varthabharthi


ನಿಮ್ಮ ಅಂಕಣ

ಪಕ್ಷಾಂತರಿಗಳಿಗೆ ಕಠಿಣ ಕಾನೂನು ಬರಲಿ

ವಾರ್ತಾ ಭಾರತಿ : 19 Jan, 2022
-ಆರ್.ಬಿ.ಜಿ.ಘಂಟಿ ಅಮೀನಗಡ, ಬಾಗಲಕೋಟೆ

ಮಾನ್ಯರೇ,

ಒಂದು ಪಕ್ಷಗಳಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವ, ಕಪ್ಪೆಯಂತೆ ಜಿಗಿಯುವ, ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ರಾಜಕೀಯ ವ್ಯಕ್ತಿಗಳಿಗಾಗಿ ವಿಶೇಷ ಕಾಯ್ದೆಯನ್ನು ಜಾರಿ ಮಾಡುವುದು ಇಂದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗ ಮತ್ತು ಮಾನ್ಯತೆ ಪಡೆದ ಅಧಿಕೃತ ಪಕ್ಷಗಳು ಯೋಚನೆ ಮಾಡಬೇಕಾಗಿದೆ. ಈ ಕ್ರಮ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯವಶ್ಯವಾಗಿದ್ದು, ಇದರಿಂದ ಜನಸಾಮಾನ್ಯರ, ಪಕ್ಷಗಳ ಕಾರ್ಯಕರ್ತರ ಹಕ್ಕು ರಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸಾಮಾನ್ಯ ಕಾರ್ಯಕರ್ತರೂ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಿ ಶಾಸನಸಭೆಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಲ್ಲಿ ಸಹಕಾರಿಯಾಗಬಹುದು. ಮಾತ್ರವಲ್ಲ, ಹಣವಂತರ, ಉಳ್ಳವರ ರಾಜಕೀಯ ನರ್ತನಕ್ಕೆ ಕಡಿವಾಣ ಹಾಕಬಹುದಾಗಿದೆ.

ದೇಶದ ಪ್ರಮುಖ ಎಲ್ಲ ರಾಜಕೀಯ ಪಕ್ಷಗಳು ರಾಜಕೀಯ ನಾಯಕರು, ವ್ಯಕ್ತಿಗಳು ಆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವುದು ಕಡ್ಡಾಯ ಮಾಡುವುದರೊಂದಿಗೆ ಆ ಪಕ್ಷಗಳಲ್ಲಿ ಕನಿಷ್ಠ ಪಕ್ಷ ಐದು ವರ್ಷ ಸದಸ್ಯತ್ವದೊಂದಿಗೆ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ, ಪಕ್ಷಕ್ಕಾಗಿ ದುಡಿದ ಅನುಭವ ಇರುವ ಜನಸೇವಕರಿಗೆ ಮಾತ್ರ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ನೀತಿಯು ಜಾರಿಗೆ ತಂದರೆ ಸೂಕ್ತವಾಗುತ್ತದೆ. ಇದರಿಂದ ನಿಷ್ಠೆಯಿಂದ ದುಡಿದ ನಿಜವಾದ ಕಾರ್ಯಕರ್ತರಿಗೆ, ಜನಸೇವಕರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಇದೊಂದು ಪ್ರಬಲ ಅಸ್ತ್ರವಾಗುವುದರಲ್ಲಿ ಎರಡು ಮಾತಿಲ್ಲ.

-ಆರ್.ಬಿ.ಜಿ.ಘಂಟಿ ಅಮೀನಗಡ, ಬಾಗಲಕೋಟೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)