varthabharthi


ರಾಷ್ಟ್ರೀಯ

ನಿಂದನೀಯ ವಿದೇಶಿ ದೇಣಿಗೆ ಕಾಯ್ದೆಯ ಬಳಕೆಯನ್ನು ಭಾರತವು ನಿಲ್ಲಿಸಬೇಕು: ಹ್ಯೂಮನ್ ರೈಟ್ಸ್ ವಾಚ್

ವಾರ್ತಾ ಭಾರತಿ : 20 Jan, 2022

ಹ್ಯೂಮನ್ ರೈಟ್ಸ್ ವಾಚ್(photo:twitter)

ಜಿನಿವಾ,ಜ.20: ನಾಗರಿಕ ಸಮಾಜದ ಧ್ವನಿಯನ್ನಡಗಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಮತ್ತು ಇತರ ನಿಂದನೀಯ ಕಾನೂನುಗಳ ಬಳಕೆಯನ್ನು ನಿಲ್ಲಿಸುವಂತೆ ಹತ್ತು ಮಾನವ ಹಕ್ಕುಗಳ ಸಂಘಟನೆಗಳು ಕೇಂದ್ರವನ್ನು ಆಗ್ರಹಿಸಿವೆ. ಸೆಂಟರ್ ಫಾರ್ ಪ್ರಮೋಷನ್ ಆಫ್ ಸೋಷಿಯಲ್ ಕನ್ಸರ್ನ್ಸ್ (ಸಿಪಿಎಸ್‌ಸಿ) ಮತ್ತು ಅದರ ಕಾರ್ಯಕ್ರಮ ಘಟಕ ಪೀಪಲ್ಸ್ ವಾಚ್‌ಗೆ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸುವಂತೆಯೂ ಈ ಗುಂಪುಗಳು ಬಿಜೆಪಿ ಸರಕಾರವನ್ನು ಒತ್ತಾಯಿಸಿವೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್,ಇಂಟರ್‌ನ್ಯಾಷನಲ್ ಫೆಡರೇಷನ್ ಫಾರ್ ಹ್ಯೂಮನ್ ರೈಟ್ಸ್,ಫ್ರಂಟ್‌ಲೈನ್ ಡಿಫೆಂಡರ್ಸ್ ಮತ್ತು ವರ್ಲ್ಡ್ ಆರ್ಗನೈಸೇಷನ್ ಅಗೇನ್ಸ್ಟ್‌ಟಾರ್ಚರ್ ಮುಂತಾದವು ಈ ಮಾನವ ಹಕ್ಕುಗಳ ಗುಂಪುಗಳಲ್ಲಿ ಸೇರಿವೆ.

ಈ ಸಂಬಂಧ ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯೂ) ಹೊರಡಿಸಿರುವ ಹೇಳಿಕೆಯು,2022,ಜ.8ರಂದು ಮದುರೈನಲ್ಲಿ ಸಿಪಿಎಸ್‌ಸಿ ಕಚೇರಿಯ ಮೇಲೆ ಸಿಬಿಐ ನಡೆಸಿದ್ದ ದಾಳಿಯನ್ನು ಬೆಟ್ಟು ಮಾಡಿದೆ. ಎಫ್‌ಸಿಆರ್‌ಎ ಅಡಿ ವಂಚನೆಗಳು ಮತ್ತು ಹಣಕಾಸು ಅಕ್ರಮಗಳ ಆರೋಪಗಳ ಕುರಿತು ತಾವು ತನಿಖೆ ನಡೆಸುತ್ತಿರುವುದಾಗಿ ಸಿಬಿಐ ಅಧಿಕಾರಿಗಳು ಸಿಪಿಎಸಿಗೆ ತಿಳಿಸಿದ್ದರು. ಎಫ್‌ಸಿಆರ್‌ಎ ಭಾರತೀಯ ಎನ್‌ಜಿಒಗಳಿಗೆ ವಿದೇಶಿ ದೇಣಿಗೆಗಳನ್ನು ನಿಯಂತ್ರಿಸುವ ಕಾನೂನಾಗಿದೆ.

2016ರಲ್ಲಿ ಎಫ್‌ಸಿಆರ್‌ಎ ಅಡಿ ನವೀಕರಣಕ್ಕೆ ಸಿಪಿಎಸ್‌ಸಿ ಸಲ್ಲಿಸಿದ್ದ ಅರ್ಜಿಯನ್ನು ಗೃಹ ಸಚಿವಾಲಯವು ತಿರಸ್ಕರಿಸಿದ್ದನ್ನು ಮಾನವ ಹಕ್ಕುಗಳ ಗುಂಪುಗಳು ನೆನಪಿಸಿವೆ. ಸಿಪಿಎಸ್‌ಸಿ ಸರಕಾರದ ನಿರ್ಧಾರವನ್ನು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾಗ,ಭಾರತದ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಲು ದೇಶದ ಮಾನವ ಹಕ್ಕುಗಳ ದಾಖಲೆಯನ್ನು ಋಣಾತ್ಮಕವಾಗಿ ಬಿಂಬಿಸುವ ಮಾಹಿತಿಗಳನ್ನು ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಮತ್ತು ವಿದೇಶಿ ರಾಯಭಾರ ಕಚೇರಿಗಳೊಂದಿಗೆ ಹಂಚಿಕೊಳ್ಳಲು ಸಿಪಿಎಸ್‌ಸಿ ವಿದೇಶಿ ದೇಣಿಗೆಗಳನ್ನು ಬಳಸಿಕೊಂಡಿದೆ ಎಂದು ಸಚಿವಾಲಯವು ನ್ಯಾಯಾಲಯಕ್ಕೆ ತಿಳಿಸಿತ್ತು. ಇವು ರಾಷ್ಟ್ರೀಯ ಹಿತಾಕ್ತಿಗೆ ಧಕ್ಕೆಯನ್ನುಂಟು ಮಾಡುವ ಅನಪೇಕ್ಷಿತ ಚಟುವಟಿಕೆಗಳು ಎಂದು ಸರಕಾರವು ಬಣ್ಣಿಸಿತ್ತು.

ನ್ಯಾಯಾಲಯದಲ್ಲಿ ಸರಕಾರದ ಉತ್ತರವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಾಧನಗಳಿಗೆ ಗೌರವವನ್ನು ಉತ್ತೇಜಿಸುತ್ತಿರುವುದಕ್ಕಾಗಿ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಾರ್ಯವಿಧಾನಗಳೊಂದಿಗೆ ಸಹಕರಿಸುತ್ತಿರುವುದಕ್ಕಾಗಿ ಒಂದು ಗುಂಪನ್ನು ಗುರಿಯಾಗಿಸಿಕೊಳ್ಳುವ ಮೂಲಕ ಅದು ಭಾರತದ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಉಲ್ಲಂಘಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. 2012 ಮತ್ತು 2013ರಲ್ಲಿ ಇಂತಹುದೇ ಅಮಾನತುಗಳನ್ನು ಸಿಪಿಎಸ್‌ಸಿ ಪ್ರಶ್ನಿಸಿದ ಬಳಿಕ ದಿಲ್ಲಿ ಉಚ್ಚ ನ್ಯಾಯಾಲಯವು ಅದನ್ನು ಹಣಕಾಸು ಅಕ್ರಮಗಳ ಆರೋಪದಿಂದ ಮುಕ್ತಗೊಳಿಸಿದ್ದರೂ ಸರಕಾರವು ಮತ್ತೆ ಅವೇ ಆರೋಪಗಳನ್ನು ಮಾಡಿದೆ. ಪ್ರಕರಣವು ಈಗಲೂ ಬಾಕಿಯಿದೆ ಎಂದು ಎಚ್‌ಆರ್‌ಡಬ್ಲು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನಾಗರಿಕ ಸಮಾಜ ಸಂಘಟನೆಗಳ ಪರ ನ್ಯಾಯಾಲಯದ ತೀರ್ಪುಗಳನ್ನು ಹಾಗೂ ಅವುಗಳ ಅಭಿವ್ಯಕ್ತಿ ಮತ್ತು ಸಂಘಟನಾ ಸ್ವಾತಂತ್ರಗಳ ಸಾಂವಿಧಾನಿಕ ಹಕ್ಕುಗಳನ್ನು ಅಗೌರವಿಸುವುದು ಸರಕಾರಕ್ಕೆ ವಾಡಿಕೆಯಾಗಿರುವಂತಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಭಿನ್ನಾಭಿಪ್ರಾಯಕ್ಕೆ ರಕ್ಷಣೆ ನೀಡಬಾರದು ಮತ್ತು ಅದನ್ನು ಉಸಿರುಗಟ್ಟಿಸಬಾರದು ಎಂದು ನ್ಯಾಯಾಲಯಗಳು ಸರಕಾರಕ್ಕೆ ಪದೇಪದೇ ನೆನಪಿಸಿವೆ ಎಂದು ಹೇಳಿಕೆಯು ತಿಳಿಸಿದೆ.

ಈ ದಾಳಿಯು ದೇಶದ್ರೋಹ ಮತ್ತು ಭಯೋತ್ಪಾದನೆಯಂತಹ ಕರಾಳ ಕಾನೂನುಗಳ ಬಳಕೆ ಸೇರಿದಂತೆ ಭಾರತದ ನಾಗರಿಕ ಸಮಾಜದ ವ್ಯಾಪಕ ದಮನದ ಭಾಗವಾಗಿದೆ. ಈ ಎಲ್ಲ ವರ್ಷಗಳಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸಲು ಎಫ್‌ಸಿಆರ್‌ಎ ಬಳಕೆಯ ಬಗ್ಗೆ ವಿಶ್ವಸಂಸ್ಥೆಯ ಹಲವಾರು ಮಂಡಳಿಗಳು ಕಳವಳಗಳನ್ನು ವ್ಯಕ್ತಪಡಿಸಿವೆ ಎಂದು ಈ ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)