varthabharthi


ಅಂತಾರಾಷ್ಟ್ರೀಯ

ಸ್ವಪಕ್ಷೀಯರಿಂದಲೇ ವಿರೋಧದ ಹಿನ್ನೆಲೆ : ನಿರ್ಬಂಧ ಸಡಿಲಿಕೆಗೆ ಬ್ರಿಟನ್ ಪ್ರಧಾನಿ ನಿರ್ಧಾರ ?

ವಾರ್ತಾ ಭಾರತಿ : 19 Jan, 2022

Britain's Prime Minister Boris Johnson | AP/PTI Photo

ಲಂಡನ್, ಜ.19: ಕೊರೋನ ನಿರ್ಬಂಧಗಳ ವಿರುದ್ಧ ಪಕ್ಷದ ಸದಸ್ಯರಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೋನ ನಿರ್ಬಂಧ ಸಡಿಲಗೊಳಿಸುವ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

     ಬ್ರಿಟನ್‌ನಲ್ಲಿ ಒಮೈಕ್ರಾನ್ ರೂಪಾಂತರಿ ಸೋಂಕು ಉಲ್ಬಣಿಸಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕೆಲವೊಂದು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಕಠಿಣ ನಿರ್ಬಂಧದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದಲ್ಲಿ ಸಚಿವ ಸಂಪುಟ ಪರಿಸ್ಥಿತಿಯ ಪರಾಮರ್ಶೆಗೆ ಸಭೆ ಸೇರಲಿದ್ದು ನಿರ್ಬಂಧಗಳಲ್ಲಿ ಕೆಲವೊಂದು ಸಡಿಲಿಕೆ ಮಾಡುವ ನಿರೀಕ್ಷೆಯಿದೆ. ಬಳಿಕ ಸಭೆಯ ನಿರ್ಧಾರದ ಬಗ್ಗೆ ಪ್ರಧಾನಿ ಹೌಸ್ ಆಫ್ ಕಾಮನ್ಸ್‌ಗೆ (ಸಂಸತ್ತಿನ ಕೆಳಮನೆ) ಮಾಹಿತಿ ನೀಡಲಿದ್ದಾರೆ ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿವೆ. ಮನೆಯಿಂದಲೇ ಕೆಲಸ ಮಾಡುವ ನಿಯಮ, ಕ್ರೀಡಾಕೂಟ ನಡೆಯುವ ಪ್ರದೇಶಕ್ಕೆ ಪ್ರವೇಶದ ನಿಯಮ, ಪೂರ್ಣಪ್ರಮಾಣದ ಲಸಿಕೆ ಪಡೆದವರಿಗೆ ಮಾತ್ರ ನೈಟ್‌ಕ್ಲಬ್‌ಗೆ ಪ್ರವೇಶ ಮುಂತಾದ ನಿರ್ಬಂಧಗಳನ್ನು ಸಡಿಲಿಸುವ ಸಾಧ್ಯತೆಯಿದೆ.

ಜನವರಿ ಆರಂಭದಲ್ಲಿ ಬ್ರಿಟನ್‌ನಲ್ಲಿ ಕೊರೋನ ಸೋಂಕು ಪ್ರಕರಣ 2,18,000ಕ್ಕೂ ಅಧಿಕವಾಗಿದ್ದರೆ, ಜನವರಿ 18ರ ವೇಳೆ ಇದು 94,000ಕ್ಕೆ ಇಳಿದಿದೆ ಎಂದು ಸರಕಾರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮಧ್ಯೆ, ಜಾನ್ಸನ್ ವಿರುದ್ಧ ಸ್ವಪಕ್ಷೀಯರೇ(ಕನ್ಸರ್ವೇಟಿವ್ ಪಕ್ಷ) ಅಸಮಾಧಾನ ಹೊಂದಿದ್ದು ಭಿನ್ನಮತ ತೀವ್ರವಾಗಿದೆ. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅಗತ್ಯವಿರುವ 54 ಸಂಖ್ಯಾಬಲವನ್ನು ಭಿನ್ನಮತೀಯರು ಶೀಘ್ರವೇ ಹೊಂದುವ ಸಾಧ್ಯತೆಯಿದೆ ಎಂದು ಡೈಲಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸುಮಾರು 20 ಕನ್ಸರ್ವೇಟಿವ್ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವ ನಿರೀಕ್ಷೆಯಿದೆ ಎಂದು ಪತ್ರಿಕೆಯ ವರದಿ ಹೇಳಿದೆ.

ಲಾಕ್‌ಡೌನ್ ಅವಧಿಯಲ್ಲಿ ಜಾನ್ಸನ್ ಅವರ ಪಕ್ಷದವರೇ ನಿಯಮ ಉಲ್ಲಂಘಿಸಿ ಪಾನಗೋಷ್ಟಿ ನಡೆಸಿದ ಆರೋಪವಿದ್ದು, ಇದನ್ನು ಜಾನ್ಸನ್ ನಿರಾಕರಿಸಿದ್ದಾರೆ. ಆದರೆ ಈ ವಿಷಯದಲ್ಲಿ ಜಾನ್ಸನ್ ಸುಳ್ಳುಹೇಳುತ್ತಿದ್ದಾರೆ ಎಂದು ಅವರ ಮಾಜಿ ಸಹೋದ್ಯೋಗಿ ಡೊಮಿನಿಕ್ ಕಮಿಂಗ್ಸ್ ಟೀಕಿಸಿದ್ದಾರೆ. ಪಾನಗೋಷ್ಟಿ ಆರೋಪದ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿ ಸ್ಯೂಯ್ ಗ್ರೆ ನೇತೃತ್ವದ ಸಮಿತಿ ರಚಿಸಲಾಗಿದೆ. ಜಾನ್ಸನ್ ಸುಳ್ಳು ಹೇಳಿದ್ದು ಸಾಬೀತಾದರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಸಚಿವ ಸಂಪುಟದ ಹಿರಿಯ ಸದಸ್ಯರು ಆಗ್ರಹಿಸಿದ್ದಾರೆ ಎಂದು ಪತ್ರಿಕೆಯ ವರದಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)