varthabharthi


ಕರ್ನಾಟಕ

ಸರಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ: ಸಚಿವ ಅಶ್ವತ್ಥ ನಾರಾಯಣ

ವಾರ್ತಾ ಭಾರತಿ : 21 Jan, 2022

ಬೆಂಗಳೂರು, ಜ.21: ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ ರಾಜ್ಯದ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಒಂದು ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾಯಿಸುವ ಯೋಜನೆಗೆ 1.90 ಕೋಟಿ ರೂ. ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದರ ಅಂಗವಾಗಿ ಬೆಂಗಳೂರಿನ ಆಯ್ದ ಒಂದು ಸರಕಾರಿ ಶಾಲೆಯಿಂದ ಪ್ರಾಯೋಗಿಕವಾಗಿ ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾವಣೆ ಮಾಡಲಾಗುವುದು ಎಂದಿದ್ದಾರೆ.

ತಾಂತ್ರಿಕ ತಜ್ಞರ ಸಮಿತಿಯು ಯೋಜನೆಯ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲಿದ್ದು, ಕೆಜಿಎಸ್3ಸ್ಯಾಟ್ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜತೆಗೆ ಕೇಂದ್ರ ಸರಕಾರದ ಬಾಹ್ಯಾಕಾಶ ಇಲಾಖೆಯ `ಇನ್-ಸ್ಪೇಸ್’ ವಿಭಾಗವು ಕೂಡ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ. 9ರಿಂದ 12 ತಿಂಗಳ ಅವಧಿಯಲ್ಲಿ ನನಸಾಗಲಿರುವ ಯೋಜನೆಗೆ  ಇಸ್ರೋ ಮತ್ತು ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಒಕ್ಕೂಟದ (ಐಟಿಸಿಎ) ಸಹಯೋಗವನ್ನೂ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)