varthabharthi


ವಿಶೇಷ-ವರದಿಗಳು

ಇಸ್ರೇಲ್‌ನಿಂದ ನಾವು ಕಲಿಯಬೇಕಾದ್ದೇನು?

ವಾರ್ತಾ ಭಾರತಿ : 20 Jan, 2022
ಡಾ. ಎಂ. ವೆಂಕಟಸ್ವಾಮಿ

ಇಸ್ರೇಲ್ ಎಂಬ ಪುಟ್ಟ ದೇಶದ ಭೂವಿಸ್ತೀರ್ಣ ಕರ್ನಾಟಕದ ಆರನೇ ಒಂದು ಭಾಗ ಅಂದರೆ ಕೇವಲ 20,770 ಚ.ಕಿ.ಮೀ. ಎಂದರೆ ಯಾರೂ ನಂಬಲಾರರು. ಕರ್ನಾಟಕದ ಭೂವಿಸ್ತೀರ್ಣ 1,91,800 ಚ.ಕಿ.ಮೀ. ಇನ್ನು ಇಸ್ರೇಲ್ ಜನಸಂಖ್ಯೆ ಕೇವಲ 90 ಲಕ್ಷ. ಅದರ ಭೂಪ್ರದೇಶಕ್ಕೆ ಹೋಲಿಸಿದರೆ ಹೆಚ್ಚು ಜನಸಂದಣಿ ಇರುವ ದೇಶ. ಇನ್ನೊಂದು ಸಮಸ್ಯೆಯೆಂದರೆ ದೇಶದ ಐದನೇ ಒಂದು ಭಾಗ ಮಾತ್ರ ವ್ಯವಸಾಯ ಮಾಡಲು ಯೋಗ್ಯವಾದ ನೆಲವನ್ನು ಹೊಂದಿದ್ದು ಉಳಿದಿರುವ ಪ್ರದೇಶವೆಲ್ಲ ಬೆಟ್ಟಗುಡ್ಡ, ಮರಳುಗಾಡು. ತನ್ನ ದೇಶದ ಜನರಿಗೆ ಬೇಕಾದ ಎಲ್ಲಾ ರೀತಿಯ ಹಣ್ಣು, ತರಕಾರಿ, ದವಸ ಧಾನ್ಯಗಳನ್ನು ಬೆಳೆದುಕೊಂಡು ಉಳಿದ 1.3 ಬಿಲಿಯನ್ ಡಾಲರ್ ಕೃಷಿ ಉತ್ಪನ್ನಗಳನ್ನು ಅದು ವಿದೇಶಗಳಿಗೆ ರಫ್ತು ಮಾಡುತ್ತದೆ. ಇದರಲ್ಲಿ 0.1 ಬಿಲಿಯನ್ ಕೃಷಿ ತಂತ್ರಗಾರಿಕೆ ಯಂತ್ರಗಳು ಸೇರಿವೆ. ಜೊತೆಗೆ ತಾನೇ ಅಭಿವೃದ್ಧಿ ಪಡಿಸಿದ ಅತ್ಯುತ್ತಮ ಬೀಜಗಳನ್ನು ಜಗತ್ತಿನಾದ್ಯಂತ ಮಿಲಿಯಾಂತರ ಡಾಲರುಗಳಿಗೆ ಮಾರುತ್ತದೆ. ಸುತ್ತಲೂ ಮರಳುಗಾಡು ತುಂಬಿಕೊಂಡಿರುವ ಇಸ್ರೇಲ್ ದೇಶದಲ್ಲಿ ತೀರಾ ಕಡಿಮೆ ಮಳೆ ಬೀಳುತ್ತದೆ. ಉತ್ತರ ಭಾಗದಲ್ಲಿ ವಾರ್ಷಿಕ 700 ಮಿ.ಮೀ., ಮಧ್ಯ ಭಾಗದಲ್ಲಿ 400 ಮಿ.ಮೀ ಮತ್ತು ದಕ್ಷಿಣ ಭಾಗದಲ್ಲಿ ಕೇವಲ 25 ಮಿ.ಮೀ. ಮಳೆ ಬೀಳುತ್ತದೆ. ಅಂದರೆ ಇಡೀ ದೇಶದಲ್ಲಿ ವಾರ್ಷಿಕ ಸರಾಸರಿ ಮಳೆ 375 ಮಿ.ಮೀ. ಮಾತ್ರ ಬೀಳುತ್ತದೆ. ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಇಸ್ರೇಲ್‌ಗಿಂತ ಎಷ್ಟೋ ಪಟ್ಟು ಹೆಚ್ಚು ಮಳೆ ಬೀಳುತ್ತದೆ. ಹಾಗಾದರೆ ನಾವು ಮಳೆ ನೀರಿನ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಎಡವಿದ್ದೇವೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಕೇವಲ ಮೂರುನಾಲ್ಕು ದಶಕಗಳ ಹಿಂದೆ ನಮ್ಮ ಹಳ್ಳಿಗಳ ಜನರೇ ಮಳೆ ನೀರನ್ನು ಕೆರೆ ಕುಂಟೆ ಕಲ್ಯಾಣಿ ಒಡ್ಡುಗಳ ಮೂಲಕ ಸರಿಯಾಗಿಯೇ ನಿರ್ವಹಿಸುತ್ತಿದ್ದರು. ಇಸ್ರೇಲ್‌ನಲ್ಲಿ ಹೆಚ್ಚು ಮಳೆ ಬೀಳುವ ಉತ್ತರದಿಂದ ದಕ್ಷಿಣದ ಕಡೆಗೆ ರಾಷ್ಟ್ರೀಯ ಜಲ ಕಾಲುವೆಯ ಮೂಲಕ ನೀರನ್ನು ಹರಿಸಲಾಗುತ್ತದೆ. ಅಂತರ್ಜಲ, ಬಿಸಿ ನೀರು ಬುಗ್ಗೆಗಳಿಂದ ಸಂಗ್ರಹಿಸುವ ನೀರು, ಮರುಬಳಕೆ ಮಾಡುವ ನೀರು, ಸಮುದ್ರ ನೀರಿನಿಂದ ಸಂಸ್ಕರಿಸಿದ ನೀರನ್ನು ಸಂಗ್ರಹಿಸಿ ಬೇಕಾದ ಕಡೆ ಉಪಯೋಗಿಸಿಕೊಳ್ಳಲಾಗುತ್ತದೆ. ಮೋಡಗಳ ಮೇಲೆ ಐಯೊಡಿನ್ ನೈಟ್ರೇಟ್ ಚೆಲ್ಲಿ ಮಳೆಯನ್ನು ಸುರಿಸಲಾಗುತ್ತದೆ. ಮಳೆಯ ನೀರನ್ನು ಸ್ವಲ್ಪವೂ ಪೋಲಾಗದಂತೆ ಕಾಂಟೋರ್ ಮೂಲಕ ಹರಿಸಿ ಕೃಷಿ ಕೊಳಗಳು, ಕೆರೆ ಸರೋವರಗಳು, ಇಂಗು ಗುಂಡಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಇನ್ನು ನೀರನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂದರೆ ಕೃಷಿಗೂ ಕೂಡ ನೀರನ್ನು ಸ್ವಚ್ಛಗೊಳಿಸಿ ಉಪಯೋಗಿಸಿಕೊಳ್ಳುತ್ತಾರೆ. ಅಂದರೆ ಜನರು ಮತ್ತು ಜಾನುವಾರುಗಳು ತಿನ್ನುವ ಆಹಾರ ಶುದ್ಧ ಮತ್ತು ರಾಸಾಯನಿಕ ಕಲ್ಮಷಗಳಿಂದ ಮುಕ್ತವಾಗಿರುತ್ತದೆ. ನಮ್ಮ ರಾಜ್ಯದ ಕಥೆ ನೋಡಿ ಬೆಂಗಳೂರಿನ ಒಳಚರಂಡಿಗಳ ವಿಷ ರಾಸಾಯನಿಕ ಕಲ್ಮಷಗಳನ್ನೊಳಗೊಂಡ ತ್ಯಾಜ್ಯ ನೀರನ್ನು ಸರಿಯಾಗಿ ಸಂಸ್ಕರಿಸದೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುತ್ತ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದೇವೆ. ಇದರ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ನಾವು ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಬೀಳುವ ಮಳೆ ನೀರನ್ನು ಸರಿಯಾಗಿ ಸಂಗ್ರಹಿಸಿ ಕಾಪಾಡಿಕೊಳ್ಳದೆ ಇರುವುದೇ ಇದಕ್ಕೆಲ್ಲ ಕಾರಣ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ನೆಲಮೂಲ, ಜಲಮೂಲ ಕೆರೆ ಕುಂಟೆ ಗೋಕುಂಟೆ ಕಲ್ಯಾಣಿಗಳನ್ನು ನಾಶ ಮಾಡಿ ಹೂಳು ತುಂಬಿಸಿ, ಒತ್ತುವರಿ ಮಾಡಿಕೊಂಡು ಹಾಳು ಮಾಡಲಾಗಿದೆ. ಕಣ್ಣುಮುಂದೆ ಕಾಣುವ ಇಂತಹ ಸಂಪನ್ಮೂಲಗಳ ನಿರ್ವಹಣೆಯನ್ನು ಬಿಟ್ಟು, ದೂರದ ಸಾವಿರಾರು ಕೋಟಿ ಯೋಜನೆಗಳನ್ನು ದಶಕಗಳ ಕಾಲ ಮಾಡಿ ಜನರ ಹಣವನ್ನು ಪೋಲು ಮಾಡಲಾಗುತ್ತಿದೆ. ಇದರ ಜೊತೆಗೆ ಬೆಂಗಳೂರಿನ ತ್ಯಾಜ್ಯವನ್ನೆಲ್ಲ ಸುತ್ತಲಿನ ಹಳ್ಳಿಗಳಲ್ಲಿ ಡಂಪ್ ಮಾಡಿ ಹಳ್ಳಿಗರ ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಬೆಂಗಳೂರಿನ ಜನರ ಪಾಪದ ಪಾಲನ್ನು ಹಳ್ಳಿಗಳ ಜನರೇಕೆ ಒತ್ತುಕೊಳ್ಳಬೇಕೋ ಅರ್ಥವಾಗುತ್ತಿಲ್ಲ. ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲಿ ಬೀಳುವ ತ್ಯಾಜ್ಯವನ್ನು ಆಯಾ ವಾರ್ಡ್‌ಗಳಲ್ಲೇ ಸಂಸ್ಕರಣೆ ಮಾಡಬೇಕಾಗಿದೆ. ಇದನ್ನು ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಜನರು ಪ್ರತಿಭಟಿಸಿ ನಿಲ್ಲಿಸಬೇಕಾಗಿದೆ. ಇಸ್ರೇಲ್‌ನಲ್ಲಿ ಬಹಳಷ್ಟು ಬೆಳೆಗಳನ್ನು ಡ್ರಿಪ್ ನೀರಾವರಿ ಮತ್ತು ಹಸಿರುಮನೆಗಳಲ್ಲಿ ಬೆಳೆಸುತ್ತಾರೆ. ಸಾಲುಸಾಲು ಪ್ಲ್ಯಾಸ್ಟಿಕ್ ಪೈಪ್‌ಗಳು ಮತ್ತು ಸಿಮೆಂಟ್ ತೊಟ್ಟಿಗಳನ್ನು ನೆಲದಲ್ಲಿ ಹೂಳಿ ಅವುಗಳಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಆ ಗಿಡಗಳಿಗೆ ನೀರು, ಗಾಳಿ ಮತ್ತು ಪೋಷಕಾಂಶಗಳನ್ನು ನೇರವಾಗಿ ಬೇರುಗಳಿಗೆ ತಲುಪುವಂತೆ ಪೈಪ್‌ಗಳ ಮೂಲಕ ನೀಡುತ್ತಾರೆ. ಅಂದರೆ ನೀರು, ಗಾಳಿ ಮತ್ತು ಪೋಷಕಾಂಶಗಳು ನೆಲದ ಒಳಗೆ ಮತ್ತು ನೆಲದ ಮೇಲೆ ಸ್ವಲ್ಪವೂ ಪೋಲಾಗದಂತೆ ನೋಡಿಕೊಳ್ಳುತ್ತಾರೆ. ಕೆಲವು ಸಂರಕ್ಷಣಾ ದ್ರವಗಳನ್ನು ಸಂಶೋಧನೆ ಮಾಡಿದ್ದು ಅವುಗಳನ್ನು ಸೊಪ್ಪಿಗೆ ತಡವಿದರೆ ತಿಂಗಳಾದರೂ ಸೊಪ್ಪುಬಾಡದೆ ಇರುತ್ತದೆ. ಇದು ರಹಸ್ಯ ಸೂತ್ರವಾಗಿದ್ದು ಪೇಟೆಂಟ್ ಮಾಡಿಕೊಂಡಿದೆ. ಈ ದ್ರವ ಎಲೆಗಳಲ್ಲಿರುವ ಹರಿತ್ತಿನ ನಷ್ಟವನ್ನು ತಡೆಯುವ ರಹಸ್ಯವಾಗಿದೆ. ಇಸ್ರೇಲ್ ಕೃಷಿ ವಿಜ್ಞಾನಿಗಳು ಅತ್ಯುತ್ತಮ ಬೀಜ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದು ಅವು ರೋಗ ನಿರೋಧಕ ಮತ್ತು ಹೆಚ್ಚು ತಾಪಮಾನ ಇರುವ ವಾತಾವರಣದಲ್ಲೂ ಕಡಿಮೆ ನೀರಿನಿಂದ ಹೆಚ್ಚು ಗುಣಮಟ್ಟ ಮತ್ತು ಇಳುವರಿಯನ್ನು ಕೊಡುವ ತಳಿಗಳಾಗಿವೆ. ಸ್ವಚ್ಛ ನೀರು, ಕಡಿಮೆ ಹಾನಿಕಾರಕ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸುವುದರಿಂದ ಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳು ಆರೋಗ್ಯಪೂರ್ಣವಾಗಿರುತ್ತವೆ. ಇದರಿಂದ ಜನರು ಮತ್ತು ಜಾನುವಾರಗಳ ಆರೋಗ್ಯವೂ ಚೆನ್ನಾಗಿರುತ್ತದೆ. ರೈತರು ಉಪ್ಪು ನೀರಿನಿಂದ ಕೆಲವು ಸಿಹಿ ಹಣ್ಣುಗಳು ಬೆಳೆಯುವುದನ್ನು ಕಂಡುಕೊಂಡಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಟನ್ನುಗಳಷ್ಟು ದವಸ ಧಾನ್ಯ ಮತ್ತು ತಿನ್ನುವ ಆಹಾರವನ್ನು ಪೋಲು ಮಾಡಲಾಗುತ್ತಿದೆ. ಹಣ್ಣು, ತರಕಾರಿ ಬೇಗನೆ ಕೊಳೆತು ಹೋಗುವುದರಿಂದ ಕೆಲವೊಮ್ಮೆ ಅದು ಮಾರ್ಕೆಟ್ ತಲುಪುವ ವೇಳೆಗೆ ಕೆಟ್ಟು ಹೋಗಿರುತ್ತದೆ. ‘ಪಿಮಿ ಆಗ್ರೋ’ ಎಂಬ ಇಸ್ರೇಲ್ ಕಂಪೆನಿ ಹಣ್ಣು, ತರಕಾರಿ ಹೆಚ್ಚು ದಿನಗಳ ಕಾಲ ಉಳಿದುಕೊಳ್ಳುವ ವಿಧಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಹಣ್ಣು, ತರಕಾರಿ ಗಿಡದಿಂದ ಕಿತ್ತಮೇಲೆ 10 ವಾರಗಳ ಕಾಲ ಹಣ್ಣಾಗಿಯೇ ಉಳಿದುಕೊಳ್ಳುವ ವಿಧಾನವನ್ನು ಈಗಾಗಲೇ ಅಭಿವೃದ್ಧಿ ಪಡಿಸಿದೆ. ಇಸ್ರೇಲ್ ಕಂಡುಹಿಡಿದಿರುವ ದ್ರವ 15 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಈ ದ್ರವ ಆರೋಗ್ಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂಬುದು ದೃಢಪಟ್ಟಿದೆಯಂತೆ. ಸಮರ್ಥನೀಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರು ಬೆಳೆಯುವ ಬೆಳೆಗಳ ನಷ್ಟ ಕಡಿಮೆಯಾಗುತ್ತದೆ. ಇಸ್ರೇಲ್‌ನಂತಹ ಪುಟ್ಟ ದೇಶ ಅಳವಡಿಸಿಕೊಂಡಿರುವ ಜಲಸಂಪನ್ಮೂಲ ನಿರ್ವಹಣೆಯ ಮಾದರಿಯಿಂದ ನಾವು, ನಮ್ಮ ಕೃಷಿ ತಜ್ಞರು, ನಮ್ಮ ಸರಕಾರಗಳು ಏನಾದರೂ ಪಾಠಗಳನ್ನು ಕಲಿತುಕೊಳ್ಳಲು ಸಾಧ್ಯವೇ ಎನ್ನುವುದ್ನು ಈಗ ತುರ್ತಾಗಿ ಆಲೋಚಿಸಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)