varthabharthi


ದಕ್ಷಿಣ ಕನ್ನಡ

ಕುಡಿಯಲು ಮಲಿನ ನೀರು, ಬಹಿರ್ದೆಸೆಗೆ ಬಯಲು ಶೌಚವೇ ಗತಿ; ಕೊಳ್ತಿಗೆಯ 6 ದಲಿತ ಕುಟುಂಬಗಳ ದಯನೀಯ ಬದುಕು

ವಾರ್ತಾ ಭಾರತಿ : 21 Jan, 2022

ಪುತ್ತೂರು, ಜ.21: ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಸರಕಾರವು ಹಲವಾರು ಯೋಜನೆಗಳನ್ನು ನೀಡುತ್ತಿರುವುದಾಗಿ ಹೇಳುತ್ತಿದ್ದರೂ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಸಿದ್ಧಮೂಲೆ-ಕೆಮ್ಮಾರ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಪರಿಶಿಷ್ಟ ಜಾತಿಯ 7 ಕುಟುಂಬಗಳು ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳ ಸೌಲಭ್ಯದಿಂದ ವಂಚಿತವಾಗಿದೆ.

ಇಲ್ಲಿನ 6 ಬಂಡ ದಲಿತ ಕುಟುಂಬಗಳು ರಸ್ತೆ ಬದಿಯಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಮಲಿನಗೊಂಡಿರುವ ಕೆರೆಯ ನೀರನ್ನೇ ಹಲವು ವರ್ಷಗಳಿಂದ ಬಳಕೆ ಮಾಡುತ್ತಿದ್ದು, ನಮಗೆ ಕುಡಿಯುವ ನೀರು ಕೊಡಿ ಎಂಬ ಅಳಲು ಅವರದ್ದಾಗಿದೆ.

ಕೊಳ್ತಿಗೆ ಗ್ರಾಮದ ಸಿದ್ಧಮೂಲೆ ನಿವಾಸಿಗಳಾದ ತನಿಯ ಅಜಿಲ, ಬಾಬು ಅಜಿಲ ಮತ್ತು ಲವಕುಮಾರ್ ಕುಟುಂಬಗಳು ಹಾಗೂ ಕೆಮ್ಮಾರದಲ್ಲಿರುವ ಗುಬ್ಬಿ, ಅಣ್ಣು ಮತ್ತು ಚಂದ್ರ ಅವರ ಕುಟುಂಬಗಳು ನೀರಿನ ಸಮಸ್ಯೆ ಎದುರಿಸುತ್ತಿದೆ. ನೀರಿನ ಸಮಸ್ಯೆಯಿಂದಾಗಿ ಸಿದ್ಧಮೂಲೆಯ ಐತ್ತಪ್ಪರ ಕುಟುಂಬ ಈಗಾಗಲೇ ಅಲ್ಲಿಂದ ವಲಸೆ ಹೋಗಿ ಬೇರೆ ಕಡೆ ವಾಸ್ತವ್ಯವಿದ್ದಾರೆ. ಕಳೆದ ಐದಾರು ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪಂಚಾಯತ್‌ಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ, ಕಳೆದೆರಡು ವರ್ಷಗಳಿಂದ ಪಂಚಾಯತ್ ಗ್ರಾಮ ಸಭೆಗಳಲ್ಲಿ ನೀರಿನ ಸಮಸ್ಯೆ ವಿಚಾರವನ್ನು ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗೆ ಸ್ಪಂದನೆ ಸಿಗುತ್ತಿಲ್ಲ ಎಂಬುವುದು ಇಲ್ಲಿನ ಕುಟುಂಬಗಳ ಆರೋಪವಾಗಿದೆ.

ಪರಿಶಿಷ್ಟ ಜಾತಿಯವರಿಗೆ ಆದ್ಯತೆ ನೆಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದರೂ ನಮಗೆ ನಳ್ಳಿನೀರಿನ ಸಂಪರ್ಕ ಈ ತನಕ ಆಗಿಲ್ಲ. ನಮ್ಮ ಸಮಸ್ಯೆಗೆ ಗ್ರಾಪಂ ಸ್ಪಂದನೆ ನೀಡುತ್ತಿಲ್ಲ. ಇದರಿಂದಾಗಿ ನಾವು ಸಿದ್ಧಮೂಲೆಯ ರಸ್ತೆ ಬದಿಯಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕೆರೆಯ ಕೊಳಕು ನೀರನ್ನೇ ಕುಡಿಯಲು, ಬಟ್ಟೆ ಹೊಗೆಯಲು, ಸ್ನಾನಮಾಡಲು, ಶೌಚಕ್ಕೆ ಬಳಸಬೇಕಾದ ಅನಿವಾರ್ಯತೆ ಇದೆ. ಹಲವು ವರ್ಷಗಳಿಂದ ನಾವು ಈ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.

ನಮ್ಮ ಕೋರಿಕೆಯಂತೆ ನಾವು ಬಳಸುವ ನೀರಿನ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಅದರ ಮಾಲಕರು ಮಾಡಿ ಕೊಡುತ್ತಿದ್ದಾರೆ. ಕೆರೆಯ ಬದಿಗೆ ತಡೆಗೋಡೆ, ಬೇಲಿ ನಿರ್ಮಿಸುವುದದನ್ನು ಕೈಬಿಟ್ಟು ನಮಗೆ ನೀರು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಬಹಳಷ್ಟು ಉಪಕಾರ ಮಾಡಿಕೊಟ್ಟಿದ್ದಾರೆ. ಆದರೆ ರಸ್ತೆ ಬದಿಯಲ್ಲಿರುವ ಆ ಕೆರೆಯಲ್ಲಿ ಸಾರ್ವಜನಿಕರು ಸ್ನಾನ ಮಾಡುವುದು, ವಾಹನ ತೊಳೆಯುವುದು, ಕೊಳಕು ವಸ್ತುಗಳನ್ನು ತೊಳೆಯುವುದು, ತ್ಯಾಜ್ಯ ಎಸೆಯುವುದು ಮೊದಲಾದವುಗಳನ್ನು ಮಾಡುತ್ತಿರುವುದರಿಂದ ಕೆರೆಯ ನೀರು ಮಲೀನವಾಗುತ್ತಿದೆ. ಅದನ್ನೇ ನಾವು ಬಳಕೆ ಮಾಡಬೇಕಾಗಿ ಬರುತ್ತಿದೆ. ಇದರಿಂದಾಗಿ ಎಂದು ರೋಗ ಬರುವುದೋ ಎಂದು ಹೇಳಲಾಗದು ಎಂದು ಅಲ್ಲಿನ ಕುಟುಂಬಗಳು ಅಳಲು ವ್ಯಕ್ತಪಡಿಸುತ್ತಿದೆ.

''ಕೊಳ್ತಿಗೆ ಗ್ರಾಮದ ಸಿದ್ಧಮೂಲೆ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿಯ 6 ಕುಟುಂಬಗಳು ರಸ್ತೆ ಬದಿಯಲ್ಲಿರುವ ಕೆರೆಯ ನೀರನ್ನೇ ಬಳಕೆ ಮಾಡುತ್ತಿದ್ದು, ಕೆರೆಯಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ವಾಹನ ತೊಳೆಯುವುದು ಮಾತ್ರವಲ್ಲದೆ ಘನತ್ಯಾಜ್ಯವನ್ನು ಇಲ್ಲೇ ಹಾಕಲಾಗುತ್ತಿದೆ. ಅವರು ಈಗಲೂ ಬಯಲು ಶೌಚವನ್ನು ಮಾಡುತ್ತಿದ್ದಾರೆ. ಇಲ್ಲಿನ ಪಂಚಾಯತ್‌ನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಕ್ಷಣ ಅವರಿಗೆ ವ್ಯವಸ್ಥೆ ಮಾಡದಿದ್ದಲ್ಲಿ ದಲಿತ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು''.
-ಸೇಸಪ್ಪ ಬೆದ್ರಕಾಡು,
ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ

''ನಾನು ಮತ್ತು ಪತಿ ಇಬ್ಬರೂ ಅಂಗವಿಕಲರಾಗಿದ್ದು, ನಮ್ಮ ಮಕ್ಕಳು ಸಿದ್ಧಮೂಲೆ ರಸ್ತೆ ಬದಿಯಲ್ಲಿರುವ ಕೆರೆಯ ನೀರನ್ನು ತರುತ್ತಿದ್ದು, ಅದನ್ನೇ ನಾವು ಕುಡಿಯಲು ಬಳಕೆ ಮಾಡುತ್ತಿದ್ದೇವೆ. ಸ್ನಾನ ಶೌಚಕ್ಕೂ ಅದೇ ನೀರನ್ನು ಬಳಕೆ ಮಾಡುತ್ತಿದ್ದೇವೆ. 6 ಬಾರಿ ನಾನೇ ನಳ್ಳಿ ನೀರಿನ ಸೌಲಭ್ಯ ಕಲ್ಪಿಸಿಕೊಡುವಂತೆ ಗ್ರಾಪಂಗೆ ಮನವಿ ಮಾಡಿದ್ದೇನೆ. ರಸ್ತೆ ಬದಿಯಲ್ಲಾದರೂ ನಳ್ಳಿ ನೀರಿನ ಸಂಪರ್ಕ ಮಾಡಿಕೊಡಿ ಇಲ್ಲವೇ ನಮ್ಮ ಜಾಗದಲ್ಲಾದರೂ ಕೊಳವೆ ಬಾವಿ ನಿರ್ಮಿಸಿ ಕೊಡಿ ಎಂದು ವಿನಂತಿಸಿಕೊಂಡಿದ್ದೇನೆ. ಸ್ಥಳೀಯರಾದ ಬಾಬು ಎಂಬವರ ಪತ್ನಿ ಜಯಂತಿ ಎಂಬವರು ಕೂಡ ಈ ಕುರಿತು ಮನವಿ ಮಾಡಿಕೊಂಡಿದ್ದಾರೆ. ನಾವಿಬ್ಬರು ಗ್ರಾಮ ಸಭೆಯಲ್ಲೂ ಈ ಕುರಿತು ಬೇಡಿಕೆ ಇಟ್ಟಿದ್ದೇವೆ. ಆದರೆ ಗ್ರಾಪಂನವರು ‘ನಿಮ್ಮ ಪ್ರದೇಶಕ್ಕೆ ನೀರು ಏರುವುದು ಕಷ್ಟ, ಕೊಳೆವೆ ಬಾವಿ ನಿರ್ಮಿಸಿಕೊಡಲು ಆಗುವುದಿಲ್ಲ’ ಎಂದು ಹೇಳುತ್ತಾ ಕೈಚೆಲ್ಲಿಕೊಳ್ಳುತ್ತಿದ್ದಾರೆ''.
-ಬಬಿತಾ ಆರ್. ಸಿದ್ಧಮೂಲೆ
ಸ್ಥಳೀಯ ನಿವಾಸಿ

''ಅಲ್ಲಿ 6 ಮನೆಳು ಎತ್ತರ ಪ್ರದೇಶದಲ್ಲಿವೆ. ಇವುಗಳಲ್ಲಿ 3 ಮನೆಗಳಿಗೆ ಮಾತ್ರ ಡೋರ್ ನಂಬ್ರ ಆಗಿದ್ದು, ಈಗಿರುವ ವಾಟರ್ ಸಪ್ಲೈ ಯಿಂದ 1 ಕಿ.ಮೀ. ದೂರದಲ್ಲಿ ಈ ಮನೆಗಳು ಇರುವುದರಿಂದ ಅಲ್ಲಿಗೆ ಪ್ರತ್ಯೇಕ ವ್ಯವಸ್ಥೆ ಆಗಬೇಕಾಗಿದೆ. ಅದಕ್ಕಾಗಿ ಜಲಜೀವನ್ ಮಿಷನ್ ಯೋಜನೆಯಡಿ 12 ಲಕ್ಷ ರೂ. ಇರಿಸಲಾಗಿದೆ. ಅದರ ಟೆಂಡರ್ ಪ್ರಕ್ರಿಯೆ ಆಗಬೇಕಾಗಿದೆ. ಅಲ್ಲದೆ ಅಲ್ಲಿಗೆ ತೆರೆದ ಬಾವಿ ನಿರ್ಮಾಣಕ್ಕೆ ನರೇಗಾ ಯೋಜನೆಯಲ್ಲಿ ಅವಕಾಶ ಇರುವುದಾಗಿ ತಿಳಿಸಿದ್ದರೂ ಅವರು ಕಾಮಗಾರಿ ನಡೆಸಲು ಮುಂದೆ ಬರುತ್ತಿಲ್ಲ. ಅಲ್ಲದೆ ಶೌಚಾಲಯ ನಿರ್ಮಾಣಕ್ಕೆ 15 ಸಾವಿರ ರೂ. ನೀಡಲು ನರೇಗಾದಲ್ಲಿ ಅವಕಾಶ ಇದೆ. ಆವರಿಗೆ ನರೇಗಾ ಜಾಬ್ ಕಾರ್ಡ್ ಮಾಡಿಸಿ ಕೊಡಲಾಗಿದೆ. ಆದನ್ನು ಸದುಪಯೋಗ ಪಡಿಸಿಕೊಳ್ಳಲು ಸಂಘಟನೆಯ ಮುಖಂಡರು ಅವರಿಗೆ ಮನವರಿಕೆ ಮಾಡಿದಲ್ಲಿ ಅಲ್ಲಿನ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಸಂಘಟನೆಗಳು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಪಂಚಾಯತ್ ಅವರ ಅಭಿವೃದ್ಧಿಗಾಗಿ ಸದಾ ಸಿದ್ಧವಿದೆ''.
-ಪಂಚಾಯತ್ ಅಭಿವೃದ್ಧಿ ಅಧಿಕಾರಿ,
ಕೊಳ್ತಿಗೆ ಗ್ರಾಮ ಪಂಚಾಯತ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)