ಮತಾಂತರ ಯಾಕೆ ತಪ್ಪು?
ಭಾಗ - 3
ಆಗಲಿ. ವಾದಕ್ಕೆ ಮತಾಂತರ ತಪ್ಪುಎಂದೇ ಭಾವಿಸೋಣ. ಭೈರಪ್ಪನವರು ಯಾವ ಅಂಕಿ-ಅಂಶಗಳ ಹಂಗೂ ಇಲ್ಲದೆ ದಿನಕ್ಕೆ ಐದು ಸಾವಿರ ಮತಾಂತರಗಳು ನಡೆಯುತ್ತಿವೆ ಎಂದು ಅಪ್ಪಣೆ ಕೊಡಿಸುತ್ತಾರೆ. ಅದನ್ನೂ ನಿಜವೆಂದು ತಕ್ಷಣಕ್ಕೆ ಭಾವಿಸೋಣ. ಈಗ ಈ ಮತಾಂತರ ವಿರೋಧಿಗಳೆಲ್ಲರಿಗೂ ನನ್ನದೊಂದು ಬಿನ್ನಹ. ಹೀಗೆ ಮತಾಂತರ ಸ್ವಾತಂತ್ರ ಹೊಂದಿರುವವರೆಲ್ಲರನ್ನೂ- ಏಕಕಾಲದಲ್ಲಿ ಹಿಂದೂ, ಮುಸ್ಲಿಂ, ಬೌದ್ಧ, ಕ್ರೈಸ್ತ, ಯಹೂದಿ, ಪಾರ್ಸಿ ಎಲ್ಲವೂ ಆದಂಥ ನಾನು ಹಾಗೂ ನನ್ನಂಥವರು- ಮರಳಿ ಹಿಂದೂಧರ್ಮದ ಬಾಗಿಲಿಗೆ ತಂದುಬಿಡಲು ತಯಾರಿದ್ದೇವೆ. ಆದರೆ ಒಂದೇ ಒಂದು ಷರತ್ತು:
ಹೀಗೆ ಮರಳಿ ಬರುವವರೆಲ್ಲರೂ, ಹಿಂದೂ ಚೌಕಟ್ಟಿನಲ್ಲಿ ತಮಗೆ ಇಷ್ಟವಾದ ಜಾತಿಯನ್ನು ಆರಿಸಿಕೊಳ್ಳಲು ಅವಕಾಶ ಕೊಡಬೇಕು. ಅಂದರೆ ಬ್ರಾಹ್ಮಣನಾಗ ಬಯಸುವವನಿಗೆ ಬ್ರಾಹ್ಮಣ ಜಾತಿ, ಸ್ಥಾನಮಾನ, ಆಸ್ತಿ ಅಂತಸ್ತು ಕಲ್ಪಿಸಬೇಕು ಅಥವಾ ಲಿಂಗಾಯತನೋ, ಒಕ್ಕಲಿಗನೋ ಆಗುವ ಆಸೆಯಿದ್ದರೆ ಅದಕ್ಕೆ ತಕ್ಕಂತೆ ಭೂಮಿಕಾಣಿ, ಸ್ಥಾನಮಾನ... ಇತ್ಯಾದಿ. ಈ ಹಿಂದುತ್ವವಾದಿಗಳು ಇದಿಷ್ಟಕ್ಕೆ ಅವಕಾಶ ಮಾಡಿಕೊಟ್ಟರೆ ಸಾಕು, ಎಲ್ಲ ಮತಾಂತರಿಗಳನ್ನೂ ಖಂಡಿತ ಮರಳಿ ಕರೆತರಬಹುದು.
ಒಪ್ಪಿಗೆಯೇ?
ಭೈರಪ್ಪನವರ ನಿರೀಕ್ಷೆ ಹೀಗಿರಲಾರದು. ಯಾಕೆಂದರೆ ಅವರು ಓಬೀರಾಯನ ಕಾಲದ ಹಿಂಸೆಯ ಪುರಾಣಗಳನ್ನೆಲ್ಲ ಬಿಚ್ಚಿ ತೆಗೆಯುವ ಉದ್ದೇಶ ಈಗಿನ ಹಿಂದೂ ಹಿಂಸಾಚಾರವನ್ನು ಸಮರ್ಥಿಸುವುದಷ್ಟೇ! ತಮ್ಮ ‘ಆವರಣ’ ಕಾದಂಬರಿಯಲ್ಲಿ ಮುಸ್ಲಿಮರನ್ನು ಬಲಿ ಹಾಕಿದ ನಂತರ ಅವರ ದೃಷ್ಟಿ ಈಗ ಕ್ರೈಸ್ತರ ಮೇಲೆ ಬಿದ್ದಿದೆ. ಅವರ ಮುಂದೆ ನಿಂತು, ಕ್ರೈಸ್ತರಿಂದ ಭಾರತೀಯ ಸಮಾಜಕ್ಕೆ ಸಂದ ಕೊಡುಗೆಯನ್ನೆಲ್ಲ ಪಟ್ಟಿ ಮಾಡಿ ಒಪ್ಪಿಸುವುದರಿಂದ ಪ್ರಯೋಜನವೇನು? ಹೇಗಿದ್ದರೂ ಕುರುಡರಿಗೆ ಯಾವ ಬಣ್ಣ ಕಾಣಿಸಲು ಸಾಧ್ಯ?
ಭೈರಪ್ಪನವರ ಬರಹದ ಒಟ್ಟು ವಾದವೇನೆಂದರೆ- ಮತಾಂತರಕ್ಕೆ ಒಪ್ಪದವರಿಗೆ ಕೊಡುತ್ತಿದ್ದ ಕ್ರೂರ ಹಿಂಸೆ ಮತ್ತು ದೇವಾಲಯ ನಾಶಗಳಲ್ಲಿ ಈ ಕ್ರೈಸ್ತರಿಗೂ ಭಾರತದಲ್ಲಿ ಇದೇ ಕೆಲಸ ಮಾಡಿದ ಮುಸಲ್ಮಾನ ದೊರೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ.... ಸರಿ, ಮತಾಂತರಗಳ ಪ್ರಕರಣಗಳು ಈಗಲೂ ಅಷ್ಟೇ ರಕ್ತಸಿಕ್ತವಾಗಿವೆಯೇ? ಈ ಪ್ರಶ್ನೆಯಲ್ಲಿ ಭೈರಪ್ಪನವರಿಗೆ ಆಸಕ್ತಿಯಿಲ್ಲ. ಅವರು ಅಂತಿಮವಾಗಿ ಹೇಳುವುದು:
ಪ್ರಜಾಪ್ರಭುತ್ವಾತ್ಮಕವಾಗಿ, ಕಾನೂನುಸಮ್ಮತವಾದ ವಿಧಾನಗಳಿಂದ ಮತಾಂತರದ ಪಿಡುಗನ್ನು ತಡೆಯುವುದು ಸಾಧ್ಯವಿಲ್ಲವೆಂಬ ಸ್ಥಿತಿಯಲ್ಲಿ ಕೆಲವರಾದರೂ ಹತಾಶರು ಹಿಂಸಾಮಾರ್ಗಕ್ಕೆ ಇಳಿದು ಹಿಂಸಾ ಮಾರ್ಗದ ಪರಿಣಾಮದಿಂದ ತಪ್ಪಿಸಿಕೊಳ್ಳಲು ಭೂಗತ ಮಾರ್ಗವನ್ನು ಅನುಸರಿಸಿದರೆ ಅದಕ್ಕೆ ನೈತಿಕ ಹೊಣೆ ಯಾರದು?.... ಕೆಲವು ವರ್ಷಗಳ ಹಿಂದೆ ಒಡಿಶಾ ಗಲಭೆಗಳ ಸಮಯದಲ್ಲಿ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಹೃದಯ ವಿದ್ರಾವಕ ವಿವರಗಳನ್ನು ಮೀನಾ ಎಂಬ ಕ್ರೈಸ್ತ ಸನ್ಯಾಸಿನಿ ಪತ್ರಿಕೆಗಳ ಮುಂದೆ ತೋಡಿಕೊಂಡರು. ದೂರು ಕೊಡಲು ಹೋದರೆ ಪೊಲೀಸರು ದಾಖಲಿಸುವುದಿಲ್ಲ. ರಾಜಕಾರಣಿಗಳು ಕಿವಿಗೊಡಲಿಲ್ಲ. ಅವರೆಲ್ಲ ದುಷ್ಕರ್ಮಿಗಳೊಂದಿಗೆ ಶಾಮೀಲಾಗಿರುವುದರಿಂದ ತನ್ನ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಮೊರೆಯಿಟ್ಟರು. ಅಷ್ಟೆಲ್ಲ ದುರಾಕ್ರಮಣವನ್ನು ಹಾದುಬಂದ ಆಕೆಯ ಮನಃಸ್ಥಿತಿ ಈಗ ಹೇಗಿರಬಹುದೆಂದು ಊಹಿಸುವುದು ಕಷ್ಟವಾದರೂ ಪತ್ರಿಕೆಯಲ್ಲಿ ಬಂದ ಅಲ್ಪವಿವರಗಳೇ ಮನ ಕಲಕುವಂತಿವೆ:
‘‘...ಕೇಡಿಗರು ನನ್ನನ್ನು ಮನೆಯ ಜಗಲಿಯೊಂದಕ್ಕೆ ಎಳೆದು ತಂದು ಹಾಕಿದರು. ಅಲ್ಲಿ ಗಾಜಿನ ಚೂರುಗಳು ಬಿದ್ದಿದ್ದವು. ನನ್ನನ್ನು ಅದರ ಮೇಲೇ ಕೆಡವಿದರು. ನನ್ನ ಸೀರೆ ಎಳೆದು ಬಿಸಾಕಿದರು. ಒಬ್ಬ ನನ್ನ ಬಲಗೈ ಮೇಲೆ ನಿಂತರೆ, ಇನ್ನೊಬ್ಬ ನನ್ನ ಎಡಗೈ ಮೇಲೆ ನಿಂತ. ಮೂರನೆಯವನು ಅತ್ಯಾಚಾರಕ್ಕೆ ತೊಡಗಿದ....’’
ಇದು- ಭೈರಪ್ಪನವರ ಪ್ರಕಾರ- ನಮ್ಮ ದೇಶದ ಸಂಸ್ಕೃತಿ ರಕ್ಷಣೆಗೆ ಕೆಲವು ಹತಾಶ ಯುವಕರು ತಾವಾಗಿ ಹುಡುಕಿಕೊಂಡ ಮಾರ್ಗ! ಬಹುಶಃ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆಯ ಮೂಲಕ ಸಾಧಿಸಿಕೊಂಡ ಆಧ್ಯಾತ್ಮಿಕ ಬೆಳಕು ಇಂತಹ ಕೃತ್ಯಗಳಿಗೆ ಪ್ರೇರಣೆಯಾಗಿರಬೇಕು! ಹೇಗೇ ಇರಲಿ, ಈ ಅಧಾರ್ಮಿಕ ಮೃಗೀಯತೆಯ ಸಮರ್ಥನೆಗಾಗಿ ಭೈರಪ್ಪ ಯಾವ ಅಳುಕು, ಪಶ್ಚಾತ್ತಾಪಗಳಿಲ್ಲದೆ ಮಾರುದ್ದ ಬರೆಯುತ್ತಾರೆ.
ಭೈರಪ್ಪನವರ ನೀತಿ ತತ್ವಗಳೇನೇ ಇರಲಿ. ಈವರೆಗೆ ಅವರೆಂದೂ ರಾಜಕೀಯ ಪಕ್ಷ/ ಸಂಘಟನೆಯೊಂದರ ವಕ್ತಾರರಾಗಿ ವರ್ತಿಸಿದ್ದಿಲ್ಲ, ಬರೆದಿದ್ದಿಲ್ಲ. ಆದರೆ ಈಗ ಹಿಂದೂವಾದಿಗಳ ಮುಖವಾಣಿಯಾಗಿ, ಅವರ ಪಾಪಕೃತ್ಯಗಳ ಸಮರ್ಥಕರೂ ಆಗಿಬಿಟ್ಟಿದ್ದಾರೆ. ಅಂತಹ ದೊಡ್ಡ ಜನಪ್ರಿಯ ಲೇಖಕನಿಗೆ ಇಂತಹ ದುರವಸ್ಥೆಯೇ?!
ಈ ಹಾದಿಯಲ್ಲಿ ಅವರು ಹಿಂದೂಧರ್ಮವನ್ನು ಅಧ್ಯಾತ್ಮದ ಉತ್ತುಂಗ ಶಿಖರದಲ್ಲಿ ಕೂರಿಸುತ್ತಾರೆ:
(ಮತಪ್ರಚಾರದಿಂದ) ಯಾವ ಅಧ್ಯಾತ್ಮ ಸಾಧನೆಯಾಗುತ್ತದೆ? ಭಾರತೀಯರಿಗೆ ಇದು ಅರ್ಥವಾಗದ ಸಮಸ್ಯೆ. ಏಕೆಂದರೆ ಭಾರತೀಯರಿಗೆ ಅಧ್ಯಾತ್ಮವೆಂದರೆ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆ. ತನ್ನೊಳಗೆ ಬೆಳಕು ಸಾಧಿಸುವ ಮುನ್ನ ಅನ್ಯರಿಗೆ ಉಪದೇಶ ಮಾಡುವ ಅಧಿಕಾರವಿರುವುದಿಲ್ಲ. ಉಪದೇಶ ಮಾಡುವುದಾದರೂ ಏನನ್ನು? ಅಂತರ್ಮುಖಿಯಾಗು. ನಿನ್ನನ್ನು ನೀನು ಅರಿ. ಧರ್ಮವೆಂದರೆ ಈ ಅರಿವು. ಅದನ್ನು ವಿವರಿಸುವ ರೀತಿಗೆ ಜಿಜ್ಞಾಸೆ ಎಂದು ಹೆಸರು. ಆದರೆ ಕ್ರೈಸ್ತ ಮತದ ತಿರುಳಾಗಲಿ, ರೀತಿಯಾಗಲಿ ಅದಲ್ಲ...
ಎಂತಹ ರಮ್ಯ ಮನೋಹರ ಚಿತ್ರಣ!
ಇದೇ ಸೊಲ್ಲಿನಲ್ಲಿ ಅವರು ಬೌದ್ಧಧರ್ಮವೂ ಸೇರಿದಂತೆ ಉಳಿದೆಲ್ಲ ಬಂಡಾಯ ಧರ್ಮ ಪಂಥಗಳೂ ಹಿಂದೂಧರ್ಮದ ಶಾಖೆಗಳೇ ಎಂದು ನಂಬಿಸಹೊರಡುತ್ತಾರೆ. ಏನಾದರೂ ವ್ಯತ್ಯಾಸಗಳು ಕಂಡರೆ, ‘‘ಅವೆಲ್ಲ ಬ್ರಿಟಿಷರ ಹುನ್ನಾರದ ಫಲ! ಮೆಕಾಲೆಯ ವಿದ್ಯಾಭ್ಯಾಸ ನೀತಿ, ಆರ್ಯರು ಹೊರಗಿನಿಂದ ಬಂದವರೆಂಬ ಸಿದ್ಧಾಂತ, ಭಾರತದ ಇತಿಹಾಸ ವ್ಯಾಖ್ಯಾನ, ಬೌದ್ಧರು, ಜೈನರು, ಸಿಖ್ಖರು, ಹಿಂದೂಗಳಲ್ಲವೆಂಬ ಸಿದ್ಧಾಂತ, ಆರ್ಯ ದ್ರಾವಿಡ ಸಿದ್ಧಾಂತ, ಮುಸ್ಲಿಮರ ಪ್ರತ್ಯೇಕತಾವಾದದ ಪೋಷಣೆ ಮೊದಲಾದ ವಿಘಟನಾತ್ಮಕ ವ್ಯಾಖ್ಯಾನ...’’- ಇವೆಲ್ಲವೂ ಬ್ರಿಟಿಷರ ಅಪಪ್ರಚಾರ. ಒಟ್ಟಿನಲ್ಲಿ ‘ನಾವೆಲ್ಲ ಅಣ್ಣತಮ್ಮಂದಿರು, ಜಗಳವಾಡಿದರೂ ಅದೆಲ್ಲ ಬಾಗಿಲು ಹಾಕಿಕೊಂಡ ಮನೆಯೊಳಗೆ’ ಎಂಬ ಧಾಟಿ. ಅದಕ್ಕೆ ತಕ್ಕುದಾಗಿ ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಎಂಬ ವೇದೋಕ್ತಿ ಉಲ್ಲೇಖಿಸಿ ಅದೇ ಭಾರತೀಯ ಆಧ್ಯಾತ್ಮಿಕ ಪರಂಪರೆ ಎನ್ನುತ್ತಾರೆ. (‘ಸತ್ ಎಂಬುದು ಒಂದೇ, ಬ್ರಾಹ್ಮಣರು ಅದನ್ನು ಹಲವು ವಿಧಗಳಲ್ಲಿ ಹೇಳುತ್ತಾರೆ’ ಎಂಬ ಅರ್ಥದ ಉಕ್ತಿಯನ್ನು ‘ತಿಳಿದವರು ಹಲವು ವಿಧಗಳಲ್ಲಿ ಹೇಳುತ್ತಾರೆ’ ಎಂದು ಮಾರ್ಪಡಿಸುತ್ತಾರೆ ಬೇರೆ).
ಭೈರಪ್ಪನವರು ಹಿಂದೂಧರ್ಮದ ಧಾರ್ಮಿಕ ವೈಶಾಲ್ಯಕ್ಕೆ ಕೊಡುವ ಇನ್ನೊಂದು ಉದಾಹರಣೆ- ಸಿದ್ದಗಂಗೆ ಸ್ವಾಮಿಗಳದ್ದು: ಸಿದ್ದಗಂಗಾ ಸ್ವಾಮಿಗಳು ಸನ್ಯಾಸಿ ಧರ್ಮವಾದ ಭಿಕ್ಷಾಟನೆಯಿಂದ ದಿನಕ್ಕೆ ಮೂರು ನಾಲ್ಕು ಹಳ್ಳಿಗಳನ್ನು ಸುತ್ತಿ ದಾಸೋಹದ ಪ್ರಮಾಣವನ್ನು ಬೆಳೆಸಿದರು. ಎಲ್ಲ ಜಾತಿ ಎಲ್ಲ ಪಂಗಡಗಳ ಮಕ್ಕಳನ್ನೂ ಬೆಳೆಸಿದರು. ಮುಸಲ್ಮಾನ ಹುಡುಗರನ್ನೂ ಅಲ್ಲಿ ನೋಡಿದ್ದೇನೆ. ಯಾರಿಗೂ ಲಿಂಗಧಾರಣೆ ಮಾಡಿಲ್ಲ. ತುಮಕೂರಿನ ಮಠದ ಜಾತ್ಯತೀತ ಅನ್ನ/ ಜ್ಞಾನದಾಸೋಹದ ಬಗ್ಗೆ ಜಗತ್ತಿಗೇ ಗೊತ್ತಿದೆ. ಆದರೆ ಭೈರಪ್ಪನವರ ಈ ಉಲ್ಲೇಖದ ಹಿಂದೆ ಕಳ್ಳ ಜಾಣತನದ ಘಾಟು ಹೊಡೆಯುತ್ತಿಲ್ಲವೇ? ಕರ್ನಾಟಕದಲ್ಲೋ, ಭಾರತದಲ್ಲೋ ಈ ಪರಂಪರೆಯುಳ್ಳ ಒಂದಾದರೂ ಬ್ರಾಹ್ಮಣಮಠವಿದೆಯೇ? ಭೈರಪ್ಪನವರು, ಮುಸಲ್ಮಾನರು ಬೇಡ, ಯಾವುದೇ ಬ್ರಾಹ್ಮಣೇತರರನ್ನು ಸಮಾನವಾಗಿ ಕೂರಿಸಿಕೊಳ್ಳುವ ಅಂತಹ ಒಂದಾದರೂ ಬ್ರಾಹ್ಮಣಮಠದ ನಿದರ್ಶನ ಕೊಡಬಲ್ಲರೇ?
ಅವರು ಇಲ್ಲಿಗೂ ನಿಲ್ಲುವುದಿಲ್ಲ. ಇವರ ಹಿಂದುತ್ವದ ತತ್ವಕ್ಕೇ ಬಲಿಯಾಗಿ ಪ್ರಾಣ ತೆತ್ತ ಗಾಂಧೀಜಿ; ಭಾರತವನ್ನು ‘ಅಸ್ಪೃಶ್ಯ ನರಕ’ ಎಂದು ಕರೆದು ‘ಪೂಜಾರಿ, ಪುರೋಹಿತ ರನ್ನು ಒದ್ದೋಡಿಸು’ ಎಂದು ಕರೆ ನೀಡಿದ ವಿವೇಕಾನಂದ- ಇವರೆಲ್ಲರನ್ನೂ ನಿಗೂಢವಾಗಿ ಉಲ್ಲೇಖಿಸುತ್ತ ಭೈರಪ್ಪ, ತಮ್ಮ ತತ್ವದ ಪರವಾಗಿ ನೋಂದಾಯಿಸಿಕೊಂಡು ಬಿಡುತ್ತಾರೆ! ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ಮೋಸ ಎಂದರೆ ಒಂದು ಕಾಲದಲ್ಲಿ ಬುದ್ಧ ಹಾಗೂ ಆತನ ಧರ್ಮವನ್ನು ಹೀಗಳೆಯಲೆಂದೇ ‘ಸಾರ್ಥ’ ಕಾದಂಬರಿ ಬರೆದ ಭೈರಪ್ಪನವರೇ ಇಂದು ಬೌದ್ಧಧರ್ಮವನ್ನು ಬೋಧಿಸಿದ ಬುದ್ಧನು ಪ್ರವಾದಿಯಲ್ಲ, ಋಷಿ. ಉಪನಿಷತ್ ಯುಗದ ಧರ್ಮಜಿಜ್ಞಾಸೆಗೆ ತೊಡಗಿದ ಮಹರ್ಷಿ ಎಂದು ಅವನನ್ನೂ ತಮ್ಮ ಪಕ್ಷಕ್ಕೆ ಮತಾಂತರ ಮಾಡಿಕೊಂಡುಬಿಟ್ಟಿದ್ದಾರೆ!....