varthabharthi


ಸಂಪಾದಕೀಯ

ಪ್ರಧಾನಿಯ ಟೆಲಿಪ್ರಾಂಪ್ಟರ್ ಅಣಕ ಸರಿಯಲ್ಲ

ವಾರ್ತಾ ಭಾರತಿ : 20 Jan, 2022

ವರ್ಲ್ಡ್ ಎಕಾನಮಿಕ್ ಫೋರಂ ಹಮ್ಮಿಕೊಂಡ ಸಮ್ಮೇಳನದಲ್ಲಿ ‘ಟೆಲಿಪ್ರಾಂಪ್ಟರ್ ಕೈ ಕೊಟ್ಟ ಕಾರಣ ಪ್ರಧಾನಿ ಮೋದಿಯವರು ಭಾಷಣದ ಮಧ್ಯೆ ತಡವರಿಸಿದರು’ ಎನ್ನುವುದನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ನಡೆಯುತ್ತಿದೆ. ಪ್ರಧಾನಿಗೆ ಟೆಲಿಪ್ರಾಂಪ್ಟರ್ ನೋಡದೆ ಭಾಷಣ ಮಾಡುವುದಕ್ಕಾಗುವುದಿಲ್ಲ ಎನ್ನುವುದು ಈ ಟ್ರೋಲಿಗರ ವಾದವಾಗಿದೆ. ಇದನ್ನು ಪ್ರಧಾನಿಯೊಬ್ಬರ ದೌರ್ಬಲ್ಯವಾಗಿ ಬಿಂಬಿಸಿ ಆ ಮೂಲಕ ಮೋದಿಯವರನ್ನು ಹಣಿಯಲು ನೋಡುತ್ತಿದ್ದಾರೆ. ಪ್ರಧಾನಿ ಮೋದಿಯವರನ್ನು ಟೀಕಿಸುವುದಕ್ಕಾಗಿ ಅವರೇ ಮಾಡಿರುವ ರಾಶಿ ರಾಶಿ ಪ್ರಮಾದಗಳು ನಮ್ಮ ಮುಂದಿರುವಾಗ, ಈ ಟೆಲಿಪ್ರಾಂಪ್ಟರ್‌ನ್ನೇ ಪ್ರಧಾನಿಯ ಸಮಸ್ಯೆಯಾಗಿ, ದೇಶದ ವೈಫಲ್ಯವಾಗಿ ಬಿಂಬಿಸುವುದು ಎಷ್ಟರಮಟ್ಟಿಗೆ ಸರಿ? ಒಂದು ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ಸತ್ಯ ಮಾಡುವ ‘ಸಂಘಪರಿವಾರ’ದ ತಂತ್ರವನ್ನು ನಾವೂ ಬಳಸಲು ಹೊರಟರೆ ಅದರಿಂದ ನಮ್ಮ ಮುಂದಿರುವ ವಾಸ್ತವಗಳಿಗೆ ನಾವು ಬೆನ್ನು ಹಾಕಿದಂತೆ. ನಾವು ದೇಶ ಎದುರಿಸುವ ನಿಜವಾದ ಸಮಸ್ಯೆಗಳನ್ನು ಮುಂದಿಟ್ಟು ಜನರ ಬಳಿಗೆ ಹೋಗಬೇಕೇ ಹೊರತು, ಪ್ರಧಾನಿಯ ಬಣ್ಣ, ಭಾಷೆ, ಮಾತುಗಾರಿಕೆಗಳನ್ನು ತಮಾಷೆ ಮಾಡುವ ಮೂಲಕ ಅಲ್ಲ. ಮೊತ್ತ ಮೊದಲಾಗಿ, ಟೆಲಿಪ್ರಾಂಪ್ಟರ್ ಕೈ ಕೊಟ್ಟದ್ದರಿಂದ ಮೋದಿಯವರು ಭಾಷಣ ನಿಲ್ಲಿಸಿದರು ಎನ್ನುವುದು ಎಷ್ಟರ ಮಟ್ಟಿಗೆ ಸತ್ಯ? ಎನ್ನುವುದನ್ನು ಪರಿಶೀಲಿಸಬೇಕಾಗಿದೆ. ಆರಂಭದಲ್ಲಿ ಪ್ರಧಾನಿ ಮಾತುಗಳಿಗಾಗಿ ತಡವರಿಸುತ್ತಿದ್ದಾಗ, ಟೆಲಿಪ್ರಾಂಪ್ಟರ್ ಕೈಕೊಟ್ಟಿದೆ ಎಂದೇ ಜನರು ಭಾವಿಸಿದ್ದರು. ವಿವಿಧ ವೆಬ್‌ಸೈಟ್‌ಗಳು ಅದರ ವೀಡಿಯೊಗಳನ್ನು ಹಂಚಿಕೊಂಡಿದ್ದವು. ಆದರೆ ವಾಸ್ತವ ಬೇರೆಯಾಗಿತ್ತು.

ಮೋದಿ ಮಾತು ನಿಲ್ಲಿಸಿದ್ದು ಟೆಲಿಪ್ರಾಂಪ್ಟರ್ ತೊಂದರೆಯಿಂದಾಗಿ ಅಲ್ಲ, ಅವರ ಮಾತುಗಳು ಸಭಾಸದರಿಗೆ ಕೇಳಿಸದೆ ಇರುವ ಕಾರಣಕ್ಕಾಗಿ ಕಾರ್ಯಕ್ರಮ ನಿರ್ವಾಹಕರು ಭಾಷಣವನ್ನು ತಡೆದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಒಂದಿಷ್ಟು ತಡವರಿಸಿದರು. ಆದರೆ ಆರಂಭದ ತಪ್ಪುಗ್ರಹಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡತೊಡಗಿದವು. ನಿಜ, ಇಂತಹ ಪ್ರಕರಣ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಡೆದಿದ್ದರೆ ಸಂಘಪರಿವಾರದ ಕಾರ್ಯಕರ್ತರು, ಅವರ ಟ್ರೋಲ್ ಪಡೆಗಳು ಖಂಡಿತವಾಗಿಯೂ ಸಂಭ್ರಮ ಆಚರಿಸುತ್ತಿದ್ದರು. ಟ್ರೋಲ್ ಮಾಡುತ್ತಿದ್ದರು. ಆದರೆ ಈ ದೇಶದ ಪ್ರಜ್ಞಾವಂತ ಜನರು ಆ ಮಟ್ಟಕ್ಕೆ ಇಳಿಯುವುದು, ಪ್ರಧಾನಿಯನ್ನು ಅಣಕಿಸುವುದು ಸರಿಯಲ್ಲ. ಒಂದು ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟು ಮೋದಿ ತಡವರಿಸಿದರು ಎಂದೂ ಇಟ್ಟುಕೊಳ್ಳೋಣ. ಆಗ, ಟೆಲಿಪ್ರಾಂಪ್ಟರ್‌ನ ಗುಣಮಟ್ಟವನ್ನು, ವ್ಯವಸ್ಥಾಪಕರ ಬೇಜವಾಬ್ದಾರಿಯನ್ನು ಟೀಕಿಸಬೇಕೇ ಹೊರತು, ಪ್ರಧಾನಿಯನ್ನು ಟೀಕಿಸುವುದಲ್ಲ. ಒಬ್ಬ ಪ್ರಧಾನಿ ಅತ್ಯುತ್ತಮ ಮಾತುಗಾರನಾಗುವುದು ಅತ್ಯಗತ್ಯವೆ? ಎನ್ನುವ ಪ್ರಶ್ನೆಯನ್ನು ನಾವು ಮೊದಲು ಕೇಳಿಕೊಳ್ಳಬೇಕು.

ಇಂದಿನ ದಿನಗಳಲ್ಲಿ ಜನನಾಯಕ ಅತ್ಯುತ್ತಮ ಮಾತುಗಾರನಾದಷ್ಟು, ಅದರಿಂದ ದೇಶಕ್ಕೆ ಅಪಾಯ ಹೆಚ್ಚು. ಪ್ರಧಾನಿ ಮೋದಿಯವರೇ ಅದನ್ನು ಸಾಬೀತು ಮಾಡಿದ್ದಾರೆ. ಮಾತುಗಾರರು ತಮ್ಮ ಮಾತುಗಳ ಮೂಲಕವೇ ದೇಶದ ಜನರನ್ನು ಮರುಳು ಮಾಡುತ್ತಾರೆ. ಅಪರೂಪಕ್ಕೆ ಒಳ್ಳೆಯ ಮಾತುಗಾರರು, ಮುತ್ಸದ್ದಿ ರಾಜಕಾರಣಿಗಳು ದೇಶಕ್ಕೆ ಸಿಕ್ಕಿದ್ದಾರೆ. ಅವರಲ್ಲಿ ನಾವು ಮೊದಲನೆಯವರಾಗಿ ಗುರುತಿಸುವುದು ಜವಾಹರಲಾಲ್ ನೆಹರೂ ಅವರನ್ನು. ಅವರ ಮಾತುಗಳಿಂದಲೂ, ಅವರ ಯೋಜನೆಗಳಿಂದಲೂ ಈ ದೇಶಕ್ಕೆ ಮಾತ್ರವಲ್ಲ, ವಿಶ್ವದ ತೃತೀಯ ಶಕ್ತಿಗೆ ಬಹಳಷ್ಟು ಕೊಡುಗೆಗಳು ದೊರಕಿದವು. ಇದೇ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅತ್ಯುತ್ತಮ ಮಾತುಗಾರರೇನೂ ಆಗಿರಲಿಲ್ಲ. ಆದರೆ ಅವರ ಮಾತುಗಳನ್ನು ಇಡೀ ವಿಶ್ವವೇ ಗೌರವಿಸುತ್ತಿತ್ತು. ಯಾಕೆಂದರೆ, ಅವರು ಅತಿ ದೊಡ್ಡ ಆರ್ಥಿಕ ತಜ್ಞರಾಗಿದ್ದರು. ಪ್ರಧಾನಿ ಮೋದಿಯವರು ಮಾತುಗಳ ಮೂಲಕ ಈವರೆಗೆ ಜನರನ್ನು ರಂಜಿಸುತ್ತಾ ಬಂದವರು. ಆದರೆ ಈಗ ದೇಶ ಯಾವ ಸ್ಥಿತಿಗೆ ಮುಟ್ಟಿದೆ ಎನ್ನುವ ಅರಿವು ‘ಮೋದಿಯ ಭಕ್ತ’ರನ್ನೂ ತಟ್ಟಿದೆ. ‘ಮೋದಿಯವರಿಗೆ ಟೆಲಿಪ್ರಾಂಪ್ಟರ್ ಬಳಸದೆ ಭಾಷಣ ಮಾಡಲು ಬರುವುದಿಲ್ಲ’ ಎನ್ನುವುದು ವಿಷಯವೇ ಆಲ್ಲ. ಟೆಲಿಪ್ರಾಂಪ್ಟರ್ ಬಳಸಿಯೋ, ಬಳಸದೆಯೋ ಅವರು ಆಡುವ ಮಾತುಗಳು ದೂರದೃಷ್ಟಿಯನ್ನು ಹೊಂದಿವೆಯೆ? ಎನ್ನುವುದನ್ನು ನಾವು ಚರ್ಚಿಸಬೇಕು. ಈ ಟೆಲಿಪ್ರಾಂಪ್ಟರ್ ಗದ್ದಲದಲ್ಲಿ ವರ್ಲ್ಡ್ ಎಕಾನಮಿಕ್ ಫೋರಂನಲ್ಲಿ ಮೋದಿಯವರು ಭಾರತದ ಸ್ಥಿತಿಗತಿಯ ಬಗ್ಗೆ ಒದರಿದ ಹಸಿ ಸುಳ್ಳುಗಳು ಚರ್ಚೆಗೆ ಬರಲೇ ಇಲ್ಲ.

ಒಬ್ಬ ಪ್ರಧಾನಿ ಟೆಲಿಪ್ರಾಂಪ್ಟರ್ ಬಳಸುವುದು ಸರಿಯೇ? ಎನ್ನುವುದಕ್ಕಿಂತ, ಪ್ರಧಾನಿಯಂತಹ ಉನ್ನತ ಸ್ಥಾನದಲ್ಲಿರುವವರು ಟಿಲಿಪ್ರಾಂಪ್ಟರ್‌ನ್ನು ಕಡ್ಡಾಯವಾಗಿ ಬಳಸಬೇಕು ಎನ್ನುವುದು ಹೆಚ್ಚು ಸರಿ. ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಮಾತನಾಡುವಾಗ, ಮಾತುಗಳು ತಪ್ಪು ಅರ್ಥಗಳನ್ನು ಕೊಟ್ಟರೆ ಬಹುದೊಡ್ಡ ಪ್ರಮಾದಗಳಾಗಬಹುದು. ಆದುದರಿಂದ ತಾನು ಏನು ಮಾತನಾಡುತ್ತಿದ್ದೇನೆ ಎನ್ನುವುದು ಪ್ರಧಾನಿಗೆ ಮೊದಲೇ ಗೊತ್ತಿರುವುದು ಮತ್ತು ಅದನ್ನು ವಿವಿಧ ಮಾಧ್ಯಮಗಳ ಸಹಾಯ ಪಡೆದು ಓದುವುದೇ ಹೆಚ್ಚು ಸರಿ. ಇದೇ ಸಂದರ್ಭದಲ್ಲಿ, ಮೋದಿಯನ್ನು ಇಂತಹ ಸ್ಥಿತಿಗೆ ನೂಕಿರುವುದು ಕೂಡ ಅವರ ‘ಭಕ್ತ ಪಡೆ’ಗಳು ಎನ್ನುವುದನ್ನು ನಾವು ಗಮನಿಸಬೇಕು. ಮೋದಿ ಎಂತಹ ಆಡಳಿತ ನೀಡುತ್ತಿದ್ದಾರೆ ಎನ್ನುವುದನ್ನು ಬದಿಗೆ ಸರಿಸಿ, ಅವರ ಭಾಷಣಗಳೇ ದೇಶಕ್ಕೆ ದೊರಕಿದ ಅತ್ಯಮೂಲ್ಯ ಕೊಡುಗೆಗಳು ಎಂಬಂತೆ ಬಿಂಬಿಸಿರುವುದರಿಂದ ಇಂದು ಟೆಲಿಪ್ರಾಂಪ್ಟರ್ ಚರ್ಚೆಗೆ ಬಂದಿದೆ. ಮೋದಿಯ ಭಾಷಣಗಳಲ್ಲಿ ‘ಪಾಸಿಟಿವ್ ಎನರ್ಜಿಗಳನ್ನು’ ಹುಡುಕುವ ಅವರ ಭಕ್ತರು ಇನ್ನಾದರೂ ಪ್ರಧಾನಿಯ ಕೆಲಸ ಭಾಷಣ ಮಾಡುವುದಲ್ಲ, ದೇಶವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವುದನ್ನು ಅರ್ಥಮಾಡಿಕೊಂಡು, ಮೋದಿಯ ಆಡಳಿತವನ್ನು ವಿಮರ್ಶಿಸಲು ಕಲಿಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)