varthabharthi


ಅಂತಾರಾಷ್ಟ್ರೀಯ

ಇಥಿಯೋಪಿಯಾ: ಟಿಗ್ರೆ ವಲಯದ ಮೇಲಿನ ವಾಯುದಾಳಿಗೆ ವಿಶ್ವಸಂಸ್ಥೆ ಖಂಡನೆ

ವಾರ್ತಾ ಭಾರತಿ : 15 Jan, 2022

ನ್ಯೂಯಾರ್ಕ್, ಜ.15: ಇಥಿಯೋಪಿಯಾದ ಟಿಗ್ರೆ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಹಲವಾರು ವಾಯುದಾಳಿ ಪ್ರಕರಣಗಳಲ್ಲಿ ಕನಿಷ್ಟ 108 ನಾಗರಿಕರು ಮೃತಪಟ್ಟಿರುವ ವರದಿ ತೀವ್ರ ಆತಂಕಕಾರಿಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಹೇಳಿದೆ.

ಖಾಸಗಿ ಮಿನಿಬಸ್, ವಿಮಾನ ನಿಲ್ದಾಣ ಮತ್ತು ನಿರಾಶ್ರಿತರ ಶಿಬಿರದ ಮೇಲೆ ನಡೆದಿರುವ ದಾಳಿಯನ್ನು ವಿಶ್ವಸಂಸ್ಥೆ ಮಾನವಹಕ್ಕು ಆಯುಕ್ತರ ಕಚೇರಿಯ ವಕ್ತಾರೆ ಲಿರ್ ಥ್ರೊಸೆಲ್ ಖಂಡಿಸಿದ್ದಾರೆ. ನಿರಾಶ್ರಿತರ ಶಿಬಿರದ ಮೇಲಿನ ದಾಳಿಯಲ್ಲಿ ಕನಿಷ್ಟ 59 ಮಂದಿ ಬಲಿಯಾಗಿದ್ದರು. 2022ರ ಜನವರಿಯಿಂದ ಇದುವರೆಗೆ ಟಿಗ್ರೆ ವಲಯದಲ್ಲಿ ನಡೆದಿರುವ ಹಲವು ವಾಯುದಾಳಿಯಲ್ಲಿ ಕನಿಷ್ಟ 108 ನಾಗರಿಕರು ಮೃತಪಟ್ಟಿದ್ದು ಇತರ 75 ಮಂದಿ ಗಾಯಗೊಂಡಿರುವ ವರದಿ ಕಳವಳಕಾರಿಯಾಗಿದೆ.

ಇಥಿಯೋಪಿಯಾದ ಸರಕಾರ ಹಾಗೂ ಅದರ ಮಿತ್ರರಾಷ್ಟ್ರಗಳು ದಾಳಿಯ ಉದ್ದೇಶಿತ ಗುರಿಯನ್ನು ನಿಖರಪಡಿಸಿಕೊಂಡು, ಅಂತರಾಷ್ಟ್ರೀಯ ನಿಯಮಕ್ಕೆ ಅನುಸಾರವಾಗಿ ನಾಗರಿಕರ ರಕ್ಷಣೆಯನ್ನು ಖಾತರಿಗೊಳಿಸಬೇಕು. ವ್ಯತ್ಯಾಸ ಮತ್ತು ಅನುಪಾತದ ತತ್ವವನ್ನು ಗೌರವಿಸಲು ವಿಫಲವಾದರೆ ಅದು ಯುದ್ಧಾಪರಾಧವಾಗುತ್ತದೆ ಎಂದು ಥ್ರೊಸೆಲ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಈ ಮಧ್ಯೆ, ಟಿಗ್ರೆ ವಲಯದಲ್ಲಿ ಸಂಘರ್ಷ ಉಲ್ಬಣಿಸಿರುವುದರಿಂದ ವಿಶ್ವ ಸಂಸ್ಥೆಯ ಆಹಾರ ನೆರವಿನ ಉಪಕ್ರಮವನ್ನು ಟಿಗ್ರೆಯ ರಾಜಧಾನಿ ಮೆಕೆಲ್ಲೆಗೆ ತಲುಪಿಸಲು ಅಡ್ಡಿಯಾಗಿದೆ. ಜೀವರಕ್ಷಕ ಆಹಾರ ನೆರವಿನ ಉಪಕ್ರಮ ಸ್ಥಗಿತಗೊಳ್ಳುವ ಅಪಾಯದಲ್ಲಿದೆ . 14 ತಿಂಗಳ ಸಂಘರ್ಷದ ಬಳಿಕ ಇನ್ನಷ್ಟು ಜನ ಆಹಾರದ ತುರ್ತು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಆಹಾರದ ಕೊರತೆ, ಇಂಧನದ ಕೊರತೆ, ಸಂಪರ್ಕದ ಕೊರತೆಯಿಂದ ನಾವು ಭಾರೀ ಮಾನವೀಯ ಬಿಕ್ಕಟ್ಟಿನ ಅಂಚಿನಲ್ಲಿದ್ದೇವೆ ಎಂದು ವಿಶ್ವಸಂಸ್ಥೆ ಆಹಾರ ನೆರವು ಯೋಜನೆ(ಡಬ್ಲ್ಯೂಎಫ್ಪಿ)ಯ ವಕ್ತಾರ ಥಾಮ್ಸನ್ ಫಿರಿ ಹೇಳಿದ್ದಾರೆ.

ಇಥಿಯೋಪಿಯಾದ ಜನತೆ ಪಡುತ್ತಿರುವ ಸಂಕಟವನ್ನು ಕಂಡು ತೀವ್ರ ನೋವಾಗಿದೆ. ಮಾನವೀಯ ನೆರವಿನ ಅಗತ್ಯವಿರುವ ಎಲ್ಲರಿಗೂ ಸಾಧ್ಯವಾದಷ್ಟು ಬೇಗ ನೆರವು ಒದಗಿಸಬೇಕಾಗಿದೆ. ಈಗ ಮಾತುಕತೆ ಮತ್ತು ಸಂಧಾನದ ಸಮಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರಸ್ ಶುಕ್ರವಾರ ಹೇಳಿದ್ದರು. ಟಿಗ್ರೆ ಬಂಡುಗೋರರ ವಿರುದ್ಧದ 14 ತಿಂಗಳಾವಧಿಯ ಸಂಘರ್ಷದಲ್ಲಿ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಇಥಿಯೋಪಿಯಾ ಸರಕಾರ ಈ ಹಿಂದೆ ಹೇಳಿತ್ತು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)