varthabharthi


ವಿಶೇಷ-ವರದಿಗಳು

ಅಗಲಿದ ಹಿರಿಯ ಪತ್ರಕರ್ತ ಕಮಾಲ್‌ ಖಾನ್‌ ಗೆ ರವೀಶ್‌ ಕುಮಾರ್‌ ನುಡಿನಮನ

ಇನ್ನೆಂದಿಗೂ ಇನ್ನೋರ್ವ ಕಮಾಲ್ ಖಾನ್ ಬರಲು ಸಾಧ್ಯವಿಲ್ಲ

ವಾರ್ತಾ ಭಾರತಿ : 15 Jan, 2022

Screengrab/Tedex

ಇತ್ತೀಚೆಗೆ ನಿಧನರಾದ ಎನ್‌ಡಿಟಿವಿಯ ಪತ್ರಕರ್ತ ಕಮಾಲ್ ಖಾನ್ ಅವರು ಕೇವಲ ಪತ್ರಿಕೋದ್ಯಮ, ಅದರ ಭಾಷೆ ಅಥವಾ ತತ್ತ್ವಗಳ ದ್ಯೋತಕವಾಗಿರಲಿಲ್ಲ. ಅವರು ತನ್ನ ವರದಿಗಳ ಮೂಲಕ ತನ್ನ ನಗರ ಲಕ್ನೋ ಮತ್ತು ತನ್ನ ದೇಶ ಹಿಂದುಸ್ಥಾನದ ದ್ಯೋತಕವಾಗಿದ್ದರು. ಹಳೆಯ ಲಕ್ನೋ, ಧರ್ಮದ ಹೆಸರಿನಲ್ಲಿ ದ್ವೇಷದ ಬೆಂಕಿಯ ಬಿರುಗಾಳಿಯಿಂದಾಗಿ ಪರಿವರ್ತನೆಗೊಳ್ಳುವ ಮುನ್ನ, ಅದನ್ನು ಆಳುವವರ ಭಾಷೆ ಬದಲಾಗುವ ಮುನ್ನ, ಸಾಂವಿಧಾನಿಕ ಹುದ್ದೆಯಲ್ಲಿರುವವರು ಹಿಂಸಾಚಾರ, ಗುಂಡುಗಳು ಮತ್ತು ಜನರನ್ನು ಅವರ ಮರಣಾನಂತರದ ಜೀವನಕ್ಕೆ ಕಳುಹಿಸುವ ಬಗ್ಗೆ ಮಾತುಗಳನ್ನಾಡುವ ಮುನ್ನ ಕಮಾಲ್ ಖಾನ್ ಅದೇ ಹಳೆಯ ಲಕ್ನೋದ ದ್ಯೋತಕವಾಗಿದ್ದರು. ಅವರು ಲಕ್ನೋದ ಇಮಾಮ್‌ ಬಾರಾದಂತೆ ಎತ್ತರವಾಗಿ ನಿಂತಿದ್ದರು. ಇಮಾಮ್‌ ಬಾರಾ ಇಲ್ಲದೆ ಲಕ್ನೋ ಅಪೂರ್ಣ.

ಕಮಾಲ್ ಖಾನ್‌ರನ್ನು ಈ ಲಕ್ನೋದಿಂದ ಪ್ರತ್ಯೇಕಿಸಿ ಅವರನ್ನು ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲ. ಸದಾ ತನ್ನ ಕೆಲಸಗಳಿಗಾಗಿ ಹೆಸರಾಗಿದ್ದ ಪತ್ರಕರ್ತನ ಗುರುತನ್ನು ಈಗ ಆತನ ಧರ್ಮದೊಂದಿಗೆ ಜೋಡಿಸಲಾಗಿದೆ. ಸರಕಾರದೊಳಗಿನ ಕೆಲವರು ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಲಕ್ನೋದ ಪ್ರಸಿದ್ಧ ಅನುಗ್ರಹದೊಂದಿಗೆ ಅವರು ಅದನ್ನೆಲ್ಲ ಮರೆತು ತನ್ನ ಪಾಡಿಗೆ ತಾನಿದ್ದರು. ‘ಅದು ಹೇಗೆಂದು ನಿಮಗೆ ಗೊತ್ತು. ನಾನು ಕೇಳಿದರೆ ಅವನು ಮುಸ್ಲಿಂ ಎಂದು ಅವರು ಹೇಳುತ್ತಾರೆ ’ ಎಂದು ಕಮಾಲ್ ಕೆಲವೊಮ್ಮೆ ಹೇಳುತ್ತಿದ್ದರು. ಅವರು ಕಮಾಲ್‌ರನ್ನು ಅವರ ಧರ್ಮದ ಗುರುತಿನತ್ತ ತಳ್ಳಲು ಪ್ರಯತ್ನಿಸುತ್ತಲೇ ಇದ್ದರೆ ಕಮಾಲ್ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ಅವರ ಪ್ರತಿ ಕೊನೆಯ ವರದಿಯೂ ಇದಕ್ಕೆ ಸಾಕ್ಷಿಯಾಗಿದೆ.

ಜನರು ಇಂದು ಕಮಾಲ್‌ರನ್ನು ನೆನಪಿಸಿಕೊಳ್ಳುವಾಗ ಅವರ ಕೆಲಸವನ್ನೂ ನೆನಪಿಸಿಕೊಳ್ಳುತ್ತಾರೆ. ಇದು ಅವರ ಸಾಧನೆಗೆ ಪುರಾವೆಯಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳಾದ್ಯಂತ ಅವರ ಕೆಲಸವು ಅವರು ತನ್ನ ವೀಕ್ಷಕರ ಮೇಲೆ ಯಾವ ಪರಿಣಾಮವನ್ನು ಬೀರಿದ್ದರು ಎನ್ನುವುದನ್ನು ತೋರಿಸುತ್ತಿದೆ. ಟ್ವಿಟರ್ ಅವರ ವರದಿಗಳ ಭಾಗಗಳಿಂದ ತುಂಬಿಹೋಗಿದೆ. ಇದು ಕಮಾಲ್ ಖಾನ್. ಅವರ ಕೆಲಸವೇ ಅವರ ಸ್ಮಾರಕವಾಗಿದೆ.

ಅವರ ಈ ಕೆಲಸದ ಮೂಲಕವೇ ಕಮಾಲ್ ನಮಗೆ ಪರಿಚಯವಾಗಿದ್ದಾರೆ. ಅಹ್ಮದ್ ಫರಾಜ್ ಮತ್ತು ಹಬೀಬ್ ಜಾಲಿಬ್ ಅವರ ಶಾಯರಿಗಳನ್ನು ಹೇಳುವ ಮೂಲಕ ಯಾರೂ ಕಮಾಲ್ ಖಾನ್ ಆಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಅವರನ್ನು ತಿಳಿದುಕೊಳ್ಳಲು ಮುಖ್ಯವಾಗಿದೆ. ಎರಡು ನಿಮಿಷಗಳ ವರದಿಗಾಗಿಯೂ ಅವರು ದಿನವಿಡೀ ಚಿಂತನೆ ನಡೆಸುತ್ತಿದ್ದರು, ದಿನವಿಡೀ ಓದುತ್ತಿದ್ದರು ಮತ್ತು ದಿನವಿಡೀ ಬರೆಯುತ್ತಿದ್ದರು. ಅವರೊಂದಿಗೆ ಕೆಲಸ ಮಾಡಿದವರಿಗೆ ಕಮಾಲ್ ಭಾಯಿ ಹೀಗೆಯೇ ಕೆಲಸ ಮಾಡುವುದು ಎನ್ನುವುದು ಗೊತ್ತಿತ್ತು. 

ಯಾರಾದರೂ ತಮ್ಮ ಕೆಲಸವನ್ನು ಅಷ್ಟೊಂದು ಗೌರವ ಮತ್ತು ಸಮರ್ಪಣಾ ಭಾವದಿಂದ ಮಾಡುವುದನ್ನು ನೋಡುವುದು ಸ್ಫೂರ್ತಿಯನ್ನು ನೀಡುತ್ತದೆ. ಅಯೋಧ್ಯೆ ಕುರಿತು ಕಮಾಲ್‌ರ ವರದಿಗಳನ್ನು ಸಂಗ್ರಹಿಸಿದರೆ ಅವರು ರಾಜಕೀಯ ನಿರೂಪಣೆಯಿಂದ ಬೇರೆಯೇ ಆದ ಅಯೋಧ್ಯೆಯನ್ನು ಹೊಂದಿದ್ದರು ಎನ್ನುವುದು ಗೊತ್ತಾಗುತ್ತದೆ. ದ್ವೇಷದ ಬೆಂಕಿಯಲ್ಲಿ ನಲುಗಿದ್ದ ಅಯೋಧ್ಯೆಯ ಬಗ್ಗೆ ಅವರು ಸಲೀಸಾಗಿ ಮಾತನಾಡುತ್ತಿದ್ದರು.ಅವರ ಮಾತುಗಳು ಈ ದ್ವೇಷದ ಜ್ವಾಲೆಗಳನ್ನು ತಣ್ಣಗಾಗಿಸಿದ್ದವು. ಅವರು ತುಳಸಿದಾಸರ ರಾಮಾಯಣ ಮತ್ತು ಗೀತೆಯ ಅಧ್ಯಯನದಲ್ಲಿಯೂ ಮುಳುಗಿರುತ್ತಿದ್ದರು. ಅವರು ತನ್ನ ವರದಿಯನ್ನು ಪ್ರಖರಗೊಳಿಸಲು ಎಲ್ಲಿಂದಲೋ ಒಂದೆರಡು ಸಾಲುಗಳನ್ನು ಎತ್ತಿಕೊಂಡು ಅದನ್ನೇ ಒಂದು ಸಾಧನೆಯೆಂದು ಬೀಗುವ ಪತ್ರಕರ್ತನಾಗಿರಲಿಲ್ಲ. 

ಉತ್ತರ ಪ್ರದೇಶದ ಸಮಾಜವು ಧರ್ಮವನ್ನು ತೀರ ಹಚ್ಚಿಕೊಂಡಿದೆ ಎನ್ನುವುದು ಅವರಿಗೆ ಗೊತ್ತಿತ್ತು ಮತ್ತು ರಾಜಕೀಯವು ಈ ಭಕ್ತಿಯನ್ನು ಕ್ರೋಧವಾಗಿ ಪರಿವರ್ತಿಸಿತ್ತು. ಕಮಾಲ್ ಸಮಾಜದೆದುರು ಮಾತನಾಡಲು ಅಸಂಖ್ಯಾತ ಧಾರ್ಮಿಕ ಪುಸ್ತಕಗಳ ಅಧ್ಯಯನ ಮಾಡಿರಬೇಕು ಮತ್ತು ಇದೇ ಕಾರಣದಿಂದ ಅವರು ಮಾತನಾಡುವಾಗ ಜನರು ನಿಂತು ಅದನ್ನು ಆಲಿಸುತ್ತಿದ್ದರು.
 
ಕಮಾಲ್ ನಿಮ್ಮ ಕಣ್ಣುಗಳ ಮೂಲಕ,ನಿಮ್ಮ ಆತ್ಮದೊಳಗೆ ಪ್ರವೇಶಿಸಿ ನಾಜೂಕಾದ ಕೈಗಳಿಂದ ನಿಮ್ಮ ಆತ್ಮಸಾಕ್ಷಿಯನ್ನು ಕಲಕಬಲ್ಲವರಾಗಿದ್ದರು ಮತ್ತು ಕೊನೆಯಲ್ಲಿ ಪ್ರೀತಿ ಮತ್ತು ಭ್ರಾತೃತ್ವ ಎಂದರೆ ನಿಜವಾಗಿಯೂ ಏನು ಎನ್ನುವುದನ್ನು ನಿಮಗೆ ನೆನಪಿಸುತ್ತಿದ್ದರು. ಇದನ್ನೇ ಉತ್ತರ ಪ್ರದೇಶ ನೆಲದ ಧರ್ಮ ಮತ್ತು ಹಿರಿಯರು ಉದ್ದಕ್ಕೂ ಬೋಧಿಸಿದ್ದರು. ರಾಮ ಮತ್ತು ಕೃಷ್ಣರಿಗೆ ಸಂಬಂಧಿಸಿದ ವಿವಾದಗಳ ಕುರಿತು ಅವರ ವರದಿಗಾರಿಕೆಯ ಸಾಮರ್ಥ್ಯಕ್ಕೆ ಸಾಟಿಯಿರಲಿಲ್ಲ,ಏಕೆಂದರೆ ತನ್ನ ವರದಿಯನ್ನು ಸಮರ್ಥಿಸಿಕೊಳ್ಳಲು ಪರಿಶ್ರಮ ಪಟ್ಟು ಗಳಿಸಿದ್ದ ಬಹಳಷ್ಟು ಜ್ಞಾನ ಅವರಲ್ಲಿತ್ತು. ಪ್ರತಿ ಬಾರಿಯೂ ವಾರಣಾಸಿಗೆ ಭೇಟಿ ನೀಡಿದಾಗ ಅವರು ಪುಸ್ತಕಗಳ ಹೊರೆಯೊಂದಿಗೆ ಮರಳುತ್ತಿದ್ದರು. ಗೂಗಲ್ ದಿನಗಳಿಗೆ ಮುನ್ನ ಅವರು ವರದಿ ಮಾಡಲು ತೆರಳುವಾಗ ತನ್ನೊಂದಿಗೆ ಪುಸ್ತಕಗಳನ್ನು ಹೊತ್ತೊಯ್ಯುತ್ತಿದ್ದರು.
 
ಶಿಸ್ತನ್ನು ಹೊಂದಿರುವಂತೆ ಅವರು ಗಟ್ಟಿ ನಿಲುವನ್ನೂ ಹೊಂದಿದ್ದರು.ಅವರು ಹಲವೊಮ್ಮೆ ‘ಇಲ್ಲ’ಎಂದು ಹೇಳುತ್ತಿದ್ದರು ಮತ್ತು ಎಲ್ಲದಕ್ಕೂ ‘ಹೌದು’ಎನ್ನುವ ವರದಿಗಾರನಾಗಿರಲಿಲ್ಲ. ಕಮಾಲ್ ಹೌದು ಎಂದು ಹೇಳಿದರೆ ಸುದ್ದಿಮನೆಯಲ್ಲಿನ ಯಾರಾದರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಅವರು ಸಾಂದರ್ಭಿಕವಾಗಿ ಅಥವಾ ಮೊಂಡುತನದಿಂದ ಅದನ್ನು ಹೇಳುತ್ತಿರಲಿಲ್ಲ,ಆದರೆ ಕಥನವೊಂದನ್ನು ಹೇಳದಿರುವ ಹಿಂದಿನ ಕಾರಣವನ್ನು ವಿವರವಾಗಿ ತಿಳಿಸುತ್ತಿದ್ದರು. ಹಾಗೆ ಮಾಡುವಾಗ ಕಮಾಲ್ ಅದು ಅನುಭವಿ ಸಂಪಾದಕರಾಗಿರಲಿ ಅಥವಾ ಹೊಸ ವರದಿಗಾರನಾಗಿರಲಿ,ಯಾರೂ ಮರೆಯಬಾರದ ನೀತಿಯನ್ನು ತನ್ನ ಸುತ್ತಲಿದ್ದವರಿಗೆ ನೆನಪಿಸುತ್ತಿದ್ದರು. 

ಅದು,ವರದಿಗಾರ ಒಳ್ಳೆಯ ಕಾರಣಗಳಿಂದ ‘ಇಲ್ಲ ’ಎಂದು ಹೇಳಿದಷ್ಟೂ ಆತ ದುರ್ಬಲ ಮತ್ತು ನಿಖರವಲ್ಲದ ವರದಿಗಾರಿಕೆಯಿಂದ ತನ್ನ ಸಂಸ್ಥೆಯನ್ನು ಅಷ್ಟೇ ಹೆಚ್ಚಾಗಿ ರಕ್ಷಿಸುತ್ತಿರುತ್ತಾನೆ ಎನ್ನುವುದು.

ಇನ್ನೋರ್ವ ಕಮಾಲ್ ಖಾನ್ ಇನ್ನೆಂದಿಗೂ ಇರುವುದಿಲ್ಲ. ಏಕೆಂದರೆ ಯಾರಾದರೂ ಕಮಾಲ್ ಖಾನ್ ಆಗುವ ಪ್ರಕ್ರಿಯೆಯನ್ನು ಪುನರಾವರ್ತಿಸುವ ನೈತಿಕ ಬಲವನ್ನು ಈ ದೇಶವು ಕಳೆದುಕೊಂಡಿದೆ. ಕಮಾಲ್‌ರನ್ನು ಮೆಚ್ಚುವ ಅಸಂಖ್ಯಾತ ಪತ್ರಿಕೋದ್ಯಮ ಸಂಸ್ಥೆಗಳು ಈ ದೇಶದಲ್ಲಿದ್ದರೂ,ಅವರಂತೆಯೇ ಆಗಬಯಸುವ ವರದಿಗಾರರಿದ್ದರೂ ಅವರನ್ನು ಸರಿಯಾಗಿ ಗ್ರಹಿಸಲು ಬೆನ್ನುಮೂಳೆಯನ್ನು ಪತ್ರಿಕೋದ್ಯಮ ಸಂಸ್ಥೆಗಳು ಉಳಿಸಿಕೊಂಡಿಲ್ಲ.

ಕಮಾಲ್ ಖಾನ್ ಎನ್‌ಡಿಟಿವಿಯ ತಾರೆಯಾಗಿದ್ದರು. ಅವರ ಮಾತುಗಳು ಪ್ರಶಾಂತತೆ ಮತ್ತು ಅನುಗ್ರಹದೊಂದಿಗೆ ಅನುರಣಿಸುತ್ತಲೇ ಇರುತ್ತವೆ.

ಅಗಲಿದ ತಮ್ಮ ಸಹೋದ್ಯೋಗಿಯ ಕುರಿತು ರವೀಶ್‌ ಕುಮಾರ್‌ ರವರು ಜನವರಿ 14ರ ಪ್ರೈಮ್‌ ಟೈಮ್‌ ನಲ್ಲಿ ನಡೆಸಿದ ಕಾರ್ಯಕ್ರಮದ ವೀಡಿಯೊ ಇಲ್ಲಿದೆ...

ಕೃಪೆ: Ndtv.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)