varthabharthi


ನಿಮ್ಮ ಅಂಕಣ

ದ್ವೇಷದ ಕಾಲದಲ್ಲಿ ಸೌಹಾರ್ದದ ಪ್ರಚಾರವಾಗಬೇಕಿದೆ...

ವಾರ್ತಾ ಭಾರತಿ : 21 Jan, 2022
ಡಾ. ರಾಮ್ ಪುನಿಯಾನಿ

ಅಲ್ಪಸಂಖ್ಯಾತರಿಗೆ ಭದ್ರತೆಯ ಭರವಸೆಯನ್ನು ನೀಡುವಂತಹ ಸಂವೇದನೆಯಿರುವ, ಯತಿ ನರಸಿಂಗಾನಂದ ಅಥವಾ ಬುಲ್ಲಿ ಆ್ಯಪ್‌ಗಳನ್ನು ನಿರ್ಮಿಸಿರುವಂತಹ ಯುವಜನರ ಮೇಲೆ ಕ್ರಮ ಕೈಗೊಳ್ಳುವ ಅಥವಾ ಟೆಕ್ ಫಾಗ್‌ನಂತಹ ಆ್ಯಪ್‌ಗಳ ದುರ್ಬಳಕೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವಂತಹ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೇರಬಹುದೆಂಬ ಭರವಸೆಯನ್ನು ನಾವು ಹೊಂದಿದ್ದೇವೆ. ಸಹೋದರತ್ವ -ಅನ್ಯೋನ್ಯತೆಯನ್ನು ಉತ್ತೇಜಿಸುವ ಸಾಮಾಜಿಕ ಚಳವಳಿ ಮಾತ್ರವೇ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ಖಾತರಿಪಡಿಸುತ್ತದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ-ಆರ್ಥಿಕ ಅಭಿವೃದ್ಧಿಗೆ ಇವು ಅತ್ಯಂತ ಅಗತ್ಯವಾಗಿವೆ.

ಅತ್ಯಂತ ಕಳವಳಕಾರಿ ಘಟನೆಗಳಿಗೆ ಕಳೆದ ತಿಂಗಳು ಸಾಕ್ಷಿಯಾಗಿತ್ತೆಂದು ಹೇಳಲು ಯಾವುದೇ ಅಡ್ಡಿಯಿಲ್ಲ. ಈ ಘಟನೆಗಳು ಹಗೆತನ ಹಾಗೂ ಸ್ತ್ರೀದ್ವೇಷವನ್ನು ಉತ್ತೇಜಿಸಿದ್ದವು ಹಾಗೂ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿರಿಸಲಾಗಿತ್ತು. ಇದರ ಜೊತೆಗೆ ಸುದ್ದಿಜಾಲತಾಣ ‘ ದ ವೈರ್’ ಪ್ರಕಟಿಸಿದ ವರದಿಯೊಂದು ‘ಟೆಕ್‌ಫಾಗ್’ ಎಂಬ ಆ್ಯಪ್, ಸಮಾಜದ ಒಂದು ವರ್ಗದ ವಿರುದ್ಧ ದ್ವೇಷದ ಬಿರುಗಾಳಿಯನ್ನು ಸೃಷ್ಟಿಸಿರುವ ಭಯಾನಕ ಕಥೆಯನ್ನು ಹೇಳುತ್ತದೆ.

 ಉತ್ತರಾಖಂಡದ ಹರಿದ್ವಾರದಲ್ಲಿ ಇತ್ತೀಚೆಗೆ ಯತಿ ನರಸಿಂಗಾನಂದ ಆಯೋಜಿಸಿದ ಧರ್ಮಸಂಸದ್ ಸಮಾವೇಶದಲ್ಲಿ ಹಲವಾರು ಮಂದಿ ಕೇಸರಿ ವಸ್ತ್ರಧಾರಿಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಎಷ್ಟರ ಮಟ್ಟಿಗೆ ದ್ವೇಷದ ವಿಷವನ್ನು ಕಾರಿದ್ದಾರೆಂದರೆ, ಜನಾಂಗೀಯ ನರಮೇಧಕ್ಕೂ ಕರೆ ನೀಡಿದ್ದರು. ಈಗ ನ್ಯಾಯಾಂಗ ಕಸ್ಟಡಿಯಲ್ಲಿರುವ ಯತಿ ನರಸಿಂಗಾನಂದ ಹರಿದ್ವಾರದ ಧರ್ಮಸಂಸದ್‌ನಲ್ಲಿ ಭಾಷಣ ಮಾಡುತ್ತಾ ‘‘ಒಂದು ವೇಳೆ ಯಾರಾದರೂ ಹಿಂದೂಗಳ ಪಾಲಿನ ಪ್ರಭಾಕರನ್(ಹತನಾಗಿರುವ ಎಲ್‌ಟಿಟಿಇ ವರಿಷ್ಠ) ಆಗುವ ಹೊಣೆಯನ್ನು ವಹಿಸಿಕೊಳ್ಳಲು ಮಂದೆ ಬಂದಲ್ಲಿ ನಾನು ಚಂದಾ ಎತ್ತಿ ಅವರಿಗೆ 100 ಕೋಟಿ ರೂ. ನೀಡುತ್ತೇನೆ’’ ಎಂದು ಹೇಳಿದ್ದ. ಸಾಧ್ವಿ ಅನ್ನಪೂರ್ಣ ಕೂಡಾ ದ್ವೇಷವನ್ನು ಹರಡುವುದರಲ್ಲಿ ಕಡಿಮೆಯೇನಿರಲಿಲ್ಲ. 20 ಲಕ್ಷ ಮುಸ್ಲಿಮರ ಕಗ್ಗೊಲೆಗೆ ಆಕೆ ಕರೆ ನೀಡಿದ್ದಳು. ನಮ್ಮ ಧರ್ಮಕ್ಕೋಸ್ಕರವಾಗಿ ಹಾಗೆ ಮಾಡುವುದು ನಮ್ಮ ಕರ್ತವ್ಯ ಎಂದಾಕೆ ಹೇಳಿದ್ದರು. ನಮ್ಮ ಧರ್ಮಕ್ಕೆ ಯಾರೆಲ್ಲಾ ವಿರುದ್ಧವಾಗಿದ್ದಾರೆಯೋ ಅವರನ್ನು ನಾವು ಕೊಲ್ಲುತ್ತೇವೆ’’ ಎಂದು ಹೇಳಿ ಆಕೆ ಭಾಷಣ ಮುಕ್ತಾಯಗೊಳಿಸಿದ್ದಳು.

ಮೂಲತಃ ಪೂನಂ ಶಕುನ್ ಪಾಂಡೆ ಎಂಬ ಹೆಸರಿದ್ದ ಈ ಸನ್ಯಾಸಿನಿ ಎರಡು ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿಯ ಪ್ರತಿಮೆಗೆ ಬಂದೂಕಿನಿಂದ ಮೂರು ಗುಂಡುಗಳನ್ನು ಹಾರಿಸಿದ್ದಳು. ಹರಿದ್ವಾರದ ಸಭೆಯಲ್ಲಿ ಮಾತನಾಡಿದ ಜೀತೇಂದ್ರ ಪ್ರಸಾದ್ ತ್ಯಾಗಿಯು ತನ್ನ ಪೂರ್ವಾಶ್ರಮದ ಧರ್ಮದ ಬಗ್ಗೆ ದ್ವೇಷವನ್ನು ಕಾರಿದ್ದರು. ಹರಿದ್ವಾರದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರಲ್ಲಿ ಜೀತೇಂದ್ರ ಪ್ರಸಾದ್ ತ್ಯಾಗಿ ಮೊದಲಿಗರು.

ಇನ್ನು ಸುದರ್ಶನ ಚಾನೆಲ್‌ನ ಸುರೇಶ್ ಚಾವಂಕೆ ಅವರು ‘‘ನಮ್ಮ ಧರ್ಮಕ್ಕಾಗಿ ಕೊಲ್ಲಲು ಹಾಗೂ ಸಾಯಲು ಸಿದ್ಧರಿದ್ದೇವೆ’ ಎಂಬ ಪ್ರತಿಜ್ಞೆಯನ್ನು ಯುವಕರಿಗೆ ಬೋಧಿಸುವುದನ್ನು ನಾನು ಕಂಡಿದ್ದೇನೆ. ದಿಲ್ಲಿಯಲ್ಲಿ ಹಿಂದೂ ಯುವವಾಹಿನಿ ಆಯೋಜಿಸಿದ ಕಾರ್ಯಕ್ರಮಲ್ಲಿ ಆತ ಸುಮಾರು 250 ಮಂದಿ ಯುವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದರು. ‘‘ನಮ್ಮ ದೇಶದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದಕ್ಕಾಗಿ ದೇಹದಲ್ಲಿ ಕೊನೆ ಉಸಿರಿರುವವರೆಗೂ ನಾವು ಹೋರಾಡಲು ಹಾಗೂ ಅಗತ್ಯ ಬಿದ್ದಲ್ಲಿ ಸಾಯಲು ಸಿದ್ಧರಿದ್ದೇವೆಂದು ನಾವೆಲ್ಲರೂ ದೃಢಸಂಕಲ್ಪದೊಂದಿಗೆ ಈ ಪ್ರತಿಜ್ಞೆ ಕೈಗೊಳ್ಳುತ್ತೇವೆ. ಈ ಶಪಥವು ಅಚಲವಾಗಿರುವುದು ಹಾಗೂ ಭವಿಷ್ಯದಲ್ಲಿಯೂ ಮುಂದುವರಿಯಲಿದೆ’’ ಎಂದವರು ಬೋಧಿಸಿದ್ದರು.

ಇನ್ನೊಂದು ಭಯಭೀತಗೊಳಿಸುವ ಸುದ್ದಿಯೆಂದರೆ ಬುಲ್ಲಿ ಭಾಯಿ ಆ್ಯಪ್. ಕೆಲವೇ ತಿಂಗಳುಗಳ ಹಿಂದೆ ಸುಲ್ಲಿ ಡೀಲ್ಸ್ ಎಂಬ ಇದೇ ರೀತಿಯ ಆ್ಯಪ್ ಒಂದಿತ್ತು. ಈಗಿನ ಬುಲ್ಲಿ ಭಾಯಿ ಆ್ಯಪ್ ತಮ್ಮ ಹಕ್ಕು, ಘನತೆ ಹಾಗೂ ಅಲ್ಪಸಂಖ್ಯಾತರ ಭದ್ರತೆಗಾಗಿ ಧ್ವನಿಯೆತ್ತುವ ಮುಸ್ಲಿಂ ಮಹಿಳೆಯರನ್ನು ಅಪಮಾನಿಸಿದೆ ಹಾಗೂ ಅವರನ್ನು ‘ಹರಾಜಿಗಿರಿಸಿದೆ’. ವಿಷಯ ಇಷ್ಟಕ್ಕೆ ಮುಗಿದಿಲ್ಲ. ಕಳೆದ ಕೆಲವು ವರ್ಷಗಳಿಂದ ಅಲ್ಪಾವಧಿಯಲ್ಲೇ ಬೃಹತ್ ಪ್ರಮಾಣದಲ್ಲಿ ಅಪಪ್ರಚಾರದ ಅಭಿಯಾನವನ್ನು ಸೃಷ್ಟಿಸುವಂತಹ ‘ಟೆಕ್‌ಫಾಗ್’ ಎಂಬ ಆ್ಯಪ್ ಅನ್ನು ಬಿಜೆಪಿ ಹೊಂದಿದೆಯೆಂಬುದನ್ನು ‘ದಿ ವೈರ್’ನ ತನಿಖಾ ವರದಿಯು ಬಹಿರಂಗಪಡಿಸಿದೆ. ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ಪರ ಹಾಗೂ ಹಿಂದುತ್ವವಾದದ ಅಭಿಯಾನವನ್ನು ನಡೆಸಲು ಈ ಆ್ಯಪ್ ಅನ್ನು ಬಳಸಲಾಗಿತ್ತೆಂಬ ಸಂಗತಿ ಕೂಡಾ ಬೆಳಕಿಗೆ ಬಂದಿದೆ.

ಬಹುತೇಕ ದ್ವೇಷಭಾಷಣಗಳು ಹಾಗೂ ದ್ವೇಷಯುತ ಚಟುವಟಿಕೆಗಳಿಗೆ ಶಿಕ್ಷೆಯಾಗದೆ ಹೋಗುತ್ತವೆ. ಬುಲ್ಲಿ ಭಾಯಿ ಆ್ಯಪ್‌ನ ನಿರ್ಮಾತೃನನ್ನು ಬಂಧಿಸಲಾಗಿದೆ. ಆದರೆ ಹರಿದ್ವಾರ ಧರ್ಮಸಂಸದ್ ವಿರುದ್ಧ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಆರಂಭದಲ್ಲಿ ಕೇವಲ ಜೀತೇಂದ್ರ ತ್ಯಾಗಿಯನ್ನು ಬಂಧಿಸಲಾಗಿತ್ತು. ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶದೊಂದಿಗೆ ಕಾರ್ಯಪ್ರವೃತ್ತರಾದ ಪೊಲೀಸರು ಯತಿಯನ್ನು ಬಂಧಿಸಿದರು. ನೌಕಾಪಡೆಯ ನಿವೃತ್ತ ಮುಖ್ಯಸ್ಥರು ಈ ದ್ವೇಷಾಪರಾಧಗಳ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳುವಂತೆ ಕೋರಿ ರಾಷ್ಟ್ರಪತಿಗೆ ಪತ್ರವನ್ನು ಬರೆದಿದ್ದರು. ಈ ವಿಷಪೂರಿತ ವಾತಾವರಣದ ಬಗ್ಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸರಕಾರದ ಗಮನಕ್ಕೆ ತಂದಿದ್ದರು. ಇದರ ವಿರುದ್ಧ ಹೇಳಿಕೆ ನೀಡುವ ಹಾಗೂ ಸೂಕ್ತ ಕ್ರಮದ ಅಗತ್ಯವಿದೆಯೆಂದು ಅವರು ಪ್ರತಿಪಾದಿಸಿದ್ದರು.

ಹಿಂದೂ ಕೋಮುವಾದಿ ರಾಷ್ಟ್ರೀಯವಾದಿ ಸಿದ್ಧ್ದಾಂತದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಈ ಚದುರಿದ ಗುಂಪುಗಳ ಸಂಯಮರಹಿತ ಹೇಳಿಕೆಗಳು ಹಾಗೂ ಘೋಷಣೆಗಳು ಸಮಾಜವನ್ನು ಧ್ರುವೀಕರಿಸುವ ಯೋಜನೆಯನ್ನು ಹೊಂದಿವೆ. ಭಾರತದಲ್ಲಿ ಏನು ನಡೆಯುತ್ತಿದೆಯೆಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ. ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಅಮೆರಿಕ, ಜೆನೊಸೈಡ್ ವಾಚ್ ಹಾಗೂ ಇತರ 17 ಮಾನವಹಕ್ಕು ಸಂಘಟನೆಗಳು ಭಾರತದಲ್ಲಿ ಮುಸ್ಲಿಮರ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆಂದು ಸಮಾವೇಶಗಳಲ್ಲಿ ಆತಂಕ ವ್ಯಕ್ತಪಡಿಸಿವೆ. ಒಂದು ವೇಳೆ ಪರಿಸ್ಥಿತಿ ಹದಗೆಟ್ಟಲ್ಲಿ ಭಾರತವು ಸಾಮೂಹಿಕ ಹಿಂಸಾಚಾರ ಹಾಗೂ ಮುಸ್ಲಿಮರ ಹತ್ಯಾಕಾಂಡಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆಯೆಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆಡಳಿತ ಪಕ್ಷದ ಕಿವುಡು ವೌನ ವಹಿಸಿರುವುದು ಅಚ್ಚರಿಯೇನಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಬಾಯಿ ತುಂಬಾ ಮಾತನಾಡುವ ನಮ್ಮ ಪ್ರಧಾನಿಯವರು, ರೋಹಿತ್ ವೇಮುಲಾ ‘ಸಾಂಸ್ಥಿಕ ಕಗ್ಗೊಲೆ’ಗೆ ರೋಹಿತ್ ಗುರಿಯಾದಾಗ ಒಂದು ಮಾತನ್ನೂ ಆಡಲಿಲ್ಲ. ಈ ಉದ್ದೇಶಪೂರ್ವಕವಾದ ವೌನ ಹಾಗೂ ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿರುವುದು, ದ್ವೇಷ ಭಾಷಣದ ಪರಿಣಾಮವನ್ನು ಖಾತರಿಪಡಿಸುವ ದೃಷ್ಟಿಯಿಂದಲೇ ಕೂಡಿದುದಾಗಿದೆ. ದ್ವೇಷಭಾಷಣ, ಅಪಾಯಕಾರಿ ಭಾಷಣಗಳು ಹಾಗೂ ನರಮೇಧಕ್ಕೆ ಕರೆಗಳೊಂದಿಗೆ ಸಮಾಜದಲ್ಲಿ ಬಹುಕಾಲದವರೆಗೆ ತೇಲಿಸುವ ಮೂಲಕ ಫಲಿತಾಂಶವನ್ನು ಸಾಧಿಸುವುದು ಇದರ ಗುರಿಯಾಗಿದೆ.

ಧರ್ಮಸಂಸದ್ ಆರೆಸ್ಸೆಸ್‌ನ ಅಂಗವಾದ ವಿಶ್ವ ಹಿಂದೂಪರಿಷತ್ ರೂಪಿಸಿದ ಪರಿಕಲ್ಪನೆಯಾಗಿದೆ. ರಾಮಮಂದಿರದ ವಿವಾದವನ್ನು ಆರಂಭದಲ್ಲಿ ಧರ್ಮಸಂಸದ್ ಕೆದಕಿತು. ಈ ವಿವಾದವು ಕ್ರಮೇಣ ಬಾಬರಿ ಮಸೀದಿ ಧ್ವಂಸ ಹಾಗೂ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಯಿತು. ‘ಇತರರನ್ನು ದ್ವೇಷಿಸಿ’ ಅಭಿಯಾನದ ಬೇರು ಈಗ ಬಹುದೂರದವರೆಗೂ ಪ್ರಯಾಣಿಸಿದೆ. ಮುಸ್ಲಿಂ ದೊರೆಗಳನ್ನು ಖಳರಂತೆ ಬಿಂಬಿಸುವ ಮತ್ತು ಮನುಸ್ಮತಿಯ ವೌಲ್ಯಗಳನ್ನು ವೈಭವೀಕರಿಸುವ ಆರೆಸ್ಸೆಸ್ ಶಾಖೆಯ ಬೌದ್ಧಿಕ (ವಿಚಾರಗೋಷ್ಠಿ)ದಿಂದ ಆರಂಭಗೊಂಡ ಈ ಇತರರನ್ನು ದ್ವೇಷಿಸುವ ಅಭಿಯಾನವು ಬಹಳ ದೂರದವರೆಗೆ ಪ್ರಯಾಣಿಸಿದೆ. ಕಳೆದ 9 ದಶಕಗಳಲ್ಲಿ ಹಲವಾರು ಸಂಘಟನೆಗಳು ಈ ಕಾರ್ಯಸೂಚಿಯನ್ನು ಮುಂದಕ್ಕೊಯ್ದಿವೆ.

ಸಾಮಾಜಿಕ ಜಾಲತಾಣ ಹಾಗೂ ಇತರ ತಂತ್ರಜ್ಞಾನಗಳ ಆಗಮನದೊಂದಿಗೆ ಮರುಳಾದ ಹದಿಹರೆಯದವರು ಹಾಗೂ ಯುವ ವಿದ್ಯಾರ್ಥಿಗಳು ತಾವು ಆಕರ್ಷಿತರಾಗಿರುವ ಅಪಪ್ರಚಾರದ ಹರಡುವಿಕೆಗೆ ಆ ತಂತ್ರಜ್ಞಾನವನ್ನು ಬಳಿಕೊಳ್ಳುತ್ತಿದ್ದಾರೆ.

 ಸಾಮಾಜಿಕ ಜಾಲತಾಣದಲ್ಲಿ ಗಾಢವಾಗಿ ಒಳಗೊಂಡಿದ್ದ ಶಂಭುಲಾಲ್ ರೆಗಾರ್ ಎಂಬಾತ ‘ಲವ್‌ಜಿಹಾದ್’ ವಿಷಯವಾಗಿ ಅಫ್ರಾಝುಲ್ ಎಂಬಾತನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಇಲ್ಲಿ ನೆನಪಿಗೆ ಬರುತ್ತದೆ. ಬುಲ್ಲಿ ಭಾಯಿ ಆ್ಯಪ್ಸ್ ವಿವಾದಕ್ಕೆ ಸಂಬಂಧಿಸಿ ನಾಲ್ವರು ಯುವಜನರ ಬಂಧನವು ದೊಡ್ಡದೊಂದು ಅವ್ಯವಸ್ಥೆಯ ಸಣ್ಣ ಸುಳಿವಷ್ಟೇ ಆಗಿದೆ.

ಬಿಜೆಪಿಯ ಟೆಕ್ ಫಾಗ್ ಆ್ಯಪ್ ಸಮಾಜವನ್ನು ಸರಿಪಡಿಸಲಾಗದಷ್ಟು ರೀತಿಯಲ್ಲಿ ವಿಭಜಿಸಬಹುದಾದ ನೂತನ ದುರುದ್ದೇಶಪೂರಿತ ಪ್ರಚಾರದ ಅಸ್ತ್ರವಾಗಿದೆ.

ಒಂದೆಡೆ ಕೇಸರಿವಸ್ತ್ರಧಾರಿಗಳನ್ನು ಮುಟ್ಟಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅವರ ಬಂಧನಕ್ಕೆ ಬಲವಾದ ಒತ್ತಡವುಂಟಾದಲ್ಲಿ ಕೆಲವು ಸಣ್ಣಪುಟ್ಟ ದೋಷಾರೋಪಗಳನ್ನಷ್ಟೇ ಹೊರಿಸಿ ಅವರು ಸುಲಭವಾಗಿ ಶಿಕ್ಷೆಯಿಂದ ಪಾರಾಗಲು ದಾರಿ ಮಾಡಿಕೊಡುತ್ತಾರೆ. ಆಡಳಿತಾರೂಢ ಇಲಾಖೆಗಳ ಉದ್ದೇಶಪೂರ್ವಕವಾದ ವೌನದಿಂದಾಗಿ ಪ್ರೇರಿತವಾದ ದ್ವೇಷದ ರಾಜಕೀಯದ ಸುಳಿಯಲ್ಲಿ ಸಿಲುಕಿರುವ ಈ ದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ದಾಖಲಿಸಲಾಗುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಉಳಿಸಲು ಸಾಧ್ಯವೇ?.

ಜನಾಂಗೀಯ ನರಮೇಧದಂತಹ ದ್ವೇಷಪೂರಿತ ಕರೆಯ ಮೂಲವನ್ನು ಬೆಟ್ಟು ಮಾಡಿ ತೋರಿಸುವಾಗ, ಸ್ವಾತಂತ್ರ ಚಳವಳಿಯ ಕಾಲದಲ್ಲಿ ಬೆಳೆದುಬಂದಿದ್ದ ಸಹೋದರತೆಯ ವೌಲ್ಯಗಳನ್ನು ಉತ್ತೇಜಿಸುವಂತಹ ಯಾವುದೇ ಸಂಘಟನೆ ಇಲ್ಲವೆಂಬುದು ನೋವಿನ ವಿಷಯವಾಗಿದೆ. ವೈವಿಧ್ಯಮಯ ಭಾರತೀಯ ಸಮುದಾಯಗಳ ನಡುವೆ ಭಕ್ತಿ-ಸೂಫಿ ಪಂಥದ ಮಾನವೀಯತೆಯನ್ನು ಮುಂದಕ್ಕೊಯ್ಯುವಂತಹ ಯಾವುದೇ ಪರಿಣಾಮಕಾರಿ ಚಳವಳಿಗಳು ಹಾಗೂ ಉಪಕ್ರಮಗಳಿಲ್ಲ.

ಅಲ್ಪಸಂಖ್ಯಾತರಿಗೆ ಭದ್ರತೆಯ ಭರವಸೆಯನ್ನು ನೀಡುವಂತಹ ಸಂವೇದನೆಯಿರುವ, ಯತಿ ನರಸಿಂಗಾನಂದ ಅಥವಾ ಬುಲ್ಲಿ ಆ್ಯಪ್‌ಗಳನ್ನು ನಿರ್ಮಿಸಿರುವಂತಹ ಯುವಜನರ ಮೇಲೆ ಕ್ರಮ ಕೈಗೊಳ್ಳುವ ಅಥವಾ ಟೆಕ್ ಫಾಗ್‌ನಂತಹ ಆ್ಯಪ್‌ಗಳ ದುರ್ಬಳಕೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವಂತಹ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೇರಬಹುದೆಂಬ ಭರವಸೆಯನ್ನು ನಾವು ಹೊಂದಿದ್ದೇವೆ. ಸಹೋದರತ್ವ -ಅನ್ಯೋನ್ಯತೆಯನ್ನು ಉತ್ತೇಜಿಸುವ ಸಾಮಾಜಿಕ ಚಳವಳಿ ಮಾತ್ರವೇ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ಖಾತರಿಪಡಿಸುತ್ತದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ-ಆರ್ಥಿಕ ಅಭಿವೃದ್ಧಿಗೆ ಇವು ಅತ್ಯಂತ ಅಗತ್ಯವಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು