varthabharthi


ಸಂಪಾದಕೀಯ

ಲಾಕ್‌ಡೌನ್ ಜೂಜಿನಿಂದ ಬೀದಿಗೆ ಬಿದ್ದ ಉದ್ಯಮಿಗಳು

ವಾರ್ತಾ ಭಾರತಿ : 19 Jan, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಇತ್ತೀಚಿನ ದಿನಗಳಲ್ಲಿ ಸರಕಾರ ‘ಇಲ್ಲ’ ಎಂದಾಕ್ಷಣ, ಜನಸಾಮಾನ್ಯರು ‘ಇದೆ’ ಎಂದು ಅರ್ಥೈಸಿಕೊಳ್ಳುತ್ತಾರೆ. ‘ರಾಜ್ಯದಲ್ಲಿ ಕೊರೋನ ಇಲ್ಲ’ ಎಂದು ಸರಕಾರ ಘೋಷಿಸುತ್ತಿದ್ದ ಹಾಗೆಯೇ ಕೊರೋನ ಕಾಣಿಸಿಕೊಂಡಿತು. ‘ಒಮೈಕ್ರಾನ್ ಇಲ್ಲವೇ ಇಲ್ಲ’ ಎಂದ ಬೆನ್ನಿಗೇ ಒಮೈಕ್ರಾನ್ ಪ್ರವೇಶವಾಯಿತು. ‘ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲ’ ಎಂದರೆ ‘ಶೀಘ್ರದಲ್ಲೇ ಸರಕಾರ ಲಾಕ್‌ಡೌನ್ ಹೇರುವುದಕ್ಕೆ ಮುಂದಾಗಿದೆ’ ಎಂದು ಜನರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಸರಕಾರ ಲಾಕ್‌ಡೌನ್‌ಗೆ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದಕ್ಕಾಗಿ ಆರಂಭದಲ್ಲಿ ‘ಇಲ್ಲ’ ಎನ್ನುತ್ತದೆ. ಬಳಿಕ ‘ನಿಯಮ ಪಾಲಿಸದಿದ್ದರೆ ಲಾಕ್‌ಡೌನ್ ಹೇರಬೇಕಾಗುತ್ತದೆ’ ಎಂದು ಎಚ್ಚರಿಸುತ್ತದೆ. ಹೀಗೆ ಎಚ್ಚರಿಸುತ್ತಿರುವ ಹೊತ್ತಿಗೇ ಸರಕಾರದೊಳಗಿರುವ ರಾಜಕೀಯ ನಾಯಕರೇ ಕೊರೋನ ನಿಯಮಗಳನ್ನು ಉಲ್ಲಂಘಿಸಿ ಜನ ಸೇರಿಸುತ್ತಿರುತ್ತಾರೆ. ಇದಾದ ಬಳಿಕ, ಕೊರೋನ ನಿಯಮ ಉಲ್ಲಂಘಿಸಿದ ಆರೋಪವನ್ನು ಜನಸಾಮಾನ್ಯರ ತಲೆಗೆ ಕಟ್ಟಿ ಸರಕಾರ ಲಾಕ್‌ಡೌನ್ ಹೇರುತ್ತದೆ. ಬೀದಿಯಲ್ಲಿ ದೈನಂದಿನ ಬದುಕು ಅರಸುತ್ತಾ ಓಡಾಡುವ ಜನರ ಮೇಲೆ ದಬ್ಬಾಳಿಕೆ ಆರಂಭವಾಗುತ್ತದೆ.

‘‘ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಯಾವುದೇ ಲಾಕ್‌ಡೌನ್ ಘೋಷಿಸುವ ಬಗ್ಗೆ ರಾಜ್ಯ ಸರಕಾರ ನಿರ್ಧಾರ ಕೈಗೊಂಡಿಲ್ಲ’’ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಲಾಕ್ ಡೌನ್ ಹೇರಿಕೆಯಿಲ್ಲ’ ಎನ್ನುವುದನ್ನು ಜನರಿಗೆ ಮಾಡುತ್ತಿರುವ ಬಹುದೊಡ್ಡ ಉಪಕಾರ ಎಂದು ರಾಜಕಾರಣಿಗಳು ಭಾವಿಸಿದಂತಿದೆ. ಜನರ ಬದುಕು ಹಸನುಗೊಳಿಸಲು ಸರಕಾರದ ಬಳಿ ಯಾವುದೇ ಯೋಜನೆಗಳು ಇಲ್ಲದೇ ಇರುವ ಕಾರಣದಿಂದ, ‘ಲಾಕ್‌ಡೌನ್ ಘೋಷಿಸುವುದಿಲ್ಲ’ ಎಂಬ ಸಕ್ಕರೆ ಲೇಪಿತ ಮಾತುಗಳಿಂದ ಜನರನ್ನು ಮರುಳು ಮಾಡಲು ಸರಕಾರ ನೋಡುತ್ತಿದೆ. ಒಂದು ಕಾಲದಲ್ಲಿ ಸರಕಾರದಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ನಿರೀಕ್ಷಿಸುತ್ತಿದ್ದರು. ಆದರೆ ಇಂದು ಜನರು ಸರಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುತ್ತಿಲ್ಲ. ಬದಲಿಗೆ ‘ನಮಗೆ ದುಡಿದು ಬದುಕಲು ಅವಕಾಶ ನೀಡಿದರೆ ಸಾಕು’ ಎಂದಷ್ಟೇ ಅವರು ಬಯಸುವಂತಹ ಸ್ಥಿತಿ ನಿರ್ಮಾಣವಾಗಿದೆ. ‘ಲಾಕ್‌ಡೌನ್ ಹೇರುವ ಮಾತೇ ಇಲ್ಲ’ ಎಂದು ಸರಕಾರ ಘೋಷಿಸಿದಾಗ ಜನರು ಒಂದಿಷ್ಟು ನಿರಾಳರಾಗುತ್ತಿದ್ದರು. ಮುಚ್ಚಿದ ಹೊಟೇಲ್, ಅಂಗಡಿಗಳನ್ನು ರಿಪೇರಿ ಮಾಡಿಸಿ, ಕೈಯಲ್ಲಿದ್ದ ಒಂದಿಷ್ಟು ಬಂಡವಾಳವನ್ನು ಸುರಿದು ಇನ್ನೇನು ವ್ಯಾಪಾರ ಶುರು ಹಚ್ಚಬೇಕು ಎನ್ನುವಾಗ ಸರಕಾರ ಅನಿರೀಕ್ಷಿತವಾಗಿ ಲಾಕ್‌ಡೌನ್ ಘೋಷಿಸುತ್ತಿತ್ತು. ಸರಕಾರದ ಇಂತಹ ನಿರ್ಧಾರದಿಂದ, ಕೈಯಲ್ಲಿದ್ದ ಅಳಿದುಳಿದ ಉಳಿತಾಯ ಹಣವನ್ನು ಕಳೆದುಕೊಂಡು ಜನರು ಸರ್ವನಾಶವಾಗಿದ್ದಾರೆ. ಲಾಕ್‌ಡೌನ್ ಉದ್ಯಮಿಗಳ ಪಾಲಿಗೆ ಜೂಜಾಟವಾಗಿದೆ. ಈ ಜೂಜಾಟಕ್ಕೆ ಹಣ ಹೂಡಿ ಹಲವರು ಬೀದಿಗೆ ಬಿದ್ದಿದ್ದಾರೆ. ಸಾಲಗಾರರಾಗಿದ್ದಾರೆ. ಆದುದರಿಂದ, ‘ಲಾಕ್‌ಡೌನ್ ಇಲ್ಲ’ ಎಂದು ಸುಖಾಸುಮ್ಮನೆ ಭರವಸೆ ನೀಡುವುದಕ್ಕಿಂತ, ವೌನವಾಗಿರುವುದೇ ಲೇಸು ಅಥವಾ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ವಿಧಿಸುವುದಿಲ್ಲ ಎಂಬ ತನ್ನ ತೀರ್ಮಾನಕ್ಕೆ ಕೊನೆಯವರೆಗೆ ಬದ್ಧವಾಗಿ ಉಳಿಯುವ ಎದೆಗಾರಿಕೆ ಸರಕಾರಕ್ಕೆ ಬೇಕಾಗುತ್ತದೆ.

‘ಲಾಕ್‌ಡೌನ್’ ಯಾವ ಕಾರಣಕ್ಕೂ ಕೊರೋನಕ್ಕೆ ಪರಿಹಾರವಲ್ಲ ಮತ್ತು ಲಾಕ್‌ಡೌನ್ ಎನ್ನುವುದು ಒಂದು ಜನಪರವಾದ ಯೋಜನೆಯೂ ಅಲ್ಲ ಎನ್ನುವುದನ್ನು ಸರಕಾರ ಮೊದಲು ಅರಿತುಕೊಳ್ಳಬೇಕಾಗಿದೆ ಮತ್ತು ‘ಲಾಕ್‌ಡೌನ್ ಇಲ್ಲ’ ಎನ್ನುವ ಭರವಸೆಯನ್ನು ನೀಡುತ್ತಾ ಕೂರದೆ, ಈಗಾಗಲೇ ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎನ್ನುವುದರ ಕುರಿತಂತೆ ಸರಕಾರ ಯೋಜನೆ ರೂಪಿಸಬೇಕು. ಲಾಕ್‌ಡೌನ್‌ನಿಂದ ನಷ್ಟಕ್ಕೀಡಾಗಿರುವ ಉದ್ಯಮಿಗಳಿಗೆ ಕನಿಷ್ಠ ಪರಿಹಾರವನ್ನಾದರೂ ಸರಕಾರ ನೀಡಬೇಕಾಗಿದೆ. ಹಾಗೆಯೇ, ಹೊಸದಾಗಿ ಉದ್ಯಮ ಹೂಡುವುದಕ್ಕೆ ಬಡ್ಡಿರಹಿತ ಸಾಲಗಳನ್ನು ನೀಡುವುದರ ಬಗ್ಗೆ ಯೋಚಿಸಬೇಕು. ಲಸಿಕೆಗಳ ಹೆಸರಿನಲ್ಲಿ ಸರಕಾರ ಹೇರುತ್ತಿರುವ ಅಘೋಷಿತ ಲಾಕ್‌ಡೌನ್‌ಗಳನ್ನು ಇಲ್ಲವಾಗಿಸಬೇಕು. ಲಸಿಕೆ ಪಡೆದುಕೊಳ್ಳದೇ ಚಿತ್ರಮಂದಿರಕ್ಕೆ ಹೋಗುವಂತಿಲ್ಲ, ಮಾಲ್‌ಗಳಿಗೆ ಪ್ರವೇಶವಿಲ್ಲ, ಸರಕಾರಿ ಕಚೇರಿಗಳಿಗೆ ಪ್ರವೇಶವಿಲ್ಲ ಎನ್ನುವ ಅವೈಜ್ಞಾನಿಕ ನಿಯಮಗಳನ್ನು ಹಿಂದೆಗೆದುಕೊಳ್ಳಬೇಕು. ಲಸಿಕೆಯನ್ನು ಬಲವಂತವಾಗಿ ಹೇರುವುದು ಸರಿಯಲ್ಲ ಎಂದು ಈಗಾಗಲೇ ನ್ಯಾಯಾಲಯಗಳು ಆದೇಶ ನೀಡಿವೆ. ‘ಲಸಿಕೆ ಪಡೆಯದೇ ಸಾರ್ವಜನಿಕ ಸಂಸ್ಥೆ’ಗಳಿಗೆ ಪ್ರವೇಶವಿಲ್ಲ ಎನ್ನುವುದು ಲಸಿಕೆಯ ಹೇರಿಕೆಯೇ ಆಗಿದೆ. ಇದು ಪರೋಕ್ಷವಾಗಿ ಲಾಕ್‌ಡೌನ್‌ನ ಪರಿಣಾಮವನ್ನೇ ಉಂಟು ಮಾಡುತ್ತದೆ. ಸರಕಾರದ ಈ ನಿಯಮದಿಂದಾಗಿ ಮಾಲ್‌ಗಳು ನಿರ್ಜನವಾಗಿ ನಷ್ಟ ಅನುಭವಿಸುತ್ತಿವೆ. ಚಿತ್ರಮಂದಿರಗಳೂ ಖಾಲಿ ಬಿದ್ದಿವೆ. ಇದಕ್ಕೆ ಪೂರಕವಾಗಿರುವ ಆರ್ಥಿಕ ಚಟುವಟಿಕೆಗಳ ಮೇಲೂ ದುಷ್ಪರಿಣಾಮಗಳಾಗುತ್ತಿವೆ. ಆದುದರಿಂದ, ಲಾಕ್‌ಡೌನ್ ಹೇರುವುದಿಲ್ಲ ಎನ್ನುವ ಭರವಸೆ ಕೊಡುವುದನ್ನು ನಿಲ್ಲಿಸಿ, ಲಾಕ್‌ಡೌನ್ ಹೇರುವುದು ಜನರ ಮೇಲೆ ಎಸಗುವ ಅಪರಾಧ ಎಂದು ಸರಕಾರ ಭಾವಿಸಬೇಕು. ಹಾಗೆಯೇ ಲಸಿಕೆಯನ್ನು ಯಾವುದೇ ರೀತಿಯಲ್ಲಿ ಬಲವಂತವಾಗಿ ಹೇರುವ ಪ್ರಕರಣಗಳು ಕಂಡುಬಂದರೆ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜನಜೀವನ ಮತ್ತೆ ಎಂದಿನಂತೆ ಸುಗಮವಾಗಿ ಸಾಗಲು ಅವಕಾಶ ನೀಡುವುದೇ ಸದ್ಯಕ್ಕೆ ಕೊರೋನದಿಂದ ಆಗಿರುವ ಅನಾಹುತಗಳಿಗೆ ಸರಕಾರ ನೀಡಬಹುದಾದ ಪರಿಹಾರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)