ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಸಂತ್ರಸ್ತ ದಲಿತ ಕುಟುಂಬ
ದಲಿತ ಯುವಕನಿಗೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ ಪ್ರಕರಣ
ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿ ಅರಸಿನಕೆರೆ ಗ್ರಾಮದಲ್ಲಿ ಪಾನಿಪುರಿ ತಿನ್ನುವ ವಿಚಾರಕ್ಕೆ ದಲಿತರ ಮನೆಗೆ ನುಗ್ಗಿ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಸವರ್ಣೀಯರು ದಲಿತರ ಮೇಲೂ ಪ್ರತಿದೂರು ದಾಖಲಿಸಿರುವ ಕಾರಣ ಆತಂಕಗೊಂಡಿರುವ ದಲಿತರು ತಮಗೆ ನ್ಯಾಯ ದೊರಕಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ.
ಗ್ರಾಮದಲ್ಲಿ ನೀರವ ಮೌನ ಆವರಸಿದ್ದು, ಘಟನೆ ಕುರಿತು ಮಾತನಾಡಲು ಜನ ಭಯಪಡುತ್ತಿದ್ದಾರೆ. ಜಾತಿನಿಂದನೆ ಮತ್ತು ದೌರ್ಜನ್ಯಕ್ಕೊಳದ ಕಟುಂಬ ಮತ್ತು ಊರಿನ ಕೆಲವರು ಸೋಮವಾರ ವಾರ್ತಾಭಾರತಿ ಪತ್ರಿಕೆಯೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಹಲ್ಲೆಗೊಳಗಾದ ಪ್ರಸನ್ನ ಮಾತನಾಡಿ, ಜ.13ರ ಗುರುವಾರ ಸಂಜೆ 5 ಗಂಟೆ ವೇಳೆ ನಮ್ಮ ಊರಿನ ಮುಂಭಾಗದಲ್ಲಿರುವ ಅಂಗಡಿಯಲ್ಲಿ ಪಾನಿಪುರಿ ತಿಂದು, ಪ್ಲೇಟ್ ಅನ್ನು ಡಸ್ಟ್‌ಬಿನ್‌ಗೆ ಹಾಕಿದೆ. ಆದರೆ, ಅದು ಕೆಳಕ್ಕೆ ಬಿತ್ತು. ಆ ವೇಳೆ ಅಲ್ಲೇ ಪಾನಿಪುರಿ ತಿನ್ನುತ್ತಿದ್ದ ಮೂರ್ತಿ, ಸಚಿನ್, ನವೀನ್ ಎಂಬವರು ‘ಏಯ್ ಪ್ಲೇಟ್ ಕೆಳಕ್ಕೆ ಹಾಕುತ್ತೀಯಲ್ಲ ನಿನಗೆ ಗೊತ್ತಾಗುವುದಿಲ್ಲವ? ಎಂದು ಪ್ರಶ್ನಿಸಿದರು. ಅದಕ್ಕೆ ನಾನು ‘ಕೈ ತಪ್ಪಿ ಬಿದ್ದಿದೆ’ ಎಂದು ಹೇಳಿದೆ. ಆದರೂ ಸುಮ್ಮನಿರದ ಅವರು ‘ಮೊದಲೇ ನೀವು ಹೊಲೆಯರು, ನಿಮಗೆ ಪಾನಿಪುರಿ ಕೊಡುವುದೇ ತಪ್ಪು. ಅಂತಹದರಲ್ಲಿ ಹೀಗೆ ಮಾಡುತ್ತೀಯ ಎಂದರು. ಆಗ ನನಗೆ ಏನುಬೇಕಾದರೂ ಅನ್ನಿ. ಆದರೆ, ನನ್ನ ಜಾತಿ ಬಗ್ಗೆ ಏಕೆ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿದೆ. ಇದರಿಂದ ಆಕ್ರೋಶಗೊಂಡ ಅವರು ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಹಲ್ಲೆ ನಡೆದ ಸ್ಥಳದ ಪಕ್ಕದಲ್ಲೇ ಇದ್ದ ಹಾಲಿನ ಡೇರಿಗೆ ಬರುತ್ತಿದ್ದ ನನ್ನ ತಾಯಿ ನನಗೆ ಹಿಡಿದುಕೊಂಡು ಹೊಡೆಯುವುದನ್ನು ನೋಡಿ ಬಿಡಿಸಲು ಬಂದರು. ಆಗ ನಮ್ಮ ತಾಯಿಗೂ ಹೊಡೆದರು ಎಂದು ಕಣ್ಣೀರಿಟ್ಟರು.
ಹಲ್ಲೆಗೊಳಗಾದ ಸಿದ್ದರಾಜು, ಶಿವರಾಜು ಮಾತನಾಡಿ, ನಮ್ಮ ಬೀದಿಗೆ ಏಕಾ ಏಕಿ ನುಗ್ಗಿ ಹಲ್ಲೆ ನಡೆಸಿರುವುದು ನಮ್ಮನ್ನು ಆತಂಕ್ಕೀಡುಮಾಡಿದೆ. ನಮ್ಮ ಮೇಲೆ ಹಲ್ಲೆ ನಡೆಸಿ ಜಗಳ ಬಿಡಿಸಲು ಬಂದವ ಐವರ ಮೇಲೆ ಸವರ್ಣೀಯರು ಪ್ರತಿ ದೂರನ್ನು ನೀಡಿದ್ದಾರೆ. ನಾವು ಕೂಲಿ ನಾಲಿ ಮಾಡಿ ಬದುಕುವ ಜನ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಬೇಡಿಕೊಂಡರು.
‘ಡಿವೆಎಸ್ಪಿ, ಸಬ್‌ಇನ್‌ಸ್ಪೆಕ್ಟರ್ ವಿರುದ್ಧ ದೂರು ನೀಡಲು ನಿರ್ಧಾರ
ನಮ್ಮ ವಿರುದ್ಧ ಸವರ್ಣೀಯರು ಪ್ರತಿ ದೂರು ನೀಡಿರುವುದನ್ನು ಪ್ರಶ್ನಿಸಿದ ನನಗೆ ಲಾಠಿಯಿಂದ ಕೈ ಮೂಳೆ ಮುರಿಯುವ ಮಟ್ಟಕ್ಕೆ ಹೊಡೆದ ಡಿವೈಎಸ್ಪಿ ಮತ್ತು ಜಯಪುರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಿರುದ್ಧ ದೂರು ದಾಖಲಿಸುವುದರ ಜೊತೆಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡುತ್ತೇನೆ ಎಂದು ಸೋಮೇಶ್ ತಿಳಿಸಿದರು.
ದಲಿತರ ಬೀದಿಗೆ ನುಗ್ಗಿ ಹೊಡೆದವರು ಸವರ್ಣೀಯರು, ಅವರು ನಮ್ಮ ಹುಡುಗರಿಗೆ ಹೊಡೆಯುವುದನ್ನು ನೋಡಿ, ಜಗಳ ಬಿಡಿಸಲು ಹೋದವನು ನಾನು. ಅವರ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತು ಅವರನ್ನು ಕಳುಹಿಸಿದೆ. ಆದರೂ ನಮ್ಮ ಮೇಲೆ ಪೊಲಿಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನು ಜಯಪುರ ಪೊಲೀಸ್ ಠಾಣೆಗೆ ಹೋಗಿ ಪ್ರಶ್ನಿಸಿದ್ದಕ್ಕೆ ಡಿವೈಎಸ್ಪಿಅವರು ಮೊದಲು ಇವನಿಗೆ ನಾಲ್ಕು ಬಡಿಯಿರಿ ಎಂದರು. ಆಗ ಸಬ್‌ಇನ್‌ಸ್ಪೆಕ್ಟರ್ ಲಾಠಿಯಿಂದ ನನ್ನ ಕೈಯನ್ನು ಹಿಡಿದು ಜೋರಾಗಿ ಹೊಡೆದರು. ಇದರಿಂದ ನನ್ನ ಕೈ ಮೂಳೆ ಮುರಿದಿದ್ದು, ನಾನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ತಮ್ಮ ನೋವು ತೋಡಿಕೊಂಡರು.
ಭಯಭೀತರಾದ ನಾವು ಅಂದೇ ರಾತ್ರಿ ಹತ್ತುಗಂಟೆ ಸಮಯದಲ್ಲಿ ಜಯಪುರ ಪೊಲೀಸ್ ಠಾಣೆಗೆ ಹೋಗಿ ಜಾತಿನಿಂದ ಮತ್ತು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಿಸಿದೆವು. ಜ.14 ಶುಕ್ರವಾರ ಬೆಳಿಗ್ಗೆ 8:30 ಗಂಟೆ ಸಮಯದಲ್ಲಿ ಮೂರು ಬೈಕ್‌ನಲ್ಲಿ ನಮ್ಮ ಬೀದಿಗೆ ಬಂದು ನಮ್ಮ ಮನೆಯೊಳಕ್ಕೆ ನುಗ್ಗಿ, ‘ಏಯ್ ನಮ್ಮ ಮೇಲೆಯೇ ದೂರು ನೀಡುತ್ತೀರ? ದೂರನ್ನು ಮೊದಲು ವಾಪಸ್ ಪಡೆಯಿರಿ, ಇಲ್ಲದಿದ್ದರೆ ನಿಮ್ಮ ಮನೆಯನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ ಎಂದು ದೊಣ್ಣೆ ರಾಡ್‌ನಿಂದ ಹಲ್ಲೆ ಮಾಡಿದರು. ಅನಾರೋಗ್ಯಕ್ಕೀಡಾಗಿರುವ ನಮ್ಮ ತಂದೆ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಮನೆಯೊಳಗೆ ಕಳುಹಿಸಿದೆವು. ಈ ವೇಳೆ ನನ್ನ ತಮ್ಮ ಮಧುಕರನನ್ನು ಎಳೆದು ದೊಣ್ಣೆಯಿಂದ ಹೊಡೆದರು. ಆಗ ಅವನ ತೋಳಿನ ಮೂಳೆ ಮುರಿದು ಹೋಯಿತು. ಈ ವೇಳೆ ನನ್ನ ಪತ್ನಿ ಮತ್ತು ನಮ್ಮ ತಾಯಿ ಮೇಲೂ ಹಲ್ಲೆ ನಡೆಸಿದರು. ನಮಗೆ ಹೊಡೆಯುತ್ತಿರುವುದನ್ನು ನೋಡಿದ ನಮ್ಮ ಸ್ನೇಹಿತ ದಿಲೀಪ್ ಬಿಡಿಸಲು ಬಂದಾಗ ಅವನಿಗೆ ರಾಡ್‌ನಿಂದ ತಲೆಗೆ ಹೊಡೆದರು.
ಪ್ರಸನ್ನ, ಹಲ್ಲೆಗೊಳಗಾದ ಯುವಕ