varthabharthi


ಅಂತಾರಾಷ್ಟ್ರೀಯ

ಮ್ಯಾನ್ಮಾರ್: ಆಂಗ್ ಸೂಕಿ ವಿರುದ್ಧ 5 ಹೊಸ ಭ್ರಷ್ಟಾಚಾರ ಪ್ರಕರಣ ದಾಖಲು

ವಾರ್ತಾ ಭಾರತಿ : 15 Jan, 2022

photo: twitter (@2021SaveMyanmar)

ಯಾಂಗಾನ್, ಜ.15: ಮ್ಯಾನ್ಮಾರ್ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧ ಅಲ್ಲಿನ ಸೇನಾಡಳಿತ ಭ್ರಷ್ಟಾಚಾರಕ್ಕೆ ಸಂಬಂಧಿಸಿದ 5 ಹೊಸ ಪ್ರಕರಣಗಳನ್ನು ದಾಖಲಿಸಿದೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್ ಖರೀದಿಸಿ ಬಾಡಿಗೆ ನೀಡಲು ಅನುಮತಿ ನೀಡಿರುವ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ‌

ಕಳೆದ ಫೆಬ್ರವರಿಯಲ್ಲಿ ಸೇನೆಯ ಕ್ಷಿಪ್ರಕ್ರಾಂತಿಯ ಬಳಿಕ ಬಂಧನದಲ್ಲಿರುವ ಸೂಕಿ ವಿರುದ್ಧ ಈಗಾಗಲೇ ಇತರ 5 ಭ್ರಷ್ಟಾಚಾರ ಪ್ರಕರಣ ದಾಖಲಾಗಿದ್ದು ಆರೋಪ ಸಾಬೀತಾದರೆ ಪ್ರತೀ ಪ್ರಕರಣದಲ್ಲೂ 15 ವರ್ಷದವರೆಗೆ ಜೈಲುಶಿಕ್ಷೆಯ ಜತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ. ವಾಕಿಟಾಕಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಬಳಕೆ ಮಾಡಿದ ಪ್ರಕರಣ ಹಾಗೂ ಕೊರೋನ ಸೋಂಕಿನ ನಿರ್ಬಂಧಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಸೂಕಿಗೆ 6 ವರ್ಷದ ಜೈಲುಶಿಕ್ಷೆಯಾಗಿದೆ. 

ಆಡಳಿತವನ್ನು ಕೈವಶ ಮಾಡಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಹಾಗೂ ಸೂಕಿ ಮತ್ತೊಮ್ಮೆ ಅಧಿಕಾರ ಪಡೆಯದಂತೆ ತಡೆಯುವ ಉದ್ದೇಶದಿಂದ ಈ ಪ್ರಕರಣಗಣನ್ನು ದಾಖಲಿಸಲಾಗಿದೆ ಎಂದು ಅವರ ಬೆಂಬಲಿಗರು ಮತ್ತು ಮಾನವ ಹಕ್ಕು ಸಂಘಟನೆಗಳು ಪ್ರತಿಪಾದಿಸಿವೆ. ಆದರೆ ಈ ಟೀಕೆಯನ್ನು ತಿರಸ್ಕರಿಸಿರುವ ಸೇನಾಡಳಿತ ‘ಯಾರೂ ಕೂಡಾ ಕಾನೂನಿಗಿಂತ ಮಿಗಿಲಲ್ಲ. ಸೂಕಿ ವಿರುದ್ಧದ ಆರೋಪಗಳನ್ನೂ ಕಾನೂನಿಗೆ ಅನುಸಾರವಾಗಿಯೇ ಇತ್ಯರ್ಥಪಡಿಸಲಾಗುವುದು ಎಂದು ಸರಕಾರದ ವಕ್ತಾರ ಮೇಜರ್ ಜನರಲ್ ಝಾವೊ ಮಿನ್ಟುನ್ ಹೇಳಿದ್ದಾರೆ. 

ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದುಕೊಂಡ ಪ್ರಕರಣದಲ್ಲಿ ಸೂಕಿ ಹಾಗೂ ಮಾಜಿ ಅಧ್ಯಕ್ಷ ವಿನ್ ಮಿಂಟ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಗ್ಲೋಬಲ್ ನ್ಯೂಲೈಟ್ ಕಳೆದ ಡಿಸೆಂಬರ್ನಲ್ಲಿ ವರದಿ ಮಾಡಿತ್ತು. ಇವರಿಬ್ಬರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಹಣಕಾಸಿನ ನಿಯಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿ ಹೆಲಿಕಾಪ್ಟರ್ ಅನ್ನು ಬಾಡಿಗೆ ಪಡೆಯಲು ಮತ್ತು ಖರೀದಿಸಲು ಅನುಮತಿ ನೀಡುವ ಮೂಲಕ ಸರಕಾರದ ಖಜಾನೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಆಯೋಗದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆ ವರದಿ ಮಾಡಿತ್ತು. 

ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ 2020ರ ನವೆಂಬರ್ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಎರಡನೇ ಬಾರಿಗೆ ಅಧಿಕಾರಕ್ಕೇರಿತ್ತು. ಆದರೆ ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಸೇನೆ, 2021ರ ಫೆಬ್ರವರಿಯಲ್ಲಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಸರಕಾರವನ್ನು ವಜಾಗೊಳಿಸಿ ಅಧಿಕಾರ ಕೈವಶ ಮಾಡಿಕೊಂಡಿತ್ತು. ಚುನಾವಣೆಯಲ್ಲಿ ಯಾವುದೇ ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಸ್ವತಂತ್ರ ಚುನಾವಣಾ ವೀಕ್ಷಕ ತಂಡ ವರದಿ ಮಾಡಿದ್ದರೂ ಇದನ್ನು ಒಪ್ಪಿಕೊಳ್ಳಲು ಸೇನೆ ನಿರಾಕರಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)