varthabharthi


ರಾಷ್ಟ್ರೀಯ

ನಮ್ಮ ಭೂಪ್ರದೇಶದ ಮೂಲಕ ಏಕಪಕ್ಷೀಯವಾಗಿ ರಸ್ತೆ ನಿರ್ಮಿಸುವುದನ್ನು ನಿಲ್ಲಿಸಬೇಕು: ಭಾರತಕ್ಕೆ ನೇಪಾಳ ಎಚ್ಚರಿಕೆ

ವಾರ್ತಾ ಭಾರತಿ : 17 Jan, 2022

Photo: Facebook

ಕಠ್ಮಂಡು,ಜ.17: ತನ್ನ ಪೂರ್ವ ಕಾಳಿ ನದಿ ಪ್ರದೇಶದಲ್ಲಿ ಏಕಪಕ್ಷೀಯವಾಗಿ ರಸ್ತೆಗಳ ನಿರ್ಮಾಣ ಮತ್ತು ವಿಸ್ತರಣೆಯನ್ನು ನಿಲ್ಲಿಸುವಂತೆ ನೇಪಾಳವು ಭಾರತಕ್ಕೆ ಸೂಚಿಸಿದೆ,ಆದರೆ ಈ ಬಗ್ಗೆ ಅದು ವಿಧ್ಯುಕ್ತ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸಿಲ್ಲ.

ನೇಪಾಳವು ತನ್ನದೆಂದು ಹೇಳಿಕೊಳ್ಳುತ್ತಿರುವ ಲಿಪುಲೇಖ್ ಪ್ರದೇಶದಲ್ಲಿ ರಸ್ತೆಗಳನ್ನು ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ ಬಳಿಕ ಅದರ ಈ ಹೇಳಿಕೆ ಹೊರಬಿದ್ದಿದೆ. ಡಿ.30ರಂದು ಉತ್ತರಾಖಂಡದ ಹಲ್ದವಾನಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ರಾಜ್ಯದ ಲಿಪುಲೇಖ್‌ನಲ್ಲಿ ನಿರ್ಮಿಸಲಾಗಿರುವ ರಸ್ತೆಯನ್ನು ತನ್ನ ಸರಕಾರವು ವಿಸ್ತರಿಸಲಿದೆ ಎಂದು ಪ್ರಕಟಿಸಿದ್ದರು.

ಕಾಳಿನದಿಯ ಪೂರ್ವದಲ್ಲಿರುವ ಲಿಂಪಿಯಾಧುರಾ,ಲಿಪುಲೇಖ್ ಮತ್ತು ಕಾಲಾಪಾನಿ ಸೇರಿದ ಪ್ರದೇಶಗಳು ನೇಪಾಳದ ಅಖಂಡ ಭಾಗವಾಗಿವೆ ಮತ್ತು ಅಲ್ಲಿ ಯಾವುದೇ ರಸ್ತೆಗಳ ನಿರ್ಮಾಣ ಮತ್ತು ವಿಸ್ತರಣೆಯನ್ನು ಭಾರತವು ನಿಲ್ಲಿಸಬೇಕು ಎಂದು ನೇಪಾಳದ ವಾರ್ತಾ ಮತ್ತು ಪ್ರಸಾರ ಸಚಿವ ಹಾಗೂ ಸಂಪುಟ ವಕ್ತಾರ ಜ್ಞಾನೇಂದ್ರ ಬಹಾದುರ್ ಕಾರ್ಕಿ ಅವರು ರವಿವಾರ ಇಲ್ಲಿ ಹೇಳಿದರು.

ನೇಪಾಳ ಮತ್ತು ಭಾರತದ ನಡುವಿನ ಯಾವುದೇ ಗಡಿ ವಿವಾದನ್ನು ಐತಿಹಾಸಿಕ ದಾಖಲೆಗಳು,ನಕ್ಷೆಗಳು ಮತ್ತು ದಾಖಲೆಗಳ ಆಧಾರದಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ನಿಜವಾದ ಆಶಯಕ್ಕೆ ಅನುಗುಣವಾಗಿ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಹಾಲಿ ನಡೆಯುತ್ತಿರುವ ನಿರ್ಮಾಣವು ಭಾರತೀಯ ಭೂಪ್ರದೇಶದಲ್ಲಿದೆ ಎಂದು ಶನಿವಾರ ಹೇಳಿದ್ದ ಭಾರತವು,ಯಾವುದೇ ವಿವಾದವನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದಿತ್ತು.

ಭಾರತ-ನೇಪಾಳ ನಡುವಿನ ಗಡಿ ವಿವಾದ ಕುರಿತು ನೇಪಾಳದಲ್ಲಿಯ ಇತ್ತೀಚಿನ ವರದಿಗಳು ಮತ್ತು ಹೇಳಿಕೆಗಳ ಕುರಿತು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಕಠ್ಮಂಡುವಿನಲ್ಲಿಯ ಭಾರತೀಯ ರಾಯಭಾರ ಕಚೇರಿಯು,ನೇಪಾಳದೊಂದಿಗೆ ತನ್ನ ಗಡಿಯ ಕುರಿತು ಭಾರತದ ನಿಲುವು ಚಿರಪರಿಚಿತ,ಸ್ಥಿರ ಮತ್ತು ನಿಸಂದಿಗ್ಧವಾಗಿದೆ ಮತ್ತು ಇದನ್ನು ನೇಪಾಳ ಸರಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)