ಕರ್ನಾಟಕ
ಗದಗ: ನವಜಾತ ಶಿಶುವಿಗೆ ಕೋವಿಡ್ ಸೋಂಕು

ಸಾಂದರ್ಭಿಕ ಚಿತ್ರ
ಗದಗ: ನವಜಾತ ಶಿಶು ಹಾಗೂ ಬಾಣಂತಿ ತಾಯಿಗೆ ಕೋವಿಡ್-19 ಸೋಂಕು ತಗುಲಿರುವುದು ವರದಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆಯಾಗಿದ್ದು, ಇದೀಗ ತಾಯಿ ಹಾಗೂ ನವಜಾತ ಶಿಶು ಮನೆಯಲ್ಲೇ ಐಸೊಲೇಶನ್‌ನಲ್ಲಿದ್ದಾರೆ. ತಾಯಿ- ಮಗು ಕ್ಷೇಮದಿಂದ ಇದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಗದಗದಲ್ಲಿ ನವಜಾತ ಶಿಶುವಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ಇದೇ ಮೊದಲು. ಮಗುವಿಗೆ ಕೋವಿಡ್ ಸೋಂಕು ತಗುಲಿದ್ದು, ಕುಟುಂಬದ ಆತಂಕಕ್ಕೆ ಕಾರಣವಾಗಿದೆ. ಅದರೆ ಆರೋಗ್ಯಾಧಿಕಾರಿಗಳು ಮತ್ತು ವೈದ್ಯರು ಕುಟುಂಬದ ಮನವೊಲಿಸಿ, ಮನೆಗೆ ತೆರಳಿ ಐಸೊಲೇಶನ್‌ಗೆ ಒಳಪಡುವಂತೆ ಸೂಚಿಸಿದರು.
ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ, ದಿನಕ್ಕೆ ಎರಡು ಬಾರಿ ಮನೆಗೆ ತೆರಳಿ ಮಗುವಿನ ಆರೋಗ್ಯ ತಪಾಸಣೆ ಮಾಡುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಪ್ಯಾರಾಸೆಟಮೊಲ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ಅನ್ನು ಕುಟುಂಬಕ್ಕೆ ನೀಡಲಾಗಿದ್ದು, ಬುಧವಾರ ಮಗುವಿಗೆ ಜ್ವರ ಮತ್ತು ಶೀತ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೇವಲ ಮೂರು ದಿನದ ಮಗುವಾಗಿರುವ ಕಾರಣ ಮಗುವಿಗೆ ಸೌಮ್ಯ ಔಷಧಿಗಳನ್ನಷ್ಟೇ ನೀಡಲಾಗುತ್ತಿದೆ. ತಾಯಿ ಮಗುವಿನ ಜೆನೋಮ್ ಸೀಕ್ವೆನ್ಸಿಂಗ್ ಗೆ ಮಾದರಿ ಕಳುಹಿಸಲಾಗಿದ್ದು, ಫಲಿತಾಂಶ ನಿರೀಕ್ಷಿಸಲಾಗಿದೆ. ಮಂಗಳವಾರ ಬೆಳಗ್ಗೆ ಮಗುವಿಗೆ ಗಂಟಲು ಕೆರೆತ ಮತ್ತು ಸ್ವಲ್ಪ ಜ್ವರ ಇತ್ತು. ಆದರೆ ಇದೀಗ ಮಗು ಆರೋಗ್ಯವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.
"ಗದಗ ನವಜಾತ ಶಿಶುವಿನ ಕೋವಿಡ್ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಇದೀಗ ಮಗು ಆರೋಗ್ಯವಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಬಗ್ಗೆ ನಮ್ಮ ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ. ಒಂದು ವಾರದ ಬಳಿಕ ಮತ್ತೊಂದು ಪರೀಕ್ಷೆ ನಡೆಸಲಾಗುವುದು" ಎಂದು ಜಿಲ್ಲಾ ಆರೋಗ್ಯಾಧಿಕಾರಿ ಜಗದೀಶ್ ನುಚ್ಚಿನ್ ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ