varthabharthi


ರಾಷ್ಟ್ರೀಯ

ಬುಲ್ಲಿ ಬಾಯಿ ಆ್ಯಪ್ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ವಾರ್ತಾ ಭಾರತಿ : 14 Jan, 2022

ಮುಂಬೈ,ಜ.14: ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿ ಅವರನ್ನು ಹರಾಜಿಗಿರಿಸಿದ್ದ ‘ಬುಲ್ಲಿ ಬಾಯಿ’ ಆ್ಯಪ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಜ.5ರಂದು ಉತ್ತರಾಖಂಡದಲ್ಲಿ ಬಂಧಿಸಲ್ಪಟ್ಟಿರುವ ಶ್ವೇತಾ ಸಿಂಗ್ ಮತ್ತು ಮಯಾಂಕ ರಾವತ್ ಅವರಿಗೆ ಶುಕ್ರವಾರ ಇಲ್ಲಿಯ ಬಾಂದ್ರಾ ಮಹಾನಗರ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಶುಕ್ರವಾರ ವೈದ್ಯಕೀಯ ತಪಾಸಣೆ ಸಂದರ್ಭ ರಾವತ್‌ನಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು,ಇನ್ನಷ್ಟು ಅವಧಿಗೆ ಆತನ ಕಸ್ಟಡಿ ಅಗತ್ಯವಿಲ್ಲ ಎಂದು ಸೈಬರ್ ಕ್ರೈಂ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.
 
ವಿಶಾಲ್ ಕುಮಾರ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ಆರೋಪಿಯಾಗಿದ್ದು,ಈ ಬಗ್ಗೆ ಪ್ರಕರಣದ ರೂವಾರಿಯಾದ ನೀರಜ್ ಬಿಷ್ಣೋಯಿ ಸಿಂಗ್ ಮತ್ತು ರಾವತ್ ಗೆ ಮಾಹಿತಿಯನ್ನು ನೀಡಿದ್ದ ಮತ್ತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಳಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ ಅಧಿಕಾರಿಗಳು,ಸಿಂಗ್ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿಕೊಂಡರು. ಇದನ್ನು ಸಿಂಗ್ ಪರ ವಕೀಲ ಚಿತ್ತರಂಜನ ದಾಸ್ ಅವರು ವಿರೋಧಿಸಿದರು.

ಸೈಬರ್ ಕ್ರೈಂ ಅಧಿಕಾರಿಗಳ ವಶದಲ್ಲಿದ್ದಾಗ ಸಿಂಗ್ ಕೆನ್ನೆಗೆ ಹೊಡೆಯಲಾಗಿತ್ತು ಎಂದು ದಾಸ್ ತಿಳಿಸಿದಾಗ,ಈ ಬಗ್ಗೆ ವಿಚಾರಣೆ ನಡೆಸುವಂತೆ ಮತ್ತು ಕಾನೂನಿಗನುಗುಣವಾಗಿ ಮುಂದುವರಿಯುವಂತೆ ನ್ಯಾಯಾಲಯವು ಡಿಸಿಪಿ ಸೈಬರ್ ಕ್ರೈಂ ಅವರಿಗೆ ನಿರ್ದೇಶ ನೀಡಿತು. ರಾವತ್ ಜಾಮೀನು ಕೋರಿ ಅರ್ಜಿ ಸಲ್ಲಿಸಲಿದ್ದು,ನ್ಯಾಯಾಲಯವು ಸೋಮವಾರ ವಿಚಾರಣೆಯನ್ನು ನಡೆಸಲಿದೆ.

ಜ.10ರಂದು ನ್ಯಾಯಾಲಯವು ಸಿಂಗ್ ಮತ್ತು ರಾವತ್ ಅವರಿಗೆ ಜ.14ರವರೆಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಿತ್ತು. ಎ.4ರಂದು ಬೆಂಗಳೂರಿನಿಂದ ಬಂಧಿಸಲ್ಪಟ್ಟಿದ್ದ ವಿಶಾಲ್ ಕುಮಾರ್ ಕೊರೋನ ಸೋಂಕಿಗೆ ಒಳಗಾಗಿರುವುದರಿಂದ ನ್ಯಾಯಾಲಯವು ಆತನಿಗೆ ಜ.24ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಮುಖ್ಯ ಆರೋಪಿ ಬಿಷ್ಣೋಯಿಯನ್ನು ದಿಲ್ಲಿ ಪೊಲೀಸರು ಜ.6ರಂದು ಅಸ್ಸಾಮಿನಲ್ಲಿ ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)