varthabharthi


ದಕ್ಷಿಣ ಕನ್ನಡ

ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದ ರಾಜಕೀಯ ಷಡ್ಯಂತ್ರ: ಸಂಸದ ನಳಿನ್ ಕುಮಾರ್ ಆರೋಪ

ವಾರ್ತಾ ಭಾರತಿ : 19 Jan, 2022

ಮಂಗಳೂರು, ಜ.19: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿ ಕೇಂದ್ರ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ನಿಯಮಗಳನ್ನು ರೂಪಿಸಿದೆ. ಕೇರಳ ಸರಕಾರ ಇದನ್ನು ಸರಿಯಾಗಿ ಪಾಲಿಸದೆ ಈಗ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ರಾಜಕೀಯ ಷಡ್ಯಂತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಸಮಾನತೆಯ ಸಂದೇಶ ಸಾರಿದ ನಾರಾಯಣ ಗುರುಗಳ ಹೆಸರಿನಲ್ಲಿ ಕೀಳುಮಟ್ಟದ ರಾಜಕೀಯ ನಡೆಸುತ್ತಿರುವುದು ಖಂಡನೀಯ. ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಬಂದಿರುವ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಹಿಂದೂಗಳ ಏಕತೆ ಒಡೆಯಲು ಉದ್ದೇಶಪೂರ್ವಕವಾಗಿ ಇಂತಹ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ನಾರಾಯಣಗುರುಗಳ ಸಂಕಲ್ಪ ಕೇಂದ್ರವಾದ ಶಿವಗಿರಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಅಧಿಕಾರದಲ್ಲಿರುವಾಗ ಟಿಪ್ಪುವಿನ ಜಯಂತಿ ಆಚರಿಸಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸರಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ನಳಿನ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)