varthabharthi


ದಕ್ಷಿಣ ಕನ್ನಡ

ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ವಿಳಂಬ: ಖುದ್ದು ಹಾಜರಾಗಲು ಪಾಲಿಕೆ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶ

ವಾರ್ತಾ ಭಾರತಿ : 19 Jan, 2022

ಬೆಂಗಳೂರು, ಜ.19: ಮಂಗಳೂರಿನ ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಬಹಳ ದಿನಗಳಿಂದ ಉಳಿದಿರುವ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆ ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಮಂಗಳೂರು ಮಹಾನಗರ ಪಾಲಿಕೆ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವಿಲೇವಾರಿ ಕಾರ್ಯವನ್ನು ಶೀಘ್ರವಾಗಿ ಆರಂಭಿಸದಿದ್ದರೆ, ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಉಲ್ಲೇಖಿಸಿದೆ.

ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದ ಅನಾಹುತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರುತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಮಂಗಳೂರು ನಗರಪಾಲಿಕೆ ಪರ ಎಎಜಿ ಧ್ಯಾನ್‍ಚಿನ್ನಪ್ಪ ವಾದ ಮಂಡಿಸಿ, ಘಟಕದಲ್ಲಿ ಬಹಳ ದಿನಗಳಿಂದ ಉಳಿದಿರುವ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆದಾರರನ್ನು ಗುರುತಿಸಲಾಗಿದ್ದು, ಮಾತುಕತೆ ಸಹ ನಡೆದಿದೆ. ಟೆಂಡರ್ ಪ್ರಕ್ರಿಯೆಯμÉ್ಟೀ ಬಾಕಿ ಉಳಿದಿದೆ ಎಂದರು.

50 ಕೋಟಿಗಿಂತ ಹೆಚ್ಚಿನ ಮೊತ್ತದ ಟೆಂಡರ್‍ಗೆ ಹಣಕಾಸು ಇಲಾಖೆ ಅನುಮೋದನೆ ಬೇಕಾಗಿದ್ದು, ಈ ಸಂಬಂಧ ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಅನುಮೋದನೆ ದೊರೆಯುತ್ತಲೇ ಟೆಂಡರ್ ಪೂರ್ಣಗೊಳಿಸಿ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.

ಹೇಳಿಕೆ ಪರಿಗಣಿಸಿದ ಪೀಠ, ಮುಂದಿನ ವಿಚಾರಣೆಗೆ ವೇಳೆಗೆ ಟೆಂಡರ್ ಅಂತಿಮಗೊಳಿಸಿ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸದಿದ್ದರೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತು.

ಅದೇರೀತಿ, ಮಂಗಳೂರು ನಗರ ಪಾಲಿಕೆಯ ಈ ಟೆಂಡರ್ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಪರಿಗಣಿಸಬೇಕು. ಯಾವುದೇ ವಿಳಂಬ ಮಾಡದೆ ತ್ಯಾಜ್ಯ ವಿಲೇವಾರಿ ಕೆಲಸ ಆರಂಭವಾಗಬೇಕು ಎಂದು ಹೇಳಿ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)