varthabharthi


ಉಡುಪಿ

ದೇವಾಲಯಗಳಷ್ಟೆ ಗೋಶಾಲೆಗಳಿಗೂ ಆದ್ಯತೆ ಇರಲಿ: ಪೇಜಾವರ ಶ್ರೀ

ವಾರ್ತಾ ಭಾರತಿ : 19 Jan, 2022

ಉಡುಪಿ, ಜ.19: ದೇವಸ್ಥಾನಗಳಲ್ಲಿ ಶಿಲಾ ವಿಗ್ರಹ ಪ್ರತಿಮೆಗಳಲ್ಲಿ ಭಗವಂತನ ಚೈತನ್ಯವನ್ನು ತುಂಬಿ ಆರಾಧಿಸಲಾಗುತ್ತದೆ. ಗೋವುಗಳಲ್ಲಿ ದೇವ- ದೇವತೆಗಳ ಸನ್ನಿಧಾನ ನಿತ್ಯ ಜಾಗೃತವಾಗಿರುತ್ತದೆ. ಚೈತನ್ಯ ತುಂಬಿದ ವಿಗ್ರಹದಷ್ಟೇ ಗೋವುಗಳೂ ಪ್ರಮುಖವಾಗಿವೆ. ಆದ್ದರಿಂದ ದೇವಳಗಳ ಜೀರ್ಣೋದ್ಧಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗೋಶಾಲೆಗಳ ನಿರ್ಮಾಣ, ನವೀಕರಣಗಳಿಗೂ ನೀಡಬೇಕು ಎಂದು ಗೋವರ್ಧನಗಿರಿ ಟ್ರಸ್ಟ್ ಮುಖ್ಯಸ್ಥ ಹಾಗೂ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಗೋವರ್ಧನಗಿರಿ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಕೊಡವೂರು ಸಮೀಪ ಇರುವ ನಂದಗೋಕುಲ ಗೋಶಾಲೆಯ ನೂತನ ಕಟ್ಟಡಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಕೆಎಂಎಫ್ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ, ಆಸ್ಟ್ರೇಲಿಯಾದ ಯೋಗ ಶಿಕ್ಷಕ ರಾಜೇಂದ್ರ ಎಂಕಣ್ಣಮೂಲೆ ಶುಭ ಕೋರಿದರು. ಬಡಾನಿಡಿಯೂರಿನ ಬಾಲಯ್ಯ ಕುಟುಂಬಿಕರ ಪಂಜುರ್ಲಿ ಟ್ರಸ್ಟ್ ಮುಖ್ಯಸ್ಥ ಉಮೇಶ್ ರಾವ್, ಕೊಡವೂರು ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ಸುಧೀರ್ ರಾವ್, ನಗರಸಭಾ ಸದಸ್ಯ ವಿಜಯ್ ಕೊಡವೂರು, ಡಾ.ಸರ್ವೋತ್ತಮ ಉಡುಪ, ನಾಗರಾಜ ಪುರಾಣಿಕ್, ಇಂಜಿನಿಯರ್ ರಾಜೇಂದ್ರ ಮಯ್ಯ, ಚಂದ್ರಶೇಖರ್, ಗೋಶಾಲೆ ನಿರ್ವಾಹಕಿ ಪ್ರಮೀಳಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು.

ಇದು ಒಂದೂವರೆ ಎಕ್ರೆ ಪ್ರದೇಶದಲ್ಲಿ 1984ರಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸ್ಥಾಪಿಸಿದ ಮೊದಲ ಗೋಶಾಲೆಯಾಗಿದ್ದು 150 ಗೋವುಗಳು ಪೋಷಿಸಲ್ಪಡುತ್ತಿವೆ. ಪ್ರಸ್ತುತ ನೂತನ ಒಂದು ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟ್ ವ್ಯವ್ಥಾಪಕ ರಘುರಾಮಾಚಾರ್ಯ ತಿಳಿಸಿದ್ದಾರೆ.

ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೇಣುಗೋಪಾಲ ಸಾಮಗರು ಧಾರ್ಮಿಕ ವಿಧಿ ನೆರವೇರಿಸಿದರು. ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಪ್ರಾಣೇಶ್ ಜೋಶಿ ಸಹಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)