varthabharthi


ರಾಷ್ಟ್ರೀಯ

ಧಾರ್ಮಿಕ ಸಮಾವೇಶಗಳಲ್ಲಿ ದ್ವೇಷಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಇಸಿಗೆ ನೌಕಾದಳದ ಮಾಜಿ ಮುಖ್ಯಸ್ಥರ ಆಗ್ರಹ

ವಾರ್ತಾ ಭಾರತಿ : 14 Jan, 2022


Admiral Laxminarayan Ramdas | Photo : Wikipedia


ಹೊಸದಿಲ್ಲಿ,ಜ.14: ಧರ್ಮ ಸಂಸದ್‌ಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ನೀಡಲಾಗುತ್ತಿರುವ ಕರೆಗಳ ಕುರಿತು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ ಚಂದ್ರ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರುವ ಮಾಜಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಲಕ್ಷ್ಮೀನಾರಾಯಣ ರಾಮದಾಸ ಅವರು,ಇದು ಸಂವಿಧಾನ ಮತ್ತು ಚುನಾವಣಾ ಆಯೋಗದ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಬೆಟ್ಟು ಮಾಡಿದ್ದಾರೆ.


ಜ.12ರಂದು ಬರೆಯಲಾಗಿರುವ ‘ಧರ್ಮ ಸಂಸದ್‌ಗಳು,ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ರಾಷ್ಟ್ರೀಯ ಭದ್ರತೆ ’ ಶೀರ್ಷಿಕೆಯ ಪತ್ರದಲ್ಲಿ ಈ ಬಗ್ಗೆ ಗಮನ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ಸ್ವಯಂಪ್ರೇರಿತ ಕ್ರಮಕ್ಕಾಗಿ ವಕೀಲರು,ನಿವೃತ್ತ ಸೇನಾಧಿಕಾರಿಗಳು ಕರೆ ನೀಡಿದ್ದರೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಒತ್ತಿ ಹೇಳಲಾಗಿದೆ.
 ರಾಮದಾಸ್ ಸೇರಿದಂತೆ ಸಶಸ್ತ್ರ ಪಡೆಗಳ ಮಾಜಿ ಮುಖ್ಯಸ್ಥರು ಹಾಗೂ ಮಾಜಿ ಅಧಿಕಾರಿಗಳನ್ನೊಳಗೊಂಡಂತೆ ಹಲವಾರು ಗಣ್ಯ ನಾಗರಿಕರು ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಘಟನೆಗಳ ಕುರಿತು ಡಿ.31ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂತಹುದೇ ಪತ್ರವೊಂದನ್ನು ಬರೆದಿದ್ದರು. ರಾಮದಾಸ್ ಅವರು ಸಿಇಸಿಗೆ ಬರೆದಿರುವ ಪತ್ರದೊಂದಿಗೆ ಈ ಪತ್ರದ ಪ್ರತಿಯನ್ನೂ ಲಗತ್ತಿಸಿದ್ದಾರೆ.

 ‘ದೇಶಾದ್ಯಂತ ಮುಖ್ಯ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮರು ಮತ್ತು ಇತರರನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ದ್ವೇಷ ಭಾಷಣಗಳ ಬಗ್ಗೆ ನಾವು ನಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಇತ್ತೀಚಿಗೆ ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸದ್ ಮತ್ತು ದಿಲ್ಲಿಯಲ್ಲಿನ ಇಂತಹುದೇ ಕಾರ್ಯಕ್ರಮವನ್ನು ನಾವು ನಿರ್ದಿಷ್ಟವಾಗಿ ಪ್ರಸ್ತಾವಿಸಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ಭಾಷಣಕಾರರು ಮುಸ್ಲಿಮರ ನರಮೇಧಕ್ಕೆ ಪ್ರಚೋದನೆಗೆ ಸಮಾನವಾದ ಕರೆಗಳನ್ನು ನೀಡಿದ್ದರು’ ಎಂದು ರಾಮದಾಸ ತನ್ನ ಪತ್ರದಲ್ಲಿ ಬರೆದಿದ್ದಾರೆ.

ಈವರೆಗೆ ಯಾರನ್ನೂ ಬಂಧಿಲಾಗಿಲ್ಲ ಎಂದು ರಾಮದಾಸ ಪತ್ರದಲ್ಲಿ ಉಲ್ಲೇಖಿಸಿದ್ದರೂ ಅವರು ಪತ್ರವನ್ನು ಕಳುಹಿಸಿದ ಬಳಿಕ ಗುರುವಾರ ಉತ್ತರಾಖಂಡ ಪೊಲೀಸರು ಹರಿದ್ವಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿಕೊಂಡ ಮೂರು ವಾರಗಳ ನಂತರ ಮೊದಲ ಬಂಧನವನ್ನು ನಡೆಸಿದ್ದಾರೆ.
 ‘ನೀವು ಚುನಾವಣೆಗಳನ್ನು ಘೋಷಿಸಿದ್ದೀರಿ. ಆದಾಗ್ಯೂ ಇಂತಹ ಘಟನೆಗಳು ಮುಂದುವರಿದಿವೆ ಮತ್ತು ಇತರ ಸ್ಥಳಗಳಲ್ಲಿ ಇಂತಹ ಸಂಸದ್‌ಗಳ ಆಯೋಜನೆಯನ್ನು ಪ್ರಕಟಿಸಲು ಸುದ್ದಿಗೋಷ್ಠಿಗಳನ್ನೂ ನಡೆಸಲಾಗುತ್ತಿದೆ. ಇದು ಸಂವಿಧಾನ ಮತ್ತು ಚುನಾವಣಾ ನೀತಿಸಂಹಿತೆಗಳ ಉಲ್ಲಂಘನೆಯಾಗಿದೆ ’ ಎಂದು ಬರೆದಿರುವ ರಾಮದಾಸ್, ‘ಚುನಾವಣಾ ಪ್ರಕ್ರಿಯೆಯ ಪಾವಿತ್ರವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಸಮುದಾಯಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಇಂತಹ ಕರೆಗಳ ವಿರುದ್ಧ ಕಠಿಣ ನಿಲುವು ತಳೆಯುವಂತೆ ನಾವು ನಿಮ್ಮನ್ನು ಆಗ್ರಹಿಸುತ್ತಿದ್ದೇವೆ. ಸಶಸ್ತ್ರ ಪಡೆಯ ಮಾಜಿ ಅಧಿಕಾರಿಯಾಗಿ ನಾನು ಬಾಹ್ಯ ಮತ್ತು ಆಂತರಿಕ ರಾಷ್ಟ್ರೀಯ ಭದ್ರತೆಯ ಮೇಲೆ ಇಂತಹ ಕರೆಗಳ ನೇರ ಪರಿಣಾಮದ ಬಗ್ಗೆ ತೀವ್ರ ಕಳವಳಗೊಂಡಿದ್ದೇನೆ. ಪರಿಣಾಮಗಳು ಭಾರತದ ಸಾಮಾಜಿಕ ರಚನೆಗೆ ಮತ್ತು ನಮ್ಮ ಪ್ರಜೆಗಳ ಯೋಗಕ್ಷೇಮಕ್ಕೆ ನಿಜಕ್ಕೂ ಗಂಭೀರವಾಗಿವೆ. ನಮ್ಮ ಪ್ರಜಾಸತ್ತಾತ್ಮಕ ನಿಯಮಗಳು ಮತ್ತು ಭಾರತೀಯ ಸಂವಿಧಾನದ ರಕ್ಷಣೆಗಾಗಿ ದೇಶವು ವಿಶೇಷವಾಗಿ,ಮುಖ್ಯ ಹುದ್ದೆಯಲ್ಲಿರುವ ನಿಮ್ಮತ್ತ ನೋಡುತ್ತಿದೆ ’ಎಂದು ಹೇಳಿದ್ದಾರೆ.‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)