ಕೊರೋನ ರೋಗಿಗಳ ಚಿಕಿತ್ಸೆಯ ಹೊಣೆ ಖಾಸಗಿಯವರಿಗೆ ವಹಿಸಿ ಸರಕಾರ ಬೆಚ್ಚಗೆ ಮಲಗಿದೆ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ''ಕೊರೋನ ಉಲ್ಭಣಿಸುತ್ತಿದ್ದರೂ ರೋಗಿಗಳ ಆರೈಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ರಾಜ್ಯ ಬಿಜೆಪಿ ಸರ್ಕಾರ, ಬೆಚ್ಚಗೆ ಮಲಗಿದೆ. ಮುಖ್ಯಮಂತ್ರಿಗಳೇ, ಪತ್ರಿಕೆಗಳಿಗೆ ಸುಳ್ಳುಗಳ ಜಾಹೀರಾತು ನೀಡಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದಲ್ಲ, ಅದೇ ಪತ್ರಿಕೆಗಳು ಪ್ರಕಟಿಸುತ್ತಿರುವ ಸತ್ಯ ಸಂಗತಿಗಳ ವರದಿಗಳನ್ನೂ ಓದಿ, ಎಚ್ಚೆತ್ತುಕೊಳ್ಳಿ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೋನ ಸೋಂಕಿನ ಜೊತೆ ಅದೇ ರೀತಿಯ ರೋಗ ಲಕ್ಷಣಗಳ ಶೀತ-ನೆಗಡಿ-ಜ್ವರಗಳ ಬಾಧೆಯೂ ಹೆಚ್ಚುತ್ತಿರುವುದರಿಂದ ಯಾವುದು ಕೊರೊನಾ ಯಾವುದು ಅಲ್ಲ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಜನ ಗೊಂದಲದಲ್ಲಿದ್ದಾರೆ. ಸೋಂಕಿತರು ಮನೆಯಲ್ಲಿಯೇ ಇರಿ ಎಂದು ಸರ್ಕಾರವೇ ಹೇಳಿ ಆ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದರು.
ಶೀತ, ಜ್ವರದಿಂದ ಬಳಲುತ್ತಿರುವವರಲ್ಲಿ ಶೇಕಡಾ 90-93ರಷ್ಟು ಜನ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇವರಲ್ಲಿ ಕೊರೊನಾ ಸೋಂಕಿತರೆಷ್ಟು? ಬೇರೆ ಕಾಯಿಲೆ ಪೀಡಿತರೆಷ್ಟು ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಸರ್ಕಾರದಲ್ಲಿಯೂ ಇಲ್ಲ. ಇದು ಅಪಾಯಕಾರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ನಿಗದಿತ 1.94 ಲಕ್ಷ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಮಾತ್ರ ಸರ್ಕಾರಿ, ಉಳಿದೆಲ್ಲವೂ ಖಾಸಗಿ ಆಸ್ಪತ್ರೆಗಳಿಗೆ ಸೇರಿವೆ ಎಂದು ವರದಿಗಳು ಹೇಳುತ್ತಿವೆ ಎಂದು ತಿಳಿಸಿದರು.
ಈ ವ್ಯವಸ್ಥೆ ಜನಹಿತಕ್ಕಾಗಿಯೇ? ಇಲ್ಲವೆ, ಖಾಸಗಿ ಆಸ್ಪತ್ರೆಗಳ ಹಿತಕ್ಕಾಗಿಯೇ? ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೊರೊನ ಸೋಂಕು ಶೀಘ್ರಗತಿಯಲ್ಲಿ ಹಳ್ಳಿಗಳಿಗೆ ಹರಡುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಹಿಂದಿನ ವೈಫಲ್ಯಗಳ ಅನುಭವದ ಹೊರತಾಗಿಯೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ ಕರ್ಫ್ಯೂ-ಲಾಕ್ ಡೌನ್ ಗಳನ್ನು ನಂಬಿ ಕೂತಿದೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಕೊರೊನಾ ಸೋಂಕಿನ ಜೊತೆ ಅದೇ ರೀತಿಯ ರೋಗ ಲಕ್ಷಣಗಳ ಶೀತ-ನೆಗಡಿ-ಜ್ವರಗಳ ಬಾಧೆಯೂ ಹೆಚ್ಚುತ್ತಿರುವುದರಿಂದ ಯಾವುದು ಕೊರೊನಾ ಯಾವುದು ಅಲ್ಲ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಜನ ಗೊಂದಲದಲ್ಲಿದ್ದಾರೆ.
— Siddaramaiah (@siddaramaiah) January 20, 2022
ಸೋಂಕಿತರು ಮನೆಯಲ್ಲಿಯೇ ಇರಿ ಎಂದು @BJP4Karnataka ಸರ್ಕಾರವೇ ಹೇಳಿ ಆ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.
2/5#Covid_19 pic.twitter.com/6SeJy37oei