ಮುಂಬೈ:ಐಎನ್ಎಸ್ ರಣವೀರ್ ನಲ್ಲಿ ಭಾರೀ ಸ್ಫೋಟ, ಮೂವರು ನೌಕಾಪಡೆ ಸಿಬ್ಬಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಮುಂಬೈ: ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ರಣವೀರ್ನಲ್ಲಿ ಇಂದು ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಮೂವರು ನೌಕಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ ಮುಂಬೈನ ನೌಕಾನೆಲೆಯಲ್ಲಿ ಸಂಭವಿಸಿದ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಯುದ್ಧನೌಕೆಯ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ANI ತಿಳಿಸಿದೆ.
ತಕ್ಷಣ ಸ್ಪಂದಿಸಿದ ಹಡಗಿನ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ದೊಡ್ಡ ಪ್ರಮಾಣದ ವಸ್ತು ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಯುದ್ಧನೌಕೆಯು ಪೂರ್ವ ನೌಕಾ ಕಮಾಂಡ್ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಹಾಗೂ ಶೀಘ್ರದಲ್ಲೇ ಬೇಸ್ ಪೋರ್ಟ್ಗೆ ಮರಳಬೇಕಾಗಿತ್ತು. ಅಷ್ಟರೊಳಗೆ ಈ ಘಟನೆ ನಡೆದಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
"ಇಂದು ಮುಂಬೈನ ನೌಕಾನೆಲೆಯಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ಐಎನ್ಎಸ್ ರಣವೀರ್ನ ಆಂತರಿಕ ವಿಭಾಗದಲ್ಲಿ ಸ್ಫೋಟದಿಂದ ಉಂಟಾದ ಗಾಯಗಳಿಂದ ಮೂವರು ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ" ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಘಟನೆಯ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ANI ಗೆ ತಿಳಿಸಿದ್ದಾರೆ.