ಅಂತಾರಾಷ್ಟ್ರೀಯ
ಹಿಂದುತ್ವ ರಾಜಕಾರಣ, ಭಾರತದ ಏಕಪಕ್ಷೀಯ ಕ್ರಮಗಳಿಂದ ದ್ವಿಪಕ್ಷೀಯ ಸಂಬಂಧಕ್ಕೆ ಅಡ್ಡಿ: ಪಾಕಿಸ್ತಾನ

ಇಸ್ಲಾಮಾಬಾದ್, ಜ.15: ಭಾರತದ ಹಿಂದುತ್ವ ರಾಜಕಾರಣ ಮತ್ತು ಇತ್ಯರ್ಥವಾಗದ ವಿಷಯಗಳ ಬಗ್ಗೆ ಏಕಪಕ್ಷೀಯ ಕ್ರಮಗಳು ದ್ವಿಪಕ್ಷೀಯ ಸಂಬಂಧಕ್ಕೆ ಅಡ್ಡಿಯಾಗಿವೆ ಎಂದು ಪಾಕಿಸ್ತಾನವು ತನ್ನ ಪ್ರಪ್ರಥಮ ರಾಷ್ಟ್ರೀಯ ಭದ್ರತಾ ಕಾರ್ಯನೀತಿಯಲ್ಲಿ ಉಲ್ಲೇಖಿಸಿದೆ.
‘ಬದಲಾಗುತ್ತಿರುವ ವಿಶ್ವದಲ್ಲಿ ವಿದೇಶಿ ನೀತಿ’ ಎಂಬ ಶೀರ್ಷಿಕೆಯ ರಾಷ್ಟ್ರೀಯ ಭದ್ರತಾ ಕಾರ್ಯನೀತಿಯ ದಾಖಲೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಬಿಡುಗಡೆಗೊಳಿಸಿದ್ದರು. ಈ ದಾಖಲೆಯಲ್ಲಿ ಭಾರತದ ಹೆಸರು ಕನಿಷ್ಟ 16 ಬಾರಿ ಮತ್ತು ಕಾಶ್ಮೀರದ ಹೆಸರು 113 ಬಾರಿ ಉಲ್ಲೇಖಿಸಲ್ಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ಯರ್ಥಕ್ಕೆ ಬಾಕಿ ಇರುವ ವಿಷಯಗಳಿಗೆ ಸಂಬಂಧಿಸಿ ಏಕಪಕ್ಷೀಯ ನೀತಿ ಕ್ರಮಗಳನ್ನು ಅನುಸರಿಸುವುದು ಪ್ರಾದೇಶಿಕ ಸ್ಥಿರತೆಯ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.
ಜಮ್ಮು-ಕಾಶ್ಮೀರ ವಿವಾದಕ್ಕೆ ನ್ಯಾಯಸಮ್ಮತ ಮತ್ತು ಶಾಂತಿಯುತ ಪರಿಹಾರ ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧದ ಸಾರವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದಂತೆ ಅಂತರಾಷ್ಟ್ರೀಯ ಸಮುದಾಯ ಖಾತರಿಪಡಿಸಿದ ಸ್ವಯಂ ನಿರ್ಣಯದ ಹಕ್ಕನ್ನು ಕಾಶ್ಮೀರದ ಜನತೆಗೆ ಖಾತರಿಪಡಿಸುವವರೆಗೆ ಪಾಕಿಸ್ತಾನವು ಅವರಿಗೆ ನೈತಿಕ, ರಾಜತಾಂತ್ರಿಕ, ರಾಜಕೀಯ ಮತ್ತು ಕಾನೂನು ನೆರವು ಒದಗಿಸಲಿದೆ ಎಂದು ದಾಖಲೆಯಲ್ಲಿ ಹೇಳಲಾಗಿದೆ.
ದೇಶದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವ ಸಂಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ, ಭಯೋತ್ಪಾದನೆಯ ಉದ್ಯೋಗವು ಕೆಲವರಿಗೆ ಆದ್ಯತೆಯ ನೀತಿಯಾಗಿದೆ ಎಂದು ಕಾರ್ಯನೀತಿಯಲ್ಲಿ ಗುರುತಿಸಲಾಗಿದೆ. ‘ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿ ಜಮ್ಮು-ಕಾಶ್ಮೀರ ಪ್ರಮುಖ ವಿಷಯವಾಗಿದೆ. ಸರಿಯಾದುದನ್ನೇ ಮಾಡಿ ಮತ್ತು ನಮ್ಮ ಜನತೆಯ ಅಭಿವೃದ್ಧಿಗೆ ನೆರವಾಗಲು ಪ್ರಾದೇಶಿಕ ಸಂಪರ್ಕದ ಪ್ರಯೋಜನ ಪಡೆಯಿರಿ. ನೀವು ಸರಿಯಾದ ಕೆಲಸವನ್ನು ಮಾಡಲು ಬಯಸದಿದ್ದರೆ ಅದರಿಂದ ಇಡೀ ವಲಯಕ್ಕೆ ನಷ್ಟವಾಗುತ್ತದೆ’ ಎಂಬ ಸಂದೇಶವನ್ನು ಭಾರತಕ್ಕೆ ಈ ಕಾರ್ಯನೀತಿ ನೀಡುತ್ತದೆ’ ಎಂಬ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ