ಅಂತಾರಾಷ್ಟ್ರೀಯ
ಸಿರಿಯಾದ ನಗರದ ಮೇಲೆ ಫಿರಂಗಿ ದಾಳಿ 2 ಮಕ್ಕಳ ಸಹಿತ 6 ಪ್ರಜೆಗಳು ಮೃತ್ಯು

ಸಾಂದರ್ಭಿಕ ಚಿತ್ರ:PTI
ದಮಾಸ್ಕಸ್, ಜ.21: ಉತ್ತರ ಸಿರಿಯಾದ ಅಫ್ರಿನ್ ನಗರದ ಮೇಲೆ ಗುರುವಾರ ನಡೆದ ಫಿರಂಗಿ ದಾಳಿಯಲ್ಲಿ 2 ಮಕ್ಕಳ ಸಹಿತ 6 ನಾಗರಿಕರು ಮೃತಪಟ್ಟಿದ್ದು ಸುಮಾರು 30 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಫಿರಂಗಿ ದಾಳಿ ನಡೆಸಿದವರು ಯಾರೆಂಬುದು ಸ್ಪಷ್ಟವಾಗಿಲ್ಲ. ಆದರೆ ಕುರ್ಡಿಷ್ ಹೋರಾಟಗಾರರು ಮತ್ತು ಸಿರಿಯಾದ ಸರಕಾರಿ ಪಡೆಗಳು ಉಪಸ್ಥಿತರಿದ್ದ ಪ್ರದೇಶದಿಂದ ದಾಳಿ ನಡೆದಿದೆ ಎಂದು ಬ್ರಿಟನ್ ಮೂಲದ ‘ಸಿರಿಯನ್ ಅಬ್ಸರ್ವೇಟರ್ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ಹೇಳಿದೆ.
ಅಫ್ರಿನಿ ನಗರದ ಮೇಲೆ ಟರ್ಕಿ ಪಡೆಗಳು ನಿಯಂತ್ರಣ ಸಾಧಿಸಿದ ಕಾರ್ಯಾಚರಣೆ 4ನೇ ವರ್ಷಕ್ಕೆ ಕಾಲಿರಿಸಿದ ಮಧ್ಯೆಯೇ, ಅಫ್ರಿನಿ ನಗರವನ್ನು ಟರ್ಕಿಯಿಂದ ಮುಕ್ತಗೊಳಿಸುವುದು ಮತ್ತು ಇಲ್ಲಿಂದ ಸ್ಥಳಾಂತರಗೊಂಡವರು ಮತ್ತೆ ಸುರಕ್ಷಿತವಾಗಿ ಮರಳಿ ಬರುವಂತೆ ಮಾಡುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕುರ್ಡಿಷ್ ನೇತೃತ್ವದ ಸಿರಿಯನ್ ಡೆಮೊಕ್ರಾಟಿಕ್ ಪಡೆಯ ಮುಖ್ಯಸ್ಥ ಮಝ್ಲುಮ್ ಅಬ್ದಿ ಹೇಳಿದ್ದಾರೆ.
2016ರಲ್ಲಿ ದಯೀಷ್ ಮತ್ತು ಕುರ್ಡಿಷ್ ವೈಪಿಜಿ ಪಡೆಯ ವಿರುದ್ಧ ಟರ್ಕಿ ಮತ್ತದರ ಮಿತ್ರದೇಶಗಳ ಪಡೆ ನಡೆಸಿದ ದಾಳಿಯ ಬಳಿಕ ಸಿರಿಯಾದ ಹಲವು ಪ್ರದೇಶಗಳನ್ನು ಟರ್ಕಿ ಸ್ವಾಧೀನಪಡಿಸಿಕೊಂಡಿದೆ. 2018ರಲ್ಲಿ ಸಿರಿಯಾ ಕುರ್ಡ್ ಪಡೆಗಳನ್ನು ಹಿಮ್ಮೆಟ್ಟಿಸಿದ ಟರ್ಕಿ ಅಫ್ರಿನಿ ನಗರವನ್ನು ಕೈವಶ ಮಾಡಿಕೊಂಡಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ