varthabharthi


ನಿಮ್ಮ ಅಂಕಣ

ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗಕ್ಕೆ ಕುತ್ತು

ವಾರ್ತಾ ಭಾರತಿ : 20 Jan, 2022
ಪ್ರೊ. ಬರಗೂರು ರಾಮಚಂದ್ರಪ್ಪ

ಮಾನ್ಯರೇ

ಕೇರಳದ ಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ 2018ರಲ್ಲಿ ಕನ್ನಡ ವಿಭಾಗವನ್ನು ಆರಂಭಿಸಲಾಯಿತು. ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಲು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕೇಂದ್ರೀಕೃತ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದ್ದರೂ ಕನ್ನಡ ವಿಭಾಗಕ್ಕೆ ಕಾಸರಗೋಡು ವಿಶ್ವವಿದ್ಯಾನಿಲಯದಲ್ಲೇ ಪ್ರವೇಶ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತಿತ್ತು. ಈ ಪ್ರಕಾರ ಮೊದಲ ವರ್ಷ 11 ಜನ, ಎರಡನೇ ವರ್ಷ 18 ಜನರು ಪ್ರವೇಶ ಪಡೆದು ಕನ್ನಡ ವಿಭಾಗವು ಚೆನ್ನಾಗಿ ನಡೆಯುತ್ತಿತ್ತು. ಆದರೆ ಈ ವರ್ಷ ಪ್ರವೇಶ ಪಡೆಯಲು ಆಸಕ್ತರಾದ ವಿದ್ಯಾರ್ಥಿಗಳ ಒಪ್ಪಿಗೆ ಪತ್ರ ತರಲು ಕುಲಪತಿಗಳು ಮೌಖಿಕ ಸೂಚನೆ ನೀಡಿದ್ದು, ಆ ಪ್ರಕಾರ ಕನ್ನಡ ಅಧ್ಯಾಪಕರು 21 ಜನ ವಿದ್ಯಾರ್ಥಿಗಳ ಒಪ್ಪಿಗೆ ಪತ್ರ ತಂದಿದ್ದಾರೆ. ಆದರೆ ಕುಲಪತಿಗಳು ಈಗ ಪ್ರವೇಶ ನೀಡಲು ನಿರಾಕರಿಸುತ್ತಿದ್ದಾರೆ. ಇದರ ಫಲವಾಗಿ ಕನ್ನಡ ವಿಭಾಗವನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ.
ಸಂಬಂಧಪಟ್ಟ ವಿದ್ಯಮಾನಗಳನ್ನು ಗಮನಿಸಿದಾಗ ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವನ್ನು ಮುಚ್ಚುವ ಹುನ್ನಾರ ಕಂಡುಬರುತ್ತಿದೆ. ಕನ್ನಡ ವಿಭಾಗಕ್ಕೆ 7 ಜನ ಖಾಯಂ ಅಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳಿಲ್ಲ ಎಂಬ ಕಾರಣ ಕೊಟ್ಟು ಈ ಹುದ್ದೆಗಳನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ಹುನ್ನಾರ ಇದೆಯೆಂದು ಹೇಳಲಾಗುತ್ತಿದೆ. ಕುಲಪತಿಗಳ ಸೂಚನೆಯಂತೆಯೇ ವಿದ್ಯಾರ್ಥಿಗಳ ಒಪ್ಪಿಗೆ ಪತ್ರ ತಂದಿದ್ದರೂ, ಈಗ ಪ್ರವೇಶ ನಿರಾಕರಿಸುತ್ತಿರುವುದು ಕನ್ನಡ ವಿಭಾಗಕ್ಕೇ ಕುತ್ತು ತರುವ ಕ್ರಮವಾಗಿದೆ. ಇದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನವು ಕೊಟ್ಟಿರುವ ಶೈಕ್ಷಣಿಕ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ.
ಆದ್ದರಿಂದ ನಮ್ಮ ರಾಜ್ಯದ ಮುಖ್ಯಮಂತ್ರಿಯವರು ಮತ್ತು ಉನ್ನತ ಶಿಕ್ಷಣ ಖಾತೆ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ, ಅಲ್ಲಿನ ಕುಲಪತಿ ಮತ್ತು ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಕನ್ನಡ ವಿಭಾಗಕ್ಕೆ ಸೇರಲಿಚ್ಛಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿಸಿಕೊಡಬೇಕೆಂದೂ ಕನ್ನಡ ವಿಭಾಗವನ್ನು ಮುಚ್ಚುವ ಈ ಹುನ್ನಾರದ ಕುತ್ತಿನಿಂದ ಪಾರು ಮಾಡಬೇಕೆಂದೂ ವಿನಂತಿಸುತ್ತೇನೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)