varthabharthi


ಬೆಂಗಳೂರು

ಕೋವಿಡ್ ನಿರ್ಬಂಧ ಸಡಿಲಿಕೆ ಬಗ್ಗೆ ಜ.21ರ ತಜ್ಞರ ಸಭೆ ಬಳಿಕ ತೀರ್ಮಾನ: ಸಿಎಂ ಬೊಮ್ಮಾಯಿ

ವಾರ್ತಾ ಭಾರತಿ : 19 Jan, 2022

ಬೆಂಗಳೂರು, ಜ.19: ಕೋವಿಡ್ ನಿಯಮ ಸಡಿಲಿಕೆ ಕುರಿತು ತಜ್ಞರ ಸಭೆಯಲ್ಲಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಈ ಬಾರಿಯ ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಕಡಿಮೆಯಿದೆ. ಹಾಗಾಗಿ ದಿನನಿತ್ಯದ ಕೆಲಸ ಮಾಡಿಕೊಂಡು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಭಾವನೆ ಇದೆ. ತಜ್ಞರು ಇದನ್ನು ಪರಾಮರ್ಶೆ ಮಾಡುತ್ತಿದ್ದು, ಅವರು ಇದೇ ಶುಕ್ರವಾರ(ಜ.21)ದ ಸಭೆಯಲ್ಲಿ ಸಂಪೂರ್ಣ ಚಿತ್ರಣವನ್ನು ನಮ್ಮ ಮುಂದೆ ಇಡಲಿದ್ದಾರೆ. ಈ ಬಗ್ಗೆ ಸ್ಪಷ್ಟತೆ ದೊರೆತ ನಂತರ ತೀರ್ಮಾನ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳೊಂದಿಗೆ ಸಭೆ: ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಲಾಗಿದೆ. ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಎರಡೂ     ಡೋಸ್ ಹಾಗೂ 15-18 ವರ್ಷ ವಯೋಮಾನದವರಿಗೆ, ಕೊರೋನ ಯೋಧರಿಗೆ ಲಸಿಕೆ ನೀಡುವಿಕೆಯನ್ನು ತೀವ್ರ ಗತಿಯಲ್ಲಿ ಹಮ್ಮಿಕೊಳ್ಳಲು ವಿಶೇಷ ಗಮನ ನೀಡಲು ಸೂಚಿಸಲಾಗಿದೆ. ಶೇ.94ರಷ್ಟು ಜನ ಹೋಂ ಐಸೋಲೇಶನ್ ನಲ್ಲಿರುವುದರಿಂದ ಆರೋಗ್ಯ ಇಲಾಖೆ ಗಮನ ನೀಡಿ ಸೋಂಕಿತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಟೆಲಿ  ಟ್ರಯಾಜಿಂಗ್ ಹಾಗೂ ಔಷಧ ಕಿಟ್ ಗಳನ್ನು ವಿತರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಪುನರಾಂಭಿಸಬೇಕು. ಬೂಸ್ಟರ್ ಡೋಸ್ ಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ ಎಂದರು. 

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಒಪಿಡಿ ಬಲಪಡಿಸಲು ಗಮನಹರಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಫೆಬ್ರವರಿಯಲ್ಲಿ ಕೋವಿಡ್ ಪೀಕ್ ತಲುಪುವ ನಿರೀಕ್ಷೆ ಬೇರೆ ಬೇರೆ ರಾಜ್ಯ ಗಳ ಟ್ರೆಂಡ್ ಪರಿಶೀಲಿಸಿರುವ ತಜ್ಞರು, ನಮ್ಮ ರಾಜ್ಯದಲ್ಲಿ ವಿಳಂಬವಾಗಿ ಪ್ರಾರಂಭವಾದ ಅಲೆ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಏರುಗತಿಯನ್ನು ತಲುಪಬಹುದು ಎಂದು ಅಂದಾಜು ಮಾಡಿದ್ದಾರೆ ಎಂದರು.

ನಿಯಮ ಉಲ್ಲಂಘನೆ: ಕೋವಿಡ್ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣ ದಾಖಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಯಾವ ಸಂಘ, ಸಂಘಟನೆ ಎಂಬ ಭೇದಭಾವವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ,  ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದರು.

ಕೋವಿಡ್ ನಿಂದ ಗುಣಮುಖರಾದ ಮುಖ್ಯಮಂತ್ರಿ: 11 -12 ದಿನಗಳ  ಕ್ವಾರಂಟೈನ್ ಅವಧಿ ಮುಗಿದಿದ್ದು, ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಇಂದಿನಿಂದ ದಿನದ ಕೆಲಸ ಕಾರ್ಯಗಳಲ್ಲಿ ತೊಡಗುವುದಾಗಿ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)