varthabharthi


ಅಂತಾರಾಷ್ಟ್ರೀಯ

ಚೀನಾ: 2 ವರ್ಷದಲ್ಲೇ ಅತ್ಯಧಿಕ ಕೊರೋನ ಸೋಂಕು ಪ್ರಕರಣ ದಾಖಲು

ವಾರ್ತಾ ಭಾರತಿ : 17 Jan, 2022

ಬೀಜಿಂಗ್, ಜ.17: ಬೀಜಿಂಗ್ನಲ್ಲಿ ಆಯೋಜಿಸಲಾಗಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಕೇವಲ 3 ವಾರಗಳಿರುವಂತೆಯೇ ಚೀನಾದಲ್ಲಿ ಕೊರೋನ ಸೋಂಕು ಪ್ರಕರಣ ಉಲ್ಬಣಿಸಿದ್ದು 2020ರ ಮಾರ್ಚ್ ಬಳಿಕದ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

     ಸೋಮವಾರ ತಿಯಾಂಜಿನ್ ನಗರದಲ್ಲಿ 80, ಹೆನಾನ್ ಪ್ರಾಂತದಲ್ಲಿ 68, ಗ್ವಾಂಗ್‌ಡಾಂಗ್‌ನಲ್ಲಿ 9 ಪ್ರಕರಣ (ಇದರಲ್ಲಿ ಒಮೈಕ್ರಾನ್ ರೂಪಾಂತರಿ ಸೇರಿದೆ) ಸಹಿತ ಚೀನಾದಲ್ಲಿ ಸೋಮವಾರ 223 ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮಧ್ಯೆ, ಸೋಂಕು ಪ್ರಕರಣವನ್ನು ಶೂನ್ಯಮಟ್ಟಕ್ಕೆ ಇಳಿಸಲು ಕಟ್ಟುನಿಟ್ಟಿನ ನಿರ್ಭಂದ ಜಾರಿಗೊಳಿಸಿದ್ದರೂ ಬೀಜಿಂಗ್‌ನಲ್ಲಿ ಶನಿವಾರ ಒಮೈಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಈಗಾಗಲೇ ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಸ್ಥಳೀಯವಾಗಿ ಒಮೈಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿರುವುದರಿಂದ ಮತ್ತೆ ವಿಮಾನ ನಿಲ್ದಾಣದಲ್ಲಿ ಕಠಿಣ ನಿರ್ಬಂಧ ಕ್ರಮ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಬೀಜಿಂಗ್‌ನಲ್ಲಿ ಮನೆಯಿಂದ ಹೊರಹೋಗಬೇಕಿದ್ದರೆ ನೆಗೆಟಿವ್ ವರದಿ ಕಡ್ಡಾಯವಾಗಿದೆ. ನಗರ ಪ್ರವೇಶಿಸುವವರು ಕಡ್ಡಾಯವಾಗಿ ಸೋಂಕು ಪರೀಕ್ಷೆಗೆ ಒಳಪಡಬೇಕಿದೆ. ಬೀಜಿಂಗ್‌ನ ಕೆಲವು ಪ್ರವಾಸೀ ತಾಣಗಳನ್ನೂ ಮುಚ್ಚಲಾಗಿದೆ.

ಬೀಜಿಂಗ್‌ನಲ್ಲಿ ಮಹಿಳೆಯೊಬ್ಬರಲ್ಲಿ ಒಮೈಕ್ರಾನ್ ಸೋಂಕು ಪತ್ತೆಯಾಗಿದ್ದು ಈಕೆ ಮನೆಬಿಟ್ಟು ಹೊರಗೆ ಹೋಗಿರಲಿಲ್ಲ ಮತ್ತು ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಕೆನಡಾದಿಂದ ಈ ಮಹಿಳೆಗೆ ಬಂದ ಪತ್ರದ ಮೂಲಕ ವೈರಸ್ ಹರಡಿದೆ. ಇದೇ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಇತರ ಪತ್ರಗಳನ್ನೂ ಪರೀಕ್ಷೆ ನಡೆಸಿದಾಗ 5 ಪತ್ರದಲ್ಲಿ ವೈರಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)