varthabharthi


ಅಂತಾರಾಷ್ಟ್ರೀಯ

ಅಬುದಾಭಿ ಡ್ರೋಣ್ ದಾಳಿಗೆ ಪ್ರತೀಕಾರ: ಯೆಮನ್ ನಲ್ಲಿ ವಾಯುದಾಳಿಗೆ ಕನಿಷ್ಠ 11 ಬಲಿ

ವಾರ್ತಾ ಭಾರತಿ : 18 Jan, 2022


Twitter.com/@unapologeticAnk

ಅಬುದಾಭಿ,ಜ.17: ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯುಎಇನ ಅಬುದಾಭಿಯಲ್ಲಿ ಸೋಮವಾರ ನಡೆಸಿದ ಡ್ರೋಣ್ ದಾಳಿಯಲ್ಲಿ ಮೂವರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡ ಘಟನೆಗೆ ಪ್ರತೀಕಾರವಾಗಿ ಸೌದಿ ಆರೇಬಿಯ ನೇತೃತ್ವದ ಮಿತ್ರಪಡೆಗಳು ಯೆಮನ್ ರಾಜಧಾನಿ ಸಾನಾ ಸಮೀಪ ಬುಧವಾರ ವಾಯುದಾಳಿಗಳನ್ನು ನಡೆಸಿವೆ. ಬೆದರಿಕೆ ಹಾಗೂ ಸೇನಾ ಅವಶ್ಯಕತೆಗೆ ಅನುಗುಣವಾಗಿ ಸಾನಾದ ಮೇಲೆ ವಾಯುದಾಳಿ ಆರಂಭಗೊಂಡಿದೆ ಎಂದು ಸೌದಿ ಆರೇಬಿಯದ ಸರಕಾರಿ ಸಾಮ್ಯದ ಸುದ್ದಿಸಂಸ್ಥೆ ಅಲ್ಅಕ್ಬರಿಯಾ ವರದಿ ಮಾಡಿದೆ.

 ಸೌದಿ ನೇತೃತ್ವದ ಮಿತ್ರಪಡೆ ನಡೆಸಿದ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆಂದು ಹೌತಿ ಬಂಡುಕೋರರ ಮುಖವಾಣಿಯಾದ ಅಲ್ ಮಾಸಿರಾ ಸುದ್ದಿಸಂಸ್ಥೆ ವರದಿ ಮಾಡಿದೆ. ವಾಯುದಾಳಿಯಿಂದಾಗಿ ನಾಶಗೊಂಡ ಕಟ್ಟಡದ ಅವಶೇಷಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡವರಿಗಾಗಿ ಶೋಧಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 24 ತಾಸುಗಳಲ್ಲಿ ಸೌದಿ ನೇತೃತ್ವದ ಮಿತ್ರಪಡೆ , ಯೆಮನ್‌ನ ವಿವಿಧ ಪ್ರದೇಶಗಳಲ್ಲಿ ವಾಯುದಾಳಿಯನ್ನು ನಡೆಸಿದ್ದು, ಭಾರೀ ಹಾನಿಯನ್ನುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ.

 ಅಬುದಾಭಿ ವಿಮಾನನಿಲ್ದಾಣದ ಸಮೀಪ ಸೋಮವಾರ ಹೌತಿ ಬಂಡುಕೋರರು ನಡೆಸಿದ ಡ್ರೋಣ್ ದಾಳಿಯಲ್ಲಿ ಇಬ್ಬರು ಭಾರತೀಯರು ಹಾಗೂ ಓರ್ವ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದರು. ವಿಮಾನನಿಲ್ದಾಣದ ಇಬ್ಬರು ಉದ್ಯೋಗಿಗಳು ಸೇರಿದಂತೆ ಇತರ ಎಂಟು ಮಂದಿ ಗಾಯಗೊಂಡಿದ್ದರು.
  
‘‘ಯುಎಇ ಮೇಲಿನ ಹೇಯ ದಾಳಿಯು ಒಂದು ಹಗೆತನದ ಕೃತ್ಯವಾಗಿದೆ. ಸೌದಿ ಆರೇಬಿಯ ಹಾಗೂ ಯುಎಇನಲ್ಲಿನ ನಾಗರಿಕರನ್ನು ಗುರಿಯಿರಿಸಿ ಹೌದಿ ಬಂಡುಕೋರರು ನಡೆಸಿದ ದಾಳಿಗಳು ಯುದ್ಧಪರಾಧಗಳಾಗಿವೆ. ಈ ದಾಳಿಗಳ ಸೂತ್ರಧಾರಿಗಳನ್ನು ಇದಕ್ಕೆ ಹೊಣೆಗಾರರನ್ನಾಗಿಸಬೇಕು’’ಎಂದು ಅಲ್ಅಕ್ಬರಿಯಾ ಟ್ವೀಟ್ ಮಾಡಿದೆ.

 ಅಬುದಾಭಿಯಲ್ಲಿನ ಡ್ರೋಣ್ ದಾಳಿಯ ಹೊಣೆ ಹೊತ್ತ ಹೌದಿ

  ಅಬುದಾಭಿಯಲ್ಲಿ ಸೋಮವಾರ ನಡೆದ ಡ್ರೋಣ್ ದಾಳಿಯ ಹೊಣೆಯನ್ನು ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಯೆಮನ್ ವಿರುದ್ಧ ಆಕ್ರಮಣಕಾರಿ ಧೋರಣೆಯನ್ನು ಎಷ್ಟರತನಕ ಮುಂದುವರಿಸುವುದೋ ಅಲ್ಲಿಯವರೆಗೆ ಯುಎಇ ಅಸುರಕ್ಷಿತ ದೇಶವಾಗಲಿಯೇ ಉಳಿಯಲಿದೆ’’ ಎಂದು ಹೌತಿ ಬಂಡುಕೋರರ ವಕ್ತಾರರು ತಿಳಿಸಿದ್ದಾರೆ.
  ‘ ಆಪರೇಶನ್ ಹರಿಕೇನ್’ ಎಂದು ಹೆಸರಿಡಲಾದ ಈ ಕಾರ್ಯಾಚರಣೆಯನ್ನು ದುಬೈ ಹಾಗು ಅಬುದಾಭಿ ವಿಮಾನಿಲ್ದಾಣಗಳನ್ನು ಗುರಿಯಿರಿಸಿ ನಡೆಸಲಾಗಿದ್ದು ‘5 ಪ್ರಕ್ಷೇಪಕ ಕ್ಷಿಪಣಿಗಳು ಹಾಗೂ ದೊಡ್ಡ ಸಂಖ್ಯೆಯ ಡ್ರೋಣ್‌ಗಳನ್ನು ದಾಳಿಗೆ ಬಳಸಲಾಗಿತ್ತು ’’ ಎಂದು ಹೌತಿ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸಾರಿ ತಿಳಿಸಿದ್ದಾನೆ.

ದಾಳಿಯ ವಿರುದ್ಧ ಪ್ರತಿಕ್ರಿಯಿಸುವ ಹಕ್ಕಿದೆ: ಯುಎಇ

ಹೌತಿ ಬಂಡುಕೋರರು ಸೋಮವಾರ ಅಬುದಾಭಿಯಲ್ಲಿ ಡ್ರೋಣ್ ದಾಳಿ ನಡೆಸಿ ಬೆನ್ನಲ್ಲೇ ಯುಎಇನ ವಿದೇಶಾಂಗ ವ್ಯವಹಾರ ಹಾಗೂ ಅಂತಾರಾಷ್ಟ್ರೀಯ ಸಹಕಾರ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ‘ಯುಎಇಗೆೆ ಪ್ರತಿಕ್ರಿಯಿಸುವ ಹಕ್ಕಿದೆ’ ಎಂದು ಹೇಳಿತ್ತು.
  
ಅಬುದಾಭಿ ನ್ಯಾಶನಲ್ ಆಯಿಲ್ ಕಂಪೆನಿ (ಎಡಿಎನ್ಓಸಿ) ಯ ಇಂಧನ ಸ್ಥಾವರಗಳು ಹಾಗೂ ವಿಮಾನನಿಲ್ದಾಣದ ಮೇಲೆ ಅಪ್ಪಳಿಸಿರುವ ಈ ಡ್ರೋಣ್ ದಾಳಿಗಳನ್ನು ನಡೆಸಿದವರನ್ನು ಶಿಕ್ಷಿಸದೆ ಬಿಡಲಾರೆವು ಎಂದು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ತಿಳಿಸಿದ್ದಾರೆ.

 2015ರಲ್ಲಿ ಯೆಮನ್‌ನಲ್ಲಿ ಹೌತಿ ಬಂಡುಕೋರರ ವಿರುದ್ಧ ಸೌದಿ ನೇತೃತ್ವದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಯುಎಇ ಕೂಡಾ ಪಾಲ್ಗೊಂಡಿದೆ.


ಡ್ರೋಣ್ ದಾಳಿಗೆ ವ್ಯಾಪಕ ಖಂಡನೆ

ಯುಎಇ ರಾಜಧಾನಿ ಅಬುದಾಭಿಯಲ್ಲಿ ಹೌದಿ ಬಂಡುಕೋರರು ನಡೆಸಿದ ಡ್ರೋಣ್ ದಾಳಿಗೆ ಅಮೆರಿಕ , ಸೌದಿ ಆರೇಬಿಯ , ಫ್ರಾನ್ಸ್ ಸೇರಿದಂತೆ ವಿವಿಧ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ‘‘ಹೌತಿ ಬಂಡುಕೋರರ ಕೈವಾಡವಿರುವ ಈ ದಾಳಿಯು ಭಯೋತ್ಪಾದಕ ಗುಂಪು ಒಡ್ಡಿರುವ ಅಪಾಯವನ್ನು ದೃಢಪಡಿಸುತ್ತದೆ. ಪ್ರದೇಶದ ಹಾಗೂ ಪ್ರಪಂಚದ ಭದ್ರತೆ, ಶಾಂತಿ ಹಾಗೂ ಸ್ಥಿರತೆಗೆ ಅದು ಬೆದರಿಕೆಯಾಗಿದೆ’’ ಎಂದು ಸೌದಿ ಆರೇಬಿಯ ಹೇಳಿದೆ
  ಅಬುದಾಭಿ ಮೇಲೆ ನಡೆದ ಡ್ರೋಣ್ ದಾಳಿಯು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯೊಡ್ಡಿದಯೆಂದು ಫ್ರೆಂಚ್ ವಿದೇಶಾಂಗ ಸಚಿವ ಜೀನ್ ಯೆವ್ಸ್ ಲೆ ಡ್ರಿಯಾನ್ ಖಂಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)