ಹುಕ್ಕಾ ಬಾರ್ ನಿಷೇಧಕ್ಕೆ ರಾಜ್ಯ ಸರಕಾರ ಸಿದ್ಧತೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಹುಕ್ಕಾ ಬಾರ್ಗಳನ್ನು ನಿಷೇಧಿಸುವ ಸಂಬಂಧ ರಾಜ್ಯ ಬಿಜೆಪಿ ಸರಕಾರವು ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ತಿದ್ದುಪಡಿ ಮಸೂದೆಯು ಅಂತಿಮ ಹಂತದಲ್ಲಿದ್ದು ಇದನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಸರಕಾರವು ಸಿದ್ಧತೆ ನಡೆಸುತ್ತಿದೆ.
ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003ರ ಅನ್ವಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹುಕ್ಕಾ ನಿಷೇಧಿಸುವ ಅಧಿಕಾರ ಇದೆಯೇ, ಇಲ್ಲವೇ ಎಂಬ ಬಗ್ಗೆ ಗೊಂದಲ ಎದ್ದಿತ್ತು. ಹೀಗಾಗಿ ಮಸೂದೆಗೆ ತಿದ್ದುಪಡಿ ತರುತ್ತಿರುವ ಸರಕಾರವು ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003ರ ಸೆಕ್ಷನ್ 4ಎ ಅಡಿಯಲ್ಲಿ ಹುಕ್ಕಾ ಬಾರ್ಗಳನ್ನು ನಿಷೇಧಿಸಲಿದೆ. ತಿದ್ದುಪಡಿ ಮಸೂದೆಯ ಕರಡು ಪ್ರತಿ "the-file.in'ಗೆ ಲಭ್ಯವಾಗಿದೆ.
ಇದರ ಪ್ರಕಾರ ಮನೆ, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಹುಕ್ಕಾ ಬಾರ್ ತೆರೆಯುವುದನ್ನು ನಿಷೇಧಿಸಲಾಗಿದೆ. ‘ರಾಜ್ಯದಲ್ಲಿ ಹುಕ್ಕಾ ಬಾರ್ಗಳನ್ನು ನಿಷೇಧಿಸುವ ಚಿಂತನೆ ಇದೆ. ಈ ಕುರಿತು ನೆರೆಯ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಸದನಕ್ಕೆ ತಿಳಿಸಿದ್ದರು.
ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003ರ ಅನ್ವಯ ಬಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹುಕ್ಕಾ ನಿಷೇಧಿಸುವ ಅಧಿಕಾರ ಇದೆಯೇ, ಇಲ್ಲವೇ ಎಂದು ಎದ್ದಿದ್ದ ಗೊಂದಲಕ್ಕೆ ಈ ತಿದ್ದುಪಡಿ ಮಸೂದೆಯು ತೆರೆ ಎಳೆದಂತಾಗಿದೆ.
ಹುಕ್ಕಾ ಬಾರ್ಗಳ ಮಾಲಕರು ಹಾಗೂ ಬಿಬಿಎಂಪಿ ನಡುವೆ ಹಲವು ಸುತ್ತಿನ ಕಾನೂನು ಸಮರ ನಡೆದಿದ್ದರೂ ಯಾವುದೇ ನಿರ್ಧಾರ ಹೊರಬಿದ್ದಿರಲಿಲ್ಲ. ಮೊದಲು ಏಕ ಸದಸ್ಯ ಪೀಠ ಆ ಬಗ್ಗೆ ತೀರ್ಪು ಪ್ರಕಟಿಸಿರಲಿಲ್ಲ. ವಿಭಾಗೀಯ ಪೀಠ ಕೂಡ ಆ ಬಗ್ಗೆ ಹೊಸದಾಗಿ ವಿಚಾರಣೆ ನಡೆಸಿತ್ತಲ್ಲದೆ ತೀರ್ಪು ನೀಡುವಂತೆ ಏಕ ಸದಸ್ಯ ಪೀಠಕ್ಕೆ ಸೂಚಿಸಿತ್ತು. ಹೀಗಾಗಿ ಹುಕ್ಕಾ ಬಾರ್ ಮಾಲಕರು ಹಾಗೂ ಪಾಲಿಕೆಯು ಬೇರೆ ದಾರಿಯಿಲ್ಲದೆ ಕಾನೂನು ಸಮರ ನಡೆಸಿತ್ತು. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ, ಯುವಜನರನ್ನು ದಾರಿ ತಪ್ಪಿಸುತ್ತಿದ್ದ ಹುಕ್ಕಾ ಬಾರ್ಗಳ ಮೇಲೆ ಪಾಲಿಕೆಯ ಆರೋಗ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಹುಕ್ಕಾ ಪೈಪ್ ಹಾಗೂ ತಂಬಾಕು ವಶಪಡಿಸಿಕೊಂಡಿದ್ದರು. ಇದುಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪವಾಗಿ, ಹುಕ್ಕಾ ಬಾರ್ಗಳನ್ನು ನಿಷೇಧಿಸಬೇಕು ಎಂದು ನಿರ್ಣಯ ಕೈಗೊಂಡಿತ್ತು.
ಅಲ್ಲದೇ ಹುಕ್ಕಾ ಬಾರ್ಗಳ ಪರವಾನಿಗೆ ರದ್ದುಗೊಳಿಸಲು ಮುಂದಾಗಿದ್ದಾಗ, ಹುಕ್ಕಾ ಬಾರ್ ಮಾಲಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ 2011ರ ಎ.21ರಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ಹುಕ್ಕಾ ಬಾರ್ ಮಾಲಕರಿಗೆ ಸೂಚಿಸಿತ್ತು. ಮನವಿಯನ್ನು ತಿರಸ್ಕರಿಸಿದ್ದ ಆರೋಗ್ಯಾಧಿಕಾರಿ, ಎ.30ರಂದು ಪರವಾನಿಗೆ ರದ್ದುಗೊಳಿಸಿದ್ದರು.
ಪರವಾನಿಗೆ ರದ್ದು ಪ್ರಶ್ನಿಸಿ ಹಾಗೂ ಪಾಲಿಕೆ ಆಯುಕ್ತರಿಗೆ ಮಾತ್ರ ಪರವಾನಿಗೆ ರದ್ದು ಗೊಳಿಸುವ ಅಧಿಕಾರವಿದ್ದು, ಅದನ್ನು ತಮ್ಮ ಅಧೀನ ಸಿಬ್ಬಂದಿಗೆ ನಿಯೋಜಿಸಲು ಬರುವುದಿಲ್ಲ ಎಂದು ಹುಕ್ಕಾ ಬಾರ್ ಮಾಲಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನ್ನು ಸ್ಮರಿಸಬಹುದು.
ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾ.ಎಸ್.ಅಬ್ದುಲ್ ನಝೀರ್ ಅವರ ಪೀಠ, ಪಾಲಿಕೆ ಆಯುಕ್ತರು ತಮ್ಮ ಅರೆ ನ್ಯಾಯಿಕ(ಕ್ವಾಸಿ ಜುಡಿಷಿಯಲ್) ಅಧಿಕಾರವನ್ನು ಅಧೀನ ಸಿಬ್ಬಂದಿಗೆ ನಿಯೋಜಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಆದರೆ, ಕಾಟ್ಪಾ ಕಾಯ್ದೆ ಅನ್ವಯ ಹುಕ್ಕಾ ಬಾರ್ ನಿಷೇಧಿಸುವ ಅಧಿಕಾರ ಪಾಲಿಕೆಗೆ ಇದೆಯೇ,ಇಲ್ಲವೇ ಎಂಬ ಪ್ರಶ್ನೆಯನ್ನು ಮುಕ್ತವಾಗಿಟ್ಟಿದ್ದರು.
ಅದೇ ರೀತಿ ಸಿಗರೇಟು ಮತ್ತಿತರ ತಂಬಾಕು ಪದಾರ್ಥಗಳನ್ನು 21 ವರ್ಷದ ಕೆಳಗಿನವರಿಗೆ ಮಾರಾಟ ಮಾಡಲು ಇದೇ ತಿದ್ದುಪಡಿ ಮಸೂದೆ ಮೂಲಕ ನಿಷೇಧಿಸಲಾಗಿದೆ. ಶಾಲೆ, ಕಾಲೇಜು, ಆರೋಗ್ಯ ಸಂಸ್ಥೆ, ಸಾರ್ವಜನಿಕ ಸ್ಥಳ, ನ್ಯಾಯಾಲಯ, ಕೆಲಸದ ಸ್ಥಳವೂ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ 21 ವರ್ಷದ ಕೆಳಗಿನವರಿಗೆ ಸಿಗರೇಟು ಮತ್ತು ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲು ನಿರ್ಬಂಧ ವಿಧಿಸಲಾಗಿದೆ.
ಅದೇ ರೀತಿ ಸೆಕ್ಷನ್ 10ಎ ಪ್ರಕಾರ ಪರವಾನಿಗೆ ಇಲ್ಲದೆಯೇ ಯಾರೊಬ್ಬರು ಸಿಗರೇಟು, ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ರಾಜ್ಯ ಸರಕಾರವು ನೇಮಿಸುವ ಪರವಾನಿಗೆ ಪ್ರಾಧಿಕಾರವು ಷರತ್ತುಗಳನ್ನು ವಿಧಿಸಲಿದೆ ಎಂಬುದು ಕರಡು ಮಸೂದೆಯಿಂದ ತಿಳಿದು ಬಂದಿದೆ.
ಧೂಮಪಾನ ಕೋವಿಡ್ ಸೋಂಕಿಗೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಧೂಮಪಾನ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹದಗೆಡಿಸಿ, ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಕೋವಿಡ್ ಸೋಂಕಿಗೆ ತುತ್ತಾಗುವ ಧೂಮಪಾನಿಗಳು ಹೆಚ್ಚಿನ ತೊಂದರೆ ಅನುಭವಿಸುವುದಲ್ಲದೆ ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ.
ಸಂಪೂರ್ಣ ಧೂಮಪಾನ ಹೊಗೆ ಮುಕ್ತ ವಾತಾವರಣ ಕಲ್ಪಿಸಲು ಹೋಟೆಲ್, ರೆಸ್ಟೋರಂಟ್ಗಳು ಮಾತ್ರವಲ್ಲದೆ ವಿಮಾನ ನಿಲ್ದಾಣಗಳಲ್ಲಿಯೂ ಎಲ್ಲ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ತೆಗೆದು ಹಾಕಬೇಕು. ಬಹುತೇಕ ನಿರ್ದಿಷ್ಟ ಧೂಮಪಾನ ಪ್ರದೇಶಗಳು ಕೋಟ್ಪಾ ನಿಯಮಗಳನ್ವಯ ತೆರೆದಿರುವುದಿಲ್ಲ ಮತ್ತು ಸಾರ್ವಜನಿಕರನ್ನು ಧೂಮಪಾನ ಹೊಗೆಗೆ ಒಡ್ಡಿಕೊಳ್ಳುವಂತೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ದೂಡುತ್ತಿವೆ ಎಂದು ಹಲವು ಕ್ಯಾನ್ಸರ್ ತಜ್ಞರು ಹೇಳಿದ್ದರು.