ಅಂತಾರಾಷ್ಟ್ರೀಯ
ಅಮೆರಿಕದ ಖ್ಯಾತ ಗಾಯಕ ಮೀಟ್ ಲೋಫ್ ನಿಧನ

ಮೀಟ್ ಲೋಫ್ (photo:twitter/@ThatEricAlper)
ವಾಷಿಂಗ್ಟನ್, ಜ.21: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಅಮೆರಿಕದ ಖ್ಯಾತ ಗಾಯಕ ಮೀಟ್ ಲೋಫ್ (74 ವರ್ಷ) ಗುರುವಾರ ನಿಧನರಾಗಿರುವುದಾಗಿ ಅವರ ಕುಟುಂಬದ ಮೂಲಗಳು ಹೇಳಿವೆ.
ಹೋಲಿಸಲಾಗದ ಗಾಯಕ ಮೀಟ್ ಲೋಫ್ ಗುರುವಾರ ರಾತ್ರಿ ನಿಧನರಾದರು ಎಂದು ತಿಳಿಸಲು ದುಃಖವಾಗುತ್ತಿದೆ . ಅವರು ನಿಮಗೆ ಎಷ್ಟೊಂದು ಸ್ಫೂರ್ತಿಯಾಗಿದ್ದರು ಎಂಬುದು ನಮಗೆ ತಿಳಿದಿದೆ ಮತ್ತು ಅಂತಹ ಮಹಾನ್ ಸ್ಪೂರ್ತಿದಾಯಕ ವ್ಯಕ್ತಿಯ ಅಗಲುವಿಕೆಯ ನೋವಿನಲ್ಲಿ ನಮ್ಮೊಂದಿಗೆ ಸಹಭಾಗಿಗಳಾಗಿ ನೆರವು ನೀಡಿದವರಿಗೆ ಹೃದಯಾಂತರಾಳದ ಕೃತಜ್ಞತೆಗಳು’ ಎಂದು ಕುಟುಂಬದ ಹೇಳಿಕೆ ತಿಳಿಸಿದೆ.
ಮೀಟ್ ಲೋಫ್ 1977ರಲ್ಲಿ ರಚಿಸಿದ ‘ಬ್ಯಾಟ್ ಔಟ್ ಆಫ್ ಹೆಲ್’ ಎಂಬ ಮ್ಯೂಸಿಕಲ್ ಆಲ್ಬಂ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ್ದಲ್ಲದೆ ಲೋಫ್ರನ್ನು ಜನಪ್ರಿಯತೆಯ ಶಿಖರಕ್ಕೇರಿಸಿತ್ತು. ವಿಷಣ್ಣತೆಯ ಭಾವನೆ ಮೂಡಿಸುವ ಅವರ ಹಾಡುಗಳು ಸಂಗೀತಪ್ರಿಯರ ಮನಗೆದ್ದಿತ್ತು. ಟೆಕ್ಸಾಸ್ನ ಡಲ್ಲಾಸ್ನಲ್ಲಿ 1947ರಲ್ಲಿ ಜನಿಸಿದ್ದ ಮೀಟ್ ಲೋಫ್ 1970ರಲ್ಲಿ ‘ಹ್ಯಾರ್ ಆ್ಯಂಡ್ ದಿ ರಾಕಿ ಹಾರರ್ ಶೋ’ ಸಂಗೀತ ತಂಡದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. 1972ರಲ್ಲಿ ರಾಕ್ ಸಂಗೀತದತ್ತ ಆಸಕ್ತರಾದ ಅವರು ಜಿಮ್ ಸ್ಟೈನ್ಮಾನ್ ಜತೆ ಸೇರಿ ಹೊರತಂದ ರಾಕ್ ಸಂಗೀತದ ಆಲ್ಬಮ್ನಿಂದ ಜನಪ್ರಿಯತೆ ಗಳಿಸಿದ್ದರು.
ವಿಶಿಷ್ಟ ದಿರಿಸು, ಮೋಟಾರ್ ಬೈಕ್ನಲ್ಲಿ ಸವಾರಿ ಮಾಡುತ್ತಾ ಸಂಗೀತ ಕಾರ್ಯಕ್ರಮ ನೀಡುವ ವಿಶಿಷ್ಟ ಶೈಲಿಯ ಜತೆಗೆ ತಮ್ಮ ಸಶಕ್ತ ಧ್ವನಿಯಿಂದ ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 1977ರಲ್ಲಿ ಹೊರತಂದ ‘ಬ್ಯಾಟ್ ಔಟ್ ಆಫ್ ಎ ಹೆಲ್’ ಆಲ್ಬಮ್ ವಿಶ್ವದಾದ್ಯಂತ 40 ಮಿಲಿಯನ್ಗೂ ಅಧಿಕ ಪ್ರತಿ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆಯಿತು. ‘ಪ್ಯಾರಡೈಸ್ ಬೈ ದಿನ ಡ್ಯಾಶ್ಬೋರ್ಡ್ ಲೈಟ್, ಟು ಔಟ್ ಆಫ್ ತ್ರೀ ಆರ್ನಾಟ್ ಬ್ಯಾಡ್, ಆ್ಯಂಡ್ ಐ ಡು ಎನಿಥಿಂಗ್ ಫಾರ್ ಲವ್’ ಮುಂತಾದ ಆಲ್ಬಮ್ಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದವು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ