ಅಜ್ಮಾನ್: ಕೋವಿಡ್ ಸೋಂಕಿತರಿಗೆ ತುಂಬೆ ಆಸ್ಪತ್ರೆಯಿಂದ ಕಡಿಮೆ ವೆಚ್ಚದ ಕ್ವಾರಂಟೈನ್ ಪ್ಯಾಕೇಜ್
ಅಜ್ಮಾನ್ : ಕೊರೋನ ರೋಗಿಗಳು, ಮನೆಯಲ್ಲೇ ಐಸೋಲೇಶನ್‌ಗೆ ಒಳಗಾಗಲು ಅರ್ಹರಾದ ಲಘು ರೋಗ ಲಕ್ಷಣ ಇರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳು ಅಥವಾ ವೈದ್ಯಕೀಯ ನಿಗಾದಲ್ಲಿ ಇರುವುದು ಅಗತ್ಯವಾದವರು ಹಾಗೂ ಕೆಲವೊಮ್ಮೆ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಲು ಸೂಕ್ತ ವ್ಯವಸ್ಥೆ ಇಲ್ಲದೇ ಇದ್ದವರಿಗೆ ಕಡಿಮೆ ವೆಚ್ಚದಲ್ಲಿ ಆಸ್ಪತ್ರೆ ಕ್ವಾರಂಟೈನ್ ಪ್ಯಾಕೇಜ್ ಅನ್ನು ಅಜ್ಮಾನ್‌ನಲ್ಲಿರುವ ತುಂಬೆ ಆಸ್ಪತ್ರೆ (ಟಿಎಚ್‌ಎ) ನೀಡುತ್ತಿದೆ.
ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವುದು, ಅದೇ ರೀತಿ ತಜ್ಞರಿಂದ ಸಕಾಲಿಕ ವೈದ್ಯಕೀಯ ಸೇವೆಯನ್ನು ಒದಗಿಸುವ ಮೂಲಕ ಗಂಭೀರ ಸೋಂಕು ಲಕ್ಷಣ ಕಂಡು ಬರುವ ರೋಗಿಗಳಿಗೆ ನೆರವಾಗುವ ಉದ್ದೇಶವನ್ನು ಇದು ಹೊಂದಿದೆ.
‘‘ಹೋಮ್ ಐಸೋಲೇಶನ್‌ಗೆ ಶಿಫಾರಸು ಮಾಡಲಾದ ರೋಗಿಗಳಿಗೆ ಸುರಕ್ಷತೆಯ ಭಾವನೆ ಮೂಡುವಂತಿರಬೇಕು. ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರೆ, ಅವರ ರೋಗ ಶಮನವಾಗಬಹುದು’’ ಎಂದು ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಅವರು ಹೇಳಿದ್ದಾರೆ.
ನಾವು ಕೆಲವು ರೋಗಿಗಳಿಗೆ ಈ ಸೇವೆಯನ್ನು ನೀಡಿದ್ದೇವೆ. ಇದಕ್ಕೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ರೋಗಿಗಳನ್ನು ವೈದ್ಯರು, ದಾದಿಯರು ನಿಯಮಿತವಾಗಿ ಭೇಟಿಯಾಗುತ್ತಾರೆ. ಅಲ್ಲದೆ, ಅರೆ ವೈದ್ಯಕೀಯ ಸಿಬ್ಬಂದಿ ಕೂಡ ನಿರಂತರ ಮೇಲ್ವಿಚಾರಣೆ ನಡೆಸುತ್ತಾರೆ ಎಂದು ಅವರು ಹೇಳಿದ್ದಾರೆ.