ಬೆಂಗಳೂರು
ಟಿಕೇಟ್‍ರಹಿತ ಪ್ರಯಾಣ: ಬಿಎಂಟಿಸಿಯಿಂದ 4,84,335 ರೂ. ದಂಡ ವಸೂಲಿ

ಬೆಂಗಳೂರು, ಜ.20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರಿಂದ 4,84,335 ರೂ.ಗಳ ದಂಡ ವಸೂಲಿ ಮಾಡಿದೆ.
ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಸಂಸ್ಥೆಯ ತನಿಖಾ ತಂಡಗಳು ಡಿ. 2021ರ ಮಾಹೆಯಲ್ಲಿ ಒಟ್ಟು 23,361 ಟ್ರಿಪ್‍ಗಳನ್ನು ತಪಾಸಿಸಿ 3024 ಟಿಕೇಟ್‍ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 4,56,935 ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1686 ಪ್ರಕರಣಗಳನ್ನು ದಾಖಲಿಸಿರುತ್ತಾರೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 274 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 27,400ನ್ನು ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಒಟ್ಟಾರೆಯಾಗಿ 3298 ಪ್ರಯಾಣಿಕರಿಂದ ಒಟ್ಟು ರೂ 4,84,335 ದಂಡವನ್ನು ವಸೂಲಿ ಮಾಡಲಾಗಿದೆ.
ಪ್ರಯಾಣಿಕರು ಬಿಎಂಟಿಸಿ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್/ದಿನದ ಪಾಸು/ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ