varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಮರಾಠಿ ರಂಗಭೂಮಿಯ ಸ್ಫೂರ್ತಿ

ವಾರ್ತಾ ಭಾರತಿ : 20 Jan, 2022
ಸುಧಾ ಶೆಟ್ಟಿ

 ರಂಗಕಲಾವಿದರಾಗಿರುವ ಸುಧಾ ಶೆಟ್ಟಿ ಮುಂಬೈ ಕನ್ನಡಿಗರು. ಮರಾಠಿ ರಂಗಭೂಮಿಯಲ್ಲೂ ಅವರ ಹೆಜ್ಜೆ ಗುರುತುಗಳಿವೆ. ಮುಂಬೈಯಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡಿರುವ ಇವರ ಲೇಖನಗಳು ಹಲವು ನಿಯತ ಕಾಲಿಕಗಳಲ್ಲಿ ಪ್ರಕಟವಾಗಿವೆ. ಮುಂಬೈ ಕನ್ನಡ ರಂಗಭೂಮಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ, ಮರಾಠಿ ರಂಗಭೂಮಿಯ ಕುರಿತಂತೆ ಇಲ್ಲಿ ಅವರು ಬೆಳಕು ಚೆಲ್ಲಿದ್ದಾರೆ.

ಸುಧಾ ಶೆಟ್ಟಿ

ಸುತ್ತಲೂ ಕತ್ತಲೆ. ರಂಗಮಂಚದಲ್ಲಿ ಮೆಲ್ಲಮೆಲ್ಲನೆ ಬೆಳಕು ಹರಡಿತು. ಸಾಲಾಗಿ ನಿಂತ ಕಲಾವಿದರು, ಕೈಮುಗಿದುಕೊಂಡು ನಾಂದಿ (ರಂಗದೇವತೆಯ ಆರಾಧನೆ) ಹಾಡಿದರು.; ನಾಂದಿ ಮುಗಿದ ತಕ್ಷಣ ಎಲ್ಲಾ ಕಲಾವಿದರು, ಚೆಲ್ಲಾಪಿಲ್ಲಿಯಾದರು. ನಂತರ ಶುರುವಾಯಿತು ನಾಟಕ. ಸುಮಾರು 2- 3 ಗಂಟೆಯವರೆಗೆ, ಯಾವ ಸಮರ್ಪಣಾ ಭಾವದಿಂದ ಕಲಾವಿದರು, ರಂಗಮಂಚದಲ್ಲಿ ತಮ್ಮ ಅಭಿನಯ ಕೌಶಲ್ಯವನ್ನು ಪ್ರದರ್ಶಿಸಿದರೋ, ಅದೇ ಸಮರ್ಪಣಾಭಾವದಲ್ಲಿ ಪ್ರೇಕ್ಷಕರೂ ನಾಟಕ ನೋಡುವುದರಲ್ಲಿ ತಲ್ಲೀನರಾಗಿದ್ದರು. ಒಂದು ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಯಾವುದೇ ಮೊಬೈಲ್ ಕಿರಿಕಿರಿ, ಜನರ ಗುಸುಗುಸು, ಮಕ್ಕಳಾಟ, ಓಡಾಟ, ಅಳು ಯಾವುದೂ ಇಲ್ಲ. ಪ್ರೇಕ್ಷಕರ ಮೌನದಲ್ಲಿ ಕಲಾವಿದರು ಮಾತನಾಡುತ್ತಿದ್ದರು. ಇದು ನಾನು ರಂಗಮಂದಿರದಲ್ಲಿ ನೋಡಿದ, ಮರಾಠಿ ನಾಟಕದ ಮೊದಲ ಅನುಭವ.

ಭಾರತ ಒಂದು ಕಲಾರಾಧಕರ, ಕಲಾವಿದರ, ಕಲಾಪ್ರೇಮಿಗಳ ದೇಶ. ನಮ್ಮಲ್ಲಿ ರಾಜ್ಯ, ಪ್ರಾಂತಗಳಿಗಿಂತಲೂ ಹೆಚ್ಚಾಗಿ ವಿಭಿನ್ನ ಶೈಲಿಯ ಕಲೆಗಳನ್ನು ನಾವು ನಮ್ಮ ದೇಶ ಭಾರತದಲ್ಲಿ ನೋಡುತ್ತೇವೆ. ಅದು ನೃತ್ಯ ಆಗಿರಬಹುದು, ಯಕ್ಷಗಾನ ಆಗಿರಬಹುದು, ಬಯಲಾಟ,ಸಂಗೀತ, ಗೊಂಬೆಯಾಟ, ಕೀರ್ತನೆ, ಭಜನೆ, ನಾಟಕ ಹೀಗೆ ಹಲವಾರು ಕಲೆಗಳನ್ನು ಬೇರೆಬೇರೆ ರೀತಿಯಲ್ಲಿ ನಾವು ಅನುಭವಿಸಿರಬಹುದು. ಮರಾಠಿ ರಂಗಭೂಮಿ ಕೂಡ ಇದರದ್ದೇ ಒಂದು ಭಾಗ ಎನ್ನಬಹುದು. ಇಲ್ಲೂ ನಾವು ಅನೇಕ ತರಹದ, ವಿವಿಧ ಕಲೆಗಳನ್ನು ಕಾಣುತ್ತೇವೆ. ಅದು ತಮಾಷ ( ಲಾವಣಿ) ಆಗಿರಬಹುದು, ಪೋವಾಡ, ಶಾಸ್ತ್ರೀಯ ಸಂಗೀತ ಏನೇ ಆಗಿರಬಹುದು. ಭಾರತದಲ್ಲಿ ನಡೆಯುವಷ್ಟು ನಾಟಕ, ಸಿನೆಮಾಗಳು ಜಗತ್ತಿನ ಯಾವ ದೇಶದಲ್ಲೂ ಕಂಡು ಬರುವುದಿಲ್ಲ. ಎಷ್ಟೋ ವರ್ಷಗಳಿಂದ ಮನರಂಜನೆಗಾಗಿ ನಾವು ಮನೆಯಿಂದ ಹೊರಬಂದು ಇದರ ಅನುಭವ ಪಡೆಯಲು ದೂರ ದೂರದವರೆಗೆ ಹೋದವರು. ಇಂದಿನ ಯುವ ಪೀಳಿಗೆಯಂತೆ ನಾವು ಮನೆಯಲ್ಲಿಯೇ ಕೂತು ಯು-ಟ್ಯೂಬ್, ಝೂಂ ಅಥವಾ ನೆಟ್‌ಫ್ಲಿಕ್ಸ್( ಘೆಛಿಠ್ಛ್ಝಿಜ್ಡಿ)ಅನ್ನು ಅವಲಂಬಿಸಿದವರಲ್ಲ. ಮರಾಠಿ ರಂಗಭೂಮಿ ನಟರು ಕಳೆದ ಎಷ್ಟೋ ವರ್ಷಗಳಿಂದ ತಮ್ಮ ಅತ್ಯುತ್ತಮ ಪ್ರತಿಭೆಯಿಂದ, ತಮ್ಮ ಮನರಂಜನೆಯಿಂದ, ನಮ್ಮ ಮನ ರಂಜಿಸಿದ್ದಾರೆ. ಆದ್ದರಿಂದ ಅವರ ನಾಟಕಗಳನ್ನು ಎಷ್ಟೇ ದೂರ ದೂರ ಹೋಗಿ ನೋಡಿದರೂ, ಸಂತೃಪ್ತರಾಗಿ ರಂಗಮಂದಿರದಿಂದ ಹೊರ ಬರುತ್ತೇವೆ..

ಮರಾಠಿ ರಂಗಭೂಮಿಯ ಇತಿಹಾಸವನ್ನು ನೋಡಲು ನಾವು ಸ್ವಲ್ಪ ಹಿಂದೆ ತಿರುಗಿ ನೋಡಿದರೆ 1843ರಲ್ಲಿ ಶ್ರೀ ವಿಷ್ಣುದಾಸ್ ಭಾವೆ ಇವರ ‘ಸೀತಾ ಸ್ವಯಂವರ’ ಎಂಬ ನಾಟಕವು ಸಾಂಗ್ಲಿಯಲ್ಲಿ ಮೊಟ್ಟಮೊದಲ ಬಾರಿಗೆ ರಂಗಮಂದಿರ ಏರಿತು. ಈ ನಾಟಕ ಕರ್ನಾಟಕದ ಯಕ್ಷಗಾನದಿಂದ ಪ್ರೇರಣೆಗೊಂಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ತಂಜಾವೂರಿನಲ್ಲಿ, ಭೋಸ್ಲೆ ಮಹಾರಾಜರ ದರಬಾರ್‌ನಲ್ಲಿ ಮರಾಠಿ ನಾಟಕಗಳು ನಡೆಯುತ್ತಿದ್ದವು. ಆದರೆ ಇದು ಮಹಾರಾಷ್ಟ್ರದಿಂದ ತುಂಬಾ ದೂರ ಇದ್ದ ಕಾರಣ ಮರಾಠಿ ಮಣ್ಣಿಗೆ ಈ ನಾಟಕಗಳು ತಲುಪಲಿಲ್ಲ ಎಂದು ಹೇಳಬಹುದು. ಕೀರ್ತನೆಯಿಂದ ಸಂಗೀತ ಬಂತು. ದಶಾವತಾರದಿಂದ ಅಭಿನಯ ಬಂತು. ಆದರೆ ಇದಕ್ಕೆ ಬೇಕಾದ ಮೇಕಪ್, ಬೆಳಕು, ಬಟ್ಟೆ, ರಂಗಮಂಚದ ಪರಿಕರಗಳನ್ನು ಯಕ್ಷಗಾನದಿಂದ ಆಯ್ದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕಾಲಕ್ರಮೇಣ ಮರಾಠಿ ನಾಟಕಗಳಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ಕೊಡಲಾಯಿತು.

 1880ರಲ್ಲಿ ಅಣ್ಣಾಸಾಹೇಬ್ ಕಿರ್ಲೋಸ್ಕರ್ ಇವರ ಸಂಗೀತ ಸೌಭದ್ರ ಎಂಬ ನಾಟಕವು ಇತಿಹಾಸವನ್ನು ರಚಿಸಿತು. ಈ ಕಾಲವು ಸಂಗೀತ ನಾಟಕದ ಸುವರ್ಣಯುಗ ಎಂದು ಕರೆಯಲಾಯಿತು. ಆ ಕಾಲದಲ್ಲಿ, ನಟರನ್ನು ಆಯ್ಕೆಮಾಡುವಾಗ ಒಳ್ಳೆಯ ಹಾಡುಗಾರರನ್ನು ಆಯ್ಕೆ ಮಾಡುತ್ತಿದ್ದರು. ಸಂಗೀತ ಪ್ರಧಾನ ನಾಟಕಗಳಲ್ಲಿ ಸ್ವರ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಅವರ ಪಿತಾಶ್ರೀ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಇವರ ಹೆಸರೂ ಇದೆ. ಅಲ್ಲದೆ ಸಂಗೀತ ನಾಟಕಗಳಲ್ಲಿ ಅತ್ಯಂತ ಹೆಸರುವಾಸಿಯಾದ ಹಾಡುಗಾರ ನಟ ಎಂದರೆ, ಬಾಲಗಂಧರ್ವ. ಸಂಗೀತ ಪ್ರಧಾನ ನಾಟಕಗಳಲ್ಲಿ ಇತಿಹಾಸ ರಚಿಸಿದವರು. ಇವರು ಹೆಣ್ಣು ಪಾತ್ರ ಮಾಡುವವರಲ್ಲಿ ಸೈ ಎನಿಸಿಕೊಂಡವರು. ಅವರು ತಮ್ಮ ಸುಮಧುರ ಹಾಡು ಹಾಗೂ ಮೋಹಕ ನಟನೆಯಿಂದ ಪ್ರೇಕ್ಷಕರ ಮನಗೆದ್ದವರು.

1943ರಲ್ಲಿ ‘ಶ್ರೀ ವಿಷ್ಣು ದಾಸ್ ಭಾವೆ’ ಇವರ ‘ಸೀತಾಸ್ವಯಂವರ’ ನಾಟಕದ ಸ್ಮರಣಾರ್ಥವಾಗಿ ಎಲ್ಲರೂ ಸೇರಿ ಸಾಂಗ್ಲಿಯಲ್ಲಿ ನಾಟಕೋತ್ಸವವನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ನಾಟ್ಯ ವಿದ್ಯಾಮಂದಿರ ಸ್ಥಾಪನೆ ಮಾಡಲಾಯಿತು. ಈ ಮಹತ್ವದ ಕ್ಷಣದಲ್ಲಿ ಎಲ್ಲಾ ನಾಟ್ಯ ರಸಿಕರ ಸಮಕ್ಷದಲ್ಲಿ ಸಾಂಗ್ಲಿಯಲ್ಲಿ ‘5 ನವೆಂಬರ್’ ಈ ದಿನವನ್ನು ಮರಾಠಿ ರಂಗಭೂಮಿ ದಿನವೆಂದು ನಿಶ್ಚಯಿಸಲಾಯಿತು.

1950,60ರ ದಶಕದಲ್ಲಿ ಹೊಸ ನಾಟಕಕಾರರ ಒಂದು ಹೊಸ ಪೀಳಿಗೆ ಮರಾಠಿ ರಂಗಭೂಮಿಗೆ ಸಿಕ್ಕಿತು. ಇವರಲ್ಲಿ ವಿಜಯ ತೆಂಡೂಲ್ಕರ್, ವಸಂತ್ ಕಾನೆಟ್ಕರ್, ಪು.ಲ. ದೇಶಪಾಂಡೆ ಮುಂತಾದವರ ಹೆಸರು ಉಲ್ಲೇಖನೀಯ. ಸಂಗೀತ ಪ್ರಧಾನ ನಾಟಕಗಳು ಸ್ವಲ್ಪ ಹಿಂದೆ ಸರಿದ ನಂತರ, ಗದ್ಯದಲ್ಲೇ ಸಂಭಾಷಣೆ ಹೇಳುವ ನಾಟಕಗಳ ಪರಂಪರೆ ಶುರುವಾಯಿತು. ಇದರಲ್ಲೂ ಅನೇಕ ನಾಟಕಕಾರರು, ದಿಗ್ಗಜರು, ತಮ್ಮ ನಾಟಕದಿಂದ, ನಿರ್ದೇಶನದಿಂದ ಮರಾಠಿ ರಂಗಭೂಮಿಗೆ ಉತ್ತಮ ನಾಟಕವನ್ನು ರಚಿಸಿ, ಇತಿಹಾಸ ನಿರ್ಮಿಸಲು ಸಹಕಾರ ನೀಡಿದರು.

ಮರಾಠಿ ರಂಗಭೂಮಿ ಕಲಾವಿದರಿಗೆ ಒಂದು ಮಹಾವಿದ್ಯಾಲಯ ಇದ್ದಹಾಗೆ. ಕಲಾವಿದರಿಗೆ ಕಲಿಯಲು ಬೇಕಾದ ಎಲ್ಲಾ ತರಹದ ಪಾಠವನ್ನು ನಾವು ಮರಾಠಿ ರಂಗಭೂಮಿಯಲ್ಲಿ ಕಲಿಯಬಹುದು. ಮರಾಠಿ ರಂಗಭೂಮಿಯ ಕಲಾವಿದರು, ದಿಗ್ದರ್ಶಕರು ಎಲ್ಲದಕ್ಕೂ ಸೈ ಎನಿಸಿಕೊಂಡವರು. ಇವರು ಬೇರೆ ಬೇರೆ ರೀತಿಯ ನಾಟಕಗಳ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅತಿ ಚಿಕ್ಕ ಪಾತ್ರ ಮಾಡುವ ಒಬ್ಬ ಕಲಾವಿದ ಕೂಡ ಮುಂದೆ ಈ ರಂಗಭೂಮಿಯಲ್ಲಿ ನನಗೆ ಉತ್ತಮ ಭವಿಷ್ಯವಿದೆ ಎಂದು ಅರಿತುಕೊಂಡೇ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಸುಸೂತ್ರವಾಗಿ ನೆರವೇರಿಸುತ್ತಾನೆ. ತನ್ನ ಪಾತ್ರವನ್ನು ನಿಷ್ಠೆಯಿಂದ ಅರಿತುಕೊಂಡು, ಅದಕ್ಕೆ ಸೂಕ್ತವಾದ ನ್ಯಾಯವನ್ನು ಸಲ್ಲಿಸುತ್ತಾನೆ. ಎಲ್ಲ ಕಲಾವಿದರು ಬಹುಶಃ ಇದೇ ಶ್ರದ್ಧೆ ಭಾವದಿಂದ ತಮ್ಮ ಪ್ರತಿಭೆಯನ್ನು ಸಾದರಪಡಿಸುತ್ತಿರಬಹುದು. ಆದರೆ ಮುಂಬೈಯಲ್ಲಿ ಮರಾಠಿ ನಾಟಕಗಳನ್ನು, ಕಲಾವಿದರನ್ನು ಹತ್ತಿರದಿಂದ ನೋಡಿದ ನನಗೆ ಅವರ ಸರಳತೆ ತುಂಬಾ ಇಷ್ಟವಾಯಿತು. ಮರಾಠಿ ರಂಗಭೂಮಿಯ ಶಿಸ್ತಿನ ಬಗ್ಗೆ ಎಲ್ಲರೂ ಬಲ್ಲರು. ಸ್ಕ್ರಿಪ್ಟ್ ಪೂಜೆ ಮಾಡಿದ ನಂತರ ಇವರು ಅದನ್ನು ನೆಲದ ಮೇಲೆ ಇಡುವುದಿಲ್ಲ. ಸ್ಕ್ರಿಪ್ಟು ಓದುವಾಗ ಮೆಟ್ಟು ಹಾಕಿಕೊಳ್ಳಬಾರದು. ಎಲ್ಲರೂ ನೆಲದ ಮೇಲೆ ಕೂತು ಸ್ಕ್ರಿಪ್ಟನ್ನು ಓದುತ್ತಾರೆ. ಸಮಯಪ್ರಜ್ಞೆ ಬಹುಶಃ ಈ ನಟರಿಗೆ ದೈವ ಕೊಡುಗೆಯೋ ಏನೋ. ನಾಟಕ ರಿಹರ್ಸಲ್ ನಡೆಯುವಾಗ, ನಿರ್ದೇಶಕನಲ್ಲದೆ ಬೇರೆ ಯಾರಿಗೂ ಮಾತನಾಡುವ ಅಪ್ಪಣೆ ಇಲ್ಲ. ತನ್ನ ಮಗುವನ್ನು ಹೇಗೆ ಸಾಕಬೇಕೆಂದು ತನಗೆ ಗೊತ್ತಿದೆ ಆದ್ದರಿಂದ, ಬರಹಗಾರರಿಂದ ದತ್ತು ಪಡೆದ ನಂತರ ನಾಟಕದ ಸಂಪೂರ್ಣ ಹಕ್ಕು ನಿರ್ದೇಶಕನದ್ದಾಗಿರುತ್ತದೆ. ಎಷ್ಟೇ ದೊಡ್ಡ ಕಲಾವಿದನಾದರೂ, ನಿರ್ದೇಶಕನ ನಿರ್ದೇಶನಕ್ಕೆ, ಮಾತಿಗೆ, ಮರ್ಯಾದೆ ಕೊಡುತ್ತಾನೆ. ನಾಟಕಕ್ಕೆ ಸಹಾಯ ಮಾಡಿದ ಪ್ರತಿಯೊಬ್ಬರ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿ ಮರಾಠಿ ನಾಟಕಗಳಲ್ಲಿ ಇಂದಿಗೂ ಇದೆ. ಅವರ ಈ ನಿಷ್ಠೆಯಿಂದಾಗಿ ಮರಾಠಿ ರಂಗಭೂಮಿಗೆ ಪ್ರೇಕ್ಷಕರ ಅಭಾವವಿಲ್ಲ.

ಹೊಸ ಕಲಾವಿದರು ರಂಗಭೂಮಿಗೆ ಬರಬೇಕೆಂದು ಕಳೆದ ಆರು ದಶಕಗಳಿಂದ ಮಹಾರಾಷ್ಟ್ರದ ಶಾಲಾ, ಕಾಲೇಜುಗಳಲ್ಲಿ, ಬೇರೆ ಬೇರೆ ಪ್ರಾಂತಗಳಲ್ಲಿ, ಹಳ್ಳಿಗಳಲ್ಲಿ, ನಾಟಕ ಸ್ಪರ್ಧೆ ನಡೆಯುತ್ತವೆ. ಹೆಚ್ಚಾಗಿ ಈ ಸ್ಪರ್ಧೆಗಳಲ್ಲಿ ಪ್ರಾಯೋಗಿಕನಾಟಕಗಳ ಅನುಭವ ನಾವು ಪಡೆಯಬಹುದು. ಇಂತಹ ಸ್ಪರ್ಧೆ ನಾಟಕಗಳಲ್ಲಿ ಕೂಡ ಕಲಾವಿದರು, ಮಕ್ಕಳು, ದೊಡ್ಡವರು ಎಲ್ಲರೂ ಸಹಜವಾಗಿ, ನುರಿತ ಅನುಭವಿ ಕಲಾವಿದರಂತೆ ನಟಿಸುತ್ತಾರೆ.

ಪುಣೆಯಲ್ಲಿ ಪ್ರತಿವರ್ಷ ಬಾಲ ರಂಗ ಮಹೋತ್ಸವಗಳು ನಡೆಯುತ್ತವೆ. ಇದು ವಿಶೇಷವಾಗಿ ಮಕ್ಕಳಿಗಾಗಿ ಒಂದು ತರಹದ ವರ್ಕ್ ಶಾಪ್. ಇಲ್ಲಿಯ ನಾಟಕಗಳಲ್ಲಿ ಸ್ವಲ್ಪದೊಡ್ಡ ಮಕ್ಕಳು ಅಭಿನಯಿಸುತ್ತಾರೆ. ಆದರೆ ಇದರ ಕಥೆಗಳು, ಮಕ್ಕಳ ಸಮಸ್ಯೆಯ ಮೇಲೆ ಆಧಾರವಾಗಿರುತ್ತದೆ. ಈ ಮಹೋತ್ಸವಗಳು ಪ್ರತಿವರ್ಷವೂ ಹೌಸ್‌ಫುಲ್ ಆಗಿ ನಡೆಯುತ್ತವೆ.

 ಪ್ರಾಯೋಗಿಕ ನಾಟಕಗಳಲ್ಲಿ ಮರಾಠಿ ನಾಟಕವು ಎತ್ತಿದ ಕೈ ಎಂದು ಹೇಳಬಹುದು. ಹಲವಾರು ವರ್ಷಗಳ ಹಿಂದೆ ಕೇದಾರ್ ಶಿಂಧೆ ನಿರ್ಮಿಸಿದ ಸಹಿ ರೆ ಸಹಿ ಎಂಬ ನಾಟಕ ಪ್ರದರ್ಶನಗೊಂಡಿತು. ಒಬ್ಬನೇ ನಟ ರಂಗದಲ್ಲಿ ನಾಲ್ಕು ಪಾತ್ರವನ್ನು ಮಾಡುತ್ತಾನೆ. ಈ ನಾಲ್ಕು ಪಾತ್ರವನ್ನು ಒಂದೇ ಸಲ ರಂಗದಲ್ಲಿ ತೋರಿಸಲಾಗಿದೆ. (ಬೆನ್ನು, ಕೈ, ಭುಜ, ಕಾಲು, ಮುಖ ಹೀಗೆ) ಆ ನಾಟಕದ ನಿರ್ದೇಶನ ಎಷ್ಟೊಂದು ಅಚ್ಚುಕಟ್ಟಾಗಿತ್ತೆಂದರೆ ಒಂದುಸಲ ಕೂಡ ಆ ಪಾತ್ರ ಎಲ್ಲಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿಲ್ಲ. ನಾಲ್ಕು ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಟರು.

ಭಾರತ-ಪಾಕಿಸ್ತಾನ ಕ್ರಿಕೆಟ್ ನಡೆಯಲಿತ್ತು. ಅದೇ ದಿನ ಈ ನಾಟಕ ಲೇಡಿಸ್ ಸ್ಪೆಷಲ್ (ಹೆಂಗಸರಿಗಾಗಿ ಮಾತ್ರ )ಪ್ರದರ್ಶನಕ್ಕಿದೆ ಎಂದು ತಿಳಿದು ಬಂತು. ನಾಟಕದ ಒಂದು ವಾರ ಮೊದಲು ಟಿಕೆಟ್ ಖರೀದಿ ಮಾಡಲು ಹೋದಾಗ ರಂಗಮಂದಿರದ ಹೊರಗೆ ‘ಹೌಸ್‌ಫುಲ್’ ಬೋರ್ಡ ಹಾಕಲಾಗಿತ್ತು. ಇದು ಪ್ರೇಕ್ಷಕರು ತಮ್ಮ ಕಲಾವಿದರ ಮೇಲೆ ತೋರಿಸುವ ಪ್ರೀತಿ, ಪ್ರೇಮ. ಯಾವುದೇ ಹಬ್ಬ-ಹರಿದಿನವಿರಲಿ, ಮರಾಠಿ ನಾಟಕ ರಂಗಮಂದಿರಕ್ಕೆ ಪ್ರೇಕ್ಷಕರ ಅಭಾವದಿಂದ ನಾಟಕ ಕ್ಯಾನ್ಸಲ್ ಆಯ್ತು ಎಂಬ ಸುದ್ದಿ ಎಂದಿಗೂ ಕೇಳಲಿಲ್ಲ.

‘ಕುಸುಮ ಮನೋಹರ ಲೆಲೆ’ ಎಂಬ ಒಂದು ನಾಟಕದಲ್ಲಿ, ಮಧ್ಯಂತರದ ನಂತರ ಕಲಾವಿದರು ಅದಲಿ ಬದಲಿ ಆಗುತ್ತಾರೆ. ಮಧ್ಯಂತರದ ಮೊದಲು ಒಬ್ಬ ವಿಲನ್ ಪಾತ್ರ ಮಾಡಿದ ನಟನೆಗೆ ಕೆನ್ನೆಗೆ ಬಾರಿಸುವಷ್ಟು ಸಿಟ್ಟು ಬಂತೋ, ಅದೇ ನಟ ಮಧ್ಯಂತರದ ನಂತರ ಹೀರೋ ಪಾತ್ರ ಮಾಡಿ ಎಲ್ಲರ ಪ್ರೀತಿಗೆ ಪಾತ್ರನಾದ.

ಟಿವಿ, ಫಿಲಂ ನಂತರ ರಂಗಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂಬ ಭಯವಿತ್ತು. ಆದರೆ ಹಸಿವಾದಾಗ ಒಂದು ಪಂಚನಾಮ ಹೊಟೇಲ್ ಬೇಕೆಂದೇನಿಲ್ಲ. ಒಬ್ಬ ಸಾಮಾನ್ಯ ಅಡುಗೆ ಮಾಡುವ ಮಹಾರಾಜರಿಗೂ, ಒಂದು ಒಳ್ಳೆ ರುಚಿಕರವಾದ ಊಟ ಬಡಿಸಿ ಹಸಿದು ಬಂದವರ ಮನಸ್ಸಿಗೆ ತೃಪ್ತಿ ಕೊಡುವ ಕಲೆ ಗೊತ್ತಿರಬೇಕು. ಈ ಕಲೆಯಲ್ಲಿ ಪಾರಂಗತರಾದವರು ನಮ್ಮ ಮರಾಠಿ ಮಣ್ಣಿನ ಮಕ್ಕಳು. ಯಾವುದೇ ಧಾರಾವಾಹಿಗಳು, ಸಿನೆಮಾಗಳು, ವೆಬ್ ಸೀರಿಸ್‌ಗಳು, ಮರಾಠಿ ರಂಗಭೂಮಿಯ ಸ್ತಂಭವನ್ನು ಬುಡಮೇಲು ಮಾಡಲಾಗಲಿಲ್ಲ.

ರಂಗಭೂಮಿ ಬದುಕಬೇಕೆಂಬ ಉದ್ದೇಶದಿಂದ ಇವರೆಲ್ಲ ಅವಿರತವಾಗಿ ದುಡಿಯುತ್ತಾರೆ. ಅಲ್ಲಿ ಯಾವ ರೀತಿಯ ರಾಜಕಾರಣಕ್ಕೂ ಅವರು ಅವಕಾಶಕೊಡುವುದಿಲ್ಲ ಯಾವ ರೀತಿಯ ವೈಮನಸ್ಸಿಲ್ಲದೆ ತಮ್ಮ ಪಾತ್ರವನ್ನು ಸುಸೂತ್ರವಾಗಿ ನೆರವೇರಿಸುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೊರೋನ ಎಂಬ ಭಯಬೀತ ಆಗಂತುಕನಿಂದ ರಂಗಮಂದಿರಗಳ ಬಾಗಿಲುಗಳು ಮುಚ್ಚಿಕೊಂಡವು. ಆದರೆ ಈ ಕಾಲದಲ್ಲೂ ನಾಟಕಕಾರರು, ನಟರು ಸುಮ್ಮನಿರದೆ ಕೆಲವು ನಾಟಕಗಳ ರಿಹರ್ಸಲ್ ಮಾಡಿ ಆನ್‌ಲೈನ್ ಪ್ರದರ್ಶನಕ್ಕಿಟ್ಟರು. ಇವರ ಹಲವಾರು ಉತ್ತಮ ದರ್ಜೆಯ ನಾಟಕಗಳು, ನಾವು ಇಂದಿಗೂ ಆನ್‌ಲೈನ್‌ನಲ್ಲಿ ನೋಡಬಹುದು. ಕಲಾವಿದರು ತಮ್ಮ ಪ್ರತಿಭೆಯಿಂದ ನಮ್ಮನ್ನೆಲ್ಲ ಇನ್ನ್ನು ಮುಂದೆಯೂ ರಂಜಿಸಲೆಂದು ಮನದಾಳದಿಂದ ಆಶಿಸುತ್ತೇನೆ. ಈ ಎಲ್ಲಾ ಕಲಾವಿದರಿಗೆ ಮುಂಬೈಯಲ್ಲಿ ಹುಟ್ಟಿ ಬೆಳೆದ ನನ್ನಿಂದ ಕೋಟಿ ಕೋಟಿ ನಮನಗಳು.

 ಮರಾಠಿ ರಂಗಭೂಮಿ ಕಲಾವಿದರಿಗೆ ಒಂದು ಮಹಾವಿದ್ಯಾಲಯ ಇದ್ದಹಾಗೆ. ಕಲಾವಿದರಿಗೆ ಕಲಿಯಲು ಬೇಕಾದ ಎಲ್ಲಾ ತರಹದ ಪಾಠವನ್ನು ಮರಾಠಿ ರಂಗಭೂಮಿ ತಿಳಿಸಿಕೊಡುತ್ತದೆ. ಮರಾಠಿ ರಂಗಭೂಮಿಯ ಕಲಾವಿದರು, ದಿಗ್ದರ್ಶಕರು ಎಲ್ಲದಕ್ಕೂ ಸೈ ಎನಿಸಿಕೊಂಡವರು. ಇವರು ಬೇರೆ ಬೇರೆ ರೀತಿಯ ನಾಟಕಗಳ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.ಕನ್ನಡ ರಂಗಭೂಮಿಗೂ ಮರಾಠಿ ರಂಗಭೂಮಿಗೂ ಅವಿನಾಭಾವ ಸಂಬಂಧವಿದೆ.

ಹೊಸ ಕಲಾವಿದರು ರಂಗಭೂಮಿಗೆ ಬರಬೇಕೆಂದು ಕಳೆದ ಆರು ದಶಕಗಳಿಂದ ಮಹಾರಾಷ್ಟ್ರದ ಶಾಲಾ, ಕಾಲೇಜುಗಳಲ್ಲಿ, ಬೇರೆ ಬೇರೆ ಪ್ರಾಂತಗಳಲ್ಲಿ, ಹಳ್ಳಿಗಳಲ್ಲಿ, ನಾಟಕ ಸ್ಪರ್ಧೆ ನಡೆಯುತ್ತವೆ. ಹೆಚ್ಚಾಗಿ ಈ ಸ್ಪರ್ಧೆಗಳಲ್ಲಿ ಪ್ರಾಯೋಗಿಕ ನಾಟಕಗಳ ಅನುಭವ ನಾವು ಪಡೆಯಬಹುದು. ಇಂತಹ ಸ್ಪರ್ಧೆ ನಾಟಕಗಳಲ್ಲಿ ಕೂಡ ಕಲಾವಿದರು, ಮಕ್ಕಳು, ದೊಡ್ಡವರು ಎಲ್ಲರೂ ಸಹಜವಾಗಿ, ನುರಿತ ಅನುಭವಿ ಕಲಾವಿದರಂತೆ ನಟಿಸುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)