varthabharthi


ವೈವಿಧ್ಯ

ಚಿತ್ತಕ್ಕಿಳಿಯುವ ವ್ಯಂಗ್ಯಚಿತ್ರಗಳು

ವಾರ್ತಾ ಭಾರತಿ : 21 Jan, 2022
ಬಸವರಾಜು ಮೇಗಲಕೇರಿ

ಆ ಗೆರೆಗಳಲ್ಲಿ ಒಂದು ಆಕೃತಿ ಅಡಗಿದೆ. ಆ ಆಕೃತಿಯಲ್ಲಿ ವ್ಯಂಗ್ಯವಿದೆ, ವಿನೋದವಿದೆ, ವಿಡಂಬನೆಯಿದೆ, ವಿಶೇಷವೂ ಇದೆ. ಆ ಆಕೃತಿಯ ಚಹರೆ, ಸ್ವಭಾವ, ಸಾಧನೆಗಳು ಗೆರೆಗಳಲ್ಲಿಯೇ ಅಭಿವ್ಯಕ್ತಿಗೊಂಡಿದೆ. ಅವರು ಯಾರೆಂದು ಅನಾವರಣಗೊಳಿಸುತ್ತದೆ. ಅಂತಹ ಅಪರೂಪದ, 21 ದಿನಗಳ, 21 ಕಲಾವಿದರ 42 ವ್ಯಂಗ್ಯಚಿತ್ರಗಳನ್ನು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ದೇಶದ ಏಕೈಕ ಮಾಸಿಕ ಕಾರ್ಟೂನ್ ನಿಯತಕಾಲಿಕೆ ‘ಕಾರ್ಟೂನ್ ವಾಚ್’ ಈ ಉತ್ಸವವನ್ನು ಆಯೋಜಿಸಿತ್ತು. ತನ್ನ 26ನೇ ವರ್ಷದ ಪ್ರಕಟಣೆಯ ನೆಪದಲ್ಲಿ ಕರ್ನಾಟಕದ ನಾಲ್ವರು ಸೃಜನಶೀಲ ವ್ಯಂಗ್ಯಚಿತ್ರಕಾರರಾದ ವಿ.ಜಿ.ನರೇಂದ್ರ, ಕೆ.ಆರ್.ಸ್ವಾಮಿ, ಬಿ.ಜಿ.ಗುಜ್ಜಾರಪ್ಪ, ಜಿ.ಎಸ್.ನಾಗನಾಥ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತ್ತು.

ಜನವರಿ ಒಂದರಿಂದ ಆರಂಭವಾದ ಈ ವ್ಯಂಗ್ಯಚಿತ್ರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು, ತಮಗಾದ ಅನುಭವವನ್ನು ಮತ್ತೊಬ್ಬರಿಗೆ ಹಂಚಲು, ಕಲಾವಿದರ ಕಲಾವಂತಿಕೆ ಕುರಿತು ಮಾತನಾಡಲು, ಮೆಚ್ಚಲು ಅಥವಾ ಮೆಚ್ಚದಿರಲು ವೀಕ್ಷಕರೇ ಇಲ್ಲದ್ದು ದುರಂತ. ಕೊರೋನ-ಲಾಕ್‌ಡೌನ್ ಕಾರಣವೋ ಅಥವಾ ಅದರ ನೆಪದಲ್ಲಿ ತಪ್ಪಿಸಿಕೊಳ್ಳುವ ತಂತ್ರವೋ ಅಥವಾ ಕಲಾಮನಸ್ಸುಗಳ ಕೊರತೆಯೋ ಅಥವಾ ಜನರಲ್ಲಿ ಆಸಕ್ತಿ, ಅಭಿರುಚಿ ಅಂತರ್ದಾನವಾಗಿದೆಯೋ- ಒಟ್ಟಾರೆ ಈ ಎಲ್ಲ ಕಾರಣಗಳಿಂದ ವ್ಯಂಗ್ಯಚಿತ್ರ ಪ್ರದರ್ಶನದ ಗ್ಯಾಲರಿ ಬಿಕೋ ಎನ್ನುತ್ತಿತ್ತು. ಕಾರ್ಟೂನ್ ಗ್ಯಾಲರಿಯ ಕಚೇರಿಯಲ್ಲಿ ಯಥಾಪ್ರಕಾರ ಹಿರಿಯ ಕಲಾವಿದರಾದ ವಿ.ಜಿ.ನರೇಂದ್ರರು ಮುಖಗವಸು ಧರಿಸಿ ಮೌನವಾಗಿ ಕೂತಿದ್ದರು. ಚಿತ್ರಗಳನ್ನು ಪ್ರದರ್ಶನಕ್ಕಿಟ್ಟ ಗ್ಯಾಲರಿಯಲ್ಲಿ ಅದರ ಉಸ್ತುವಾರಿ ಹೊತ್ತಿದ್ದ ಇಬ್ಬರು, ಖಾಲಿ ಕುರ್ಚಿಗಳನ್ನು ನೋಡುತ್ತಾ ನಿರಾಸಕ್ತಿ ತಳೆದಿದ್ದರು. ಗ್ಯಾಲರಿಯ ಆ ಸ್ಥಿತಿಯೇ ಕಲಾವಿದರ ಸ್ಥಿತಿಗತಿಯನ್ನು ರೂಪಕದಲ್ಲಿ ಹೇಳುವಂತಿತ್ತು.

ಆಶ್ಚರ್ಯವೆಂದರೆ, ಗೋಡೆಗೇರಿದ್ದ ದೊಡ್ಡ ಸೈಜಿನ ವ್ಯಂಗ್ಯಚಿತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿದ್ದವು. ಅವುಗಳ ಕುಸುರಿ ಕೆಲಸದಿಂದ ಕಲೆಯ ಸಾಧ್ಯತೆಯನ್ನು ಸಾರುತ್ತಿದ್ದವು. ಸಾಧಕನ ವ್ಯಕ್ತಿತ್ವವನ್ನು ಬಿಡಿಸಿಟ್ಟು ಬೆರಗುಟ್ಟಿಸು ವಂತಿದ್ದವು. ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಚಿತ್ರಗಳು ಚಿತ್ತಕ್ಕಿಳಿಸುತ್ತಿದ್ದವು. ಗೆರೆಗಳಿಗೆ ಜೀವ ಬಂದು ಗ್ಯಾಲರಿ ಜೀವಂತಿಕೆಯಿಂದ ಕಂಗೊಳಿಸುತ್ತಿತ್ತು. ನೆಲ್ಸನ್ ಮಂಡೇಲಾ, ದ.ರಾ.ಬೇಂದ್ರೆ, ಪುಟ್ಟಣ್ಣ ಕಣಗಾಲ್, ಅಬ್ದುಲ್ ಕಲಾಂ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಪುನೀತ್ ರಾಜಕುಮಾರ್, ಬಾಬಾ ರಾಮ್‌ದೇವ್, ಎಂ.ಎಫ್. ಹುಸೈನ್, ಶಾರುಖ್ ಖಾನ್, ವೀರಪ್ಪನ್, ಅನಂತನಾಗ್, ಶಂಕರನಾಗ್, ಆರ್.ಕೆ.ಲಕ್ಷ್ಮಣ್, ಮಾತಾ ಅಮೃತಾನಂದಮಯಿ, ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ್, ಸುಕ್ರಿ ಬೊಮ್ಮಗೌಡ, ಅಶೋಕ್ ಖೇಣಿ, ವಿಶ್ವೇಶ್ವರಯ್ಯ, ಪ್ರಣವ್ ಮುಖರ್ಜಿ, ಬಾಳ್ ಠಾಕ್ರೆ, ನಾಗೇಶ್ ಹೆಗಡೆ, ಅಮಿತಾಭ್ ಬಚ್ಚನ್, ಸ್ಟೀವ್ ಜಾಬ್ಸ್- ಇವರೆಲ್ಲರೂ ಸಮಾಜಸೇವೆ, ಸಂಗೀತ, ಸಿನೆಮಾ, ಸಾಹಿತ್ಯ, ಕಲೆ, ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿ ಹೆಸರು ಮಾಡಿ ಸಾರ್ವಜನಿಕ ವ್ಯಕ್ತಿಗಳಾದವರು. ಸಮಾಜದೊಂದಿಗೆ ಬೆರೆತು ಬೆಳೆದವರು. ಇಂತಹ ಮಹಾನ್ ಸಾಧಕರೆಲ್ಲ ಅಲ್ಲಿ ಒಟ್ಟಿಗೆ ಕುಳಿತು ಲೋಕದ ವಿಚಾರವನ್ನು ಚರ್ಚಿಸುತ್ತಿರುವಂತೆ ಭಾಸವಾಗುತ್ತಿತ್ತು.

ಕಲೆ ಎಂಬ ಪ್ರಕಾರ ಅತಿ ಸೂಕ್ಷ್ಮ ಮತ್ತು ಸಂಕೀರ್ಣ ಅನುಭವಗಳಿಂದ ಕೂಡಿರುವಂತಹದ್ದು. ಅಂತಹ ಕಲಾ ಪ್ರಕಾರವನ್ನು ಮೈಗೂಡಿಸಿಕೊಂಡ ನಾಡಿನ 21 ಪ್ರತಿಭಾನ್ವಿತ ಕಲಾವಿದರು ರಚಿಸಿದ, 2 ಅಡಿ ಅಗಲ, 3 ಅಡಿ ಉದ್ದದ ವ್ಯಂಗ್ಯಚಿತ್ರಗಳು ಆ ಪ್ರದರ್ಶನದಲ್ಲಿದ್ದವು. ಅವರು ಚಿತ್ರ ರಚಿಸಲು ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ಮತ್ತವರ ಸಾಧನೆಗಳೇ ಮಾನದಂಡವಾಗಿದ್ದರೂ, ಒಬ್ಬೊಬ್ಬರದು ಒಂದೊಂದು ರೀತಿ. ಕಂಡಿರಿಸಿದ ಬಗೆಯೂ ಭಿನ್ನ. ಶೈಲಿಯೂ ವಿಶಿಷ್ಟ. ಆಶ್ಚರ್ಯವೆಂದರೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಇಬ್ಬರು ಕಲಾವಿದರು ರಚಿಸಿದ್ದಾರೆ, ಇಬ್ಬರ ಗೆರೆಗಳಲ್ಲೂ ಕಲಾಂ ಮುಗ್ಧತೆ ಮಾತ್ರ ಮಾಸಿಲ್ಲ. ಹಾಗೆಯೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರನ್ನು ಇಬ್ಬರು ಕಲಾವಿದರು ಕಡೆದಿಟ್ಟಿದ್ದಾರೆ. ಎರಡರಲ್ಲೂ ಅದೇ ಪರಿಸರಪ್ರೀತಿ ಎದ್ದುಕಾಣುತ್ತದೆ. ಇನ್ನು ಸೂರಿಯವರು ರಚಿಸಿರುವ ಬೇಂದ್ರೆ ಅಜ್ಜನಂತೂ- ರಸ್ತೆಯಲ್ಲೇ ನಿಂತು ಕವನವಾಚಿಸುವ ಪರಿ ಅದ್ಭುತವಾಗಿದೆ. ಬೇಸರದ ಸಂಗತಿ ಎಂದರೆ, ಈ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ವೀಕ್ಷಕರಿಲ್ಲ.

ಕಲೆಯ ಮೆಚ್ಚಿ ಮಾತನಾಡುವ ಮನಸ್ಸುಗಳಿಲ್ಲ. ಇಂತಹ ಅಪರೂಪದ ಪ್ರದರ್ಶನಗಳನ್ನು ಜನರ ಮುಂದಿಡಬೇಕಾದ ಸುದ್ದಿ ಮಾಧ್ಯಮಗಳಿಗೂ- ಒಂದೆರಡನ್ನು ಹೊರತುಪಡಿಸಿದರೆ- ಅದು ಬೇಕಾಗಿಲ್ಲ. ಈಗಾಗಲೇ ವ್ಯಂಗ್ಯಚಿತ್ರಗಳು ಮುದ್ರಣ ಮಾಧ್ಯಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ದಿನಪತ್ರಿಕೆಗಳಲ್ಲಿ ಪಾಕೆಟ್ ಸೈಜಿಗೆ ಸೀಮಿತವಾಗಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಕಲೆಗೆ ಬೆಲೆ ಕೊಡುವುದು, ಕಲಾವಿದರ ಶ್ರಮವನ್ನು ಗೌರವಿಸುವುದು, ಪ್ರೋತ್ಸಾಹ, ನೆರವು ನೀಡಿ ಹುರಿದುಂಬಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಛತ್ತೀಸ್‌ಗಡದ ‘ಕಾರ್ಟೂನ್ ವಾಚ್’ ಎಂಬ ಮಾಸಪತ್ರಿಕೆ ಮಾತ್ರ ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡುವ, ಕಲೆಗೆ ಬೆಲೆ ತರುವ ಪ್ರದರ್ಶನಗಳನ್ನು ಆಯೋಜಿಸುವ ಕೆಲಸದಲ್ಲಿ ನಿರತವಾಗಿದೆ. ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಲೆಗೆ, ಕಲಾವಿದರಿಗೆ ಮಣೆ-ಮನ್ನಣೆ ದೊರಕಿಸಿಕೊಡಲು ಶ್ರಮಿಸುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ಹಾಗೆಯೇ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಖಾಸಗಿ ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು ಕೊಂಚ ಉದಾರತೆ ತೋರಿದರೆ, ಚಿತ್ತ ಕೆಡಿಸುವ ಚಿತ್ರಗಳು ರಾಜ್ಯದ ನಾನಾ ಭಾಗಗಳಲ್ಲೂ ಪ್ರದರ್ಶನ ಕಾಣಬಹುದು. ಕಾಣುವಂತಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)