varthabharthi


ಸಂಪಾದಕೀಯ

ಕೊರೋನ ಪರಿಹಾರ: ಸುಪ್ರೀಂಕೋರ್ಟ್ ಆದೇಶಗಳಿಗೆ ಕಿವುಡಾಗಿರುವ ಸರಕಾರ

ವಾರ್ತಾ ಭಾರತಿ : 21 Jan, 2022

‘ತಜ್ಞರು ಹೇಳಿದ್ದಾರೆ’ ಎಂದು ಜನ ಸಾಮಾನ್ಯರ ಮೇಲೆ ಅನಿರೀಕ್ಷಿತವಾಗಿ ಲಾಕ್‌ಡೌನ್ ಹೇರುವ ಈ ಸರಕಾರ, ನಿಜಕ್ಕೂ ತಜ್ಞರು, ವಿಜ್ಞಾನ, ಕಾನೂನು ವ್ಯವಸ್ಥೆ, ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಹೊಂದಿದೆಯೇ? ಒಂದೆಡೆ ವಾರಾಂತ್ಯದ ಕರ್ಫ್ಯೂ ಹೇರುವುದು, ಮಗದೊಂದೆಡೆ ಉಡುಪಿಯಂತಹ ಪ್ರದೇಶಗಳಲ್ಲಿ ಸಹಸ್ರಾರು ಜನರು ಸೇರುವುದಕ್ಕೆ ಅವಕಾಶ ನೀಡುವುದು, ಕೊರೋನವನ್ನು ಎದುರಿಸುವ ರೀತಿಯೇ? ಎಂದು ಜನರು ಪ್ರಶ್ನಿಸುವಂತಾಗಿದೆ. ಸರಕಾರದ ಕರ್ಫ್ಯೂ, ಲಾಕ್‌ಡೌನ್‌ಗಳೆಲ್ಲವೂ ಬಡಪಾಯಿಗಳ ಮೇಲೆ ಮಾತ್ರ. ರಾಜಕಾರಣಿಗಳಿಗೆ ಮತ್ತು ಧಾರ್ಮಿಕ ಮುಖಂಡರುಗಳಿಗೆ ಇದು ಅನ್ವಯವಾಗುವುದಿಲ್ಲ ಎನ್ನುವುದು ಜನರಿಗೆ ಸ್ಪಷ್ಟ ಮನವರಿಕೆಯಾಗಿರುವುದರಿಂದಲೇ, ಅವರು ಸರಕಾರ ಹೇರುತ್ತಿರುವ ಕರ್ಫ್ಯೂ ಮತ್ತು ಲಾಕ್‌ಡೌನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಸಿಕೆಗಳನ್ನು ಜನರ ಮೇಲೆ ಬಲವಂತವಾಗಿ ಹೇರುವುದಕ್ಕಾಗಿ ಲಾಕ್‌ಡೌನ್ ಮತ್ತು ಕರ್ಫ್ಯೂಗಳನ್ನು ಮುಂದಿಟ್ಟು ಸರಕಾರ ಬ್ಲಾಕ್‌ಮೇಲ್ ಮಾಡುತ್ತಿದೆ ಎಂದು ರಾಜ್ಯದ ಬಹುತೇಕ ಜನರು ಆರೋಪಿಸುತ್ತಿದ್ದಾರೆ.

ತಜ್ಞರ ವರದಿ, ನ್ಯಾಯಾಲಯಗಳ ಆದೇಶ ಇತ್ಯಾದಿಗಳ ಸರಕಾರ ಮೇಲೆ ನಿಜಕ್ಕೂ ನಂಬಿಕೆಯಿಟ್ಟಿದೆ ಎಂದಾದರೆ, ಅದೇಕೆ ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸಲು ಹಿಂದುಮುಂದು ನೋಡುತ್ತಿದೆ? ರಾಜ್ಯ ಸರಕಾರಗಳು ಕೋವಿಡ್‌ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಪರಿಹಾರ ನೀಡುವಿಕೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪರಿಹಾರ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಈ ಹಿಂದೆಯೇ ನಿರ್ದೇಶನವನ್ನು ನೀಡಿತ್ತು. ಹೆಚ್ಚಿನ ರಾಜ್ಯಗಳು ಪರಿಹಾರ ನೀಡುವಿಕೆಯ ಬಗ್ಗೆ ನ್ಯಾಯಾಲಯವನ್ನು ತಪ್ಪುದಾರಿಗೆಳೆದಿದ್ದವು. ಸ್ವೀಕರಿಸಲಾದ ಅರ್ಜಿಗಳು ಮತ್ತು ದಾಖಲಾಗಿರುವ ಸಾವುಗಳ ನಡುವಿನ ಅಗಾಧ ಅಂತರವನ್ನು ನ್ಯಾಯಾಲಯ ಗುರುತಿಸಿದ್ದು, ಈ ತಪ್ಪನ್ನು ಮುಂದುವರಿಸಿದರೆ ಸೂಕ್ತ ಪರಿಹಾರ ವಿತರಣೆಯನ್ನು ಖಚಿತ ಪಡಿಸಲು ಜಿಲ್ಲಾಮಟ್ಟದ ಕಾನೂನು ಸೇವೆಗಳ ಅಧಿಕಾರಿಗಳ ನೆರವು ಪಡೆಯುವಂತೆ ಆದೇಶಿಸುವುದು ನನಗೆ ಅನಿವಾರ್ಯವಾಗುತ್ತದೆ ಎಂದೂ ಸುಪ್ರೀಂಕೋರ್ಟ್ ಎಚ್ಚರಿಸಿದೆ. ತಜ್ಞರ ಶಿಫಾರಸನ್ನು ತಲೆಬಾಗಿ ಪಾಲಿಸುವ ಸರಕಾರ, ಈ ದೇಶದ ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸುವಾಗ ಮಾತ್ರ ಯಾಕೆ ಉದಾಸೀನ ಮಾಡುತ್ತದೆ. ತನಗೆ ಪೂರಕವಾದ ಆದೇಶಗಳಿಗೆ ತಲೆಬಾಗುತ್ತಾ, ಜನರಿಗೆ ಪೂರಕವಾದ ಆದೇಶಗಳನ್ನು ನಿರ್ಲಕ್ಷಿಸುವುದು ಕೊರೋನವನ್ನು ಪರಿಣಾಮಕಾರಿಯಾಗಿ ಎದುರಿಸುವ ವಿಧಾನವೇ? ಒಂದು ವೇಳೆ ಇದೇ ನ್ಯಾಯಾಲಯ ‘ತಕ್ಷಣ ಲಾಕ್‌ಡೌನ್ ವಿಧಿಸಿ’ ಎಂದು ಸೂಚನೆ ನೀಡಿದ್ದಿದ್ದರೆ ಅದನ್ನು ಪಾಲಿಸುತ್ತಿರಲಿಲ್ಲವೇ? ಕೊರೋನ ಸಂತ್ರಸ್ತರಿಗೆ ಪರಿಹಾರ ನೀಡುವುದೂ ಕೊರೋನವನ್ನು ಎದುರಿಸುವ ಭಾಗವೇ ಆಗಿದೆ ಎಂದು ನ್ಯಾಯಾಲಯ ಹೇಳುತ್ತಿರುವಾಗ ಮಾತ್ರ ನಿರ್ಲಕ್ಷವೇಕೆ?

ಪ್ರತಿದಿನ ಮಾಧ್ಯಮಗಳು ಕೊರೋನದಿಂದ ಮೃತರಾದವರ ಅಂಕಿಅಂಶಗಳನ್ನು ಪ್ರಕಟಿಸುತ್ತವೆ ಮತ್ತು ಅದನ್ನು ಮುಂದಿಟ್ಟು ಜನರನ್ನು ಸರಕಾರ ಶೋಷಣೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ, ಪರಿಹಾರ ನೀಡುವ ಸಂದರ್ಭದಲ್ಲಿ ಅಂಕಿ ಅಂಶಗಳನ್ನು ಮರೆಮಾಚುತ್ತದೆೆ. ಇಷ್ಟಕ್ಕೂ ಬರೇ ಕೊರೋನದಿಂದ ಅನಾಥರಾದವರಷ್ಟೇ ನೋವನ್ನನುಭವಿಸುತ್ತಿರುವುದಲ್ಲ. ಕೊರೋನದ ಹೆಸರಿನಲ್ಲಿ ಸಂತ್ರಸ್ತರಾದವರಿಗಿಂತ ಲಾಕ್‌ಡೌನ್‌ನಿಂದ ಸಂತ್ರಸ್ತರಾದವರ ಸಂಖ್ಯೆಯೇ ದೊಡ್ಡದಿದೆ. ಕೊರೋನದಿಂದ ಹಲವರು ತಮ್ಮ ಪಾಲಕರನ್ನು ಕಳೆದುಕೊಂಡಿರಬಹುದು. ಕೆಲವರು ತಮ್ಮ ಮಕ್ಕಳನ್ನು ಕಳೆದುಕೊಂಡಿರಬಹುದು. ಆದರೆ ಲಾಕ್‌ಡೌನ್‌ನಿಂದ ಬದುಕಿದ್ದೂ ಸತ್ತಂತಿರುವವರ ಸಂಖ್ಯೆ ಬಹುದೊಡ್ಡದು. ಅವರಿಗೆ ಮತ್ತೆ ಜೀವ ನೀಡಬೇಕಾದ ಹೊಣೆ ಸರಕಾರದ್ದು. ಪದೇ ಪದೇ ಲಾಕ್‌ಡೌನ್, ವಾರಂತ್ಯ ಕರ್ಫ್ಯು ಎಂದು ಅಳಿದುಳಿದ ಉದ್ದಿಮೆಗಳನ್ನು ನಷ್ಟಕ್ಕೆ ತಳ್ಳಿದ ಸರಕಾರವೇ ಆ ಉದ್ದಿಮೆದಾರರಿಗೆ ಆದ ನಷ್ಟವನ್ನು ತುಂಬಿಕೊಡಬೇಕು. ಜನರಿಗಾದ ನಷ್ಟವನ್ನು ತುಂಬಿಕೊಡಲು ಸಾಧ್ಯವಿಲ್ಲ ಎಂದಾದರೆ ಲಾಕ್‌ಡೌನ್‌ನಂತಹ ‘ತುರ್ತುಪರಿಸ್ಥಿತಿ’ಯನ್ನು ಜನರ ಮೇಲೆ ಹೇರಲು ಮುಂದಾಗಬಾರದು.

ಇದೇ ಸಂದರ್ಭದಲ್ಲಿ ಕನಿಷ್ಠ ರಾಜ್ಯದೊಳಗಿರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಸರಕಾರ ವರದಿಯನ್ನು ತರಿಸಿಕೊಳ್ಳಬೇಕಾಗಿದೆ. ನಗರ ಪಾಳುಬಿದ್ದಿರುವುದರಿಂದ, ಕಟ್ಟಡ ಕಾರ್ಮಿಕರು ಅತ್ತ ಊರಿಗೂ ಹೋಗಲಾರದೆ, ನಗರದಲ್ಲೂ ಇರಲಾರದೆ ಅತಂತ್ರರಾಗಿದ್ದಾರೆ. ಅವರಿಗೆ ಪುನರ್ವಸತಿಯನ್ನು ಕಲ್ಪಿಸಿಕೊಡುವ ಬಗ್ಗೆಯೂ ಸರಕಾರ ಯೋಚಿಸಬೇಕು. ಜೊತೆಗೆ, ಲಾಕ್‌ಡೌನ್ ಅವಾಂತರದಿಂದ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ. ಇವೆಲ್ಲನ್ನು ಬದಿಗಿಟ್ಟು, ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್ ಎಂದು ಜನರನ್ನು ಬೆದರಿಸುವುದು, ಲಸಿಕೆ ನೀಡದೇ ಇದ್ದರೆ ಪ್ರವೇಶವಿಲ್ಲ, ಬದುಕುವ ಹಕ್ಕಿಲ್ಲ ಎಂದು ಮಾನಸಿಕವಾಗಿ ಹಿಂಸಿಸುವುದು ಕೊರೋನ ವಿರುದ್ಧದ ಹೋರಾಟವಲ್ಲ. ಅದನ್ನು ಜನಸಾಮಾನ್ಯರ ಬದುಕುವ ಹಕ್ಕಿನ ವಿರುದ್ಧದ ಹೋರಾಟವೆಂದು ಪರಿಗಣಿಸಬೇಕಾಗುತ್ತದೆ. ಜನರು ಒಂದಾಗಿ ಸರಕಾರದ ಆದೇಶಗಳಿಗೆ ಅಸಹಕಾರ ನೀಡುವ ಮೊದಲು ಸರಕಾರ ತನ್ನ ಕೊರೋನ ವಿರುದ್ಧದ ಹೋರಾಟದ ಮಾರ್ಗವನ್ನು ಬದಲಿಸಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)