varthabharthi


ಉಡುಪಿ

ಇಬ್ಬರು ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಪುಲೆ ಉಡುಪಿ ಜಿಲ್ಲಾ ಪ್ರಶಸ್ತಿ ಪ್ರದಾನ

ಸಂವಿಧಾನದ ರಕ್ಷಣೆ ದಲಿತರ ಮುಖ್ಯ ಗುರಿಯಾಗಿರಬೇಕು: ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ

ವಾರ್ತಾ ಭಾರತಿ : 20 Jan, 2022

ಉಡುಪಿ, ಜ. 20: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಂದಿ ಇಂದು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಗಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ನೀಡಿದ ಮೀಸಲಾತಿಯೇ ಕಾರಣ. ಮೀಸಲಾತಿಗೆ ಆಧಾರವಾದ ಸಂವಿದಾನ ಹಾಗೂ ಸಂವಿಧಾನಕ್ಕೆ ಆಧಾರವಾದ ಪ್ರಜಾಪ್ರಭುತ್ವದ ರಕ್ಷಣೆ ದಲಿತರ ಗುರಿಯಾಗಿರಬೇಕು ಎಂದು ಬ್ರಹ್ಮಾವರದ ತಹಶೀಲ್ದಾರ್ ರಾಜಶೇಖರ ಮೂರ್ತಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಹೊಟೇಲ್ ಕಿದಿಯೂರು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಜಿಲ್ಲಾ ಪ್ರಶಸ್ತಿ ಪ್ರದಾನ ಹಾಗೂ ಸಮುದಾಯದ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.

ಸಂವಿಧಾನ ನೀಡಿದ ಶಿಕ್ಷಣ ಅವಕಾಶ ಹಾಗೂ ಸೌಲಭ್ಯಗಳ ಮೂಲಕ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪಡೆದ ದೃಢತೆ ಯನ್ನು ಸಮುದಾಯದ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ಶಿಕ್ಷಣದಿಂದ ಪ್ರಜ್ಞಾವಂತರಾಗಿರುವ ನಮ್ಮ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಇಂದು ಎಸ್‌ಸಿ, ಎಸ್‌ಟಿ ಜನಸಂಖ್ಯೆ ಸುಮಾರು 1.66 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ರಾಜ್ಯದಲ್ಲಿ ರುವುದು ಕೇವಲ 86ಸಾವಿರ ಎಸ್‌ಸಿಎಸ್‌ಟಿ ಸಮುದಾಯದ ಸರಕಾರಿ ಉದ್ಯೋಗಿಗಳು ಮಾತ್ರ. ಇದು ಒಟ್ಟು ಜನಸಂಖ್ಯೆಯ ಶೇ.1 ಆಗುವುದಿಲ್ಲ. ಇದರಲ್ಲಿ ದೇಶದ ಅಂಕಿಅಂಶ ಇನ್ನೂ ಶೋಚನೀಯವಾಗಿದೆ ಎಂದವರು ವಿವರಿಸಿದರು.

ನಾವು ನಮ್ಮ ಜವಾಬ್ದಾರಿಯನ್ನು ಎಲ್ಲಿಯವರೆಗೆ ಅರ್ಥ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಸಮುದಾಯ ಸಮಗ್ರವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಅಸ್ಪಶ್ಯತೆ ಎಂಬುದು ನಮ್ಮ ಸಮುದಾಯದ ಸಮಸ್ಯೆಯಲ್ಲ. ಅದು ಹಿಂದೂಗಳ ಸಮಸ್ಯೆ. ಆದರೆ ಅದರಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ನಾವಾಗಿದ್ದೇವೆ ಎಂದು ರಾಜಶೇಖರ ಮೂರ್ತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಕ್ಷರಸಂತ ಹರೇಕಳ ಹಾಜಬ್ಬ ಅವರು ಉಡುಪಿ ರಾಜೀವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರವಿಕಲಾ ಹಾಗೂ ಕುಂದಾಪುರ ತಾಲೂಕು ಶಂಕರನಾರಾಯಣ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಿರಿಜ ಡಿ. ಇವರಿಗೆ ಈ ಸಾಲಿನ ಸಾವಿತ್ರಿ ಬಾಯಿ ಪುಲೆ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದಿರುವುದಕ್ಕೆ ಅಕ್ಷರಸಂತ ಹರೇಕಳ ಹಾಜಬ್ಬರನ್ನು ಸಂಘದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಲ್ಲದೇ ಈ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದಿದ ಜಿಲ್ಲೆಯ ವಿವಿಧ ವಲಯಗಳ ಒಟ್ಟು 11 ಮಂದಿ ಶಿಕ್ಷಕ-ಶಿಕ್ಷಕಿಯ ರನ್ನು ಗೌರವಿಸಲಾಯಿತು.

ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ಚಿಂತಕ ನಾರಾಯಣ್ ಮಣೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ಯ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಸುಂದರ ಮಾಸ್ತರ್, ಸಂಘದ ಪದಾಧಿಕಾರಿಗಳಾದ ಕೃಷ್ಣ ಕೊಲ್ಲೂರು, ರತ್ನಾಕರ ಎಚ್, ಪ್ರಸಾದ್ ಎಸ್.ಎಸ್., ವಿಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ವೆಂಕಟ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಫಕೀರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಬ್ರಹ್ಮಾವರ ವಲಯ ಸಮಿತಿ ಖಜಾಂಚಿ ಸತೀಶ್ಚಂದ್ರ ಸಂಘದ ವರದಿ ಮಂಡಿಸಿದರು. ಜಿಲ್ಲಾ ಸಮಿತಿ ಖಜಾಂಚಿ ಹೆರಿಯ ಅವರು ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಶಿಕ್ಷಕರಾದ ಸತ್ಯನಾ ಕೊಡೇರಿ, ಸುಬ್ಬಣ್ಣ ಕೋಣಿ ಮತ್ತು ತಂಡದಿಂದ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಪುಲೆ ಕುರಿತು ಕ್ರಾಂತಿ ಗೀತೆಗಳನ್ನು ಹಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)