ಮೊದಲ ಏಕದಿನ: ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಗೆಲುವು
ಧವನ್, ಕೊಹ್ಲಿ, ಶಾರ್ದೂಲ್ ಅರ್ಧಶತಕ ವ್ಯರ್ಥ
Photo: AFP
ಪಾರ್ಲ್, ಜ.19: ಆರಂಭಿಕ ಬ್ಯಾಟರ್ ಶಿಖರ್ ಧವನ್ ,ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಪ್ರತಿರೋಧದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ ಭಾರತ ಕ್ರಿಕೆಟ್ ತಂಡ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 31 ರನ್ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಬುಧವಾರ ಗೆಲ್ಲಲು 297 ರನ್ ಗುರಿ ಪಡೆದಿದ್ದ ಭಾರತವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತವು ಮೊದಲ ವಿಕೆಟ್ಗೆ 46 ರನ್ ಸೇರಿಸುವಷ್ಟರಲ್ಲಿ ನಾಯಕ ಕೆ.ಎಲ್.ರಾಹುಲ್(12)ವಿಕೆಟನ್ನು ಕಳೆದುಕೊಂಡಿತು. ಆಗ 2ನೇ ವಿಕೆಟ್ಗೆ 92 ರನ್ ಜೊತೆಯಾಟ ನಡೆಸಿದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು.
ಆದರೆ 26ನೇ ಓವರ್ನಲ್ಲಿ ಧವನ್ ವಿಕೆಟ್ ಕಬಳಿಸಿದ ಸ್ಪಿನ್ನರ್ ಕೇಶವ್ ಮಹಾರಾಜ್ ಈಜೋಡಿಯನ್ನು ಬೇರ್ಪಡಿಸಿದರು. ಮಾತ್ರವಲ್ಲ ಭಾರತಕ್ಕೆ ಭಾರೀ ಶಾಕ್ ನೀಡಿದರು. ಧವನ್ 51 ಎಸೆತಗಳಲ್ಲಿ 34ನೇ ಅರ್ಧಶತಕ(79 ರನ್, 84 ಎಸೆತ, 10 ಬೌಂಡರಿ)ಗಳಿಸಿ ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಕೊಹ್ಲಿ 60 ಎಸೆತಗಳಲ್ಲಿ 63ನೇ ಅರ್ಧಶತಕ (51, 63 ಎಸೆತ,3 ಬೌಂ.)ಗಳಿಸಿದ ಬೆನ್ನಿಗೇ ತಬ್ರೈಝ್ ಶಂಸಿಗೆ ವಿಕೆಟ್ ಒಪ್ಪಿಸಿದರು. 71ನೇ ಅಂತರ್ರಾಷ್ಟ್ರೀಯ ಶತಕ ಗಳಿಸುವ ಅವಕಾಶವನ್ನು ತಪ್ಪಿಸಿಕೊಂಡರು.
ಶಾರ್ದೂಲ್ ಠಾಕೂರ್(ಔಟಾಗದೆ 50, 43 ಎಸೆತ, 5 ಬೌಂ.1 ಸಿ.)ಹಾಗೂ ಜಸ್ಪ್ರೀತ್ ಬುಮ್ರಾ(ಔಟಾಗದೆ 14,23 ಎಸೆತ)9ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 51 ರನ್ ಸೇರಿಸಿ ತಂಡದ ಸೋಲಿನ ಅಂತರ ತಗ್ಗಿಸಿದರು.
ದಕ್ಷಿಣ ಆಫ್ರಿಕಾದ ಪರ ಫೆಹ್ಲುಕ್ವಾಯೊ(2-26), ಶಂಸಿ(2-52)ಹಾಗೂ ಲುಂಗಿ ಗಿಡಿ(2-64)ತಲಾ 2 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ 296/4: ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ನಾಯಕ ಟೆಂಬಾ ಬವುಮಾ ಹಾಗೂ ರಾಸ್ಸಿ ವಾನ್ಡರ್ ಡುಸ್ಸೆ ಆಕರ್ಷಕ ಶತಕದ ಸಹಾಯದಿಂದ ಆತಿಥೇಯ ತಂಡ ಭಾರತ ತಂಡಕ್ಕೆ ಮೊದಲ ಏಕದಿನ ಪಂದ್ಯದ ಗೆಲುವಿಗೆ 297 ರನ್ ಗುರಿ ನೀಡಿತು.