varthabharthi


ಬೆಂಗಳೂರು

ಕೋವಿಡ್‌ ನಿರ್ಬಂಧ ಸಡಿಲಿಕೆ: ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಹತ್ವದ ಸಭೆ

ವಾರ್ತಾ ಭಾರತಿ : 20 Jan, 2022

ಬೆಂಗಳೂರು, ಜ. 20: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೇರಿರುವ ಕೋವಿಡ್ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಸಡಿಲಿಕೆ ಸಂಬಂಧ ನಾಳೆ(ಜ.21) ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವರು ಹಾಗೂ ತಜ್ಞರ ಮಹತ್ವದ ಸಭೆ ನಡೆಯಲಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಾಳೆ ಮಧ್ಯಾಹ್ನ 1ಗಂಟೆಗೆ ಸಭೆ ಕರೆಯಲಾಗಿದ್ದು, ವಾರಾಂತ್ಯದ ಕರ್ಫ್ಯೂಗೆ ವಿನಾಯಿತಿ ನೀಡುವ ಸಾಧ್ಯತೆಗಳಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನಗಳ ಭರ್ತಿಯೊಂದಿಗೆ ಚಿತ್ರಪ್ರದರ್ಶನ, ವ್ಯಾಪಾರ ವಹಿವಾಟು, ಸಾರ್ವಜನಿಕ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, `ಕರ್ಫ್ಯೂ' ಹೇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಿಸಲಿದ್ದಾರೆ.

ವಾರಾಂತ್ಯದ ಕರ್ಫ್ಯೂ ವಿಧಿಸಿರುವ ಸಂಬಂಧ ಸಚಿವರು ಹಾಗೂ ಬಿಜೆಪಿ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರ, ಹೊಟೇಲ್, ಮಾಲ್‍ಗಳು ಸೇರಿದಂತೆ ಬಹುತೇಕ ಎಲ್ಲ ವರ್ಗದ ವ್ಯಾಪಾರ ವಹಿವಾಟು ವಾರಾಂತ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದ್ದು, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕೆಂದು ಆಗ್ರಹ ಕೇಳಿಬಂದಿದೆ.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್ ಅವರು ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವ ಸಂಬಂಧ ಕೋವಿಡ್ ಪರಿಸ್ಥಿತಿಯನ್ನು ಆಧರಿಸಿ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಣೆ ನೀಡಿದ್ದಾರೆ. ಜೊತೆಗೆ ಶಾಲೆ-ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಿರ್ಬಂಧವೂ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಸಿಎಂ ಅಧ್ಯಕ್ಷತೆಯಲ್ಲಿ ಜರುಗಲಿರುವ ನಾಳಿನ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)