varthabharthi


ಸಂಪಾದಕೀಯ

ಉತ್ತರ ಪ್ರದೇಶದಲ್ಲಿ ಬಿಜೆಪಿ ತತ್ತರ

ವಾರ್ತಾ ಭಾರತಿ : 14 Jan, 2022

ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳ ಮೂಲಕ ಉತ್ತರ ಪ್ರದೇಶದ ದೇಶದ ಗಮನ ಸೆಳೆದಿದೆ. ಒಂದೆಡೆ ರಾಮಮಂದಿರ, ಕಾಶಿ ವಿಶ್ವನಾಥ ಮೊದಲಾದ ಸಂಕೇತಗಳನ್ನು ಮುಂದಿಟ್ಟು ಮೋದಿಯ ನೇತೃತ್ವದಲ್ಲಿ ಮತ್ತೆ ಭಾವನಾತ್ಮಕ ರಾಜಕೀಯದ ಮೂಲಕ ಉತ್ತರ ಪ್ರದೇಶದ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಮತಾಂತರ, ಲವ್‌ ಜಿಹಾದ್ ಇತ್ಯಾದಿಗಳಿಗೆ ಜೀವಕೊಟ್ಟು, ಜನರಲ್ಲಿ ದ್ವೇಷವನ್ನು ತುಂಬುವ ಕೆಲಸವೂ ಬಿರುಸಿನಿಂದ ನಡೆಯುತ್ತಿದೆ. ಸಾಧುಸಂತರ ವೇಷದಲ್ಲಿರುವ ಉಗ್ರವಾದಿಗಳು ಬಹಿರಂಗ ಹತ್ಯಾಕಾಂಡಗಳಿಗೆ ಕರೆ ಕೊಡುತ್ತಿರುವಾಗ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದಕ್ಕೆ ತಮ್ಮ ವೌನ ಸಮ್ಮತಿಯನ್ನು ನೀಡುತ್ತಿವೆ. ಈ ದ್ವೇಷ ಭಾಷಣಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ವಿಶ್ವಸಂಸ್ಥೆಯೂ ಈ ಬಗ್ಗೆ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಕೊರೋನ, ಲಾಕ್‌ಡೌನ್ ಮೊದಲಾದ ವಿಪತ್ತುಗಳಿಂದ ತತ್ತರಿಸಿರುವ ದೇಶ ಇನ್ನಷ್ಟು ವಿಷಮದ ಕಡೆಗೆ ಸಾಗುತ್ತಿದೆ. ಉತ್ತರ ಪ್ರದೇಶವನ್ನು ಯಾವ ಬೆಲೆ ಕೊಟ್ಟಾದರೂ ಗೆದ್ದುಕೊಳ್ಳಲೇಬೇಕು ಎನ್ನುವಂತಹ ಸ್ಥಿತಿಗೆ ಬಂದು ನಿಂತಿದೆ ಬಿಜೆಪಿ. ಇಂತಹ ಹೊತ್ತಿನಲ್ಲೇ, ಉತ್ತರ ಪ್ರದೇಶದ ಸರಕಾರದ ವಿರುದ್ಧದ ಅಸಮಾಧಾನ, ಬಿಜೆಪಿಯೊಳಗಿಂದಲೇ ಸಿಡಿದಿದೆ. ಉತ್ತರ ಪ್ರದೇಶದ ಸರಕಾರದೊಳಗಿರುವ ಸಚಿವರು ಒಬ್ಬೊಬ್ಬರಾಗಿ ರಾಜೀನಾಮೆ ನೀಡುತ್ತಿದ್ದಾರೆ. ಜೊತೆಗೆ ಶಾಸಕರೂ ಪಕ್ಷ ತೊರೆದು ಸಮಾಜವಾದಿ ಪಕ್ಷವನ್ನು ಸೇರುತ್ತಿದ್ದಾರೆ. ಉತ್ತರ ಪ್ರದೇಶವನ್ನು ಚುನಾವಣೆಗೆ ಮುನ್ನವೇ ಗೆದ್ದಂತೆ ವರ್ತಿಸುತ್ತಿದ್ದ ಬಿಜೆಪಿ ಈ ಸರಣಿ ರಾಜೀನಾಮೆಗಳಿಂದ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಕಾಶಿ ವಿಶ್ವನಾಥ್ ಕಾರಿಡಾರ್‌ನಲ್ಲಿ ಪ್ರಧಾನಿ ಮೋದಿ ನಡೆಸಿದ ಎಲ್ಲ ಹೋಮ ಯಜ್ಞಗಳೂ, ಸದ್ಯದ ರಾಜೀನಾಮೆಯ ಚಂಡಮಾರುತದಲ್ಲಿ ಕೊಚ್ಚಿ ಹೋಗಿದೆ. ಭವಿಷ್ಯದ ಪ್ರಧಾನಿಯೆಂದು ಸ್ವಯಂ ಬಿಂಬಿಸಿಕೊಳ್ಳುತ್ತಿದ್ದ ಆದಿತ್ಯನಾಥ್‌ಗೆ ಇದು ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ಸಾಧಾರಣವಾಗಿ ಇನ್ನೊಂದು ಪಕ್ಷದೊಳಗಿರುವ ಶಾಸಕರು, ಸಚಿವರಿಂದ ರಾಜೀನಾಮೆ ಕೊಡಿಸಿ, ಪಕ್ಷಕ್ಕೆ ಸೇರಿಸಿಕೊಳ್ಳುವ ಶಕ್ತಿ ತನಗೆ ಮಾತ್ರ ಇರುವುದು ಎನ್ನುವುದನ್ನು ಬಿಜೆಪಿ ಹಲವು ಬಾರಿ ಸಾಬೀತು ಮಾಡಿತ್ತು. ಅದಕ್ಕೆ ಕಾರಣವೂ ಇತ್ತು. ಬಿಜೆಪಿ ಇಂದು ಉಳಿದೆಲ್ಲ ಪಕ್ಷಗಳಿಗಿಂತ ಅತ್ಯಂತ ಶ್ರೀಮಂತ ಪಕ್ಷವಾಗಿ ಗುರುತಿಸಿಕೊಂಡಿದೆ. ಕೇಂದ್ರದಲ್ಲೂ ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರ ಹಿಡಿದಿರುವುದರಿಂದ, ಇಂದು ಬಿಜೆಪಿ ಉಳಿದ ಪಕ್ಷಗಳ ನಾಯಕರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಸಾಧ್ಯತೆಗಳಷ್ಟೇ ಇತ್ತು. ಆದರೆ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವಂತಹ ಬೆಳವಣಿಗೆಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ. ಸಚಿವರುಗಳೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ಹೊರಗಿರುವ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ ಎನ್ನುವುದು ಉತ್ತರ ಪ್ರದೇಶದಲ್ಲಿ ಬಿಜೆಪಿ ಒಳಗೊಳಗೆ ಕೊಳೆತಿರುವುದನ್ನು ಬಹಿರಂಗ ಪಡಿಸಿದೆ. ಆದಿತ್ಯನಾಥ್ ಅವರ ಅತ್ಯಂತ ಕೆಟ್ಟ ಆಡಳಿತ, ಇಡೀ ಉತ್ತರ ಪ್ರದೇಶವನ್ನು ‘ಕ್ರಿಮಿನಲ್ ರಾಜ್ಯ’ವಾಗಿ ಪರಿವರ್ತಿಸಿರುವ ಸಂದರ್ಭದಲ್ಲಿ, ಬಿಜೆಪಿಯೊಳಗಿಂದಲೇ ಸರಕಾರದ ವಿರುದ್ಧ ಪ್ರತಿಭಟನೆಗಳು ಹೊರಹೊಮ್ಮುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಿತ್ಯನಾಥ್‌ರನ್ನು ಭವಿಷ್ಯದ ಪ್ರಧಾನಿಯಾಗಿ ಬಿಂಬಿಸಲು ಹೊರ ಕೆಲವು ಮಾಧ್ಯಮಗಳಿಗೂ ಇದು ತೀರಾ ಮುಖಭಂಗವನ್ನು ಉಂಟು ಮಾಡಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದರೂ, ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಇನ್ನೂ ಬಿಜೆಪಿಯ ಖೆಡ್ಡಾದಿಂದ ಹೊರಗೆ ಬಂದಂತಿಲ್ಲ. ಮುಂದಿನ ಚುನಾವಣೆಯಲ್ಲಿ ಅದು ನಿರ್ಣಾಯಕ ಪಾತ್ರವನ್ನು ವಹಿಸುವ ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಇಲ್ಲ. ಇನ್ನು ಕಾಂಗ್ರೆಸ್ ಮತ್ತು ಎಸ್‌ಪಿ ಎಷ್ಟರಮಟ್ಟಿಗೆ ಜಾತ್ಯತೀತ ಮತಗಳನ್ನು ಒಡೆಯಲಿದೆ ಎನ್ನುವುದರ ಮೇಲೆ ಬಿಜೆಪಿಯ ಭವಿಷ್ಯ ನಿಂತಿದೆ. ಮುಂದಿನ ಚುನಾವಣೆಯ ಬಹುತೇಕ ಪ್ರಚಾರಗಳು ಆನ್‌ಲೈನ್ ಮೂಲಕವೇ ನಡೆಯಲಿದೆ. ಅಂದರೆ, ಈ ಬಾರಿ ಚುನಾವಣೆಗೆ ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳು, ವಾಟ್ಸ್‌ಆ್ಯಪ್‌ಗಳು, ಟ್ವಿಟರ್‌ಗಳು ಪರಿಣಾಮಕಾರಿಯಾಗಿ ಬಳಕೆಯಾಗಲಿವೆ. ಇದರ ಸಕಲ ಪ್ರಯೋಜನವನ್ನು ಬಿಜೆಪಿಯೇ ಪಡೆಯಲಿದೆ. ಯಾಕೆಂದರೆ, ಬಿಜೆಪಿ ಮತ್ತು ಆರೆಸ್ಸೆಸ್ ಬಳಿ, ಈಗಾಗಲೇ ನುರಿತ ಐಟಿ ಪಡೆಗಳಿವೆ. ಸುಳ್ಳುಗಳನ್ನು, ವದಂತಿಗಳನ್ನು ಹರಡುವುದಕ್ಕೆ ಅವರಲ್ಲಿ ತರಬೇತಿ ಪಡೆದ ಕಾರ್ಯಕರ್ತರಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಈ ವರ್ಚುವಲ್ ಪ್ರಚಾರದಲ್ಲಿ ಬಿಜೆಪಿಗೆ ಸ್ಪರ್ಧೆ ನೀಡುವುದು ಕಷ್ಟವಾಗಬಹುದು. ಆದರೆ, ಸದ್ಯಕ್ಕೆ ಬಿಜೆಪಿ ಸೋಲುವುದಕ್ಕೆ ಕಳೆದ ಐದು ವರ್ಷಗಳಲ್ಲಿ ಅದು ನೀಡಿದ ಕೆಟ್ಟ ಆಡಳಿತವೇ ಸಾಕು. ಈಗಾಗಲೇ ಹಿಂದುಳಿದ ವರ್ಗ ಬಿಜೆಪಿಯ ಬಗ್ಗೆ ತೀವ್ರ ಅಸಮಾಧಾನವನ್ನು ಹೊಂದಿದೆ. ಜೊತೆಗೆ ರೈತ ಹೋರಾಟಗಳು ಬಿಜೆಪಿಯನ್ನು ಹಿಂದಕ್ಕೆ ತಳ್ಳಿದೆ. ಮೋದಿಯ ನಕಲಿ ವರ್ಚಸ್ಸು ನಿಧಾನಕ್ಕೆ ಕರಗುತ್ತಿರುವ ಸಮಯ ಇದು. ಆದಿತ್ಯನಾಥ್ ಅವರ ಕಾವಿ, ಅವರ ಕುಕೃತ್ಯದಿಂದ ಕಪ್ಪು ಬಣ್ಣಕ್ಕೆ ತಿರುಗಿದೆ. ಇವೆಲ್ಲವನ್ನು ತನಗೆ ಪೂರಕವಾಗಿ ಬಳಸಿಕೊಳ್ಳಲು ಸಮಾಜವಾದಿ ಪಕ್ಷ ಯಶಸ್ವಿಯಾದರೆ, ಮುಂದಿನ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಪ್ರತಿಜ್ಞೆ ಸ್ವೀಕಾರ ಮಾಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)