varthabharthi


ರಾಷ್ಟ್ರೀಯ

ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸಿದ ಕೇಂದ್ರ ಸರಕಾರ

ವಾರ್ತಾ ಭಾರತಿ : 21 Jan, 2022

ಹೊಸದಿಲ್ಲಿ,ಜ.21: ಮಿಲಿಟರಿ ಪರೇಡ್,ಬ್ಯಾಂಡ್ ಮತ್ತು ವಂದನೆಗಳನ್ನು ಸೇರಿದ್ದ ಭವ್ಯ ಸಮಾರಂಭವೊಂದರಲ್ಲಿ ಶುಕ್ರವಾರ ಇಲ್ಲಿಯ ಇಂಡಿಯಾ ಗೇಟ್‌ನಲ್ಲಿ ಕಳೆದ 50 ವರ್ಷಗಳಿಂದಲೂ ಪ್ರಜ್ವಲಿಸುತ್ತಿದ್ದ ಅಮರ ಜವಾನ್ ಜ್ಯೋತಿಯನ್ನು ಆರಿಸಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಉರಿಯುತ್ತಿರುವ ದೊಂದಿಯೊಂದಿಗೆ ವಿಲೀನಗೊಳಿಸಲಾಗಿದೆ. ಸರಕಾರದ ಈ ಕ್ರಮಕ್ಕೆ ಪ್ರತಿಪಕ್ಷ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಯೋಧರು ಜ್ಯೋತಿಯನ್ನು ಹೊತ್ತುಕೊಂಡು ಇಂಡಿಯಾ ಗೇಟ್‌ನಿಂದ ಸುಮಾರು 400 ಮೀ.ದೂರದಲ್ಲಿರುವ ನೂತನ ಯುದ್ಧಸ್ಮಾರಕದತ್ತ ಸಾಗಿದರು.

2019ರಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಯುದ್ಧ ಸ್ಮಾರಕವು ಈಗ ಮಿಲಿಟರಿ ಸಮಾರಂಭಗಳಿಗೆ ಮತ್ತು ಹುತಾತ್ಮ ಯೋಧರಿಗೆ ಗೌರವಾರ್ಪಣೆಗೆ ಏಕೈಕ ತಾಣವಾಗಿರಲಿದೆ.

ಎರಡು ಜ್ಯೋತಿಗಳ ನಿರ್ವಹಣೆ ಕಷ್ಟವಾಗಿತ್ತು ಎಂದು ಅಧಿಕಾರಿಗಳು ಹೇಳಿದರು.

ಇದು ಸಂಪ್ರದಾಯಕ್ಕೆ ಕಳಪೆ ಗೌರವ ಮತ್ತು ಇತಿಹಾಸವನ್ನು ಅಳಿಸುವ ಪ್ರಯತ್ನವಾಗಿದೆ ಎಂದು ಟೀಕಾಕಾರರು ಬಣ್ಣಿಸಿದ್ದರೆ,‘ಅವರ ಅಸಮಾಧಾನ ವ್ಯಂಗ್ಯಾತ್ಮಕವಾಗಿದೆ.ಏಳು ದಶಕಗಳಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಲು ಸಾಧ್ಯವಾಗದವರು ಈಗ ನಮ್ಮ ಹುತಾತ್ಮರಿಗೆ ಶಾಶ್ವತ ಮತ್ತು ಸೂಕ್ತ ಗೌರವವನ್ನು ನೀಡುತ್ತಿರುವಾಗ ಬೊಬ್ಬೆ ಹೊಡೆಯುತ್ತಿದ್ದಾರೆ ’ಎಂದು ಸರಕಾರವು ಹೇಳಿದೆ.

ಇಂಡಿಯಾ ಗೇಟ್‌ನಲ್ಲಿಯ ಅಮರ ಜವಾನ್ ಜ್ಯೋತಿಯು ಕೇವಲ 1971ರ ಯುದ್ಧದ ಹುತಾತ್ಮರಿಗೆ ಗೌರವ ಸೂಚಕವಾಗಿದೆ ಎಂಬ ಬಹಳಷ್ಟು ತಪ್ಪು ಮಾಹಿತಿಗಳು ಹರಿದಾಡುತ್ತಿವೆ ಎಂದು ಹೇಳಿರುವ ಸರಕಾರವು,ಅಮರ ಜವಾನ್ ಜ್ಯೋತಿಯನ್ನು ಆರಿಸಲಾಗುತ್ತಿಲ್ಲ,ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಅಮರ ಜವಾನ ಜ್ಯೋತಿಯು 1971ರ ಮತ್ತು ಇತರ ಯುದ್ಧಗಳಲ್ಲಿ ಹುತಾತ್ಮರಾದ ಯೋಧರಿಗೆ ಗೌರವದ ಸಂಕೇತವಾಗಿದೆ,ಆದರೆ ಯಾವುದೇ ಹುತಾತ್ಮರ ಹೆಸರುಗಳು ಇಲ್ಲದಿರುವುದು ವಿಲಕ್ಷಣವಾಗಿದೆ ಎಂದಿದೆ.

ಮೊದಲ ಮಹಾಯುದ್ಧದಲ್ಲಿ ಮೃತಪಟ್ಟಿದ್ದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರಿಗೆ ಸ್ಮಾರಕವಾಗಿ ಇಂಡಿಯಾ ಗೇಟ್‌ನ್ನು ಬ್ರಿಟಿಷರು ನಿರ್ಮಿಸಿದ್ದರು. 1971ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅಮರ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್‌ನಲ್ಲಿ ಇರಿಸಲಾಗಿತ್ತು.

ಇಂಡಿಯಾ ಗೇಟ್‌ನಲ್ಲಿ ಕೆತ್ತಲಾಗಿರುವ ಹೆಸರುಗಳು ಮೊದಲ ಮಹಾಯುದ್ಧದಲ್ಲಿ ಮತ್ತು ಆಂಗ್ಲೋ-ಅಫ್ಘಾನ್ ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಿದ್ದ ಸೈನಿಕರದಾಗಿವೆ ಎಂದಿರುವ ಸರಕಾರವು,ಇದು ನಮ್ಮ ಗತ ವಸಾಹತುಶಾಹಿ ಯುಗದ ಸಂಕೇತವಾಗಿದೆ ಎಂದು ಬಣ್ಣಿಸಿದೆ.

1971ರ ಯುದ್ಧ ಸೇರಿದಂತೆ ಸ್ವಾತಂತ್ರಾನಂತರದ ಯುದ್ಧಗಳಲ್ಲಿ ಮೃತಪಟ್ಟ ಭಾರತೀಯ ಯೋಧರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗಿದೆ. ಹುತಾತ್ಮರಿಗೆ ಗೌರವ ಸೂಚಿಸುವ ಜ್ಯೋತಿಯನ್ನು ಅಲ್ಲಿ ಹೊಂದಿರುವುದು ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿದವು.

2019ರಲ್ಲಿ 40 ಎಕರೆಗಳಿಗೂ ಅಧಿಕ ವಿಸ್ತೀರ್ಣದಲ್ಲಿ 176 ಕೋ.ರೂ. ಗಳ ವೆಚ್ಚದಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು.

ಅಮರ ಜ್ಯೋತಿ ಸ್ಥಳಾಂತರವನ್ನು ಪ್ರತಿಪಕ್ಷ ನಾಯಕರು ಕಟುವಾಗಿ ಟೀಕಿಸಿದ್ದು,ಇದು ಸ್ವಾತಂತ್ರ ಹೋರಾಟಗಾರರಿಗೆ ಮಾಡಿರುವ ಅವಮಾನವಾಗಿದೆ ಎಂದಿದ್ದಾರೆ.

ತನ್ನ ದುಃಖ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,‘ದೇಶಭಕ್ತಿ ಮತ್ತು ತ್ಯಾಗ ಕೆಲವರಿಗೆ ಅರ್ಥವಾಗುವುದಿಲ್ಲ ’ಎಂದು ಟ್ವೀಟಿಸಿದ್ದಾರೆ.

ಇದು ತನಗೆ ದುಃಖ ಮತ್ತು ನೋವನ್ನುಂಟು ಮಾಡಿದೆ ಎಂದಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿಯವರು,ಎರಡೂ ಜ್ಯೋತಿಗಳನ್ನು ಉಳಿಸಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಮರ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನಗೊಳಿಸುವುದು ಇತಿಹಾಸವನ್ನು ಅಳಿಸಿದಂತೆ. ಸರಕಾರದ ಕ್ರಮವು ರಾಷ್ಟ್ರೀಯ ದುರಂತವಾಗಿದೆ ಮತ್ತು ಇತಿಹಾಸವನ್ನು ಪುನರ್‌ರಚಿಸುವ ಪ್ರಯತ್ನವಾಗಿದೆ. ಬಿಜೆಪಿ ಸರಕಾರವು ರಾಷ್ಟ್ರೀಯ ಯುದ್ಧಸ್ಮಾರಕವನ್ನು ನಿರ್ಮಿಸಿದೆ,ಆದರೆ ಅದರ ಅರ್ಥ ಅವರು ಅಮರ ಜವಾನ್ ಜ್ಯೋತಿಯನ್ನು ಆರಿಸಬಹುದು ಎಂದಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಹೇಳಿದರು.

‘ಮೋದಿ ಮತ್ತೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಅವರ ಹೋರಾಟದಿಂದಾಗಿ ಜೀವನ,ಸ್ವಾತಂತ್ರ ಮತ್ತು ಸಮಾನತೆಯ ಹಕ್ಕುಗಳು,ಧಾರ್ಮಿಕ ಸ್ವಾತಂತ್ರ,ಅಸ್ಪಶ್ಯತೆಯಿಂದ ಮುಕ್ತಿ ಇತ್ಯಾದಿಗಳು ಖಾತರಿಯಾಗಿವೆ. ಈ ಹೋರಾಟ ಕಾಲಹರಣ ಎಂದು ಮೋದಿ ಭಾವಿಸಿದ್ದಾರೆ. ನಾಚಿಕೆಗೇಡು. ಹಕ್ಕುಗಳಿಲ್ಲದ ಕರ್ತವ್ಯಗಳು ಗುಲಾಮಿತನಕ್ಕೆ ಸಮ ’ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಕೇಂದ್ರಕ್ಕೆ ಉತ್ತರಾಖಂಡ ಕಾಂಗ್ರೆಸ್‌ನ ತರಾಟೆ

ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿಯ ಅಮರ ಜವಾನ್ ಜ್ಯೋತಿಯನ್ನು ಆರಿಸಿದ್ದಕ್ಕಾಗಿ ಶುಕ್ರವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಿರುವ ಉತ್ತರಾಖಂಡ ಕಾಂಗ್ರೆಸ್,ಇದು ತನ್ನ ಅರಮನೆ ’ಮೋದಿ ಮಹಲ್’ಅನ್ನು ನಿರ್ಮಿಸಲು ‘ದೊರೆಯ ನಿರಂಕುಶತನ’ವಾಗಿದೆ ಎಂದು ಹೇಳಿದೆ.

‘50 ವರ್ಷಗಳಿಂದಲೂ ಬೆಳಗುತಿದ್ದ ಅಮರ ಜವಾನ್ ಜ್ಯೋತಿಯನ್ನು ಆರಿಸಲಾಗಿದೆ. ಅದು ನಮ್ಮ ಶೌರ್ಯ,ಧೈರ್ಯ,ತ್ಯಾಗ ಮತ್ತು ಆತ್ಮಗೌರವದ ಸಂಕೇತವಾಗಿತ್ತು,ಆದರೆ ಇಂದು ಅದು ನಂದಿದೆ. ಇಂಡಿಯಾ ಗೇಟ್‌ನಲ್ಲಿಯ ಅಮರ ಜವಾನ್ ಜ್ಯೋತಿಯ ಹೊಸ ವಿಳಾಸ ಈಗ ಯುದ್ಧಸ್ಮಾರಕವಾಗಿದೆ. ದೊರೆಯ ಅರಮನೆಯನ್ನು ನಿರ್ಮಿಸಲು ಯೋಧರ ತ್ಯಾಗ ಮತ್ತು ಧೈರ್ಯದ ಸಂಕೇತವಾಗಿದ್ದ ಸ್ಥಳವನ್ನು ಬದಲಿಸಿದಾಗ ಮತ್ತು ನಿರಂತರವಾಗಿ ಉರಿಯುತ್ತಿದ್ದ ಜ್ಯೋತಿಯನ್ನು ಆರಿಸಿದಾಗ ಅದು ದೊರೆಯ ನಿರಂಕುಶತೆಯ ಬಗ್ಗೆ ಮಾತ್ರ ಹೇಳುವುದಿಲ್ಲ,ಹುತಾತ್ಮರೆಡೆಗೆ ಆತನ ಹೃದಯದಲ್ಲಿನ ಗೌರವವೇನು ಎನ್ನುವುದನ್ನೂ ಹೇಳುತ್ತದೆ ಎಂದು ಉತ್ತರಾಖಂಡ ಕಾಂಗ್ರೆಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)