ಅಂತಾರಾಷ್ಟ್ರೀಯ
ಕೊರೋನ, ಹವಾಮಾನ ವೈಪರೀತ್ಯ, ಸಂಘರ್ಷದಿಂದಾಗಿ ಈಗ ವಿಶ್ವ ಅತ್ಯಂತ ಕೆಟ್ಟದಾಗಿದೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ಅಂಟೋನಿಯೊ ಗುಟೆರಸ್(photo:twitter/@antonioguterres)
ವಿಶ್ವಸಂಸ್ಥೆ, ಜ.21: ಕೊರೋನ ಸೋಂಕಿನ ಮಹಾಮಾರಿ, ಹವಾಮಾನ ವೈಪರೀತ್ಯದ ಬಿಕ್ಕಟ್ಟು ಹಾಗೂ ಎಲ್ಲೆಡೆ ಸಂಷರ್ಘವನ್ನು ಹುಟ್ಟುಹಾಕಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಪ್ರಪಂಚವು 5 ವರ್ಷ ಮೊದಲು ಇದ್ದುದಕ್ಕಿಂತ ಈಗ ಹಲವು ವಿಷಯಗಳಲ್ಲಿ ಕೆಟ್ಟದಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ 2ನೇ ಅವಧಿಯನ್ನು ಆರಂಭಿಸಿರುವ ಗುಟೆರಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಿದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಯಾವುದೇ ಅಧಿಕಾರವಿಲ್ಲ. ನಮಗೆ ಪ್ರಭಾವ ಇರಬಹುದು, ನಾವು ಮನ ಒಲಿಸಬಹುದು ಅಥವಾ ಮಧ್ಯಸ್ಥಿಕೆ ವಹಿಸಬಹುದು. ಆದರೆ ನಮಗೆ ಅಧಿಕಾರವಿಲ್ಲ . ತಾನು 2017ರಲ್ಲಿ ಮೊದಲ ಬಾರಿಗೆ ಹುದ್ದೆ ವಹಿಸಿಕೊಂಡಾಗ ಸಂಘರ್ಷ ತಡೆಯುವುದು ಮತ್ತು ಜಾಗತಿಕ ಅಸಮಾನತೆ ನಿವಾರಣೆ ಮೊದಲ ಆದ್ಯತೆ ಎಂದಿದ್ದೆ. ಈಗಲೂ ಅದನ್ನೇ ಹೇಳಬೇಕಾಗಿದೆ ಎಂದು ಗುಟೆರಸ್ ಹೇಳಿದ್ದಾರೆ.
ರಶ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಯಿಲ್ಲ ಎಂದು ಅಭಿಪ್ರಾಯ ಪಟ್ಟ ಅವರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮುನ್ನ ಈ ಹುದ್ದೆ ‘ಒಬ್ಬ ಸಂಯೋಜಕ, ಮಧ್ಯವರ್ತಿ, ಸೇತುವೆ ಕಟ್ಟುವವ ಮತ್ತು ಸಂಬಂಧಿತ ಎಲ್ಲರಿಗೂ ಪ್ರಯೋಜನವಾಗುವ ಪರಿಹಾರವನ್ನು ಹುಡುಕಲು ನೆರವಾಗುವ ಮಧ್ಯವರ್ತಿ’ ಯಂತೆ ಕಾರ್ಯನಿರ್ವಹಿಸುವ ವ್ಯವಸ್ಥೆ ಎಂದುಕೊಂಡಿದ್ದೆ. ಇವು ಪ್ರತೀ ದಿನ ಮಾಡುವ ಕೆಲಸಗಳು ಎಂದರು. ಉದಾಹರಣೆಗೆ ಈ ವಾರ ಆಫ್ರಿಕನ್ ಯೂನಿಯನ್ನ ಪ್ರತಿನಿಧಿ ಒಲುಸೆಗನ್ ಒಬಸಂಜೋ ಜತೆ, ಕೆನ್ಯಾದ ಅಧ್ಯಕ್ಷ ಉಹುರು ಕೆನ್ಯಾಟ್ಟ ಜತೆಗೆ 2 ಬಾರಿ, ಟಿಗ್ರೆ ವಲಯದ ಸಂಷರ್ಘದ ಬಗ್ಗೆ ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಜತೆ ಮಾತನಾಡಿದ್ದೇನೆ .ವೈಷಮ್ಯವನ್ನು ಶೀಘ್ರ ಅಂತ್ಯಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂಬ ವಿಶ್ವಾಸವಿದೆ ಮತ್ತು ಈ ನಿಟ್ಟಿನಲ್ಲಿ ನನ್ನ ಬಹುತೇಕ ಪ್ರಯತ್ನಗಳನ್ನು ಕೇಂದ್ರೀಕರಿಸಿದ್ದೇನೆ ಎಂದವರು ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ