ಕರ್ನಾಟಕದಲ್ಲಿ ಕೊರೋನ ವೈರಸ್‌ನ ಪ್ರತ್ಯೇಕ ವರ್ತನೆ!
ಕರ್ನಾಟಕ ರಾಜ್ಯದಲ್ಲಿ ಕೋವಿಡ್ ರೋಗ ನಿಯಂತ್ರಣಕ್ಕಾಗಿ ಇತ್ತೀಚೆಗೆ ಜಾರಿಗೊಳಿಸಿರುವ ನಿಯಮಗಳನ್ನು ನೋಡಿದಾಗ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಕೊರೋನ ವೈರಸ್ ಕಾಲಾಂತರದಲ್ಲಿ ರೂಪಾಂತರಿಸುವ ಗುಣ ಹೊಂದಿರುವುದು ಮಾತ್ರವಲ್ಲ ತನ್ನ ವರ್ತನೆಗಳಲ್ಲಿ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಅದು ಬೇರೆ ಬೇರೆ ರೀತಿಯಾಗಿ ನಡೆದುಕೊಳ್ಳುತ್ತದೆ. ಅದು ಹೇಗೆಂದರೆ,
ಕರ್ನಾಟಕ ರಾಜ್ಯದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಹಗಲಲ್ಲಿ ವೈರಸ್ ಎಲ್ಲೂ ಸಂಚರಿಸುವುದಿಲ್ಲ. ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆಯವರೆಗೆ ಬೀದಿ ಬೀದಿಗಳಲ್ಲಿ ಸುತ್ತಾಡುತ್ತದೆ.
ಅದರಲ್ಲೂ ಪೊಲೀಸ್ ಅಧಿಕಾರಿಗಳು ಹೆಚ್ಚಾಗಿ ಸುತ್ತಾಡುವ ನಗರ ಮಧ್ಯ ಭಾಗಗಳಲ್ಲಿ ಅದರ ಹಾವಳಿ ಹೆಚ್ಚು. ತುರ್ತು ಅವಶ್ಯಕತೆಗಳಿಗೆ ಆ ಹೊತ್ತಿನಲ್ಲಿ ಓಡಾಡುವ ವಾಹನ ಪ್ರಯಾಣಿಕರ ಮೇಲೆ ಅದು ಹೆಚ್ಚಾಗಿ ದಾಳಿ ಇಡುತ್ತದೆ. ಬ್ಯಾರಿಕೇಡ್ ಹಾಕಿರುವಲ್ಲೇ ಅದು ಕಾದು ಕೂತಿರುತ್ತದೆ. ಉಳಿದೆಡೆ ಅಷ್ಟು ಹಾನಿ ಉಂಟು ಮಾಡುವುದಿಲ್ಲ. ಗ್ರಾಮೀಣ ಭಾಗದ ರಸ್ತೆಗಳಿರುವಲ್ಲಿ ವೈರಸ್‌ಗಳು ಬರುವುದು ಕಡಿಮೆ.
ವಾರಾಂತ್ಯದಲ್ಲಿ ಈ ಕೊರೋನ ವೈರಸ್ ಸರಿಯಾಗಿ ನೆನಪಿಟ್ಟುಕೊಂಡಿರುತ್ತದೆ. ಶನಿವಾರ, ರವಿವಾರಗಳಲ್ಲಿ ಅದು ರಾತ್ರಿ ಹಗಲೆನ್ನದೆ ಊರೆಲ್ಲ ಸುತ್ತಾಡುತ್ತದೆ. ಆದರೆ ರಸ್ತೆ ಬದಿಯ ಗೂಡಂಗಡಿಗಳಿರುವಲ್ಲಿ, ಸಣ್ಣ ಪುಟ್ಟ ವ್ಯಾಪಾರ ನಡೆಯುವ ಜಾಗಗಳಲ್ಲಿ ಅದು ಸುಳಿಯುವುದಿಲ್ಲ. ಆಹಾರ ಸಾಮಾಗ್ರಿ ಮಾರಾಟದ ಅಂಗಡಿಗಳ ಮುಂದೆ ಎಷ್ಟೇ ಮಂದಿ ನೆರೆದಿರಲಿ, ಅವರ ಸುದ್ದಿಗೆ ಬರುವುದಿಲ್ಲ. ಬಟ್ಟೆ, ಚಪ್ಪಲಿ ಇನ್ನಿತರ ಆಹಾರ ವಿಭಾಗಕ್ಕೆ ಸೇರದ ಅಂಗಡಿಗಳ ಬಾಗಿಲಲ್ಲಿ ಈ ವೈರಸ್‌ಗಳು ಕಾದು ಕುಳಿತಿರುತ್ತವೆ.
ಹೋಟೆಲಿನಿಂದ ತಿಂಡಿ ಊಟ ಇತ್ಯಾದಿಗಳನ್ನು ತಿನ್ನಲು ಬರುವ ಗಿರಾಕಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ನಾವು ತಿನ್ನುತ್ತೇವೆ ಅಂದರೂ ವೈರಸ್‌ಗಳು ಬಿಡುವುದಿಲ್ಲವಂತೆ. ಆದರೆ ಆಹಾರದ ಪಾರ್ಸೆಲ್‌ಗಳನ್ನು ಹೋಟೆಲುಗಳಿಂದ ಪಡೆಯಲು ಒಬ್ಬರ ಮೇಲೊಬ್ಬರು ಮುಗಿಬಿದ್ದರೂ ವೈರಸ್ ಅವರನ್ನು ಮುಟ್ಟುವುದಿಲ್ಲವಂತೆ.
ಕರ್ನಾಟಕದ ವೈರಸ್‌ಗಳ ಮತ್ತೊಂದು ವಿಶೇಷವೇನೆಂದರೆ ಕೆಲವೊಂದು ನಿರ್ದಿಷ್ಟ ಜಾತ್ರೆಗಳಲ್ಲಿ, ಧಾರ್ಮಿಕ ಕಲಾಪಗಳಲ್ಲಿ ಸಾವಿರಾರು ಜನ ಸೇರಿದರೂ ಆ ಭಾಗಕ್ಕೆ ವೈರಸ್ ಬರುವುದಿಲ್ಲವಂತೆ. ಬೀಚುಗಳಲ್ಲಿ, ಪ್ರವಾಸಿ ಕೇಂದ್ರಗಳಲ್ಲಿ ತನಿಖಾಧಿಕಾರಿಗಳು ಕಂಡುಬರದಿದ್ದರೆ, ವೈರಸ್ ಕೂಡ ಆ ಭಾಗಕ್ಕೆ ಬರುವುದಿಲ್ಲವಂತೆ.
ವಾರದ ಏಳೂ ದಿನಗಳಲ್ಲಿ ರಸ್ತೆಯಲ್ಲಿ ಓಡುವ ಬಸ್‌ಗಳನ್ನು ಈ ವೈರಸ್‌ಗಳು ಪ್ರವೇಶಿಸುವುದೇ ಇಲ್ಲ. ಅಂತೆಯೇ ಇತರ ವಾಹನಗಳಲ್ಲಿ ಕೂಡ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ ಸಂಜೆ ಬಸ್ಸಿನೊಳಗೆ ಸಾಮಾಜಿಕ ಅಂತರವನ್ನು ಮರೆತು ಒಬ್ಬರಿಗೊಬ್ಬರು ಮೈತಾಗಿಸಿ ನಿಂತುಕೊಂಡಿದ್ದಾಗಲೂ ಅಲ್ಲಿ ವೈರಸ್ ಬರುವುದಿಲ್ಲ. ಇದನ್ನು ತಮ್ಮ ಅನುಭವದೊಂದಿಗೆ ಕಂಡುಕೊಂಡಿರುವ ಬಸ್ಸುಗಳ ಕಂಡಕ್ಟರ್, ಡ್ರೈವರ್‌ಗಳಲ್ಲಿ ಹೆಚ್ಚಿನವರು ಆ ಕಾರಣಕ್ಕಾಗಿಯೇ ಮಾಸ್ಕುಗಳನ್ನೂ ಧರಿಸುವುದಿಲ್ಲ. ಸಾಮಾಜಿಕ ಅಂತರ ಕಾಯುವ ಕಂಡಕ್ಟರ್‌ಗಳು ಆ ಕೆಲಸಕ್ಕೇ ನಾಲಾಯಕ್ ಅಂತೆ.
ಇನ್ನು ಕೇರಳದಿಂದ ಕರ್ನಾಟಕ ಪ್ರವೇಶಿಸುವಲ್ಲಿ, ಮುಖ್ಯ ಹೆದ್ದಾರಿಯಲ್ಲಿ ಈ ವೈರಸ್‌ಗಳು ಗುಂಪು ಗುಂಪಾಗಿ ಹೊಂಚುಹಾಕುತ್ತಿವೆಯಂತೆ. ಹಾಗಾಗಿ ಅಲ್ಲಿ ತಪಾಸಣೆಗಾಗಿ ಕಾದಿರುವವರು ನಡೆದು ಹೋಗುವವರ, ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರಲ್ಲಿ ವೈರಸ್‌ನ ಪ್ರವೇಶ ಆಗಿರುವ ಅಥವಾ ಆಗುವ ಸಾಧ್ಯತೆ ಇರುವ ಬಗ್ಗೆ ಪರೀಕ್ಷೆಗಳನ್ನೆಲ್ಲಾ ನಡೆಸಿಯೇ ಕರ್ನಾಟಕವನ್ನು ಪ್ರವೇಶಿಸಲು ಬಿಡುತ್ತಾರೆ. ತಪಾಸಣೆದಾರರು ಇರುವ ಪ್ರದೇಶಕ್ಕೆ ಬರುವ ಮೊದಲೇ ಅಡ್ಡದಾರಿಯೊಂದನ್ನು ಹಿಡಿದು ಕರ್ನಾಟಕ ಪ್ರವೇಶಿಸುವ ಮಂದಿಯ ಸುದ್ದಿಗೆ ಈ ವೈರಸ್ ಬರುವುದಿಲ್ಲವಂತೆ.
ಮತ್ತೊಂದು ವಿಶೇಷವೇನೆಂದರೆ, ಕೇರಳ-ಕರ್ನಾಟಕದ ನಡುವೆ ಓಡುವ ಅಂತರ್‌ರಾಜ್ಯ ಬಸ್ಸುಗಳಲ್ಲಿ ಎಷ್ಟೇ ಪ್ರಯಾಣಿಕರಿರಲಿ ವೈರಸ್ ಅವರೆಲ್ಲರಿಗೂ ರಿಯಾಯಿತಿ ನೀಡಿದೆಯಂತೆ.