varthabharthi


ವಿಶೇಷ-ವರದಿಗಳು

ರೈತರ ಆದಾಯ ದ್ವಿಗುಣ ಎನ್ನುವುದು ಇನ್ನೊಂದು ‘ಜುಮ್ಲಾ’ವೇ?

ವಾರ್ತಾ ಭಾರತಿ : 21 Jan, 2022
ಭರತ್ ಡೋಗ್ರಾ

2020-21ರ ಬಜೆಟ್ ಅಂದಾಜನ್ನು ನೋಡುವುದಾದರೆ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣಕ್ಕೆ 1,13,224 ಕೋಟಿ ರೂಪಾಯಿಯನ್ನು ನೀಡಲಾಗಿತ್ತು. ಆದರೆ, ಬಳಿಕ ಅದನ್ನು ಪರಿಷ್ಕರಿಸಿ 96,926 ಕೋಟಿ ರೂಪಾಯಿಗೆ ಇಳಿಸಲಾಯಿತು. 2021-22ರ ಸಾಲಿನ ಬಜೆಟ್ ಅಂದಾಜನ್ನು 1,03,549 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಅದು ಹಿಂದಿನ ವರ್ಷದ ಬಜೆಟ್ ಅಂದಾಜಿಗಿಂತಲೂ ಸುಮಾರು 10,000 ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ.

ಕೃಷಿ ಕ್ಷೇತ್ರದಲ್ಲಿನ ಪ್ರಸಕ್ತ ಬೆಳವಣಿಗೆಯ ದರವನ್ನು ಗಣನೆಗೆ ತೆಗೆದುಕೊಂಡರೆ, 2022ರ ವೇಳೆಗೆ ರೈತರ ಆದಾಯ ದ್ವಿಗುಣ ಸಾಧ್ಯವಿಲ್ಲ ಎನ್ನುವುದನ್ನು 2019ರ ಜುಲೈಯಲ್ಲಿ ರಾಜ್ಯ ಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸರಕಾರ ಒಪ್ಪಿಕೊಂಡಿದೆ. ಆದರೆ, ಗುರಿಯನ್ನು ಸಾಧಿಸಲು ಸಂಬಂಧಿತ ಕ್ಷೇತ್ರಗಳ ಬೆಳವಣಿಗೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದಾಗಿ ಅದು ಹೇಳಿದೆ.

ನಾವು ಈಗಾಗಲೇ 2022ರಲ್ಲಿ ಇದ್ದೇವೆ. ನಿಮ್ಮ ನಿಜವಾದ ಆದಾಯ (ಹಣದುಬ್ಬರಕ್ಕೆ ಹೊಂದಿಸಿಕೊಂಡು) ಕಳೆದ 5-6 ವರ್ಷಗಳಲ್ಲಿ ದ್ವಿಗುಣಗೊಂಡಿದೆಯೇ ಎಂಬುದಾಗಿ ಯಾವ ರೈತರನ್ನಾದರೂ ಕೇಳಿನೋಡಿ. ಸರಕಾರವು 2016ರ ಸುಮಾರಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದ ಭಾವಾವೇಶದ ಮಾತುಗಳನ್ನು ಆಡಿತು. ಹಾಗಾದರೆ ಅದು ಇನ್ನೊಂದು ಜುಮ್ಲಾ (ಸುಳ್ಳು)ವೇ? ನಿರ್ದಿಷ್ಟವಾಗಿ ಹೇಳುವುದಾದರೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸರಕಾರ ನೀಡುವ ಬಜೆಟ್ ಅನುದಾನಗಳಿಗೆ ಇದು ಹೊಂದಿಕೊಳ್ಳುತ್ತದೆಯೇ?

 ಈ ಅವಧಿಯ ಕೇಂದ್ರ ಬಜೆಟ್‌ನ ಅನುದಾನಗಳನ್ನು ಗಮನಿಸಿದರೆ, ನಿರ್ದಿಷ್ಟವಾಗಿ ರೈತ ಸಂಬಂಧಿ ಅನುದಾನದಲ್ಲಿ ಏರಿಕೆಯಾಗಿರುವುದು ‘ಕಿಸಾನ್ ಸಮ್ಮಾನ್’ ಎಂಬ ಹೊಸ ಯೋಜನೆಯಲ್ಲಿ ಮಾತ್ರ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ವಾರ್ಷಿಕ ಇಂತಿಷ್ಟು ಹಣವನ್ನು ಕಂತುಗಳಲ್ಲಿ ಕೊಡಲಾಗುತ್ತದೆ. ಇದು ಕೂಡ ಸಮರ್ಪಕವಾಗಿಲ್ಲ. ಗೇಣಿದಾರರು, ಕೃಷಿ ಕಾರ್ಮಿಕರು ಮತ್ತು ದಾಖಲೆಗಳಲ್ಲಿ ಕೊಂಚ ಗೊಂದಲವಿರುವ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಅದೂ ಅಲ್ಲದೆ, ಮಹಿಳಾ ರೈತರಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಲಾಗಿಲ್ಲ. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ ಈ ಯೋಜನೆಗೆ ಬಜೆಟ್ ಮೂಲಕ ಹರಿದು ಬರುತ್ತಿರುವ ಹಣ ಕಡಿಮೆಯಾಗುತ್ತಿದೆ.

2021-22ರ ಬಜೆಟ್‌ನಲ್ಲಿ, ಮೂರು ಲಕ್ಷ ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಆಹಾರ ಸಬ್ಸಿಡಿಗೆ ಕೊಡಲಾಗಿತ್ತು. ಆದರೆ ಅದರ ಅರ್ಧದಷ್ಟನ್ನು ಬಾಕಿಯಿರುವ ಮೊತ್ತವಾಗಿ ಭಾರತೀಯ ಆಹಾರ ನಿಗಮಕ್ಕೆ ಪಾವತಿಸಲಾಗಿದೆ. ಅದೇ ರೀತಿ, ರಸಗೊಬ್ಬರ ಸಬ್ಸಿಡಿಗಾಗಿ 50,000 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಬಜೆಟ್‌ನಲ್ಲಿ ಒದಗಿಸಲಾಗಿದೆ. ಆದರೆ ಅದನ್ನು ರಸಗೊಬ್ಬರ ಕಂಪೆನಿಗಳಿಗೆ ನೀಡಬೇಕಾಗಿದ್ದ ಹಿಂದಿನ ಬಾಕಿಯನ್ನು ತೀರಿಸಲು ಬಳಸಲಾಗಿದೆ. ಇದನ್ನು ಅನುದಾನದಲ್ಲಿ ಹೆಚ್ಚಳ ಎಂಬುದಾಗಿ ಬಜೆಟ್‌ನಲ್ಲಿ ತೋರಿಸಲಾಗಿದೆ. ಆದರೆ ಇದರಿಂದ ರೈತರಿಗೆ ನೆರವಾಗುವ ಸಾಧ್ಯತೆ ತುಂಬಾ ಕಡಿಮೆ.

2019ರ ಜುಲೈಯಲ್ಲಿ ಸರಕಾರ ನೀಡಿರುವ ಹೇಳಿಕೆಯಲ್ಲಿ, ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಪಶು ಸಂಗೋಪನೆ, ಹಾಲುತ್ಪನ್ನಗಳ ಅಭಿವೃದ್ಧಿ ಮತ್ತು ಮೀನುಗಾರಿಕೆ ಮುಂತಾದ ಸಂಬಂಧಿತ ಕ್ಷೇತ್ರಗಳಿಗೆ ನೀಡಲಾಗಿರುವ ಅನುದಾನದಲ್ಲೂ ಗಣನೀಯ ಹೆಚ್ಚಳವೇನೂ ಆಗಿಲ್ಲ.

2020-21ರ ಬಜೆಟ್ ಅಂದಾಜನ್ನು ನೋಡುವುದಾದರೆ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣಕ್ಕೆ 1,13,224 ಕೋಟಿ ರೂಪಾಯಿಯನ್ನು ನೀಡಲಾಗಿತ್ತು. ಆದರೆ, ಬಳಿಕ ಅದನ್ನು ಪರಿಷ್ಕರಿಸಿ 96,926 ಕೋಟಿ ರೂಪಾಯಿಗೆ ಇಳಿಸಲಾಯಿತು. 2021-22ರ ಸಾಲಿನ ಬಜೆಟ್ ಅಂದಾಜನ್ನು 1,03,549 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಅದು ಹಿಂದಿನ ವರ್ಷದ ಬಜೆಟ್ ಅಂದಾಜಿಗಿಂತಲೂ ಸುಮಾರು 10,000 ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ.

ಸರಕಾರದ ಅತಿ ಹೆಚ್ಚು ಪ್ರಚಾರ ಪಡೆದಿರುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಕಿಸಾನ್ ಸಮ್ಮಾನ್ ಕೂಡ ಬಜೆಟ್ ಕಡಿತವನ್ನು ಎದುರಿಸುತ್ತಿದೆ. ಅದರ 2020-21ರ ಬಜೆಟ್ ಅಂದಾಜು ರೂ. 75,000 ಕೋಟಿ ಆಗಿತ್ತು. ಆದರೆ, ಬಳಿಕ ಅದನ್ನು 65,000 ಕೋಟಿ ರೂಪಾಯಿಗೆ ಪರಿಷ್ಕರಿಸಲಾಗಿದೆ. 2021-22ರ ಬಜೆಟ್ ಅಂದಾಜು ರೂ. 65,000 ಕೋಟಿ ಆಗಿದೆ. ಅಂದರೆ, ಹಿಂದಿನ ಸಾಲಿಗಿಂತಲೂ ರೂ. 10,000 ಕೋಟಿ ಕಡಿತ ಅನುಭವಿಸಿದೆ.

2020-21ರ ಸಾಲಿಗೆ ಪ್ರಧಾನ್ ಮಂತ್ರಿ ಕೃಷಿ ಸಿಂಚಯ್ ಯೋಜನೆಯ ಬಜೆಟ್ ಅಂದಾಜು 11,378 ಕೋಟಿ ರೂಪಾಯಿ ಆಗಿತ್ತು. ಆದರೆ ಅದರ ಪರಿಷ್ಕೃತ ಅಂದಾಜನ್ನು ಬಳಿಕ 8,206 ಕೋಟಿ ರೂಪಾಯಿಗೆ ಇಳಿಸಲಾಯಿತು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮೂಲ ಅಂದಾಜು 3,700 ಕೋಟಿ ರೂಪಾಯಿ ಆದರೂ, ಬಳಿಕ ಅದನ್ನು ಪರಿಷ್ಕರಿಸಿ 2,551 ಕೋಟಿ ರೂಪಾಯಿಗೆ ಇಳಿಸಲಾಯಿತು. ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮವನ್ನೂ ಬಜೆಟ್ ಕಡಿತ ಕಾಡಿದೆ. 2020-21ರ ಸಾಲಿಗೆ ಬಜೆಟ್ ಅಂದಾಜು 2,100 ಕೋಟಿ ರೂಪಾಯಿ ಆಗಿದ್ದರೂ, ಅದನ್ನು ಬಳಿಕ ಪರಿಷ್ಕರಿಸಿ 1,864 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಪರಂಪರಾಗತ ಕೃಷಿ ವಿಕಾಸ ಯೋಜನೆಯಲ್ಲಿ 2020-21ರ ಸಾಲಿಗೆ 500 ಕೋಟಿ ನೀಡಲು ಪ್ರಸ್ತಾಪಿಸಲಾಗಿದ್ದರೂ, ಬಳಿಕ ಅದನ್ನು 350 ಕೋಟಿ ರೂಪಾಯಿಗೆ ಕಡಿತಗೊಳಿಸಲಾಯಿತು. 2021-22ರ ಸಾಲಿನ ಬಜೆಟ್ ಅಂದಾಜು 450 ಕೋಟಿ ರೂಪಾಯಿ ಆಗಿದೆ. ಇದು ಹಿಂದಿನ ವರ್ಷ ಪ್ರಸ್ತಾವಿಸಲಾಗಿರುವ ಅನುದಾನಕ್ಕಿಂತಲೂ ಕಡಿಮೆಯಾಗಿದೆ.

ರಾಷ್ಟ್ರೀಯ ತೋಟಗಾರಿಕಾ ಯೋಜನೆಯ 2020-21ರ ಸಾಲಿನ ಬಜೆಟ್ ಅಂದಾಜು 2,300 ಕೋಟಿ ರೂಪಾಯಿ ಆಗಿತ್ತಾದರೂ ಬಳಿಕ ಅದನ್ನು 1,610 ಕೋಟಿ ರೂಪಾಯಿಗೆ ಇಳಿಸಲಾಗಿದೆ.
ಕೃಷಿ ಕ್ಷೇತ್ರದೊಂದಿಗೆ ಬೆಸೆದುಕೊಂಡಿರುವ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದಾಗಿ ಸರಕಾರ ಹೇಳಿಕೊಂಡಿದ್ದರೂ, 2020-21ರ ಸಾಲಿನಲ್ಲಿ ‘ಶ್ವೇತ ಕ್ರಾಂತಿ’ಯಡಿಯಲ್ಲಿ ಒದಗಿಸಲಾಗಿದ್ದ 1,805 ಕೋಟಿ ರೂಪಾಯಿ ಬಜೆಟ್ ಅಂದಾಜನ್ನು 1,642 ಕೋಟಿ ರೂಪಾಯಿಗೆ ಬಳಿಕ ಪರಿಷ್ಕರಿಸಲಾಗಿದೆ. 2021-22ರ ಸಾಲಿಗೆ 1,177 ಕೋಟಿ ರೂಪಾಯಿ ಬಜೆಟ್ ಅಂದಾಜನ್ನು ನಿಗದಿಪಡಿಸಲಾಗಿದೆ. ಆದರೆ, ಇದು ಹಿಂದಿನ ವರ್ಷದ ಬಜೆಟ್ ಅಂದಾಜಿಗಿಂತ ತುಂಬಾ ಕಡಿಮೆಯಾಗಿದೆ.

ರಾಷ್ಟ್ರೀಯ ಬಿದಿರು ಯೋಜನೆಗೆ 2020-21ರ ಸಾಲಿನಲ್ಲಿ 110 ಕೋಟಿ ರೂಪಾಯಿ ಬಜೆಟ್ ಅಂದಾಜನ್ನು ಒದಗಿಸಲಾಗಿತ್ತು. ಆದರೆ, ಅದನ್ನು ಬಳಿಕ ಪರಿಷ್ಕರಿಸಿ 94 ಕೋಟಿ ರೂಪಾಯಿಗೆ ಇಳಿಸಲಾಗಿದೆ. 2021-22ರ ಸಾಲಿನ ಬಜೆಟ್ ಅಂದಾಜನ್ನು 100 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದೆ. ಇದು ಹಿಂದಿನ ವರ್ಷದ ಮೊತ್ತಕ್ಕಿಂತಲೂ ಕಡಿಮೆಯಾಗಿದೆ.

ಕೃಷಿ ಸಚಿವಾಲಯದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಮತ್ತು ಬೆಂಬಲ ಬೆಲೆ ಯೋಜನೆ (ಎಮ್‌ಐಎಸ್-ಪಿಎಸ್‌ಎಸ್)ಗೆ 2020-21ರ ಸಾಲಿನಲ್ಲಿ 2,000 ಕೋಟಿ ರೂಪಾಯಿ ಬಜೆಟ್ ಅನುದಾನವನ್ನು ಒದಗಿಸಲಾಗಿತ್ತು. ಆದರೆ, ಅದನ್ನು ಬಳಿಕ ಪರಿಷ್ಕರಿಸಿ 996 ಕೋಟಿ ರೂಪಾಯಿಗೆ ಇಳಿಸಲಾಗಿತ್ತು. ಬಳಿಕ, 2021-22ರ ಸಾಲಿಗೆ ಈ ಯೋಜನೆಗಳ ಬಜೆಟ್ ಅಂದಾಜು 1,500 ಕೋಟಿ ರೂಪಾಯಿ ಆಗಿತ್ತು. ಆದರೆ ಅದು ಅದರ ಹಿಂದಿನ ವರ್ಷದ ಮೊತ್ತಕ್ಕಿಂತಲೂ ತುಂಬಾ ಕಡಿಮೆಯಾಗಿದೆ.

ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ಇಲ್ಲಿ ನಮೂದಿಸಲಾಗಿರುವ ಕಡಿತಗಳು ವಾಸ್ತವಿಕವಾಗಿ ಇನ್ನೂ ಹೆಚ್ಚಾಗುತ್ತವೆ.
ಹಾಗಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎನ್ನುವ ಸರಕಾರದ ಭಾವಾವೇಶದ ಮಾತುಗಳಿಗೆ ಇತ್ತೀಚಿನ ವರ್ಷಗಳ ಬಜೆಟ್ ಅನುದಾನಗಳು ಹೊಂದಿಕೆಯಾಗುತ್ತಿಲ್ಲ ಎನ್ನುವುದು ಸ್ಪಷ್ಟ. ಅದೂ ಅಲ್ಲದೆ, ಸರಕಾರಿ ವೆಚ್ಚ ಮತ್ತು ಆದ್ಯತೆಗಳ ದಿಕ್ಕನ್ನು ಗಮನಿಸಿದರೆ, ಅದು ಬೃಹತ್ ಉದ್ದಿಮೆಗಳ ಹಿತಾಸಕ್ತಿಗಳನ್ನು ಕಾಯುವ ನಿಟ್ಟಿನಲ್ಲಿದೆ ಎನ್ನುವುದೂ ಸ್ಪಷ್ಟ.

ಈ ದಿನಗಳಲ್ಲಿ ಅತ್ಯಂತ ವಿವಾದಾಸ್ಪದ ಅಕ್ಕಿ ಮೌಲ್ಯವರ್ಧನೆ ಸೇರಿದಂತೆ ಆಹಾರ ಮೌಲ್ಯವರ್ಧನೆಗಾಗಿ ಭಾರೀ ಮೊತ್ತದ ಹಣವನ್ನು ಹರಿಸಲಾಗುತ್ತಿದೆ. ಇದಕ್ಕೆ ಹಲವು ಪರಿಣತರು ವಿರೋಧ ವ್ಯಕ್ತಪಡಿಸಿದ್ದಾರೆ. ತೈಲಬೀಜಗಳ ಅಭಿವೃದ್ಧಿ ಎಂಬ ಹೆಸರಿನಲ್ಲಿ ತಾಳೆ ಎಣ್ಣೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ಅದೇ ವೇಳೆ, ಹೆಚ್ಚಿನ ಆರೋಗ್ಯದಾಯಕ ಸಾಂಪ್ರದಾಯಿಕ ತೈಲಬೀಜಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಪರಿಣತರು ಮತ್ತು ಪರಿಸರವಾದಿಗಳ ವಿರೋಧದ ಹೊರತಾಗಿಯೂ ಇದನ್ನು ಮಾಡಲಾಗುತ್ತಿದೆ.

ಸರಕಾರವು ಹಲವು ಕೃಷಿ ಉತ್ಪನ್ನಗಳ ಆಮದಿಗೆ ಉತ್ತೇಜನ ನೀಡಿದೆ. ಅಮೆರಿಕದಿಂದ ಹಂದಿ ಮಾಂಸ ಆಮದು ಮಾಡುವುದು ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಅದೂ ಅಲ್ಲದೆ, ಕುಲಾಂತರಿ ಆಹಾರಗಳಿಗೆ ಸಂಬಂಧಿಸಿದ ನಿಯಮಾವಳಿಗಳಿಗೆ ಬದಲಾವಣೆ ತರುವ ಪ್ರಕ್ರಿಯೆಯನ್ನು ಸರಕಾರ ಆರಂಭಿಸಿದೆ. ಇದು ಭವಿಷ್ಯದಲ್ಲಿ ಸಂಸ್ಕರಿತ ಕುಲಾಂತರಿ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದಕ್ಕೆ ಕಾರಣವಾಗಬಹುದು. ಕುಲಾಂತರಿ ಆಹಾರಗಳಿಗೆ ಅನುಮೋದನೆ ನೀಡುವ ಪರವಾಗಿ ಸರಕಾರ ನಿರ್ಧಾರಗಳನ್ನು ತೆಗೆದುಕೊಂಡರೆ, ಅದು ಗ್ರಾಹಕರ ಆರೋಗ್ಯದ ಮೇಲೆ ಮತ್ತು ರೈತರ ಜೀವನೋಪಾಯಗಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು.
ಇದನ್ನು ಸ್ವತಂತ್ರ ಪರಿಣತರು ಮತ್ತು ಹೋರಾಟಗಾರರು ಮಾತ್ರ ವಿರೋಧಿಸುತ್ತಿರುವುದಲ್ಲ. ಸಂಘ ಪರಿವಾರದ ಕೆಲವು ಘಟಕಗಳು, ಅದರಲ್ಲೂ ಮುಖ್ಯವಾಗಿ ಸ್ವದೇಶಿ ಜಾಗರಣ್ ಮಂಚವೂ ವಿರೋಧಿಸುತ್ತಿದೆ. ರೈತರು ಮತ್ತು ಗ್ರಾಹಕರ ಹಿತವನ್ನು ಬಲಿಕೊಟ್ಟು ಬೃಹತ್ ಕೃಷಿ ಉದ್ಯಮಿಗಳ ಹಿತಾಸಕ್ತಿಗಳನ್ನು ಕಾಯಲು ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಎಲ್ಲರೂ ವಿರೋಧಿಸುವುದು ಮುಖ್ಯವಾಗಿದೆ.

ಬಜೆಟ್ ವಿಶ್ಲೇಷಣೆಯಲ್ಲಿ ಬಜೆಟ್ ಅನುದಾನಗಳಿಗೆ ಮಾತ್ರ ಗಮನ ಕೊಟ್ಟರೆ ಸಾಕಾಗುವುದಿಲ್ಲ. ಈ ಅನುದಾನಗಳನ್ನು ಬೃಹತ್ ಉದ್ಯಮಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಹೇಗೆ ಖರ್ಚು ಮಾಡಲಾಗುತ್ತಿದೆ ಎನ್ನುವುದನ್ನೂ ಅದು ಗಮನಿಸಬೇಕಾಗಿದೆ.

ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)