಯುದ್ಧ ಘೋಷಿಸುತ್ತಿದ್ದವರೆಲ್ಲ, ರೂಪಾಯಿಗೊಂದರಂತೆ ಪೋಸ್ಟ್ ಕಾರ್ಡ್ ಗಾತ್ರದ ‘ಫೋಟೊ’ಗಳನ್ನು ಮಾರಾಟ ಮಾಡುತ್ತಿದ್ದ, ಏಳೆಂಟು ವಯಸ್ಸಿನ ಪುಟ್ಟ ಪುಟ್ಟ ಮುದ್ದು ಮುದ್ದಾದ ಮಕ್ಕಳು. ಪ್ರತಿಯೊಂದು ಫೋಟೊದಲ್ಲೂ ಕಾಣಿಸುತ್ತಿದ್ದದ್ದು ನಡು ಬೀದಿಯಲ್ಲಿ ಸತ್ತು ಬಿದ್ದಿರುವವರ ಬೀಭತ್ಸ ಶವಚಿತ್ರಗಳು. ಆ ಮಕ್ಕಳ ನಂಬಿಕೆಯಂತೆ, ಹೆಣಚಿತ್ರವಾಗಿರುವ ಎಲ್ಲರೂ, 1990ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ‘ಮುಲ್ಲಾ ಮುಲಾಯಂ’ ಆದೇಶದಂತೆ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ‘ಮುಲ್ಲಾ’ಗಳ ವಿರುದ್ಧ ಆ ಪುಟ್ಟ ಮಕ್ಕಳ ಮೆದುಳುಗಳೊಳಗೆ ಅದೆಷ್ಟು ಭಯಂಕರ ವಿಷವನ್ನು ತುಂಬಿದ್ದರೆಂದರೆ, ಅವರು ಬೆಳೆದು ದೊಡ್ಡವರಾದ ಬಳಿಕ ಮುಸ್ಲಿಮರನ್ನು ದ್ವೇಷಿಸದಿರಲು ಒಂದು ಕಾರಣವನ್ನೂ ಉಳಿಸಿದ್ದಿರಲಿಲ್ಲ. ಅಂತಹ ವೀರಾವೇಶದ ಪುಟ್ಟ ಮಕ್ಕಳನ್ನು ಎದುರಿಸಲಾಗದೆ ಸೋತದ್ದು ಅಯೋಧ್ಯೆಯ ಸಂತೆ ಮಾಳದಲ್ಲಿ; ಎಪ್ರಿಲ್ 16, 1995ರ ರವಿವಾರದ ನಡು ಮಧ್ಯಾಹ್ನದ ಸುಡುಬಿಸಿಲಲ್ಲಿ.

ಪುಣ್ಯ ಕ್ಷೇತ್ರಗಳೆಂದು ನಂಬಲಾಗಿರುವ ಕಾಶಿ, ರಾಮೇಶ್ವರ, ಮಥುರಾ, ಬದರಿ, ಜೆರುಸಲೇಮ್, ಮಕ್ಕಾ ಮೊದಲಾದ ಪವಿತ್ರ ಊರುಗಳ ತೀರ್ಥಯಾತ್ರೆಗಳನ್ನು ಮುಗಿಸಿಕೊಂಡು ಬಂದು ಊರೊಳಗೆ ಗೌರವಾನ್ವಿತರಾಗುತ್ತಿದ್ದವರನ್ನು ಕಂಡಾಗಲೆಲ್ಲ ನನಗೂ ಒಮ್ಮೆ ಹಾಗೆ ಹೋಗಿ, ಹೀಗೆ ಬರಬೇಕೆಂಬ ಆಸೆಯಾಗುತ್ತಿತ್ತು. ಆದರೆ, ‘ಯಾವುದಕ್ಕೂ ಕಾಲ ಕೂಡಿ ಬರಬೇಕು’ ಎಂಬ ಹಿರಿಯರ ಮಾತಿನ ನೆರಳಲ್ಲಿ, ನನ್ನದೇನೂ ತಪ್ಪಿಲ್ಲದವನಂತೆ ಸುಮ್ಮನಿರುತ್ತಿದ್ದೆ. ಕೆಲವು ಪುಡಿಗಾಸುಗಳು ಜೇಬಲ್ಲಿ ಕಾಣತೊಡಗಿದ ಬಳಿಕ ಹಿರಿಯರ ಮಾತನ್ನು ಮೀರಲು ಯತ್ನಿಸಿದ್ದರೂ, ಯಾವ ದೇವರ ದರ್ಶನವನ್ನು ಮೊದಲು ಮಾಡುವುದೆಂಬುದನ್ನು ನಿರ್ಧರಿಸಲು ಸಾಧ್ಯವಾಗಿದ್ದಿರಲಿಲ್ಲ. ನನ್ನ ಕಾಲ ಕೂಡಿ ಬಂದದ್ದು 1995ರ ಎಪ್ರಿಲ್ ತಿಂಗಳಲ್ಲಿ; ಹಾಗೆ ಕೂಡಿಸಿದ್ದವನು, ಸಂಸಾರ ಸಹಿತ ದೆಹಲಿಗೆ ಬಂದಿದ್ದ ನನ್ನ ತಮ್ಮ ಐ.ಕೆ. ಅಯೋಧ್ಯೆಗೆ ಹೋಗಿ ಬಂದರೆ ಹೇಗೆ? ಎಂದು ಪ್ರಶ್ನಿಸುವ ಮೂಲಕ ನನ್ನ ತಲೆಗೆ ಹುಳ ಬಿಟ್ಟಿದ್ದ.

ಅದುವರೆಗೂ ನನ್ನ ತೀರ್ಥ ಯಾತ್ರಾ ಕ್ಷೇತ್ರಗಳ ಪಟ್ಟಿಯಲ್ಲಿ ಒಮ್ಮೆಯೂ ಹೆಸರು ನೋಂದಾಯಿಸಿಕೊಳ್ಳದಿದ್ದ ‘ಅಯೋಧ್ಯೆ’, ಹೆಚ್ಚು ಸುದ್ದಿಯಾದದ್ದೇ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ. ದೂರ ದರ್ಶನದಲ್ಲಿ ರಮಾನಂದ ಸಾಗರರ ‘ರಾಮಾಯಣ’ ಹೊಳೆದು ಕಾಣಿಸಿಕೊಂಡ ಬಳಿಕ. ಅದುವರೆಗೂ ನಮ್ಮೂರಿನವರಾರೂ ಅಯೋಧ್ಯೆಗೆ ತೀರ್ಥ ಯಾತ್ರೆ ಮಾಡಿ ಮರಳಿ ಬಂದಿರುವುದಕ್ಕೆ ನನ್ನ ಬಳಿ ದಾಖಲೆಗಳಿಲ್ಲ. ದೆಹಲಿಯಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಮೈಲು ದೂರದ ಅಯೋಧ್ಯೆಗೆ ಪ್ರಯಾಣಿಸಬೇಕಾದರೆ ರೈಲು ಹತ್ತಬೇಕು. ರೈಲು ಪ್ರಯಾಣವೆಂದರೆ ನನ್ನನ್ನು ಇಂದಿಗೂ ಬೆಚ್ಚಿ ಬೀಳಿಸುವ ಎರಡು ಕನಸು. ಅದಕ್ಕೊಂದು ಕಾರಣವಿದೆ. ಎರಡು ವರ್ಷಗಳ ಹಿಂದೆ, ಅಂದರೆ 1993ರ ಮೇ ತಿಂಗಳಲ್ಲಿ ಕಾಮಧೇನು ಪುಸ್ತಕ ಭವನದ ಶಾಮಣ್ಣನವರು ಶ್ರೀಮತಿ ಮುದ್ದಮ್ಮನವರೊಂದಿಗೆ ದೆಹಲಿಗೆ ಬಂದಿದ್ದವರು ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಅವರು ಮರಳುವ ದಿನಕ್ಕೆ ಹೊಂದಿಕೆಯಾಗುವಂತೆ ನಾನೂ ಕುಟುಂಬ ಸಹಿತ ಬೆಂಗಳೂರಿಗೆ ‘ರಿಟರ್ನ್ ಟಿಕೇಟು’ ಬುಕ್ ಮಾಡಿಸಿದ್ದೆ. ಮೂರು ವಾರಗಳ ಬಳಿಕ ದೆಹಲಿಗೆ ಮರಳುವ ಪ್ಲಾನು ಅದು.

‘ಟೂ ಟೈರ್ ಸ್ಲೀಪರ್ ಕೋಚ್’ನಲ್ಲಿ ನಾವು ಒಟ್ಟು ಆರು ಮಂದಿ; ಗಮ್ಮತ್ತೇ ಗಮ್ಮತ್ತು. ಎರಡನೆಯ ದಿನ ಸಂಜೆಯ ಹೊತ್ತಿಗೆ ನಮ್ಮ ರೈಲು ಮಹಾರಾಷ್ಟ್ರದ ‘ಭಿಂಡ್’ ಸ್ಟೇಶನ್ ತಲುಪಿ ಐದಾರು ನಿಮಿಷಗಳ ಕಾಲ ನಿಂತಿತ್ತು. ನೀರು, ಬಿಸ್ಕೇಟು ಇತ್ಯಾದಿಗಳನ್ನು ಖರೀದಿಸಿ ಶಾಮಣ್ಣನವರೊಂದಿಗೆ ನಮ್ಮ ಸೀಟುಗಳಿಗೆ ಮರಳಿದ ಬಳಿಕ ರೈಲು ಚಾಲೂ ಆಯಿತು. ಆರಂಭದ ಕುಲುಕಾಟದಿಂದ ಸಾವರಿಸಿಕೊಂಡು ನಾವು ಕುಳಿತುಕೊಳ್ಳುತ್ತಿದ್ದಂತೆಯೇ, ಜುಬೇದಾ ಕಿಟಾರನೆ ಕಿರುಚಿ ಕೊಂಡಿದ್ದಳು! ಗಾಬರಿಯಿಂದ ಅವಳತ್ತ ನೋಡಿದರೆ, ಅವಳ ಕೈಯಲ್ಲಿ ಬಂಗಾರದ ಚೈನಿನ ತುಂಡೊಂದು ಮಿಂಚಿನಂತೆ ಹೊಳೆಯುತ್ತಿತು! ‘ನನ್ನ ಚೈನು!’ ಆಕೆಗೆ ಮುಂದೆ ಮಾತೇ ಹೊರಡುತ್ತಿರಲಿಲ್ಲ. ಕ್ಷಣಮಾತ್ರದಲ್ಲಿ ನಾನು ಎಲ್ಲವನ್ನೂ ಊಹಿಸಿಕೊಂಡಿದ್ದೆ. ಕಿಟಿಕಿಯ ಬದಿಯಲ್ಲಿ ಕುಳಿತಿದ್ದ ಅವಳ ಕೊರಳಲ್ಲಿದ್ದ ಬಂಗಾರದ ಸರವನ್ನು, ಅದೇ ಕಿಟಿಕಿ ಸಂಧಿಯಿಂದ ಕೈ ತೂರಿಸಿದ್ದ ಯಾವನೋ ಕಳ್ಳನೊಬ್ಬ ಕಿತ್ತುಕೊಂಡಿದ್ದ! ತಕ್ಷಣದ ಪ್ರತಿಕ್ರಿಯೆಯೆಂಬಂತೆ ಹೋರಾಡಿದ ಜುಬೇದಾಳ ಕೈಯಲ್ಲಿ ಸರದ ತುಂಡೊಂದು ಉಳಿದುಕೊಂಡಿತ್ತು.

ಆಪತ್ಕಾಲದಲ್ಲಿ ರೈಲು ನಿಲ್ಲಿಸಲು ಚೈನು ಎಳೆಯುವ ಹಕ್ಕು ಸಂತ್ರಸ್ತರಿಗೆ ಇದೆ ಎಂಬುದನ್ನು ಎಲ್ಲೋ ಓದಿದ್ದೆ. ಬೇರೇನೂ ತೋಚದೆ ಹಾಗೆಯೇ ಮಾಡಿದ್ದೆ. ‘ಕೂ..’ ಎಂದು ಜೋರಾಗಿ ಊಳಿಟ್ಟ ರೈಲು ಗಾಡಿ ಸುಮಾರು ಒಂದೆರಡು ಫರ್ಲಾಂಗ್‌ನಷ್ಟು ಸಾಗಿ ನಿಂತುಕೊಂಡಿತ್ತು. ಹೆದರಿ ಕಂಗಾಲಾಗಿದ್ದ ಮಕ್ಕಳಿಬ್ಬರೂ ಗಟ್ಟಿಯಾಗಿ ಅಳಲಾರಂಭಿಸಿದ್ದರು. ಅಕ್ಕಪಕ್ಕದ ಕೋಚುಗಳಲ್ಲಿ ಕುಳಿತಿದ್ದವರೆಲ್ಲ ಬಂದು ‘ಕ್ಯಾ ಹುವಾ.., ಕೈಸೇ ಹುವಾ.’ ಎಂದು ವಿಚಾರಿಸುವಷ್ಟರಲ್ಲಿ ಇಬ್ಬರು ರೈಲ್ವೆ ಪೊಲೀಸರೂ ಬಂದುಬಿಟ್ಟಿದ್ದರು. ‘ಚೈನು ಯಾಕೆ ಎಳೆದಿರಿ?’ ಎಂದವರು ಪ್ರಶ್ನಿಸುವ ಮೊದಲೇ ಶಾಮಣ್ಣ ಎಲ್ಲವನ್ನೂ ವಿವರಿಸಿದ್ದರು. ಅದೇನೂ ದೊಡ್ಡ ಸಂಗತಿಯೇ ಅಲ್ಲವೆಂಬಂತೆ ಪೊಲೀಸನೊಬ್ಬ ‘ಹೆದರಬೇಡಿ. ಕಳ್ಳರನ್ನು ಹಿಡಿಯಲೇ ನಾವು ಇರುವುದು. ಅವರ ಕೈಯಲ್ಲಿ ಉಳಿದಿರುವ ಸರದ ತುಂಡನ್ನು ಕೊಡಿ’ ಎನ್ನುತ್ತಾ ನನ್ನ ಹೆಂಡತಿಯತ್ತ ಬೊಟ್ಟು ಮಾಡಿದ್ದ. ಅಷ್ಟರಲ್ಲಿ ಗುಂಪಿನ ನಡುವಿನಿಂದ ಯಾರೋ ಒಬ್ಬ, ‘ಮತ್ ದೇದೋ’ ಎಂದು ಬೊಬ್ಬೆ ಹೊಡೆದುಬಿಟ್ಟ. ಪೊಲೀಸರಿಬ್ಬರೂ ನಿರಾಸೆಯಿಂದ ಮುಖ ಮುಖ ನೋಡಿಕೊಂಡಿದ್ದರು. ನಮ್ಮ ಹೆಸರು, ವಿಳಾಸ ಕೇಳಿದರು. ಕೊಟ್ಟೆವು. ‘ನಿಮಗೆ ನೋಟೀಸು ಬರುತ್ತದೆ’ ಎಂದವರೇ ಹೊರಟು ಹೋದರು. ಮೂರು ವಾರದ ರಜ ಮುಗಿಸಿಕೊಂಡು ದೆಹಲಿಗೆ ಮರಳಿ ಹೊರಟಿದ್ದ ನಮ್ಮನ್ನು ಬೀಳ್ಕೊಡಲೆಂದು ಅವಳೂರಿನ ಬಂಧು ಭಗಿನಿಯರೆಲ್ಲ, ಮೂರು ಕಾರುಗಳನ್ನೇರಿ ಮಂಗಳೂರಿನ ರೈಲು ನಿಲ್ದಾಣಕ್ಕೆ ಬಂದಿದ್ದರು. ‘ಪ್ಲಾಟ್ ಫಾರಂ’ ಟಿಕೇಟು ಖರೀದಿಸದಿದ್ದ ಅಪರಾಧಕ್ಕೆ ಎಂಟು ನೂರು ರೂಪಾಯಿ ದಂಡವನ್ನೂ ತೆತ್ತಿದ್ದರು. ಅಷ್ಟು ಮಾತ್ರವೇ ಅಲ್ಲ. ಬೆಳಗ್ಗೆ ಹೊರಡುವ ಗಡಿಬಿಡಿಯಲ್ಲಿ, ಮಾವನ ಮನೆ ಕಪಾಟಿನಲ್ಲಿ ಇರಿಸಿದ್ದ ರಿಟರ್ನ್ ಟಿಕೇಟುಗಳನ್ನು ನಾನೂ ಮರೆತುಬಿಟ್ಟಿದ್ದೆ. ರೈಲು ಹೊರಡಲು ಹೆಚ್ಚು ಸಮಯವೂ ಇದ್ದಿರಲಿಲ್ಲ. ಟಿಕೇಟು ಪರಿಶೀಲಿಸದೆ ರೈಲಿನೊಳಗೆ ನಮ್ಮನ್ನು ಸ್ವಾಗತಿಸುವ ಅಧಿಕಾರ ಟಿಕೇಟ್ ಕಲೆಕ್ಟರುಗಳಿಗೂ ಇರಲಿಲ್ಲ. ಹೊಸದಾಗಿ ಟಿಕೇಟುಗಳನ್ನು ಖರೀದಿಸದೆ ಬೇರೆ ದಾರಿ ಇರಲಿಲ್ಲ. ಟಿಕೇಟು ಕೌಂಟರಿಗೆ ಓಡಿ ಹೋಗಿ ವಿಚಾರಿಸಿದರೆ, ಸ್ಲೀಪರ್ ಟಿಕೇಟುಗಳೆಲ್ಲ ಮಾರಾಟವಾಗಿದ್ದವು. ಉಳಿದಿದ್ದದ್ದು ಆರ್ಡಿನರಿ ಸೆಕೆಂಡ್ ಕ್ಲಾಸ್ ಸೀಟುಗಳು ಮಾತ್ರ. ಆದರೆ, ಒಂದೆರಡು ಸ್ಟೇಶನ್‌ಗಳು ದಾಟುವಷ್ಟರಲ್ಲಿ, ಅದು ಹೇಗೋ ಟಿ.ಸಿ. ಮಹಾಶಯರ ಕೃಪೆಯಿಂದ ನಮಗೂ ಸ್ಲೀಪಿಂಗ್ ಭಾಗ್ಯ ಸಿಕ್ಕಿತ್ತು. ಒಟ್ಟಿನಲ್ಲಿ ರೈಲು ಪ್ರಯಾಣ ಎಂದರೆ ಬೆಚ್ಚಿ ಬೀಳಿಸುವ ಎರಡು ಕನಸುಗಳು ಅವು.

ಹಾರುವ ತಟ್ಟೆ

ಇಂತಿಪ್ಪ ನನ್ನ ‘ರೈಲು ಫೋಬಿಯಾ’ಕ್ಕೆ ಮದ್ದು ಮಾಡಿದ್ದವರು ಶ್ರೀ ಪ್ರಭುನಾಥ ಪಾಂಡೆ ಎಂಬ ದೆಹಲಿಯ ನನ್ನ ಸಹೋದ್ಯೋಗಿ. ‘ಅಯೋಧ್ಯೆಗೆ ನಿಮ್ಮನ್ನು ಕರೆದುಕೊಂಡು ಹೋಗಿ ರಾಮ್ ಲಲ್ಲಾನ ದರ್ಶನ ಮಾಡಿಸುವ ಜವಾಬ್ದಾರಿ ನನ್ನದು’ ಎಂದಿದ್ದ ಪಾಂಡೆ, ದೆಹಲಿ-ಲಕ್ನೋ ಪ್ರಯಾಣದ ಮೂರು ಸೆಟ್ ರಿಟರ್ನ್ ರೈಲು ಟಿಕೇಟುಗಳನ್ನೂ ಖರೀದಿಸಿದ್ದರು. ಶನಿವಾರ ರಾತ್ರಿ ದೆಹಲಿಯಿಂದ ರೈಲೇರಿದ್ದ ನಾವು ಮೂವರು, ಸುಮಾರು 325 ಮೈಲು ದೂರದ ‘ಲಕ್ನೋ ಚಾರ್ ಭಾಗ್’ ಸ್ಟೇಶನ್ ತಲುಪಿದಾಗ ನಡು ರಾತ್ರಿ 1:30. ಅಯೋಧ್ಯೆಗೆ ಅಲ್ಲಿಂದ ಸುಮಾರು ನೂರು ಮೈಲು ದೂರ. ರವಿವಾರ ರಾತ್ರಿಗೇ ರಿಟರ್ನ್ ಟಿಕೇಟು ಖರೀದಿಸಿದ್ದರಿಂದ, ನಮ್ಮ ತೀರ್ಥ ಯಾತ್ರೆಯನ್ನು ಮಧ್ಯರಾತ್ರಿಗೆ ಮುನ್ನವೇ ಸಂಪನ್ನಗೊಳಿಸಿ ನಿಲ್ದಾಣಕ್ಕೆ ವಾಪಸಾಗಬೇಕಿತ್ತು. ನಿಲ್ದಾಣದ ಪ್ರಧಾನ ಗೇಟು ಹಾದು ಹೊರಗೆ ಬಂದೆವು. ಟ್ಯಾಕ್ಷಿಗಾಗಿ ಕಣ್ಣು ಹಾಯಿಸಿದರೆ ಸ್ವಲ್ಪ ದೂರದಲ್ಲಿ ವಾಹನವೊಂದಕ್ಕೆ ಒಂದಿಬ್ಬರು ಏನೋ ಲೋಡ್ ಮಾಡುತ್ತಿರುವುದು ಮಸುಕಾಗಿ ಕಾಣಿಸಿತ್ತು. ‘ಎಕೀ ಮಿನಿಟ್’ ಎಂದ ಪಾಂಡೆ ನಮ್ಮನ್ನು ಅಲ್ಲಿಯೇ ನಿಲ್ಲಲು ಹೇಳಿ ವಾಹನದತ್ತ ಹೋದರು. ಅಲ್ಲಿಂದಲೇ ಕೈ ತಟ್ಟಿ ನಮ್ಮಿಬ್ಬರನ್ನು ಬರುವಂತೆ ಕರೆದರು. ನಾವಿಬ್ಬರು ಅವರತ್ತ ಹೆಜ್ಜೆ ಹಾಕಿದೆವು. ಅದೊಂದು ದಿನಪತ್ರಿಕೆಗಳನ್ನು ಸಾಗಿಸುವ ತಟ್ಟೆಯಾಕಾರದ, ನೀಲ ಬಣ್ಣದ ಓಪನ್ ವ್ಯಾನು. ಅರ್ಧ ವ್ಯಾನಿನ ಓಪನನ್ನು ಪೇಪರ್ ಬಂಡಲುಗಳು ಆಕ್ರಮಿಸಿಕೊಂಡಿದ್ದವು. ‘ಇದು ಅಯೋಧ್ಯೆಗೆ ಹೋಗುತ್ತದೆ. ಇದರಲ್ಲಿ ಹೋಗುವ’ ಎಂದರು ಪಾಂಡೆ. ನಾನು ಐ.ಕೆ.ಯ ಮುಖ ನೋಡಿದೆ ಅವನು ನಕ್ಷತ್ರಗಳನ್ನು ಎಣಿಸುತ್ತಿದ್ದ. ಪರ ಊರು. ಕತ್ತಲು. ಚಳಿ. ಸುಮಾರು ನಾಲ್ಕು ತಾಸು ರೈಲು ಕುಲುಕಾಟ ಪ್ರಯಾಣದ ಆಯಾಸ ಬೇರೆ. ವಿರೋಧಿಸುವಷ್ಟು ಶಕ್ತಿ ನಮ್ಮ ಬಳಿ ಉಳಿದಿರಲಿಲ್ಲ. ನಾವು ವ್ಯಾನು ಹತ್ತಿದೆವು. ಐದೇ ನಿಮಿಷಗಳಲ್ಲಿ, ಯಾಕಾಗಿ ಹತ್ತಿದೆವೋ ಅನ್ನಿಸತೊಡಗಿತ್ತು. ನಾವು ಕುಳಿತಿದ್ದ ವಾಹನ ಅದೆಷ್ಟು ವೇಗವಾಗಿ ಹಾರುತ್ತಿತ್ತೆಂದರೆ, ಯಾವುದೇ ಕ್ಷಣದಲ್ಲಿ ಆಗಬಾರದ್ದು ಆಗಬಹುದಾಗಿತ್ತು. ‘ಸೂರ್ಯ ಕಾಣಿಸುವ ಮೊದಲೇ ಪೇಪರು ಬಂಡಲುಗಳನ್ನು ತಲುಪಿಸಲೇಬೇಕು. ಸ್ಲೋ ಹೋದರೆ ನಮ್ಮ ಕೆಲಸ ಹೋದೀತು’ ಎಂದು ವ್ಯಾನಿನ ವೇಗದ ಹಿಂದಿರುವ ಕರ್ಮ ರಹಸ್ಯವನ್ನು ತಿಳಿಸಿದ್ದ. ರಣವೇಗದಲ್ಲಿ ಹಾರುತ್ತಿದ್ದ ವಾಹನ ಹತ್ತು ಹನ್ನೆರಡು ಮೈಲಿಗೊಮ್ಮೆ ಗಕ್ಕನೆ ಬ್ರೇಕ್ ಹೊಡೆಯುತ್ತಿತ್ತು. ವಾಹನದ ಗತಿ ಒಂದಿಷ್ಟು ನಿಧಾನವಾಗುತ್ತಿರುವಂತೆಯೇ ಒಂದೋ, ಎರಡೋ ಪೇಪರ್ ಬಂಡಲ್‌ಗಳನ್ನು ನಮ್ಮ ಹುಡುಗ ರಸ್ತೆಯಂಚಿಗೆ ದೂಡಿಬಿಡುತ್ತಿದ್ದ. ಇವನು, ‘ಚಲೋ’ ಎನ್ನುತ್ತಿದ್ದಂತೆ ವ್ಯಾನು ಮುಂದಕ್ಕೆ ಹಾರುತ್ತಿತ್ತು. ‘ಪ್ರಾಣವನ್ನು ಕೈಯಲ್ಲಿ ಹಿಡಿದು ಕುಳಿತಿದ್ದರು’ ಎಂಬ ನಾಲ್ಕು ಪದಗಳಿಗೆ ನಿಜವಾದ ಅರ್ಥ ಏನೆಂಬುದು ಸರಿಯಾಗಿ ಅಂದಾಜು ಆದದ್ದೇ ಆಗ.

ನಮ್ಮ ‘ಹಾರುವ ತಟ್ಟೆ’ ಸರಯೂ ನದಿ ತೀರ ತಲುಪಿದ್ದಾಗ ಸೂರ್ಯನಿನ್ನೂ ಎದ್ದಿರಲಿಲ್ಲ. ಗಂಟೆ ನಾಲ್ಕೂವರೆಯಾಗಿದ್ದಿರಬಹುದು. ಒಂದೆರಡು ಬೀದಿ ದೀಪಗಳನ್ನು ಹೊರತುಪಡಿಸಿದರೆ ಸುತ್ತಲೂ ಕತ್ತಲು. ಅಕ್ಕ ಪಕ್ಕ ಯಾವ ಹೊಟೇಲೂ ಕಾಣಿಸುತ್ತಿರಲಿಲ್ಲ. ಕಾಣಿಸಿದ್ದು ‘ಸುಲಭ್ ಶೌಚಾಲಯ್’ ಎಂಬ ಹೊಚ್ಚ ಹೊಸ ನಾಮ ಫಲಕ. ಹೊಸದೇ ಆಗಿದ್ದುದರಿಂದ ನಳದಲ್ಲಿ ಅಗತ್ಯಕ್ಕಿಂತ ಹೆಚ್ಚೇ ನೀರು ಸುರಿಯುತ್ತಿತ್ತು. ಎಲ್ಲರದ್ದು ಎಲ್ಲವೂ ಮುಗಿಯುವಾಗ ಸ್ವಲ್ಪ ದೂರದಲ್ಲಿ ಸದ್ದಿಲ್ಲದೆ ಹರಿಯುತ್ತಿದ್ದ ‘ಸರಯೂ ನದಿ’ ಅಸ್ಪಷ್ಟವಾಗಿ ಕಾಣಿಸಲಾರಂಭಿಸಿತ್ತು. ಗಂಟೆ ಐದೂವರೆಯಾಗುತ್ತಾ ಬಂದಿತ್ತು. ‘ನಾನೊಂದು ಡಿಪ್ ಹಾಕಿಕೊಂಡು ಬರುವೆ’ ಎನ್ನುತ್ತಾ ನದಿಯತ್ತ ಹೆಜ್ಜೆ ಹಾಕಿದ ಪಾಂಡೆಯನ್ನು ನಾವು ಹಿಂಬಾಲಿಸಿದೆವು. ಸ್ವಲ್ಪ ಮುಂದೆ ಹೋದ ಪಾಂಡೆ, ‘ಥತ್ತೇರಿ..’ ಎಂದು ಉದ್ಘರಿಸಿದ್ದರು! ಅವರ ಪುಣ್ಯಸ್ನಾನದ ಕನಸು ಭಗ್ನಗೊಂಡಿತ್ತು! ಅಚ್ಚರಿಯಿಂದ ನಾವಿಬ್ಬರೂ ಅವರ ಮುಖ ನೋಡಿದೆವು. ಅವರು ಹೊಳೆ ದಂಡೆಯನ್ನು ನೋಡುತ್ತಿದ್ದರು. ‘ಬೇಡ. ಇಂದು ಸ್ನಾನ ಕ್ಯಾನ್ಸೆಲ್. ಒಮ್ಮೆ ಇಲ್ಲಿಂದ ದೂರ ಹೋಗುವ.’ ಎಂದರು. ನಮಗೂ ಹೊಟ್ಟೆ ಹಸಿಯುತ್ತಿತ್ತು. ಹೊಟೇಲೂ ಹುಡುಕುತ್ತಾ ನದಿಯಿಂದ ವಿರುದ್ಧ ದಿಕ್ಕಿಗೆ ನಡೆದೆವು. ಪುಟ್ಟದೊಂದು ಹೊಟೇಲೂ ಕಾಣಿಸಿತು. ನಾವೇ ಬೋಣಿ ಇರಬೇಕು. ಆಸಕ್ತಿಯಿಂದ ಸ್ವಾಗತಿಸಿದ್ದ ಹೊಟೇಲಿನವನು, ಹೊಟ್ಟೆ ತುಂಬಾ ಬಿಸಿ ಬಿಸಿ ಪೂರಿ ಮತ್ತು ಸಬ್ಜಿ ಬಡಿಸಿದ್ದ. ನಮ್ಮ ಮುಂದಿನ ಕ್ಷೇತ್ರಕಾರ್ಯ ‘ರಾಮ್ ಲಲ್ಲಾ’ ದರ್ಶನ.

ಪಂಡಿತ  ಡಾ. ರಾಜೀವ್ ತಾರನಾಥ

ರಾಮ್ ಲಲ್ಲಾ

ಆಳೆತ್ತರದ ಕಬ್ಬಿಣ ಸರಳುಗಳ ಕೋಟೆ. ಸುತ್ತಲೂ ಗನ್ನುಧಾರಿ ಖಾಕಿ ಪಡೆ. ನಡುವೆ ಪುಟ್ಟದೊಂದು ಟೆಂಟು. ಗಾಳಿ ಬಿಸಿಲು ಮಳೆಯಿಂದ ರಕ್ಷಣೆಗೆಂದು ಹೊದಿಸಲಾಗಿದ್ದ ಟರ್ಪಾಲಿನ್ ಬಣ್ಣ ಮಾಸಿತ್ತು. ತೀರಾ ಹತ್ತಿರ ಹೋಗಲು ಪೊಲೀಸರು ಬಿಡಲಿಲ್ಲ. ನಾವು ಕರ್ನಾಟಕದ ಪತ್ರಿಕೆಯವರು ಎಂದು ಸುಳ್ಳು ಹೇಳಿದ್ದ ಕಾರಣಕ್ಕೆ ಒಂದಷ್ಟು ಅಡಿಗಳಷ್ಟು ರಿಯಾಯಿತಿ ಕೊಟ್ಟರು. ಟೆಂಟಿನ ಮೂಲೆಯಲ್ಲಿ ಹೂವುಗಳಿಂದ ಮುಚ್ಚಿಕೊಂಡಿದ್ದ ‘ರಾಮ್ ಲಲ್ಲಾ’ ಅಸ್ಪಷ್ಟವಾಗಿ ಕಾಣಿಸಿದ್ದ. ಫೋಟೊ ತೆಗೆಯುವುದು ‘ಹರಾಂ’ ಎಂದು ಪೊಲೀಸರು ಮೊದಲೇ ವಾರ್ನಿಂಗ್ ಕೊಟ್ಟಿದ್ದರು. ದೂರದಿಂದಲೇ ರಾಮ ಲಲ್ಲಾನಿಗೆ ಕೈ ಮುಗಿದೆವು. ಫೋಟೊ ಹೊಡೆಯಲು ಅನುಮತಿಯಿದ್ದ ಪಕ್ಕದ ಬೇಲಿಗಳ ಎದುರು ನಿಂತು ಫೋಟೊ ಹೊಡೆಸಿಕೊಂಡೆವು. ಸರಳು ಕೋಟೆಯಿಂದ ಹೊರಬಂದು ಸಂತೆಮಾಳದ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಎದುರಾಗಿದ್ದವರೇ, ಆ ಮುಲ್ಲಾ ಮುಲಾಯಂ ವಿರುದ್ಧ ರಣ ಕಹಳೆ ಊದುತ್ತಿದ್ದ ಪುಟ್ಟ ಮಕ್ಕಳು. ಅವರ ಉತ್ಸಾಹಗಳನ್ನು ಕಾಣುವಾಗ ಅಯ್ಯೋ ಅನ್ನಿಸಿತ್ತು. ಅಷ್ಟು ಪುಟ್ಟ ಮಕ್ಕಳ ಬಾಯಲ್ಲಿ ಅದೆಷ್ಟು ದ್ವೇಷದ ಮಾತು! ಹೆಚ್ಚು ಹೊತ್ತು ಅಲ್ಲಿ ನಿಲ್ಲಲು, ಅವರನ್ನು ಮಾತನಾಡಿಸಲು ಸಾಧ್ಯವೇ ಆಗಲಿಲ್ಲ. ಮುಂದೇನು ಮಾಡುವುದು? ಅಲ್ಲಿ ನೋಡಲು ಬೇರೇನಿದೆ? ಇದ್ದರೂ ನಮ್ಮ ಆಸಕ್ತಿಯನ್ನೆಲ್ಲ ‘ಮುಲ್ಲಾ ಮುಲಾಯಂ’ ಕೊಂದು ಹಾಕಿದ್ದ. ರಸ್ತೆಯ ಇಕ್ಕೆಲಗಳಲ್ಲೂ ಕಾಣಿಸುತ್ತಿದ್ದುದೆಲ್ಲವೂ ಪುಟ್ಟ ಪುಟ್ಟ ಮಂದಿರಗಳೇ. ಆ ಮಂದಿರಗಳೇ ಅಲ್ಲಿನವರಿಗೆ ಮನೆಗಳು. ಉರುಳಿಬಿದ್ದ ಬಾಬರಿ ಮಸೀದಿ ಆಕಾರದ ಕೆಲವು ಹಾಳುಬಿದ್ದ ಕಟ್ಟಡಗಳೂ ಇದ್ದವು. ಬಿಸಿಲು ನೆತ್ತಿಗೇರಿತ್ತು. ರಸ್ತೆಯಂಚಿನಲ್ಲಿ ಕಾಣಿಸಿದ ಉದ್ಯಾನವೊಂದಕ್ಕೆ ನುಸುಳಿ ಮರವೊಂದರ ನೆರಳಲ್ಲಿ ಕುಳಿತೆವು. ಸ್ವಲ್ಪವೇ ಹೊತ್ತಲ್ಲಿ, ನೆರಳು ನಮ್ಮಿಂದ ದೂರ ಸರಿಯಿತು. ಅಲ್ಲಿಂದ ಎದ್ದು ಮತ್ತೊಂದು ಮರದ ನೆರಳಿಗೆ ಹೊರಟಿದ್ದೆವಷ್ಟೆ; ಬೆನ್ನ ಹಿಂದೆ ‘ದಢಲ್’ ಎಂಬ ಸದ್ದು ಕೇಳಿಸಿತ್ತು. ಬೆಚ್ಚಿ ಬಿದ್ದು ತಿರುಗಿ ನೋಡಿದರೆ, ನಾವು ಕುಳಿತ ಜಾಗದ ಮೇಲೆ ಈಚಲು ಮರದ ಸೋಗೆಯೊಂದು ಬಿದ್ದಿತ್ತು!

ಮಧ್ಯಾಹ್ನದ ಊಟಕ್ಕೆಂದು ಹೊಟೇಲೊಂದರ ಮೆಟ್ಟಲೇರುತ್ತಿದ್ದಾಗ, ಬಾಗಿಲಿಗೆ ಅಂಟಿಕೊಂಡಿದ್ದ ‘ಬಾಂಬೆ’ ಸಿನೆಮಾದ ಪೋಸ್ಟರ್ ಕಾಣಿಸಿತ್ತು. ನಮ್ಮನ್ನು ಅಯೋಧ್ಯೆಯಿಂದ ದೆಹಲಿಗೆ ಕರೆದುಕೊಂಡು ಹೋಗಲಿರುವ ರೈಲು ಬರುವುದು ಮಧ್ಯ ರಾತ್ರಿಯಲ್ಲಿ. ಅವಸರವಸರವಾಗಿ ಊಟ ಮುಗಿಸಿಕೊಂಡು, ಸಿನೆಮಾ ಥಿಯೇಟರ್ ದಾರಿಯಲ್ಲಿ ದಾಪುಗಾಲು ಹಾಕಿದೆವು. ಮ್ಯಾಟಿನಿ ಶೋಗೆ ಹೆಚ್ಚು ಗಿರಾಕಿಗಳಿರಲಿಲ್ಲ. ಥಿಯೇಟರ್ ಹೆಬ್ಬಾಗಿಲಲ್ಲಿ ಸಿನೆಮಾಸಕ್ತರಿಗಿಂತ ಪೊಲೀಸರ ಸಂಖ್ಯೆಯೇ ದೊಡ್ಡದಿತ್ತು. ಟಿಕೇಟು ಖರೀದಿಸಿ ಒಳ ಹೊಕ್ಕೆವು. ಹೆಚ್ಚೆಂದರೆ ಐವತ್ತು ಪ್ರೇಕ್ಷಕರಿದ್ದಿರಬಹುದು. ‘ಬಾಂಬೆ’ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ, ಯಾವಾಗ ಮನೆಗೆ ಬಿದ್ದ ಬೆಂಕಿಯಲ್ಲಿ ಬೆಂದ ಪುಟ್ಟ ಮಕ್ಕಳು ‘ಅಮ್ಮಾ’ ಎಂದು ಕಿರುಚಲಾರಂಭಿಸಿದರೋ, ಆ ಬಳಿಕ ನನಗೆ ಪರದೆಯ ತುಂಬ ಕಾಣಿಸುತ್ತಿದ್ದದ್ದು ‘ಮುಲ್ಲಾ ಮುಲಾಯಂ’ನನ್ನು ಕೊಲ್ಲ ಹೊರಟ ಪುಟ್ಟ ಮಕ್ಕಳ ಮುದ್ದು ಮುದ್ದಾಗಿದ್ದ ಮುಖಗಳು ಮಾತ್ರ!.

ಆರೆಸ್ಸೆಸ್ ಪ್ರಮುಖ ಶ್ರೀ ಬಲರಾಜ್ ಮಧೋಕ್ ಮತ್ತು ಜನಸಂಘದ ಇತರ ನಾಯಕರ ನಡುವಿನ ಜಟಾಪಟಿಗಳಿಂದಾಗಿ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರ ಹೆಸರು ಪತ್ರಿಕೆಗಳಲ್ಲಿ ಕಾಣಿಸುತ್ತಿದ್ದ ದಿನಗಳು ಅವು. ಒಂದು ಸಂಜೆಯ ಹೊತ್ತಲ್ಲಿ ಬೇರೇನೋ ಮಾತುಗಳ ನಡುವೆ ಮುಷ್ತಾಖ್ ಅಲಿ, ತಾನು ಹುಟ್ಟಿದ್ದು ಪಾಕಿಸ್ತಾನದಲ್ಲಿ ಮತ್ತು ಈ ಅಡ್ವಾಣಿಯವರ ಪರಿಚಯ ತನಗಿದೆ ಎಂದಾಗ ನನಗೆ ನಂಬಿಕೆಯೇ ಆಗಿದ್ದಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)