varthabharthi


ಕರ್ನಾಟಕ

ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದು, ರಾತ್ರಿ ಕರ್ಫ್ಯೂ ಮುಂದುವರಿಕೆ: ಸಚಿವ ಆರ್. ಅಶೋಕ್

ವಾರ್ತಾ ಭಾರತಿ : 21 Jan, 2022

ಬೆಂಗಳೂರು: ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದುಗೊಳಿಸುವ ಕುರಿತು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. 

ರಾಜ್ಯದಲ್ಲಿ ಹೇರಿರುವ ಕೋವಿಡ್ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಸಡಿಲಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಈ ಕುರಿತು ಸಚಿವರು ಮಾಹಿತಿ ನೀಡಿದರು.

ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿಮಾಡುವುದು ಅನಿವಾರ್ಯವಾಗುತ್ತದೆ. ವಾರಾಂತ್ಯ ಕರ್ಫ್ಯೂ ಹೊರತುಪಡಿಸಿ ಉಳಿದೆಲ್ಲ ಕೊವಿಡ್ ನಿಯಮಗಳು ಎಂದಿನಂತೆ ಮುಂದುವರಿಯಲಿವೆ ಎಂದು ತಿಳಿಸಿದರು.

ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. 

ಇನ್ನು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಬಿಜೆಪಿ ನಾಯಕರು ಸೇರಿದಂತೆ ಹಲವರು  ವಿರೋಧ ವ್ಯಕ್ತಪಡಿಸಿದ್ದರು. 

340 ಮಂದಿ ಐಸಿಯುನಲ್ಲಿ: ಜ.20ರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 2,93,231 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ 2.86 ಲಕ್ಷ ಮಂದಿ ಹೋಂ ಐಸೋಲೇಷನ್‍ನಲ್ಲಿ ಇದ್ದಾರೆ. ಒಟ್ಟು 5,344 ಮಂದಿ ಸೊಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 340 ಜನ ಐಸಿಯುನಲ್ಲಿ ಇದ್ದಾರೆ. 127 ಮಂದಿ ವೆಂಟಿಲೇಟರ್‍ನಲ್ಲಿ ಇದ್ದಾರೆ' ಎಂದು ಅವರು ಮಾಹಿತಿ ನೀಡಿದರು.

‘ಬೆಂಗಳೂರು ನಗರವನ್ನು ಹೊರತುಪಡಿಸಿ ಮೈಸೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪಾಸಿಟಿವಿಟಿ ದರ ಶೇ.19.94ರಷ್ಟಿದೆ. ಮಕ್ಕಳ ಪಾಸಿಟಿವಿಟಿ ದರ ಶೇ.8ರಷ್ಟಿದ್ದು, ವಯಸ್ಕರ ಪಾಸಿಟಿವಿಟಿ ದರ ಶೇ.16.57 ರಷ್ಟಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಪ್ರಮಾಣದ ಮೇಲೆ ನಿಗಾ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಮಂಜೂರಾಗಿರುವ 243 ಪಿಎಸ್‍ಎ (ಆಕ್ಸಿಜನ್) ಪ್ಲಾಂಟ್‍ಗಳ ಪೈಕಿ 225 ಕಾರ್ಯಾರಂಭ ಮಾಡಿವೆ. ಎಲ್ಲ ಜಿಲ್ಲಾ ಆಸ್ಪತ್ರೆಗಳು, 113 ತಾಲೂಕು ಆಸ್ಪತ್ರೆಗಳಲ್ಲಿ ಪಿಎಸ್‍ಎ ಪ್ಲಾಂಟ್‍ಗಳು ಕಾರ್ಯಾರಂಭ ಮಾಡಿವೆ' ಎಂದು ಅವರು ವಿವರ ನೀಡಿದರು.

ಸಿಬ್ಬಂದಿಯಲ್ಲೇ ಸೋಂಕು: ‘ಸರಾಸರಿ ಮೂರು ದಿನಕ್ಕೆ ಕೋವಿಡ್ ಸೋಂಕು ದೃಢ ಪ್ರಮಾಣ ದ್ವಿಗುಣಗೊಳ್ಳುತ್ತಿದೆ. ಒಬ್ಬ ಸೋಂಕಿತನಿಂದ ಸರಾಸರಿ ಶೇ.2.6ರಷ್ಟು ಜನರಿಗೆ ಹರಡುತ್ತಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುತ್ತಿದೆ. ಬೆಂಗಳೂರಿನ ಜೊತೆಗೆ ಇತರ ಜಿಲ್ಲೆಗಳಲ್ಲಿಯೂ ಕೋವಿಡ್ ಪ್ರಕರಣಗಳ ಬಗ್ಗೆ  ಹೆಚ್ಚಿನ ನಿಗಾ ವಹಿಸಲಾಗುತ್ತಿದೆ' ಎಂದು ಅವರು ಹೇಳಿದರು.

‘ಸೋಂಕು ತಡೆಗಟ್ಟಲು ವಾರಾಂತ್ಯ ಕಫ್ರ್ಯೂ ವಿಧಿಸಿದ್ದರೂ ದೊಡ್ಡ ಪರಿಣಾಮ ಉಂಟಾಗಿಲ್ಲ. ಸೊಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ದರ ಹೆಚ್ಚಾದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ.5ರಿಂದ 6ರ ಮಧ್ಯದಲ್ಲಿದೆ. ಚೇತರಿಸಿಕೊಳ್ಳುತ್ತಿರುವ ಸೊಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ, ಮುಂದಿನ ವಾರದಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ' ಎಂದು ತಿಳಿಸಿದರು.

‘ಜೊತೆಗೆ ಕೋವಿಡ್ ನಿರ್ವಹಣೆಯ ಮುಂಚೂಣಿಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಗಮನಿಸಲಾಯಿತು. ಜನರ ಜೀವ ಮತ್ತು ಜೀವನ ನಿರ್ವಹಣೆ ಎರಡೂ ಸರಿದೂಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕೋವಿಡ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಸಾರ್ವಜನಿಕಕರು ಜವಾಬ್ದಾರಿಯುತವಾಗಿ ವರ್ತಿಸುವುದು ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದರು.

ಜನರ ಮೇಲೆ ಜವಾಬ್ದಾರಿ

‘ರಾಜ್ಯದ ಜನರ ಅನುಕೂಲಕ್ಕಾಗಿ ವಾರಾಂತ್ಯದ ಕರ್ಫ್ಯೂ ಹಿಂಪಡೆಯಲಾಗಿದೆ. ಆದರೆ, ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಬೇಕು. ಹೀಗಾಗಿ ಹೆಚ್ಚಿನ ಜವಾಬ್ದಾರಿ ಜನರ ಮೇಲಿದೆ. ನಮ್ಮ ಪ್ರಾಣ ಮತ್ತು ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಮೈಮರೆತು ಪರಿಸ್ಥಿತಿ ಹೆಚ್ಚು ಕಡಿಮೆಯಾದರೆ ಲಾಕ್‍ಡೌನ್ ಜಾರಿ ಮಾಡುವ ನಿರ್ಧಾರಕ್ಕೆ ಸರಕಾರ ಮುಂದಾಗಲಿದೆ'

-ಆರಗ ಜ್ಞಾನೇಂದ್ರ ಗೃಹ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)