ಆಹಾರ ಬೆಳೆಯಲ್ಲಿ ಕುಲಾಂತರಿ : ವೈವಿಧ್ಯ ನಾಶದ ಈ ಪರಿ!

ಬಿಟಿ ಬದನೆಯ ಕತೆ ಸರಕಾರಕ್ಕೆ ಮರೆತುಹೋಯಿತೇ? ಅದೆಷ್ಟು ಗಟ್ಟಿಯಾಗಿ 1990ರಲ್ಲಿ ಬದನೆಯಲ್ಲಿ ಕುಲಾಂತರಿಯನ್ನು ತರುವುದನ್ನು ರಾಜ್ಯದ ರೈತರು, ಜನಸಾಮಾನ್ಯರು, ಪ್ರಜ್ಞಾವಂತ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳನ್ನೊಳಗೊಂಡು ಎಲ್ಲರೂ ವಿರೋಧಿಸಿದ್ದರು ಎಂಬುದು ನೆನಪಿಲ್ಲವೇ? ಆಶ್ಚರ್ಯವಾಗುತ್ತದೆ.
ಕುಲಾಂತರಿ ವಿಚಾರ ಮತ್ತೊಮ್ಮೆ ನಮ್ಮ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಭಾರತದ ಪ್ರಾಧಿಕಾರ ತಲೆಯೊಳಗೆ ಹೊಕ್ಕಂತಿದೆ. ಯಾರಿಗಾದರೂ ಈ ಬಗ್ಗೆ ಅನುಮಾನ, ಪ್ರಶ್ನೆಗಳಿದ್ದರೆ ಕೇಳಬಹುದೆಂದು ಅದು ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ. ರೈತರಿಗಾಗಲೀ, ಜನಸಾಮಾನ್ಯರಿಗಾಗಲೀ ಅರಿವು, ಮಾಹಿತಿ ನೀಡುವ, ಅವರ ಅಭಿಪ್ರಾಯವನ್ನು ಪಡೆಯುವ ಪ್ರಶ್ನೆಯನ್ನೇ ಎತ್ತಿಲ್ಲ!
ಹಾಗಾದರೆ ಬಿಟಿ ಬದನೆಯ ಕತೆ ಅದಕ್ಕೆ ಮರೆತುಹೋಯಿತೇ? ಅದೆಷ್ಟು ಗಟ್ಟಿಯಾಗಿ 1990ರಲ್ಲಿ ಬದನೆಯಲ್ಲಿ ಕುಲಾಂತರಿಯನ್ನು ತರುವುದನ್ನು ರಾಜ್ಯದ ರೈತರು, ಜನಸಾಮಾನ್ಯರು, ಪ್ರಜ್ಞಾವಂತ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳನ್ನೊಳಗೊಂಡು ಎಲ್ಲರೂ ವಿರೋಧಿಸಿದ್ದರು ಎಂಬುದು ನೆನಪಿಲ್ಲವೇ? ಆಶ್ಚರ್ಯವಾಗುತ್ತದೆ.
ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಆಹಾರ ಬೆಳೆಗಳಲ್ಲಿ ಕುಲಾಂತರಿಯನ್ನು ತರಲೇಬೇಡಿ ಎಂದು ಬಲು ದೊಡ್ಡ ಹೋರಾಟ ನಡೆದಿತ್ತಾಗ.
ಏನಿದು ಕುಲಾಂತರಿ?
ಒಂದು ಜಾತಿಯ ಪ್ರಾಣಿ ಅಥವಾ ಸಸ್ಯದಲ್ಲಿ ಬೇರೆಯದೇ ಜಾತಿಯ ಪ್ರಾಣಿ ಅಥವಾ ಬ್ಯಾಕ್ಟೀರಿಯಾದ ವಂಶವಾಹಿಯನ್ನು ಸೇರಿಸಿ ಅದರ ಮೂಲಗುಣವನ್ನೇ ಬದಲಾಯಿಸಿಬಿಡುವ ತಂತ್ರಜ್ಞಾನವಿದು. ಜೆನೆಟಿಕಲಿ ಮಾಡಿಫೈಡ್ ಅಥವಾ ವಂಶವಾಹಿ ಬದಲಾವಣೆಯ ತಂತ್ರಜ್ಞಾನ ಎನ್ನುತ್ತಾರೆ. ಹಿಂದೆ 90ರ ದಶಕದಲ್ಲಿ ಹತ್ತಿಯಲ್ಲಿ ಕಾಯಿಕೊರಕ ಹುಳಕ್ಕೆ ಔಷಧವಾಗಿ ಬಿಟಿ ಹತ್ತಿಯನ್ನು ತಂದರು. ಆಗಲೂ ಕೂಡ ಬಹುವಾಗಿ ವಿರೋಧ ವ್ಯಕ್ತವಾಗಿತ್ತು. ಹತ್ತಿಯು ಮಾನವರು ತಿನ್ನುವ ಆಹಾರ ಬೆಳೆಯಲ್ಲ ಎಂದು ಎಲ್ಲರನ್ನೂ ಓಲೈಸಿ ಸರಕಾರವು ಬಿಟಿಗೆ ಅವಕಾಶ ನೀಡಿತ್ತು. ಇಂದು ಬಿಟಿ ಹತ್ತಿಯೆಂಬುದು ಹತ್ತಿಯ ಅನೇಕಾನೇಕ ತಳಿಗಳನ್ನೇ ನಾಶ ಮಾಡಿರುವುದನ್ನು ನಾವು ನೋಡಿದ್ದೇವೆ.
ಹತ್ತಿಯ ಜೀವಕೋಶದೊಳಗಿನ ವಂಶವಾಹಿಯನ್ನು ತೆಗೆದು ಅದರಲ್ಲಿ ‘ಬ್ಯಾಸಿಲಸ್ ಥುರೆಂಜಿಸ್’ ಎಂಬ ಬ್ಯಾಕ್ಟೀರಿಯಾದ ವಂಶವಾಹಿಯನ್ನು ಪ್ರಯೋಗ ಶಾಲೆಯಲ್ಲಿ ಸೇರಿಸಿ ಮಾಡಿದ್ದು ಬಿಟಿ ಹತ್ತಿಯ ಬೀಜಗಳು. ಕಾಯಿಕೊರಕ ಹುಳ ಬಂದಾಗ ಈ ಹತ್ತಿಗೆ ಕಚ್ಚಿದರೆ ಅವು ಸತ್ತೇಹೋಗುವಂತೆ ಮೈಯಲ್ಲೇ ವಿಷವನ್ನು ತುಂಬಿಕೊಂಡಿರುವ ವಿಷವಾಹಿ ಹತ್ತಿಗಳಿವು.ಕಾಯಿಕೊರಕ ರೋಗಕ್ಕೆ ಮಾತ್ರ ಔಷಧ ತುಂಬಿಕೊಂಡಿರುವ ಸಸ್ಯವಿದು.ಅದಕ್ಕೆ ಬೇರೆ ರೋಗ ಬಂದರೆ ಏನೂ ಮಾಡುವಂತಿಲ್ಲ. ಹಾಗೆಯೇ ಪೇಟೆಂಟ್ ಪಡೆದ ಕಂಪೆನಿಯಲ್ಲದೆ ಬೇರೆ ಕಂಪೆನಿಗಳು ಈ ಬೀಜ ಉತ್ಪಾದಿಸುವಂತಿಲ್ಲ. ಬಹುಮೊತ್ತದ ಹಣ ಕೊಟ್ಟು ಖರೀದಿಸಬೇಕಷ್ಟೇ. ಉದ್ದೇಶ ಸ್ಪಷ್ಟವಾಯಿತಲ್ಲ? ರೋಗಗಳಿಗೆ ಔಷಧ ಕಂಡುಹಿಡಿದು ರೈತರಿಗೆ ಸಹಾಯ ಮಾಡುವ ಉದ್ದೇಶವಲ್ಲವೇ ಅಲ್ಲ. ಬದಲಿಗೆ ಆ ಬೆಳೆಯ ಮೇಲೆ ಸ್ವಾಮಿತ್ವವನ್ನು ಪಡೆದು ಅದನ್ನು ಸಂಪೂರ್ಣ ತನ್ನದನ್ನಾಗಿಸಿಕೊಳ್ಳುವ ಹುನ್ನಾರ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳದ್ದು. ಹತ್ತಿಯನ್ನಂತೂ ಮನುಷ್ಯರು ತಿನ್ನುವುದಿಲ್ಲ ಎಂಬ ಕಾರಣ ಹೇಳಿ ಎಲ್ಲಾ ವಿರೋಧವನ್ನು ಬದಿಗಿರಿಸಿ ಬಿಟಿ ತಂದೇಬಿಟ್ಟರು. ವಿಪರೀತ ಬೆಲೆಯ ಬಿಟಿ ಹತ್ತಿ ಖರೀದಿಸಲು ಸಾಲಮಾಡಿ, ಅದು ಸ್ಥಳೀಯ ಹವಾಮಾನಕ್ಕೆ ಒಗ್ಗಿಕೊಳ್ಳಲಾಗದೆಯೋ, ಇನ್ನೊಂದು ರೋಗಕ್ಕೆ ಸಿಕ್ಕಿಯೋ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡ ರೈತರ ಕತೆಯೇ ಇದೆ. ಆದರೆ ಸರಕಾರ ಬುದ್ಧಿ ಕಲಿತಿಲ್ಲ. ರೈತರ ನಷ್ಟ, ಸಾವುಗಳಿಗೆ ತನ್ನ ಹೊಣೆಯನ್ನು ಪೂರ್ತಿ ನಿವಾರಿಸಿಕೊಂಡು ಬಿಟಿ ಬದನೆಯನ್ನು ತರಲು ಮುಂದಾಯಿತು. ದೇಶದ ತುಂಬೆಲ್ಲ ನೂರಾರು ನಮೂನೆಯ ಬದನೆಕಾಯಿಗಳನ್ನು ಬೆಳೆಯುವ ನಮ್ಮಲ್ಲಿ ಬಿಟಿ ಬದನೆ ಬೆಳೆಸಿ, ಬದನೆಯನ್ನೆಲ್ಲ ತಾನು ಬಳಿದುಕೊಳ್ಳಲು ಕಂಪೆನಿಯೊಂದು ಹವಣಿಸಿತು. ಆದರೆ ಜನರು ಬಿಡಲಿಲ್ಲ. ನಮ್ಮ ಆಹಾರ ಬೆಳೆಯಲ್ಲಿ ವಂಶವಾಹಿ ಬದಲಾಯಿಸುವ ತಂತ್ರಜ್ಞಾನಕ್ಕೆ ಆಸ್ಪದ ಕೊಡಲಿಲ್ಲ.
ಇದೀಗ ಮತ್ತೆ ಎದ್ದಿದೆ ಕೂಗುಮಾರಿ! ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ’ವು ‘‘ಹಾಗಾದರೆ ವಂಶವಾಹಿ ಬದಲಾದ ಅಕ್ಕಿಯನ್ನು ಪರಿಚಯಿಸಿ ನಿಯಂತ್ರಿಸೋಣವೇ?’’ ಎಂದು ಕೇಳುತ್ತಿದೆ. ಹೊರಗಿರುವ ಒಂಟೆಗೆ ಪಾಪ ಚಳಿ ಎಂದು ಸ್ವಲ್ಪವೇ ಒಳಪ್ರವೇಶಿಸಲು ಅನುವು ಮಾಡಿಕೊಡುವ ಮಾಲಕನ ಕತೆಯಾಯಿತು. ಒಳಗೆ ಬಂದ ಮೇಲೆ ಮಾಲಕ ಯಾರಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಕತೆಯೇ!
ಹಿಂದೆ ಅಮೆರಿಕದ ಹೆನ್ರಿ ಕಿಸಿಂಜರ್ ಹೇಳಿದ್ದರಂತೆ, ‘‘ತೈಲವನ್ನು ನಿಯಂತ್ರಿಸಿ, ದೇಶಗಳನ್ನು ನಿಯಂತ್ರಿಸಬಹುದು. ಆಹಾರವನ್ನು ನಿಯಂತ್ರಿಸಿದರೆ ಜನರನ್ನೇ ನಿಯಂತ್ರಿಸಬಹುದು’’ ಎಂದು. ಜಗತ್ತನ್ನೇ ತಮ್ಮ ಮುಷ್ಟಿಯೊಳಗಿಟ್ಟುಕೊಳ್ಳುವ ಇವರ ಹುನ್ನಾರಗಳಿಗೆ ಆದಿ ಅಂತ್ಯಗಳಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಅಮೆರಿಕದಿಂದ, ಮುಂದೆ ಅಂತರ್‌ರಾಷ್ಟ್ರೀಯ ಸಾಲ ಸಂಸ್ಥೆಗಳಿಂದ, ಷರತ್ತು ಸಹಿತ ಒಪ್ಪಂದಗಳ ಮೂಲಕ ನಮ್ಮ ಸರಕಾರದ ಮೇಲೆ ನಿಯಂತ್ರಣ ಸಾಧಿಸುತ್ತವೆ. ಯಾವ ಸರಕಾರವೇ ಇರಲಿ, ಮಣಿಯುತ್ತದೆ ಮತ್ತು ಜನರ ಮುಂದೆ ಬಂದು ‘‘ನಿಮ್ಮ ಒಳ್ಳೆಯದಕ್ಕೇ ನಾವು ಮಾಡುವುದು’’ ಎಂದು ಪೂಸಿ ಹೊಡೆಯುತ್ತದೆ. ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚು ಬೆಳೆಯಬೇಕು. ನಮಗೆಲ್ಲಾ ಗೊತ್ತು ಹೆಚ್ಚೆಚ್ಚು ಬೆಳೆದುಬೆಳೆದು ನಮ್ಮ ರೈತರು ದೇಶದ ಗೋದಾಮನ್ನು ತುಂಬಿಟ್ಟಿದ್ದಾರೆ. ಅದರ ಹಂಚಿಕೆ ಸರಿಯಾಗಿ ಆಗಬೇಕೇ ಹೊರತು ಇನ್ನೂ ಹೆಚ್ಚು ಬೆಳೆಯುವುದಲ್ಲ! ಈಗಾಗಲೇ ತುಂಬಿದ್ದನ್ನು ಹಂಚದೇ ಗೋದಾಮಿನಲ್ಲಿರುವ ಧಾನ್ಯಗಳು ಹಾಳಾಗುತ್ತಿರುವುದು ಜಗಜ್ಜಾಹೀರಾಗಿದೆ.
ನಮ್ಮ ಮಕ್ಕಳಿಗೆ, ಮಹಿಳೆಯರಿಗೆ ಎ ಅನ್ನಾಂಗ, ಸಾಕಷ್ಟು ಸಿಗುತ್ತಿಲ್ಲ, ಅದನ್ನು ಅಕ್ಕಿಯೊಳಗೇ ಹಾಕಿಕೊಡುತ್ತೇವೆ! ವೈವಿಧ್ಯ ಬೆಳೆಗಳ, ವೈವಿಧ್ಯ ಆಹಾರ ಪದ್ಧತಿಗಳ, ವೈವಿಧ್ಯಮಯ ದೇಶ ನಮ್ಮದು. ಮಕ್ಕಳಿಗೆ ಕೊಡುವ ಬಿಸಿಯೂಟದಲ್ಲಿ ತರಕಾರಿ ಕೊಡಿ, ಬೇಳೆ ಕೊಡಿ, ಮೊಟ್ಟೆ ಕೊಡಿ. ಸ್ಥಳೀಯ ಆಹಾರ ಕೊಡಿ. ಆ ಮೂಲಕ ಬೆಳೆಯುವ ರೈತರನ್ನು ಪ್ರೋತ್ಸಾಹಿಸಿ ಹೊರತು ರೈತರ ಕೈಯಿಂದ ಬೆಳೆಯುವ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಬೇಡಿ. ಸ್ಥಳೀಯ ಆಹಾರ ಪದ್ಧತಿಯನ್ನು ನಾಶ ಮಾಡಬೇಡಿ.
ಆಹಾರಬೆಳೆಯ ವಂಶವಾಹಿಯನ್ನೇ ಬದಲು ಮಾಡುವುದರ ಪರಿಣಾಮಗಳೇನೇನು?
ಒಮ್ಮೆ ಬಂತೆಂದರೆ ಎಷ್ಟೇ ಅನಾಹುತಗಳಾಗಲಿ, ಅದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ವಂಶವಾಹಿಗಳಲ್ಲಿ ಬೆರೆತ ಗುಣವನ್ನು ತೆಗೆಯಲು ಸಾಧ್ಯವಿಲ್ಲ.
ವಂಶವಾಹಿ ಬದಲಾದ ಆಹಾರವನ್ನು ಪ್ರತಿನಿತ್ಯ ತಿನ್ನುವುದರ ಪರಿಣಾಮ ಏನಾಗಬಹುದು? ಬಲು ಕೆಟ್ಟದು ಎನ್ನುತ್ತಾರೆ ವಿಜ್ಞಾನಿಗಳು.
ಪಾತರಗಿತ್ತಿಗಳು, ಕೀಟಗಳು, ದುಂಬಿಗಳು ಒಂದು ಹೂವಿನಿಂದ ಪರಾಗರೇಣುಗಳನ್ನೊಯ್ದು ಇನ್ನೊಂದರ ಮೇಲಿಟ್ಟು ಪರಾಗಸ್ಪರ್ಷ ಮಾಡಿಸಿ ಬೀಜಗಳನ್ನುತ್ಪಾದಿಸಲು ಸಹಾಯ ಮಾಡುತ್ತವೆಂಬುದು ಎಲ್ಲರಿಗೂ ಗೊತ್ತಿರುವ ನಿಸರ್ಗಸತ್ಯ. ಆ ಕೀಟ, ದುಂಬಿ ಪಾತರಗಿತ್ತಿಗಳಿಗೆ ಬೇಲಿ ಹಾಕಬಹುದೇ? ವಂಶವಾಹಿ ಬದಲಾದ ಬೆಳೆಯಿರುವ ಗದ್ದೆಗಳಿಗೆ ಹೋಗಬೇಡ ಎಂದು ನಿಯಂತ್ರಿಸಲಾದೀತೇ? ಅತ್ತಿಂದಿತ್ತ ಹಾರಾಡಿ ಎಲ್ಲಾ ಬೀಜಗಳನ್ನೂ ಕಲಬೆರಕೆ ಮಾಡಿಹಾಕುತ್ತವವು. ವಂಶವಾಹಿ ಬದಲಾಗದ ಬೀಜವನ್ನು ಹಾಕಿದ್ದ ರೈತರ ಹೊಲದಲ್ಲಿಯೂ ಕಲಬೆರಕೆ ಬೀಜ. ಆಗ ಕಂಪೆನಿ ಬರುತ್ತದೆ ತನ್ನ ಸ್ವಾಮಿತ್ವವನ್ನು ಪ್ರಕಟಪಡಿಸಲಿಕ್ಕೆ. ‘‘ನಮ್ಮಿಂದ ಕದ್ದ ಬೀಜವಿದು’’ ಎಂದು ಕೇಸು ಹಾಕಲಿಕ್ಕೆ. ಇದು ಕಾಲ್ಪನಿಕ ಮಾತಲ್ಲ. ಈಗಾಗಲೇ ಅನೇಕ ರೈತರ ಮೇಲೆ ಇಂತಹ ಕೇಸುಗಳಾಗಿವೆ. ಲಕ್ಷಾಂತರ ಡಾಲರ್‌ಗಳ ದಂಡ ಬಿದ್ದಿದೆ. ತೀರಾ ಇತ್ತೀಚೆಗೆ ಪಂಜಾಬಿನಲ್ಲಿ ತನ್ನ ಆಲೂಗಡ್ಡೆ ಹೈಬ್ರಿಡ್ ತಳಿಯನ್ನು ಕದ್ದಿದ್ದಾರೆಂದು ಪೆಪ್ಸಿ ಕಂಪೆನಿ ಸುತ್ತಲಿನ ರೈತರ ಮೇಲೆ ಕೇಸು ಹಾಕಿತ್ತು. ರೈತರು ಆ ಕೇಸ್ ಗೆದ್ದಿದ್ದು ವಿಶೇಷ. ಕುಲಾಂತರಿ ತಂತ್ರಜ್ಞಾನದಿಂದ ಬೆಳೆ ಬೆಳೆಯುವ ತಮ್ಮ ಸ್ವಾತಂತ್ರ್ಯವನ್ನೇ ರೈತರು ಕಳೆದುಕೊಳ್ಳುತ್ತಾರೆ.
ದುಷ್ಪರಿಣಾಮಗಳು ಬಹಳ ಇವೆ. ನಮ್ಮ ದೇಶದಲ್ಲಿ ಏನನ್ನು ಬೆಳೆಯಬೇಕು, ನಮ್ಮ ಜನರ ಆಹಾರ ಏನಿರಬೇಕು ಎಂಬುದನ್ನು ಇಲ್ಲಿನ ರೈತರು, ಜನರು, ಸರಕಾರಗಳು ನಿರ್ಧರಿಸಬೇಕೇ ಹೊರತು ಕೆಲವೇ ಬಹುರಾಷ್ಟ್ರೀಯ ಕಂಪೆನಿಗಳು ನಿರ್ಧರಿಸುವಂತಾಗಬಾರದು.