varthabharthi


ಉಡುಪಿ

40 ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟ ಘೋಷಣೆ

'ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿಕೇಂಡ್ ಕರ್ಫ್ಯೂ ಬಹಿಷ್ಕರಿಸಿ ವ್ಯಾಪಾರ'

ವಾರ್ತಾ ಭಾರತಿ : 20 Jan, 2022

ಉಡುಪಿ, ಜ.20: ರಾಜ್ಯ ಸರಕಾರ ಈ ವಾರದಿಂದ ವೀಕೆಂಡ್ ಕರ್ಫ್ಯೂ ಹಿಂಪಡೆಯದಿದ್ದರೆ ಸರಕಾರದ ಎಲ್ಲ ಆದೇಶಗಳನ್ನು ದಿಕ್ಕರಿಸಿ, ಕೇಸು, ಬಂಧನಕ್ಕೆ ಬೆದರದೆ ಶನಿವಾರ ಮತ್ತು ರವಿವಾರ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ವ್ಯಾಪಾರ ನಡೆಸಲಾಗುವುದು ಎಂದು ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟ ತಿಳಿಸಿದೆ.

ಉಡುಪಿಯಲ್ಲಿಂದು ನಡೆದ ಒಕ್ಕೂಟದ ಸಭೆಯಲ್ಲಿ ತೆಗೆದುಕೊಂಡು ಒಮ್ಮತದ ಈ ನಿರ್ಣಯವನ್ನು ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಸಂತೋಷ್ ಕಾಮತ್ ಪ್ರಕಟಿಸಿದರು.

ಸರಕಾರ ಅವೈಜ್ಞಾನಿಕ ಲಾಡ್‌ಕೌನ್ ಹೇರಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುತ್ತಿದೆ. ಇದ ಪರಿಣಾಮ ವರ್ತಕರು ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಸಣ್ಣ ಪುಟ್ಟ ವ್ಯಾಪಾರಿ ಗಳು ಬೀದಿ ಪಾಲಾಗಿದ್ದಾರೆ. ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಸಾಲದ ಹೊರೆಯಲ್ಲಿ ಮುಳುಗಿದ್ದಾರೆ, ಬಾಡಿಗೆ ಪಾವತಿ ಬಾಕಿ ಇರಿಸಿದ್ದಾರೆ, ಕೆಲಸದವರಿಗೆ ಅರ್ಧ ಸಂಬಳ ಕೊಡುತ್ತಿದ್ದಾರೆ. ಇದನ್ನೆಲ್ಲ ಮನದಂಡು ಎಲ್ಲ ವ್ಯಾಪಾರಿಗಳು, ವರ್ತಕರು ಈ ಒಮ್ಮತ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್ ಮಾತನಾಡಿ, ನೈಟ್ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂನಿಂದ ನಾವೆಲ್ಲ ಕೆಲಸ ಕಳೆದುಕೊಂಡಿದ್ದೇವೆ. ನಮ್ಮ ಕೆಲಸ ಇರುವುದೇ ರಾತ್ರಿ ಮತ್ತು ವಾರಾಂತ್ಯದಲ್ಲಿ. ಈಗ ಕಾರ್ಯಕ್ರಮಗಳಿಲ್ಲದೆ ನಾವು ಸಂಪೂರ್ಣ ಸೋತು ಹೋಗಿದ್ದೇವೆ. ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ನೈಟ್ ಮತ್ತು ವಾರಾಂತ್ಯ ಕರ್ಫ್ಯೂ ಮುಂದುವರೆಸಿದರೆ ಕೊರೋನಾಕ್ಕಿಂತ ಆರ್ಥಿಕ ಸಮಸ್ಯೆ ಯಿಂದಲೇ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ರಾಜ್ಯ ಸರಕಾರವೇ ಹೊಣೆ ಆಗಬಹುದು ಎಂದು ಹೇಳಿದರು.

ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮುಲ್ಕಿ ಮಾತನಾಡಿ, ವಿಕೇಂಡ್ ಕರ್ಫ್ಯೂನಿಂದ ಕ್ಷೌರಿಕರು ತುಂಬಾ ಸಂಕಷ್ಟದಲ್ಲಿದ್ದಾರೆ. ನಮಗೆ ಹೆಚ್ಚು ವ್ಯಾಪಾರ ಇರುವುದು ವಾರಾಂತ್ಯದಲ್ಲಿ. ಈಗ ಅದೇ ದಿನದಲ್ಲಿ ನಾವು ಅಂಗಡಿ ಬಂದ್ ಮಾಡಿ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. ಈ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಬೇಕರಿ ಅಸೋಸಿಯೇಶನ್ ಅಧ್ಯಕ್ಷ ವಾಲ್ಟರ್ ಸಲ್ದಾನ ಮಾತನಾಡಿ, ಬೇಕರಿ ಅವರಿಗೆ ವಾರಾಂತ್ಯ ಕರ್ಫ್ಯೂನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದ್ದರೂ ಜನರಿಲ್ಲದೆ ನಾವು ಮಾಡಿದ ಪದಾರ್ಥಗಳನ್ನು ತೋಡಿಗೆ ಎಸೆಯುವ ಸ್ಥಿತಿ ಎದುರಾಗಿದೆ. ಒಟ್ಟಾರೆ ನಮ್ಮ ವ್ಯಾಪಾರಕ್ಕೆ ಮಾರುಕಟ್ಟೆಯೇ ಇಲ್ಲವಾಗಿದೆ. ಆದುದರಿಂದ ಈ ಹೋರಾಟದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.

ಒಕ್ಕೂಟದ ಗೌರವಾಧ್ಯಕ್ಷ ಎಂ.ಜಿ.ಹೆಗಡೆ, ಸಾಮಾಜಿಕ ಹೋರಾಟಗಾರ ಪ್ರವೀಣ್ ವಾಲ್ಕೆ, ಉಡುಪಿ ಜಿಲ್ಲಾ ಟೈಲರ್ ಅಸೋಸಿಯೇಶನ್ ಅಧ್ಯಕ್ಷ ಗುರುರಾಜ್ ಶೆಟ್ಟಿ, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ದಿವಾಕರ್ ಸನಿಲ್, ಮ್ಯಾಕ್ಸಿಮ್ ಸಲ್ದಾನ ಉಪಸ್ಥಿತರಿದ್ದರು.

‘ಅವೈಜ್ಞಾನಿಕ, ಅನೈತಿಕ ವಿಕೇಂಡ್ ಕರ್ಫ್ಯೂ’

ಸರಕಾರ ಈಗ ವಿಧಿಸಿರುವುದು ಅವೈಜ್ಞಾನಿಕ ಮತ್ತು ಅನೈತಿಕ ಲಾಕ್‌ಡೌನ್ ಆಗಿದೆ. ಇದು ಹೇಳುವವರು, ಕೇಳುವವರು ಇಲ್ಲದ ತುಘಲಕ್ ಸರಕಾರ ಎಂದು ಒಕ್ಕೂಟದ ಗೌರವಾಧ್ಯಕ್ಷ ಎಂ.ಜಿ.ಹೆಗಡೆ ಆರೋಪಿಸಿದರು.

ಸೋಮವಾರದಿಂದ ಶುಕ್ರವಾರದವರೆಗೆ ಎಲ್ಲ ಕಾರ್ಯಕ್ರಮಗಳು ನಡೆ ಯುತ್ತಿವೆ. ಧಾರ್ಮಿಕ ಸಭೆಗಳಲ್ಲಿ ಸಾವಿರಾರು ಮಂದಿ ಸೇರಿ ಭೋಜನ ಸ್ವೀಕರಿ ಸುತ್ತಿದ್ದಾರೆ. ರಾಜಕೀಯ ಸಭೆಗಳು ನಿರಂತರವಾಗಿ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಏಕಾಏಕಿ ಶನಿವಾರ ಮತ್ತು ರವಿವಾರ ಮಾತ್ರ ಬಂದ್ ಮಾಡಿರುವುದು ಅವೈಜ್ಞಾನಿಕವಾಗಿದೆ. ಅದೇ ರೀತಿ ಕೆಲವು ಅಧಿಕಾರಿಗಳು ಹಣ ತೆಗೆದುಕೊಂಡು ಕೆಲವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವುದು ಅನೈತಿಕವಾಗಿದೆ ಎಂದು ಅವರು ಟೀಕಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)